ಅಳಿಯಲಿ ದ್ವೇಷ; ಬೆಳೆಯಲಿ ಪ್ರೀತಿ (ಪ್ರಹಸನ-58)
(ಪ್ರಹಸನ-58)
ಅಳಿಯಲಿ ದ್ವೇಷ; ಬೆಳೆಯಲಿ ಪ್ರೀತಿ
************************************************
( ಆತ್ಮೀಯ ಗೆಳೆಯ ಸಿಟ್ಟಾಗಿದ್ದ.
ಮುನಿಸಿನಿಂದಾ)
ಗೆಳೆಯ : ನಾನು ನಿಂಜೊತೆ ಮಾತಾಡೋದಿಲ್ಲ ಹೋಗೋ..
ನಾನು : ಯಾಕೋ ಮಿತ್ರಾ ಏನಾಯ್ತು, ಬಾ ಹತ್ರಾ.
ಗೆಳೆಯ : ನೀನು ದೇಶದ್ರೋಹಿ, ಅದಕ್ಕೆ ನಿನ್ನ ಸಹವಾಸ ಸಾಕು, ದೂರ ಹೋಗು.
ನಾನು : ಆಯ್ತಪ್ಪಾ.. ಏನಾಯ್ತು? ಮೊದಲು ಕಾರಣ ಹೇಳು.
ಗೆಳೆಯ : ಇಂಡಿಪೆಂಡೆನ್ಸ್ ಡೇ ಅಂತಾ ಗೊತ್ತಲ್ವಾ, ಯಾಕಯ್ಯಾ ನಿನ್ನ ವಾಟ್ಸಾಪ್ ಡಿಪಿ ಯಲ್ಲಿ ರಾಷ್ಟ್ರದ್ವಜ ಹಾಕಿಲ್ಲಾ. ಹಾಕಬೇಕು ಅಂತಾ ಪ್ರಧಾನಿಗಳು ಹೇಳಿದ್ರಲ್ವಾ.
ನಾನು : ಹೋ ಅದಾ ನಿನ್ನ ಪ್ರಾಬ್ಲಮ್ಮು.
ದೇಶಭಕ್ತಿ ತೋರಿಕೆಯ ಸರಕಲ್ಲಾ ದೋಸ್ತಾ. ಅದು ಮನದೊಳಗಿರುವ ಅಭಿಮಾನ.
ಗೆಳೆಯ : ತೋರಿಸದೇ ಇದ್ರೆ ಹೇಗಯ್ತಾ ಗೊತ್ತಾಗುತ್ತೆ ನಿನ್ನ ಅಭಿಮಾನಾ. ನೀನು ಬಿಜೆಪಿ ವಿರೋಧಿಸ್ತೀ ವಿರೋಧಿಸು, ಮೋದೀನ ಬೈತಿ ಬೈಯಿ, ಸಂಘ ಪರಿವಾರವನ್ನ ಲೇವಡಿ ಮಾಡ್ತಿ ಮಾಡು. ಆದರೆ ಇದು ರಾಷ್ಟಪ್ರೇಮದ ಸಂಕೇತ ಅಲ್ವಾ. ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕಾದದ್ದು ಎಲ್ಲಾ ದೇಶವಾಸಿಗಳ ಕರ್ತವ್ಯ ಅಲ್ವಾ.
ನಾನು : ಹೌದು. ಈಗ ಅಲ್ಲಾ ಅಂದೋರು ಯಾರು? ಅಲ್ಲಯ್ಯಾ ಡಿಪಿ ಬದಲಾಯಿಸಿಲ್ಲಾ ಅಂತಾ ಉಗ್ರಾವತಾರ ತೋರಿಸ್ತೀಯಲ್ಲಾ ನಿನ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಯಾರೂ ಮೋದಿ ಮಾತಿಗೆ ಕವಡೆ ಕಾಸಿನ ಬೆಲೇನೂ ಕೊಡಲಿಲ್ಲವಲ್ಲಯ್ಯಾ. ಯಾರೊಬ್ಬರೂ ತಮ್ಮ ಡಿಪಿಯಲ್ಲಿ ರಾಷ್ಟ್ರದ್ವಜ ಹಾಕಲೇ ಇಲ್ಲಾ. ದೇಶಭಕ್ತಿಯ ಗುತ್ತಿಗೆದಾರರಲ್ವಾ ಅವರು.
ಗೆಳೆಯ : ಹೌದಾ.. ನನಗೆ ಗೊತ್ತೇ ಇರಲಿಲ್ಲವಲ್ಲಾ.
ನಾನು : ನೋಡು. ನಿನಗೆ ನಿನ್ನಂತಾ ಅಂಧ ಭಕ್ತರಿಗೆ ಗೊತ್ತೇ ಇಲ್ಲದ್ದು ಇನ್ನೂ ಬೇಕಾದಷ್ಟಿದೆ. ಆರೆಸ್ಸೆಸ್ ಕಚೇರಿಯಲ್ಲೇ ಎಂದೂ ಸ್ವಾತಂತ್ರ್ಯೋತ್ಸವ ಆಚರಿಸಲಾಗಿಲ್ಲ, ರಾಷ್ಟ್ರದ್ವಜ ಹಾರಿಸಲಾಗಿಲ್ಲ ಅನ್ನೋದಾದ್ರೂ ಗೊತ್ತೇನಯ್ಯಾ ನಿನಗೆ.
ಗೆಳೆಯ : ವಿಶ್ವಗುರುವಿನ ಮೇಲಾಣೆಯಾಗೂ ನನಗೆ ಗೊತ್ತಿರಲಿಲ್ಲ.
ನಾನು : ಗೊತ್ತಿಲ್ಲಾ ಅಂದ್ರೆ ತಿಳಕೋ. ಸಂಘದವರು ಎಂದೂ ತ್ರಿವರ್ಣ ಬಾವುಟವನ್ನು ಒಪ್ಪಿಲ್ಲಾ, ಅದನ್ನು ಅಪಶಕುನ ಅಂತಾ ಸಂಘದ ಸರಸಂಚಾಲಕರೇ ಕರೆದ್ರು. ಸಂವಿಧಾನವನ್ನೇ ಒಪ್ಪದ ಸಂಘದ ಹಿರಿತಲೆಗಳು ಇನ್ನು ತ್ರಿವರ್ಣ ಬಾವುಟವನ್ನು ಒಪ್ಪುತ್ತಾರಾ.
ಗೆಳೆಯ : ಮತ್ತೆ ದೇಶಭಕ್ತಿ, ರಾಷ್ಟ್ರಪ್ರೇಮಗಳೆಲ್ಲಾ..
ನಾನು : ನಿಮ್ಮಂತವರ ಭಾವನೆಗಳನ್ನು ಕೆರಳಿಸೋ ಘೋಷಣೆಗಳಷ್ಟೇ.
ಸಮಾನತೆ ಸಾರುವ ಸಂವಿಧಾನ ಬದಲಾಯಿಸಿ, ವರ್ಣಬೇಧ ಪ್ರತಿಪಾದಿಸುವ ಮನುಸ್ಮೃತಿಯನ್ನು ಹಿಂದೂರಾಷ್ಟ್ರದ ಸಂವಿಧಾನವನ್ನಾಗಿಸುವುದೇ ಅಂತಿಮ ಗುರಿ ಅವರದ್ದು. ಕೇಸರಿ ಭಗವಾ ಬಾವುಟವೇ ರಾಷ್ಟ್ರದ್ವಜ ಮಾಡುವ ಉದ್ದೇಶ ಸಂಘದ್ದು.
ಗೆಳೆಯ : ಹಾಗೇನೂ ಇರಲಿಕ್ಕಿಲ್ಲ ಬಿಡು. ನೀನೇನೋ ಕಥೆ ಕಟ್ತಿದ್ದೀಯಾ?
ನಾನು : ಹೋಗಲಿ ಸಂಘದವರು ಯಾರನ್ನ ಆರಾಧಿಸ್ತಾರೆ.
ಗೆಳೆಯ : ಗೋಳ್ವಾಲ್ಕರ್,
ವೀರ ಸಾವರ್ಕರ್ ರವರನ್ನ.
ನಾನು : ಶಹಬ್ಬಾಸ್.. ಸರಿಯಾಗಿ ಹೇಳಿದೆ. ಅವರು ಹಿಂದುತ್ವವಾದದ ಉಗ್ರ ಪ್ರತಿಪಾದಕರು ಅಲ್ವಾ. ಅವರು ಬರೆದ ಲೇಖನಗಳನ್ನ ಒಂದು ಸಲ ಓದು ಮಿತ್ರಾ. ಹಿಂದೂ ದೇಶ ಸ್ಥಾಪನೆಯೇ ಗುರಿ ಅಂತಾ ಹೇಳಿದ್ದಾರೆ ಅಲ್ವಾ.
ಗೆಳೆಯ : ಅದರಲ್ಲೇನಿದೆ ತಪ್ಪು. ನಮ್ಮ ದೇಶ ಹಿಂದೂಗಳದ್ದೇ ಅಲ್ವಾ. ಹಿಂದೂರಾಷ್ಟ್ರ ಅಂತಾದ್ರೆ ತಪ್ಪೇನು?
ನಾನು : ಅಯ್ಯೋ ಹುಚ್ಚಪ್ಪಾ. ಇದು ಯಾವುದೇ ಒಂದು ಧರ್ಮದವರ ದೇಶ ಅಲ್ಲಾ. ನಮ್ಮದು ಬಹುತ್ವ ಭಾರತ. ಎಲ್ಲಾ ಮತ ಧರ್ಮ ಜಾತಿ ಜನಾಂಗದವರೂ ಸಹಬಾಳ್ವೆಯಿಂದ ಬದುಕುವ ಸರ್ವ ಜನಾಂಗದ ಶಾಂತಿಯ ತೋಟ. ಹಿಂದೂ ಹೆಸರಲ್ಲಿ ಹಿಂದುತ್ವದ ರಾಷ್ಟ್ರ ಮಾಡುವುದೇ ಸಂಘದ ಪರಮ ಗುರಿ. ಅದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲ. ಆದ್ದರಿಂದ ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನ ಸಾವಕಾಶವಾಗಿ ಜಾರಿಯಲ್ಲಿದೆ. ದೇಶ ಈಗ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಹೊರಳುತ್ತಿದೆ. ಅದಕ್ಕೆ ಪೂರಕವಾದ ಕಾನೂನುಗಳನ್ನು ತರಲಾಗುತ್ತಿದೆ. ಡೆಮಾಕ್ರಸಿಯ ಮೂರೂ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳನ್ನು ನಿಯಂತ್ರಿಸಲಾಗುತ್ತಿದೆ. ಪತ್ರಿಕಾಂಗವನ್ನೂ ಕೈವಶ ಮಾಡಿಕೊಳ್ಳಲಾಗಿದೆ. ಇನ್ನು ಬಾಕಿ ಇರೋದು ಪ್ರಜೆಗಳು ಮಾತ್ರ.
ಗೆಳೆಯ : ಪ್ರಜೆಗಳಾ?
ನಾನು : ಹೌದು ಮಿತ್ರಾ.. ಇವರ ಗುರಿ ಸಾಧನೆಗೆ ಪ್ರತಿರೋಧ ತೋರಿಸ್ತಿರೋದೇ ಎಚ್ಚೆತ್ತ ಪ್ರಜೆಗಳು. ಪ್ರಜೆಗಳ ಮೆದುಳನ್ನೇ ತೊಳೆದು ಹಿಂದುತ್ವದ ಬೀಜಗಳನ್ನು ಬಿತ್ತಲು ತಯಾರಿ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಾಲಾ ಮಕ್ಕಳ ಯೋಚನೆಯನ್ನು ಸಂಘದ ಹಿತಾಸಕ್ತಿಗೆ ಪೂರಕವಾಗಿ ಬದಲಾಯಿಸಲು ಯೋಜನೆ ಜಾರಿಯಾಗುತ್ತಿದೆ. ಕೋಮುಗಲಭೆಗಳ ಮೂಲಕ ಮುಸ್ಲಿಂ ವಿರೋಧಿ ಮೇನಿಯಾ ಸೃಷ್ಟಿಸಿ ಹಿಂದೂ ಯುವಕರನ್ನು ಪ್ರಚೋದಿಸಲಾಗುತ್ತಿದೆ. ವಿರೋಧಿಸಿದ ಬುದ್ದಿಜೀವಿಗಳು ಹಾಗೂ ಹೋರಾಟಗಾರರನ್ನು ದೇಶದ್ರೋಹದ ಆರೋಪದ ಮೇಲೆ ಜೈಲಿಗಟ್ಟಲಾಗುತ್ತಿದೆ. ನಾವೆಲ್ಲಾ ಹಿಂದೂ ಎಂದು ಘೋಷಣೆ ಕೂಗಿಸಿ ಹಿಂದುಳಿದ ದಲಿತ ಜನರಲ್ಲಿ ಅನ್ಯಧರ್ಮಗಳ ಕುರಿತು ವಿಷಬೀಜ ಬಿತ್ತಿ ಕೋಮುದ್ರುವೀಕರಣ ಮಾಡಲಾಗುತ್ತಿದೆ.
ಗೆಳೆಯ : ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲವಲ್ಲಾ ಗೆಳೆಯಾ.
ನಾನು : ಗೊತ್ತು ಮಾಡಿಕೋ ಬೇಕು ಮಾರಾಯಾ. ನಿನಗೆ ಸಂವಿಧಾನ ಬೇಕಾ ಸರ್ವಾಧಿಕಾರ ಬೇಕಾ?
ಗೆಳೆಯ : ಸಂವಿಧಾನವೇ ಇರಲಿ.
ನಾನು : ಬಹುತ್ವ ಭಾರತದ ಸರ್ವ ಜನಾಂಗದ ಶಾಂತಿಯ ತೋಟ ಬೇಕಾ ಇಲ್ಲಾ ವರ್ಣಾಶ್ರಮ ಹೇರುವ ಮನುವಾದಿ ಹಿಂದುತ್ವರಾಷ್ಟ್ರ ಬೇಕಾ?
ಗೆಳೆಯ : ಬಹುತ್ವ ಭಾರತವೇ ಇರಲಿ.
ನಾನು : ದ್ವೇಷ ಕಾರುವ ಹುಸಿ ರಾಷ್ಟ್ರೀಯವಾದ,
ನಕಲಿ ದೇಶಪ್ರೇಮ ಬೇಕಾ ಅಥವಾ ಸರ್ವಾಧಿಕಾರವನ್ನು ವಿರೋಧಿಸುವ ನಿಜವಾದ ದೇಶಪ್ರೇಮ ಬೇಕಾ.
ಗೆಳೆಯ : ನಿಜವಾದ ದೇಶಪ್ರೇಮವೇ ಇರಲಿ.
ನಾನು : ಬರೀ ಸುಳ್ಳುಗಳ ಮೇಲೆ ಸೃಷ್ಟಿಸಲಾದ ಭ್ರಮೆಯ ವರಸೆ ಭರವಸೆಗಳು ಬೇಕಾ ಅಥವಾ ಅವುಗಳ ಹಿಂದಿರುವ ಶಡ್ಯಂತ್ರಗಳನ್ನು ತಿಳಿಯುವ ಚಿಕಿತ್ಸಕ ಬುದ್ದಿ ಇರಬೇಕಾ?
ಗೆಳೆಯ : ಬುದ್ದಿ ಬೇಕು.
ನಾನು : ಹಾಗಾದರೆ ಮೊದಲು ಅಂಧಶೃದ್ದೆ ಬಿಡು ಮಿತ್ರಾ, ಭಾವಪ್ರಚೋದನೆಗಳಿಂದ ದೂರ ಇರು. ದೇಶಪ್ರೇಮದ ಹೆಸರಲ್ಲಿ ಪ್ರಜಾದ್ರೋಹ ಮಾಡುವ ಪ್ಯಾಸಿಸ್ಟ್ ಪ್ರಭುತ್ವದ ಪಾರುಪತ್ಯದ ಹಿಂದಿರುವ ಸತ್ಯವನ್ನು ಅರ್ಥಮಾಡಿಕೋ. ಸಂವಿಧಾನ ಅಪಾಯದಲ್ಲಿದೆ ತಿಳ್ಕೋ.
ಗೆಳೆಯ : ಅದನ್ನೆಲ್ಲಾ ಹೇಗೆ ತಿಳಕೊಳ್ಳೋದು.
ನಾನು : ನಿನಗೂ ಬುದ್ದಿ ಅನ್ನೋದು ಇದೆ ಅಲ್ವಾ, ಅದನ್ನ ಉಪಯೋಗಿಸಿಕೊ. ಮನುಸ್ಮೃತಿ ಓದು, ಸಂಘದ ಸ್ಥಾಪಕರು ಹಾಗೂ ಸಮರ್ಥಕರು ಹಿಂದುತ್ವವಾದದ ಬಗ್ಗೆ ಬರೆದ ಪುಸ್ತಕಗಳನ್ನು ಓದು. ಅದರೊಳಗಿನ ಗುಟ್ಟುಗಳು ಅರಿವಿಗೆ ನಿಲುಕದೇ ಹೋದರೆ ಇಗೋ ತಗೋ ದೇವನೂರು ಮಹಾದೇವರು ಬರೆದ ಆರೆಸ್ಸೆಸ್ ಆಳ ಅಗಲ ಎನ್ನುವ ಈ ಕಿರು ಪುಸ್ತಕವನ್ನಾದರೂ ಓದು. ಮತ್ತೂ ಸಂದೇಹಗಳಿದ್ದರೆ ತಿಳಿದವರೊಡನೆ ಚರ್ಚೆ ಮಾಡು. ನಿನ್ನ ಅರಿವೇ ನಿನಗೆ ಗುರುವಾಗಲಿ ಗೆಳೆಯಾ.
ಗೆಳೆಯ : ಇಂದಿನಿಂದಲೇ ಈ ಕೆಲಸ ಮಾಡುತ್ತೇನೆ. ನನ್ನ ಹಾಗೆಯೇ ಅಂಧಭಕ್ತಿ ಹೊಂದಿರುವ ಇತರರನ್ನೂ ಸೇರಿಸಿಕೊಂಡು ಸಂವಾದ ಮಾಡುತ್ತೇನೆ. ನನಗೆ ನನ್ನ ದೇಶ ಮುಖ್ಯ. ದೇಶದ ಜನರ ಬದುಕು ಮುಖ್ಯ. ಅದಕ್ಕೆ ಯಾರಿಂದಲೇ ಆಗಲಿ ಅಪಾಯವಾದರೆ ವಿರೋಧಿಸದೇ ಇರಲಾರೆ.
( ಅಷ್ಟರಲ್ಲಿ ಗೆಳೆಯನ ಮಗ ಒಂದು ಕೈಯಲ್ಲಿ ರಾಷ್ಟ್ರದ್ವಜ ಹಾಗೂ ಇನ್ನೊಂದು ಕೈಯಲ್ಲಿ ಭಗವಾದ್ವಜ ಹಿಡಿದು ಭಾರತ್ ಮಾತಾಕೀ ಜೈ, ಹಿಂದೂರಾಷ್ಟ್ರಕ್ಕೆ ಜೈ, ದೇಶದ್ರೋಹಿ ಮುಸ್ಲಿಮರೇ ತೊಲಗಿ.. ಎಂದು ಘೋಷಣೆ ಕೂಗುತ್ತಾ ಬರುತ್ತಾನೆ. )
ಗೆಳೆಯ : ಏ ಬಾರೋ ಇಲ್ಲಿ. ಯಾರು ಇದನ್ನೆಲ್ಲಾ ಹೇಳಿಕೊಟ್ಟಿದ್ದು.
ಮಗ : ಅದೇ ಸಂಘದ ಶಾಖೆಯವರು ಅಪ್ಪಾ.
ನಾನು : ನೋಡಿದೆಯಾ ಗೆಳೆಯಾ. ಮಕ್ಕಳನ್ನು ಶಾಖೆಗೆ ಕಳಿಸುವ ಬದಲು ಶಾಲೆಗೆ ಕಳಿಸಿ ಓದಿಸು. ಕುವೆಂಪು, ಸ್ವಾಮಿ ವಿವೇಕಾನಂದ, ಬುದ್ದ ಬಸವಣ್ಣನವರ ಸಾಹಿತ್ಯವನ್ನು ಮನೆಯಲ್ಲಿ ಓದಿ ತಿಳಿಸಿಕೊಡು. ಇಲ್ಲವಾದರೆ ಮಕ್ಕಳ ಮೆದುಳಲ್ಲಿ ವಿಷಬೀಜಗಳನ್ನು ಬಿತ್ತಿ, ಮನಸ್ಸಲ್ಲಿ ಮತಾಂಧತೆಯನ್ನು ತುಂಬಲಾಗುತ್ತದೆ. ದ್ವೇಷ ಸಾರುವ, ಸೇಡು ಕಾರುವ ಮತಾಂಧ ವ್ಯವಸ್ಥೆಯಲ್ಲಿ ಪ್ರೀತಿಯ ಭಾವನೆ ಬೆಳೆಸಬೇಕಿದೆ. ನಮ್ಮ ಮಕ್ಕಳು ಸರ್ವ ಜನಾಂಗದ ಶಾಂತಿಯ ತೋಟದಲಿ ಅರಳುವ ಹೂವಾಗಬೇಕಿದೆ.
ಗೆಳೆಯ : ( ಮಗನ ಕೈಯಲ್ಲಿದ್ದ ಕೇಸರಿ ದ್ವಜವನ್ನೆತ್ತಿ ಬಿಸಾಕಿ, ರಾಷ್ಟ್ರದ್ವಜಕ್ಕೆ ನಮಿಸುತ್ತಾ)
ಮಗನೇ ಇನ್ಮೇಲೆ ಆ ಶಾಖೆಗೆ ಹೋಗಬೇಡಾ ಕಂದಾ. ಬಾ ಮನೆಗೆ ಹೊಗೋಣ. ನಿನಗೆ ಓದಲು ಬೇರೆ ಪುಸ್ತಕ ಕೊಡುವೆ.
ಮಗ : ಅಲ್ಲಿ ಶಾಖೆಯಲ್ಲಿ ಆಟ ಆಡಿಸ್ತಾರೆ ಅಪ್ಪಾ ಚೆನ್ನಾಗಿರುತ್ತದೆ.
ನಾನು : ಹೌದಾ.. ಹಂಗೇನೇ ಮುಸ್ಲಿಂ ಕ್ರಿಶ್ಚಿಯನ್ ಬಗ್ಗೆ ಏನಂತಾ ಹೇಳ್ತಾರೆ ಹುಡುಗಾ.
ಮಗ : ಅವರೆಲ್ಲಾ ದೇಶದ್ರೋಹಿಗಳಂತೆ. ಬೇರೆ ದೇಶದಿಂದ ಬಂದು ನಮ್ಮ ದೇಶವನ್ನ ಆಕ್ರಮಣ ಮಾಡಿದ್ದಾರಂತೆ. ನಮ್ಮ ಅಕ್ಕ ತಂಗಿಯರನ್ನ ಹಾಳು ಮಾಡ್ತಾರಂತೆ. ಅಂತವರನ್ನ ಹೊಡೆದು ಓಡಿಸಬೇಕಂತೆ.
ಗೆಳೆಯಾ : ಅಯ್ಯೊ ಅಯ್ಯೋ ಇದನ್ನೆಲ್ಲಾ ಹೇಳಿ ಕೊಡ್ತಾರಾ? ಹಿಂಗಾದ್ರೆ ನಮ್ಮ ಮಕ್ಕಳು ಹಾಳಾಗದೇ ಇರ್ತಾರಾ?
ನಾನು : ಇದೇ ಆಗ್ತಿರೋದು. ದ್ವೇಷದ ಬೀಜವನ್ನ ಮಕ್ಕಳಲ್ಲಿ ಬಿತ್ತುವ ಪ್ರಯತ್ನ ಇದು. ಬಡವರ ಮಕ್ಕಳು ಮುಂದೆ ಮತಾಂಧರಾಗದೇ ಇನ್ನೇನಾಗ್ತಾರೆ ಹೇಳು ಮಿತ್ರಾ.
ಗೆಳೆಯ : ಇದೆಲ್ಲಾ ನನ್ನ ಗಮನಕ್ಕೆ ಬಂದಿರಲಿಲ್ಲ. ದೇಶಭಕ್ತಿ, ಧರ್ಮದ ಮೋಹದ ಬೋಧನೆಗೆ ನಾನೇ ಪರವಶನಾಗಿದ್ದೆ,
ಇನ್ನು ಈ ಮಕ್ಕಳ ಗತಿ ಏನು? ಧನ್ಯವಾದಗಳು ಮಿತ್ರಾ ನನ್ನ ಕಣ್ಣು ತೆರೆಸಿದ್ದಕ್ಕೆ. ಮೊದಲು ಮಗನ ತಲೆಯೊಳಗೆ ಬಿತ್ತಲಾದ ದ್ವೇಷದ ಬೀಜಗಳನ್ನು ತೆಗೆದು ಬಿಸಾಕಿ ಕೂಡಿ ಬಾಳುವ ಕನಸು ಬಿತ್ತುವೆ. ನಡೀ ಮಗನೇ ಮನೆಗೆ ಹೋಗೋಣ. ಇಂದಿನಿಂದ ಹಗೆತನವ ಹೊರಗೆ ಹಾಕಿ ಮನದೊಳಗೆ ಪ್ರೇಮದ ಹೂ ಬೆಳೆಸೋಣ.
ನಾನು : (ಸ್ವಗತ) ಈ ಒಬ್ಬ ಗೆಳೆಯನಿಗೆ ಜ್ಞಾನೋದಯವಾದಂತೆ ಈ ದೇಶದ ಅಂಧಭಕ್ತರಿಗೂ ನಿಜದ ಅರಿವು ಮೂಡಿದರೆ ಎಷ್ಟು ಚೆಂದ. ಮತಾಂಧತೆ ಮರೆತು ಸೌಹಾರ್ಧತೆ ಅರಿತರೆ ಕೋಮುವಾದಿಗಳ ಅವಸಾನ ಖಂಡಿತ. ಎಲ್ಲರೂ ದ್ವೇಷವ ದ್ವೇಷಿಸೋಣ, ಮನುಷ್ಯರ ಪ್ರೀತಿಸೋಣ. ಸರ್ವ ಜನಾಂಗದ ಶಾಂತಿಯ ತೋಟ ಕಟ್ಟೋಣ.
*-ಶಶಿಕಾಂತ ಯಡಹಳ್ಳಿ*
Comments
Post a Comment