ಅಸಲಿ ನಕಲಿ ಗುರುತಿಸುವುದ ಕಲಿ (ಪ್ರಹಸನ – 59)

  (ಪ್ರಹಸನ – 59)

ಅಸಲಿ ನಕಲಿ ಗುರುತಿಸುವುದ ಕಲಿ    

*******************************************

ಪರಮೇಶ : (ಭಾರಿ ಖುಷಿಯಿಂದ ಮೇಷ್ಟ್ರ ಬಳಿ ಬಂದು) ಕೇಳಿದ್ರಾ ಮೇಷ್ಟ್ರೇ ನಮ್ಮ ವಿಶ್ವಗುರುಗಳ ಕೀರ್ತಿನಾ?

 

ಮೇಷ್ಟ್ರು : ಮತ್ತೇನಾತಾಪಾ ಪರಮಿ. ಮತ್ತೆ ಶುರುಮಾಡಿದ್ಯಾ ಮೋದಿ ಭಜನೇನಾ

 

ಪರಮೇಶಿ : ಭಜನೆ ಅಲ್ಲಾ ಮೇಷ್ಟ್ರೆ. ನಮ್ಮ ಆರಾಧ್ಯದೈವವಾದ ವಿಶ್ವಗುರುಗಳ ಬಂಗಾರದ ಮೂರ್ತಿಯನ್ನ ಮಾಡಿ ಮುಸ್ಲಿಂ ದೇಶವಾದ ಸೌದಿ ಅರೇಬಿಯಾದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರಂತೆ

 

ಮೇಷ್ಟ್ರು : ಅರೆ ಹೌದಾ? ಯಾರಪ್ಪಾ ಹಾಗಂತಾ ಹೇಳಿದ್ದು.

 

ಪರಮೇಶಿ : ಇಲ್ಲಿ ವಾಟ್ಸಾಪಲ್ಲಿ ಬಂದಿದೆ ನೋಡಿ ಮೇಷ್ಟ್ರೆ.. ಸುಮ್ಮನೇ ಯಾವಾಗಲೂ ನಮ್ಮ ಮಹಾನಾಯಕರನ್ನ ಬೈತಾನೇ ಇರ್ತೀರಿ. ಸೌದಿ ಸಾಬರೇ ಒಪ್ಪಕೊಂಡ ಮೇಲೆ ನೀವೂ ವಿಶ್ವಗುರುಗಳನ್ನ ಒಪ್ಪಿಕೊಳ್ಳಲೇ ಬೇಕಲ್ಲವೇ?

 

ಮೇಷ್ಟ್ರು : ಅಲ್ಲೋ ಪರಮಿ ಅದು ಫೇಕ್ ಪ್ರಾಕ್ಟರಿಯಲ್ಲಿ ತಯಾರಾಗಿ ಬಂದಿರೋ ಸುಳ್ಳು ಸುದ್ದಿ ಕಣಯ್ಯಾ. ನಿಮ್ಮಂತೋರು ನಂಬಲಿ ಅಂತಾ ಇಂತಾ ಸುಳ್ಳು ಸುದ್ದಿ ಹುಟ್ಟಿಸಿ ಹಂಚತಾನೇ ಇರ್ತಾರೆ

 

ಪರಮೇಶಿ : ಅಂತಾದ್ದೂ ಒಂದು ಪ್ರಾಕ್ಟರೀ ಇದೆಯಾ ಮೇಷ್ಟ್ರೆ

 

ಮೇಷ್ಟ್ರು : ಹೌದಯ್ಯಾ ಇದೆ. ಹತ್ತು ವರ್ಷದಿಂದಾ ಫೇಕ್ ನ್ಯೂಜ್ ಮ್ಯಾನುಪ್ಯಾಕ್ಚರ್ ಮಾಡಿ ಜನರ ಯೋಚನೆಗಳನ್ನ ಮ್ಯಾನುಪಲೇಟ್ ಮಾಡೋದೆ ಕಾರ್ಖಾನೆಯ ಕೆಲಸ.

 

ಪರಮೇಶಿ : ಬಿಡಿ ಮೇಷ್ಟ್ರೇ. ವಸ್ತುಗಳನ್ನ ಉತ್ಪಾದನೆ ಮಾಡಿದ್ರೆ ಪ್ಯಾಕ್ಟರಿ ಮಾಲೀಕರಿಗೆ ಲಾಭ ಕೊಡುತ್ತದೆ. ಸುಳ್ಳು ಪೊಳ್ಳು ಉತ್ಪಾದನೆ ಮಾಡಿದ್ರೇನು ಲಾಭ ಬರುತ್ತೆ.

 

ಮೇಷ್ಟ್ರು : ಅಲ್ಲೇ ಇರೋದು ಮಜಾ ಪರಮಿ. ಒಬ್ಬ ವ್ಯಕ್ತಿಯನ್ನು ವೈಭವೀಕರಿಸಬೇಕೆಂದರೆ ಆತನ ಬಗ್ಗೆ ಬಹುಪರಾಕ ಸೃಷ್ಟಿಸಬೇಕು. ಅದೇ ರೀತಿ ಒಂದು ಪಕ್ಷ ಒಂದು ಸಿದ್ದಾಂತದ ಪರವಾಗಿ ಜನರನ್ನು ಮರಳು ಮಾಡಬೇಕು ಅಂದ್ರೆ ಸುಳ್ಳುಗಳನ್ನು ಸೃಷ್ಟಿಸಿ ಹರಿಬಿಟ್ಟು ಜನರನ್ನ ನಂಬಿಸ್ತಾನೇ ಹೋಗಬೇಕು. ಆಗಲೇ ಜನರಲ್ಲಿ ಭ್ರಮೆ ಹುಟ್ಟಿಸಲು ಸಾಧ್ಯ ಮಾರಾಯಾ. ಹಂಗೆ ಹುಟ್ಟಿದ ಭಾವನಾತ್ಮಕ ಭ್ರಮೆ ಭಕ್ತಿಯಾಗುತ್ತೆ. ಅಂಧಭಕ್ತಿ  ಓಟಾಗುತ್ತೆ. ಓಟುಗಳು ಅಧಿಕಾರದ ಪೀಠಕ್ಕೆ ದಾರಿ ಆಗುತ್ತೆ. ಎಲ್ಲ ಪೀಠ ಕಿರೀಟಗಳ ಹಿಂದೆಯೂ ಇಂತಹುದೊಂದು ನಂಬಿಸುವ ಕ್ರಿಯೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ರಾಜಧರ್ಮ ಅಂತಾರೆ ಪರಮಿ, ಇದೆಲ್ಲಾ ನಿನಗೆ ಅರ್ಥ ಆಗೋದಿಲ್ಲ ಬಿಡು.

 

ಪರಮೇಶಿ : ಅದೆಂಗೆ ಮೇಷ್ಟ್ರೆ. ಇಲ್ಲಿ ನೋಡಿ ನನ್ನ ಮೊಬೈಲು. 156 ಗ್ರಾಂ ಚಿನ್ನದಲ್ಲಿ ವಿಶ್ವಗುರುಗಳ ಮೂರ್ತಿ ಮಾಡಿದ ಪೊಟೋ ಇದೆಯಲ್ಲಾ, ಅದು ಸುಳ್ಳಾ.

 

ಮೇಷ್ಟ್ರು : ಅದು ನಿಜ. ಮೂರ್ತಿಯೂ ನಿಜ. ಚಿನ್ನದಲ್ಲಿ ಮಾಡಿದ್ದು ಅನ್ನೋದೂ ಸತ್ಯ.

 

ಪರಮೇಶಿ : ಹಾಂ.. ಕೊನೆಗೂ ಸತ್ಯ ಅಂತಾ ಒಪ್ಪಿಕೊಂಡಿರಲ್ಲಾ. ಜೈ ವಿಶ್ವಗುರು.

 

ಮೇಷ್ಟ್ರು : ಇರು ಕುಣಿದಾಡಬೇಡಾ. ಸುಳ್ಳು ಏನಪಾಂತಂದ್ರೆ ಚಿನ್ನದ ಮೂರ್ತಿಯನ್ನ ಸೌದಿ ಅರೇಬಿಯಾದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಅನ್ನೋದು ಮಾತ್ರ ನಿಜ ಅಲ್ಲಾ. ಸುಳ್ಳು ಸುದ್ದಿ.

 

ಪರಮೇಶಿ : ಹೌದಾ ಮೇಷ್ಟ್ರೆ. ನನ್ನ ವಾಟ್ಸಾಪ್ ಸುಳ್ಳು ಹೇಳುತ್ತಾ. ಪೊಟೋ ಸುಳ್ಳಾ. ನೀವೆಲ್ಲೋ ಕನ್ಪೂಜ್ ಮಾಡ್ಕೊಂಡಿದ್ದೀರಾ ಹಾಂ

 

ಮೇಷ್ಟ್ರು : ನಿಮ್ಮಂತಾ ಅಂಧಭಕ್ತರನ್ನು ನಂಬಿಸಿ ವ್ಯಕ್ತಿಪೂಜೆ ಮಾಡಲು ಪ್ರೇರೇಪಿಸಲೆಂದೇ  ಸಂಘೀ ಫೇಕ್ ಪ್ಯಾಕ್ಟರಿ ರೀತಿ ತಿರುಚಿದ ಸುದ್ದಿ ಹಂಚಿದೆ. ನಿನ್ನಂತಾ ಮೂರ್ಖರು ಹಿಂದೆ ಮುಂದೆ ಯೋಚನೆ ಮಾಡದೇ ನಂಬಿ ಪಾರ್ವರ್ಡ ಮಾಡ್ತಾನೇ ಇರ್ತೀರಿ.

 

ಪರಮೇಶಿ : ನೀವೇಳ್ದಂಗೆ ಇದು ತಿರುಚಿದ ಸುಳ್ಳು ಸುದ್ದಿ ಆದ್ರೆ ಖರೇ ಸುದ್ದಿ ಯಾವುದು ಮೇಷ್ಟ್ರೆ?

 

ಮೇಷ್ಟ್ರು : (ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯೊಂದನ್ನು ಹುಡುಕಿ ಕೊಡುತ್ತಾ) ನೋಡು ಪರಮಿ ಇದು 2013 ಜನವರಿ ತಿಂಗಳ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ. ಇದರಲ್ಲಿ ಏನು ಬರೆದಿದೆ ಅಂದರೆ ಚಿನ್ನದ ಪುತ್ಥಳಿ ತಯಾರು ಮಾಡಿದ್ದು ವಸಂತ್ ಬೋರಾ ಎನ್ನುವ ಗುಜರಾತಿನ ಚಿನ್ನದ ವ್ಯಾಪಾರಿ. ಮೋದಿ ಮೇಲಿನ ಅಭಿಮಾನಕ್ಕೋ ಇಲ್ಲಾ ವ್ಯಾಪಾರದ ಗಿಮಿಕ್ಕಿಗೋ ಬಂಗಾರದ ಮೂರ್ತಿ ಮಾಡಿಸಿ ತನ್ನ ಚಿನ್ನದಂಗಡಿಯಲ್ಲೇ ಪ್ರದರ್ಶನಕ್ಕಿಟ್ಟು ಸುದ್ದಿಯಾಗಿದ್ದಾನೆ. ವಿಷಯವನ್ನು  ಭಾರತ್ 24 ಹಾಗೂ ಎನ್ಡಿ ಟಿವಿಯವರೂ ಸುದ್ದಿ ಮಾಡಿದ್ದಾರೆ.

 

ಪರಮೇಶಿ : ಹಂಗಾ ಮೇಷ್ಟ್ರೆ. ಮತ್ಯಾಕೆ ವಾಟ್ಸಾಪಲ್ಲಿ ಹಿಂಗೆ

 

ಮೇಷ್ಟ್ರು : ನಿಮ್ಮಂತವರು ನಂಬಲಿ ಹಾಗೂ ಬೇರೆಯವರನ್ನ ನಂಬಿಸಲಿ ಎಂದೇ ರೀತಿ ತಿರುಚಿದ ಸುಳ್ಳುಗಳನ್ನ ಫೇಕ್ ಪ್ಯಾಕ್ಟರಿಯಲ್ಲಿ ನಿರಂತರವಾಗಿ ಉತ್ಪಾದನೆ ಮಾಡಿ ಕಳಿಸ್ತಾನೇ ಇರ್ತಾರೆ. ಅಂಧಭಕ್ತರು ನಂಬಿ ಉಘೆ ಉಘೇ ಅಂತಾನೇ ಇರ್ತಾರೆ.

 

ಪರಮೇಶಿ : ನೀವು ನನ್ನ ಗುರುಗಳು. ನೀವೇಳಿದ್ದನ್ನ ನಂಬಬೇಕೋ ಇಲ್ಲಾ ವಿಶ್ವಗುರುಗಳ ಬಗ್ಗೆ ಬಂದಿರೋದನ್ನ ನಂಬಬೇಕೋ ಒಂದೂ ಅರ್ಥಾ ಆಗ್ತಿಲ್ಲಾ ಮೇಷ್ಟ್ರೆ.

 

ಮೇಷ್ಟ್ರು : ಯಾರು ಹೇಳಿದ್ದನ್ನೂ ಪ್ರಮಾಣಿಸಿ ನೋಡದೇ ಎಂದೂ ನಂಬ ಬೇಡಾ, ಯಾವುದೇ ವಿಷಯ ಸತ್ಯ ಎಂದು ನಿನಗೆ ಮನದಟ್ಟಾಗುವವರೆಗೂ ಯಾರನ್ನೂ ನಂಬಿಸಲೂ ಹೋಗಬೇಡಾ. ನಿನ್ನ ಅರಿವೇ ನಿನಗೆ ಗುರುವಾಗಲಿ. ಹೋಗು ಪರಮಿ ಹೋಗು ಎಲ್ಲವನ್ನೂ  ಪ್ರಶ್ನಿಸು, ತರ್ಕದ ಒರೆಗೆ ಹಚ್ಚಿ ನೋಡು. ಸತ್ಯ ಗೋಚರಿಸುತ್ತದೆ.

 

ಪರಮೇಶಿ : ಧನ್ಯನಾದೆ ಗುರುವೇ ಗುರುಪಾದವೇ. ಪ್ರಶ್ನಿಸುವೆ, ಎಲ್ಲವನ್ನೂ ಪ್ರಶ್ನಿಸುವೆ, ಸರಿಯಾದ ಸಮರ್ಥನೀಯ ಉತ್ತರ ಸಿಗುವವರೆಗೂ ಪ್ರಶ್ನಿಸುತ್ತಲೇ ಇರುವೆ. (ತನ್ನಷ್ಟಕ್ಕೆ ತಾನೇ ಸ್ವಗತದಲಿ) ಪ್ರಶ್ನೆ.. ಉತ್ತರ.. ಉತ್ತರ ಪ್ರಶ್ನೆ. ಗುರುವಾ ಇಲ್ಲಾ ವಿಶ್ವಗುರುವಾ. ಅಲ್ಲಾ ಎರಡೂ ಅಲ್ಲಾ.. ಅರಿವೇ ಗುರು.. ಸತ್ಯ ಶೋಧನೆಯೇ ವೈಚಾರಿಕತೆಯ ಬೇರು

 

(ಹಿನ್ನಲೆಯಲ್ಲಿ ಮೇಷ್ಟ್ರ ದ್ವನಿ)

 

ಹೋಗು ಪರಮಿ ಹೋಗು. ಸತ್ಯಾನ್ವೇಶನೆಗಾಗಿ ಹೋಗು. ಸುಳ್ಳುಗಳ ಸೋಲಿಸಲು ಸತ್ಯದ ದಾರಿಯಲ್ಲಿ ಸಾಗು. ಬೇಡಾ ನಂಬಬೇಡಾ.. ಪ್ರಶ್ನಿಸದೇ ಏನನ್ನೂ ಯಾವುದನ್ನೂ ನಂಬಬೇಡ. ಇದೇ ಬದುಕಿನ ಸತ್ಯ.. ದಾರಿಯಲ್ಲೆ ನಡೆ ನೀನು ಪ್ರತಿನಿತ್ಯ..

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ