ಉಚಿತ ಸವಲತ್ತು; ಸಂಘಿ ಮಸಲತ್ತು ( ಪ್ರಹಸನ-6)

 ಪ್ರಹಸನ-6)

ಉಚಿತ ಸವಲತ್ತು; ಸಂಘಿ ಮಸಲತ್ತು  

(ಕೇಸರಿಶಾಲಿನ ನಾಮದಾರಿ ಸಂಘಿಯೊಬ್ಬ ಮೂರು ದಾರಿ ಕೂಡುವಲ್ಲಿ ನಿಂತು ಲಬೋ ಲಬೋ ಅಂತಾ ಬಾಯಿ ಬಡಿದುಕೊಳ್ಳತೊಡಗಿದ. ಜನ ಗುಂಪಾಗಿ ಸೇರತೊಡಗಿದರು.)

 

ಸಂಘಿ : ಅಯ್ಯೋ ಅಯ್ಯೋ ಯಾರೂ ಕೇಳೋರು ಹೇಳೋರು ಇಲ್ವಾ..

 

ವ್ಯಕ್ತಿ 1 : ಏನಾಯ್ತಯ್ಯಾ.. ಕೇಸರಿ ಪಕ್ಷ ಹೊಗೆ ಹಾಕಿಸ್ಕೊಂಡಿದ್ದಕ್ಕೆ ಹುಚ್ಚೇನಾದ್ರೂ ಹಿಡೀತಾ ನಿನ್ಗೆ..

 

ಸಂಘಿ : ಹಂಗಲ್ಲಾ ಅಂಕಲ್.. ಅಕ್ಕಿ ಪ್ರೀ, ವಿದ್ಯುತ್ ಪ್ರೀ, ಹೆಂಗಸರಿಗೆ ಬಸ್ ಪ್ರೀ, ನಿರುದ್ಯೋಗಿಗಳಿಗೆ ಬತ್ಯೆ ಪ್ರೀ, ಮನೆಯೊಡತಿಗೆ ಹಣ ಪ್ರೀ.. 

 

 ವ್ಯಕ್ತಿ 2 : ಏನಾಯ್ತೀಗ? ನಿನ್ನ ಆಸ್ತಿ ಮಾರಿ ಕೊಡ್ತಾರಾ

 

ಸಂಘಿ : ಅಯ್ಯೋ ಅಯ್ಯೋ ತಾತಾ. ನಿನಗೆ ಹೆಂಗ್ ಹೇಳಲಿ ಹೇಳು. ಹಿಂಗೆ ಎಲ್ಲಾ ಪ್ರೀ ಕೊಟ್ರೆ ರಾಜ್ಯ ದಿವಾಳಿ ಆಗ್ತದೆ. ತೆರಿಗೆ ಹಣ ಹಾಳಾಗ್ತದೆ, ಅಭಿವೃದ್ದಿ ನಿಂತೋಗ್ತದೆ

 

ವ್ಯಕ್ತಿ 3 : ಅಲೆಲೆಲೆ ಮಗನೇ.. ಅದೆಂಗ್ಲಾ ಆಗ್ತದೆ. ಅಕ್ಕಿ ಕಾಳು ಬೇಳೆ  ಬೆಳೆದು ಮಾರಿದ್ರೂ ಬೆಲೆ ಸಿಗದೇ ಪರದಾಡಿ ಉಪವಾಸ ಮಲಗೋ ಲಕ್ಷಾಂತರ ರೈತ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಅಕ್ಕಿ ಕೊಟ್ರೆ ನಿಮಗ್ಯಾಕ್ಲಾ ಉರಿ ಕಿತ್ಕೊಳ್ತದೆ.. 

 

ಸಂಘಿ : ಅದು ಹಂಗಲ್ಲಾ ರಾಯರೇ. ತೆರಿಗೆ ಹಣ ವೇಸ್ಟಾಗ್ತದೆ

 

ವ್ಯಕ್ತಿ2 : ಯಾರ ತೆರಿಗೆ ಹಣಾಲೇ ಮೂದೇವಿ. ನಾವು ನಮ್ಮಂತಾ ಕೋಟ್ಯಾಂತರ ಜನಸಾಮಾನ್ಯರು ಕಡ್ಡಿಪಟ್ನ, ಸೋಪು, ಪೇಸ್ಟನಿಂದಾ ಹಿಡಿದು ಪೆಟ್ರೋಲ್ ಡೀಜಲ್ ಗೆ ಕಟ್ತಿವಲ್ಲಾ ಅದು ಕಣ್ಲಾ ತೆರಿಗೆ. ನಮ್ಮ ತೆರಿಗೆ ಹಣದಲ್ಲಿ ನಮ್ಮ ಜನಕ್ಕೆ ಅನುಕೂಲ ಮಾಡಿ ಕೊಟ್ರೆ ನಿಮದೆಂತದಯ್ಯಾ ಪಿರಿಪಿರಿ

 

ಸಂಘಿ : ಎಲ್ಲಾ ಪ್ರೀ ಕೊಟ್ರೆ ಅಭಿವೃದ್ದಿ ಮಾಡೋದು ಹೇಗೆ ಅದು ಹೇಳ್ರಿ ಮೊದಲು.

 

ವ್ಯಕ್ತಿ 3 : ನಿಮ್ಮದೇ ಡಬಲ್ ಎಂಜಿನ್ ಸರಕಾರ ಇತ್ತಲ್ಲಯ್ಯಾ ಅಭಿವೃದ್ದಿ ಮಾಡಿ ತೋರಿಸ್ಬೇಕಾಗಿತ್ತು. ಮಾತು ಕೊಟ್ಟಂತೆ ರೈತರ ಆದಾಯ ಡಬಲ್ ಮಾಡಬೇಕಿತ್ತು. ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ಕೊಡಬೇಕಾಗಿತ್ತು. ಕಪ್ಪು ಹಣ ತಂದು ನಮ್ಮಂತಾ ಬಡವರ ಖಾತೆಗೆ  ತಲಾ 15 ಲಕ್ಷ ಹಾಕಬೇಕಾಗಿತ್ತು.

 

ವ್ಯಕ್ತಿ 1 : ಹೇಳಿದಂಗೆ ಮಾಡಿದ್ರೆ ನಮಗ್ಯಾವ ಉಚಿತ ಭಾಗ್ಯಗಳೂ ಬೇಕಿರಲಿಲ್ಲ. ಕೊಟ್ರೂ ನಾವೇ ಬೇಡಾ ಅಂತಿದ್ವಿ. ಕಳ್ಳ ನನಮಕ್ಳಾ ನಿಮ್ಮ ಸರಕಾರದವ್ರಂತೂ ಜಾತಿ ಧರ್ಮದ ಜಗಳ ಹಚ್ಚೋದು ಬಿಟ್ಟು ಏನೂ ಮಾಡಲಿಲ್ಲ. ಈಗ ಯಾರೋ ಪುಣ್ಯಾತ್ಮರು ಬಂದು ಬಡವರ ಬದುಕಿಗೆ ಆಧಾರ ಕೊಡ್ತೀವಿ ಅಂದ್ರೆ ಅದಕ್ಕೂ ಕಲ್ಲಾಕ್ತೀರೇನ್ರೋ.

 

ಸಂಘಿ : ಅದೇ ಬೇರೆ ವಿಷಯ. ಇದೇ ಬೇರೆ. ನೀವೇ ಯೋಚನೆ ಮಾಡಿ. ಎಲ್ಲಾ ಪ್ರೀ ಕೊಟ್ರೆ ನಮ್ಮ ರಾಜ್ಯ ದೊಡ್ಡ ಸಾಲಗಾರ ಆಗಿ ದಿವಾಳಿ ಆಗಬೇಕಾಗುತ್ತೆ

 

ವ್ಯಕ್ತಿ 2: ಹಂಗಾದ್ರೆ ನಿಮ್ಮ ಡಬಲ್ ಇಂಜೀನ್ ಸರಕಾರ ನಾಲ್ಕು ವರ್ಷದೊಳಗೆ ನಾಲ್ಕು ಲಕ್ಷ ಕೋಟಿ ಸಾಲ ಮಾಡಿದ್ಯಲ್ಲಯ್ಯಾ ಹಣ ಎಲ್ಲಿಹೋಯ್ತು. ನಿಮ್ಮಕೇಂದ್ರ ಸರಕಾರ ನೂರಾರು ಲಕ್ಷ ಕೋಟಿ ಸಾಲ ಮಾಡಿದೆಯಲ್ವಾ ಹಣ ಎಲ್ಲಿಗೋಯ್ತು. ಆದಾನಿ ಅಂಬಾನಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ್ರಲ್ಲಯ್ಯಾ ಅಷ್ಟು ಹಣದಲ್ಲಿ ಎಷ್ಟೊಂದು ಬಡವರ ಬದುಕು ಹಸನಾಗಬಹುದಾಗಿತ್ತು.

 

ಸಂಘಿ : ಅಯ್ಯೋ ಮತ್ತೆ ಹಿಂದಿನದನ್ನ ತೆಗೀತೀರಲ್ಲಾ. ಈಗಿಂದು ಹೇಳಿ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 2 ಸಾವಿರ ಕೊಡ್ತಾರಂತೆ.. ಯಾರಪ್ಪನ ಮನೆ ದುಡ್ಡು ಅದು.

 

ಗಂಗಮ್ಮ : ( ಕಸಬರಿಗೆ ಹಿಡಿ ನೆಲಕ್ಕೆ ಜಜ್ಜುತ್ತಾ) ಹಾಂ ಯಾವನ್ಲಾ ಅಂವಾ ಲೋಪರ್ ನನ್ನ ಮಗ. ಮನೆ ನಡೆಸೋಕೆ ನಾವು ಹೆಂಗಸರು ಎಷ್ಟು ಕಷ್ಟ ಪಡ್ತೀವಂತಾ ಗೊತ್ತೈತನಲಾ. ಏನೋ ಸರಕಾರ  ಒಂದಿಷ್ಟು ಮನೆ ಖರ್ಚಿಗೆ ಕಾಸು ಕೊಟ್ರೆ ಬದುಕೊತೀವಿ. ಅದೂ ಬ್ಯಾಡಾ ಅನ್ನೋರಿಗೆ ಎಕ್ಕಡಾ ಎಕ್ಕಡಾ ತಗೊಂಡು ಹೊಡೀತೀವಿ

 

ಸಂಘಿ : ಅದು ಹಂಗಲ್ಲವ್ವಾ. ಎಲ್ಲಾರಿಗೂ ಪ್ರೀ ಕರೆಂಟ್ ಕೊಟ್ರೆ ರಾಜ್ಯ ಉಳೀತೈತಾ. ಎಕ್ಕುಟ್ಟೋಗಾಕಿಲ್ವಾ

 

ಸಂಗವ್ವ : ಯಾವನ್ಲಾ ಅವ ಮನೆಹಾಳ. ಕರೆಂಟ್ ರೇಟ್ ಎಷ್ಟು ಹೆಚ್ಚೈತೆ ಅಂತಾ ಗೊತ್ತೇನ್ಲಾ. ಸರಕಾರ ಒಂದಿಷ್ಟು ಪ್ರೀ ಕೊಟ್ರೆ ಏನ್ಲಾ ಕಮ್ಮಿ ಆಗ್ತೈತೆ. ದೊಡ್ಡ ದೊಡ್ಡ ಅದೆಂತದೋ ಕಾರ್ಪೋರೇಟ್ ಕಂಪನಿಗಳಿಗೆ ಪ್ಯಾಕ್ಟರಿ ನಡೆಸೋಕೆ ಪ್ರೀಯಾಗಿ, ರಿಯಾಯತಿಯಲ್ಲಿ ಭೂಮಿ, ನೀರು ಕರೆಂಟು ಕೊಡ್ತೀರಿ, ಬಡವರ ಮನೆಗೆ ಬೆಳಕು ಕೊಟ್ರೆ ನಿಮಗ್ಯಾಕಲಾ ಬಾದೆ. ಕರೆಂಟ್ ವಿಷಯಕ್ಕೆ ಬಂದ್ರೆ ಕಣ್ಣು ಕಿತ್ತು ಕೈಗೆ ಕೊಡ್ತೀನಿ ಹುಷಾರು.

 

ಸಂಘಿ : ಸ್ವಾರ್ಥಿಗಳು ನೀವು. ನಿಮಗೆಲ್ಲಾ ನಿಮ್ಮದೇ ಚಿಂತೆ. ರಾಜ್ಯದ ಬಗ್ಗೆ ಚಿಂತೆ ಮಾಡ್ರೀ

 

ವ್ಯಕ್ತಿ 2 : ನಿಮ್ಮ ಸರಕಾರ ಇದ್ದಾಗ ಯಾಕ್ಲಾ ಯೋಚನೆ ಮಾಡ್ಲಿಲ್ಲಾ. ನಿಮ್ಮ ಪ್ರಕಾರ ಶ್ರೀಮಂತರು ಶ್ರೀಮಂತರಾಗೇ ಇರಬೇಕು, ಬಡವರು ಬಡವರಾಗೇ ಇರಬೇಕು ಅಂತಾನಾ. ಜನರ ಶ್ರಮಾನ ಲೂಟಿ ಮಾಡಿ, ವ್ಯಾಪಾರದ ಹೆಸರಲ್ಲಿ ಮೋಸಾ ಮಾಡಿ ಲಕ್ಷಾಂತರ ಕೋಟಿ ಸಂಪಾದನೆ ಮಾಡಿ ಕೂಡಿಟ್ಟವ್ರಲ್ಲಾ ಅಂತವ್ರತ್ತ ತೆರಿಗೆ ವಸೂಲಿ ಮಾಡಿ ಜನಸಾಮಾನ್ಯರಿಗೆ ಸರಕಾರ ಕೊಡ್ಲಿ ಬಿಡಯ್ಯಾ. ಇದ್ರಾಗೆ ನಡುವೆ ನಿಮ್ಮದೇನಯ್ಯಾ.

 

ಸಂಘ : ನಾನು ಹೇಳೋದು ಯಾಕೆ ನಿಮಗೆ ಅರ್ಥ ಆಗ್ತಿಲ್ಲಾ. ಅದು ಏನಂದ್ರೆ..

 

ವ್ಯಕ್ತ 1 : ನಮಗೇನೂ ಅರ್ಥ ಆಗೂದು ಬ್ಯಾಡ ಬಿಡಲಾ. ಪ್ರೀ ಕೊಡೋದರಿಂದ ನಿಮಗ್ ಬಾಳಾ ತ್ರಾಸ್ ಅನಿಸಿದ್ರ ಒಂದು ಕೆಲಸಾ ಮಾಡಿ. ಅದೆಷ್ಟು ಜನ ಬಿಜೆಪಿಗೆ ಓಟ್ ಹಾಕಿದ್ದಾರಲ್ಲಾ ಅಂದ್ರೆ 34 ಪರ್ಸೆಂಟ್ ಜನಾ.. ಅಂತವ್ರೆಲ್ಲಾ ನಮಗೆ ಸರಕಾರದಿಂದ ಉಚಿತವಾಗಿ ಏನೂ ಬೇಡಾ ಅಂತಾ ನಿರಾಕರಣೆ ಮಾಡ್ರಪ್ಪಾಸಂಘಿ ಸಂತಾನದವರಾದ ನೀವು ನಿಮ್ಮ ಕುಟುಂಬದವರು ಉಚಿತ ಕೊಡುಗೆಗಳನ್ನ ತಗೊಳ್ಳಲೇಬ್ಯಾಡಿ. ಆಯ್ತಾ.. ಸರಕಾರಕ್ಕೆ ಅಷ್ಟಾದರೂ ಹಣ ಉಳಿಯುತ್ತಲ್ವಾ

 

ರಾಮಕ್ಕ : ಸುಮ್ಕಿರಣ್ಣಾ. ನನ್ನ ಮಗನಿಗೆ ಯಾರೋ ಹುಸಿ ರಾಷ್ಟಪ್ರೇಮ, ಧರ್ಮ ಕರ್ಮ ಅಂತಾ ತಲೆ ತುಂಬ್ಯಾರ. ಇವನಂತವರ ಹುಚ್ಚಾಟಕ್ಕೆ ನಾವ್ಯಾಕೆ ಸರಕಾರದ ಯೋಜನೆ ಬ್ಯಾಡ್ ಅನ್ನೋದು. ಲೇ ಮಗರಾಯಾ.. ನಿನ್ನ ಹುಚ್ಚಾಟ ನಿನ್ನ ಸಂಘದವರ ಹತ್ರ ಇಟ್ಕೋ.. ನಿನ್ನ ಕುಟುಂಬದವರ ಹೊಟ್ಟೆ ಮ್ಯಾಗ ಹೊಡೀಬ್ಯಾಡ.

 

ಸಂಘ : ನೀನ್ಯಾಕಮ್ಮಾ ಬಂದೆ ಇಲ್ಲಿ. ಅಲ್ರೀ ನಿಮಗೆಲ್ಲಾ ಬುದ್ದಿ ಇಲ್ವಾ. ಆದಾನಿ ಅಂಬಾನಿ ಅಂತೋರು ಟ್ಯಾಕ್ಸ್ ಹೆಚ್ಚು ಕಟ್ಟೋದರಿಂದ ಅವರಿಗೆ ಸೌಲಭ್ಯ ಕೊಡಬೇಕಾಗುತ್ತ.

 

ವ್ಯಕ್ತಿ 3 : ಬಪ್ಪರೇ ಮಗನ. ರೋಡ್ ಟ್ತಾಕ್ಸ್ ಕಟ್ಟೋರ ಗಾಡಿ ಮಾತ್ರ ರಸ್ತೇಲಿ ಹೋಗಬೇಕು. ಸೈಕಲ್ಲು, ಎತ್ತಿನ ಗಾಡಿ ಯಾಕ್ ಬಿಟ್ಟಿ ಹೋಗ್ಬೇಕು ಅಂತೀಯೇನಲೇ. ರೋಡ್ ಹಾಕೋರು ನಾವು, ಕಾರು ಮಾಡೋರು ನಾವು, ಅನ್ನ ಬೆಳೆಯೋರು ನಾವು, ಮನೆ ಮಂದಿರ ಕಟ್ಟೋರು ನಾವು.. ಆದರೆ ಸವಲತ್ತುಗಳು ನಮಗ್ ಬ್ಯಾಡ ಅಲ್ವಾ.

 

ವ್ಯಕ್ತಿ 1: ಯಾಕೋ ಬಾಳಾ ಆತು ನನ್ಮಕ್ಕಳದು. ದೇಶದ್ ತುಂಬಾ ಇಂತಾ ಮನೆಹಾಳ್ರೇ ತುಂಬ್ಕೊಂಡವೆ. ಹಿಡೀರೋ..

 

ಗಂಗಮ್ಮ : ನಮ್ಮ ಹೊಟ್ಟಿ ಮ್ಯಾಲೆ ಹೊಡಿಯೋ ಇಂತಾ ನನ್ಮಕ್ಕಳನ್ನ ಬಿಡಬಾರ್ದು ಹೊಡಿರೋ.

 

ಸಂಘಿ : ಏನ್ ಮಾಡ್ತಿದ್ದೀರಾ.. ಬಿಡ್ರೋ ಬಿಡ್ರಿ ನನ್ನ..

 

( ಎಲ್ಲಾರೂ ಸೇರಿ ಹಿಡಿದು ಹೊಡದು ಓಡಿಸ್ತಾರೆ)

 

ವ್ಯಕ್ತಿ 1. : ದುಡಿಯುವ ಜನರ ಐಕ್ಯತೆ

 

ಎಲ್ಲರೂ : ಚಿರಾಯುವಾಗಲಿ.

 

ವ್ಯಕ್ತಿ 2 : ಜಾತಿ ಧರ್ಮದ ಆಧಾರದಲ್ಲಿ ಜನರನ್ನು ಒಡೆದಾಳುವ ಸಂಘಿ ಸಂತಾನಗಳಿಗೆ

 

ಎಲ್ಲರೂ : ಧಿಕ್ಕಾರ

 

ವ್ಯಕ್ತಿ 3 : ಉಚಿತ ಭಾಗ್ಯಗಳು ಸರಕಾರ ಕೊಡುವ ಭಿಕ್ಷೆಯಲ್ಲ

 

ಎಲ್ಲರೂ : ನಮ್ಮ ಹಕ್ಕು

 

ವ್ಯಕ್ತಿ 1 : ರೈತ ಬೆಳೆದ ಬೆಳೆಗಳಿಗೆ ಖಚಿತ ಬೆಲೆ ಕೊಡಿ

 

ಎಲ್ಲರೂ : ಅಲ್ಲಿವರೆಗೆ ಉಚಿತ ಬೇಳೆ ಕಾಳು ಅಕ್ಕಿ ಕೊಡಿ

 

ವ್ಯಕ್ತಿ 2 : ಓದು ಮುಗಿಸಿದ ಎಲ್ಲರಿಗೂ ಉದ್ಯೋಗ ಕೊಡಿ

 

ಎಲ್ಲರೂ : ಅಲ್ಲಿವರೆಗೂ ನಿರುದ್ಯೋಗ ಬತ್ಯೆ ಕೊಡಿ.

 

ವ್ಯಕ್ತಿ 3 : ಕೂಲಿ ಕಾರ್ಮಿಕರ ಶ್ರಮಕ್ಕೆ ತಕ್ಕ ಬೆಲೆ ನೀಡಿ

 

ಎಲ್ಲರೂ : ಅಲ್ಲಿವರೆಗೂ ಉಚಿತ ನೀರು ಕರೆಂಟು ಕೊಡಿ

 

ಗಂಗಮ್ಮ : ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನ ಕೊಡಿ

 

ಎಲ್ಲರೂ : ಅಲ್ಲಿವರೆಗೂ ಖಚಿತ ಹಣ ಕೊಡಿ, ಬಸ್ ಪ್ರಯಾಣ ಉಚಿತ ಮಾಡಿ

 

ವ್ಯಕ್ತಿ 1 : ಬೇಕೇ ಬೇಕು

 

ಎಲ್ಲರೂ : ಉಚಿತ ಶಿಕ್ಷಣ ಬೇಕು.

 

ವ್ಯಕ್ತಿ 2 : ಬೇಕೆ ಬೇಕು

 

ಎಲ್ಲರೂ : ಉಚಿತ ಚಿಕಿತ್ಸೆ ಬೇಕು.

 

-ಶಶಿಕಾಂತ ಯಡಹಳ್ಳಿ

 

(2023, ಮೇ 10 ರಂದು ನಡೆದ ಚುನಾವಣೆಯಲ್ಲಿ ಗೆದ್ದರೆ 5 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ ಪಕ್ಷ ಭರವಸೆ ಕೊಟ್ಟದ್ದನ್ನು ಸಂಘೀ ಮನಸ್ಸನ ಹಲವರು ಉಚಿತ ಯೋಜನೆಗಳನ್ನು ವಿರೋಧಿಸಿದರು. ಆಗ ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ