ಮಹಿಳಾ ಮೀಸಲಾತಿ ಪ್ರಹಸನ (ಪ್ರಹಸನ -61)
(ಪ್ರಹಸನ -61)
***************************************
( ವಿಶ್ವಗುರುಗಳು ವಿಶೇಷ ಅಧಿವೇಶನ ಮುಗಿಸಿ ಬಂದು ಅರ್ಧ ಯುದ್ದ ಗೆದ್ದ ಖುಚಿಯಲ್ಲಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡು ಕೂತಿದ್ದಾರೆ, ಮಹಿಳೆಯೊಬ್ಬಳು ಪ್ರವೇಶಿಸಿ)
ಮಹಿಳೆ : ವಿಶ್ವಗುರುಗಳಿಗೆ ಶುಭವಾಗಲಿ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದಕ್ಕೆ ನಿಮಗೆ ಸಮಸ್ತ ಮಹಿಳೆಯರ ಪರವಾಗಿ ಅಭಿನಂದನೆಗಳು.
ವಿಶ್ವಗುರು : (ಗರ್ವದಿಂದ ಗಡ್ಡ ನೀವಿಕೊಳ್ಳುತ್ತಾ) ಇರಲಿ, ನಿಮ್ಮ ಅಭಿಮಾನ ಯಾವಾಗಲೂ ಹೀಗೆಯೇ ಇರಲಿ. ಇಲ್ಲಿವರೆಗೂ ಯಾರೂ ಮಾಡದ್ದನ್ನು ನಾನು ಮಾಡಿದ್ದೇನೆ, ಅದಕ್ಕೆ ನನಗೆ ಹೆಮ್ಮೆ ಇದೆ. ಸಮಸ್ತ ಮಹಿಳೆಯರಿಗೆ ನಾರೀಶಕ್ತಿ ಕೊಡುವುದರಲ್ಲಿ ನಮಗೆ ಅಪಾರವಾದ ಆಸಕ್ತಿ.
ಮಹಿಳೆ : (ಹೂಗುಚ್ಚ ಕೊಡುತ್ತಾ) ತುಂಬಾ ಧನ್ಯವಾದಗಳು ನಿಮಗೆ. ನೀವಾದರೂ ಮಹಿಳೆಯರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ನಾವು ಈ ದೇಶದ ಮಹಿಳೆಯರೆಲ್ಲಾ ಆಭಾರಿಯಾಗಿದ್ದೇವೆ.
ವಿಶ್ವಗುರು : ಮಹಿಳೆಯರಿಗೆ ಚುನಾವಣೆಗಳಲ್ಲಿ 33 ಪರ್ಸೆಂಟ್ ಮೀಸಲಾತಿ ಜಾರಿ ಮಾಡುತ್ತಿದ್ದೇನೆ, ಈಗಲಾದರೂ ನಿಮಗೆ ಸಮಾಧಾನ ಸಂತಸ ಆಗಿರಬೇಕಲ್ಲವೇ?
ಮಹಿಳೆ : ಆಗದೇ ಇನ್ನೇನು? ಸಂಭ್ರಮವೆನಿಸುತ್ತಿದೆ. ಇದಕ್ಕಾಗಿ ನಿಮ್ಮಂತಾ ಮಹಾನಾಯಕರೇ ಬರಬೇಕಾಯ್ತು.
ವಿಶ್ವಗುರು : (ಹೆಮ್ಮೆಯಿಂದಾ)
ಇಂತಹ ಅದ್ಬುತ ಕೆಲಸ ಕಾರ್ಯರೂಪಕ್ಕೆ ತರಲು ಆ ದೇವರು ನನ್ನನ್ನು ಆಯ್ಕೆ ಮಾಡಿದ್ದಾರೆ.
ಮಹಿಳೆ : ನಾವು ಮಹಿಳೆಯರೆಲ್ಲಾ ಪಾವನರಾದೆವು, ನೀವೇ ನಮಗೆ ದೇವರು.
ವಿಶ್ವಗುರು : ಲೋಕಸಭೆಯ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಬಿಲ್ ಗೆ ಅಭೂತಪೂರ್ವ ಜಯವಾಗಿದೆ. ಅದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ.
ಮಹಿಳೆ : ಜೈಹೋ, ಜೈ ಜೈ ಹೋ..
ವಿಶ್ವಗುರು : ನಾವು, ನಮ್ಮ ಪಕ್ಷ ಮಹಿಳೆಯರ ಪರವಾಗಿದ್ದೇವೆ. ಈ ದೇಶದ ಮಹಿಳೆಯರು ನಮ್ಮ ಪರವಾಗಿರಬೇಕೆಂದೇ ಈ ಮೀಸಲಾತಿ ಕೊಡ್ತಿದ್ದೇವೆ.
ಮಹಿಳೆ : ಆಗಬಹುದು, ತುಂಬಾನೇ ಉಪಕಾರವಾಯ್ತು. ಮುಂಬರುವ ಚುನಾವಣೆಯಲ್ಲಿ 33% ಮಹಿಳೆಯರು ತಮ್ಮ ಮೀಸಲು ಕ್ಷೇತ್ರದಲ್ಲಿ ಸ್ಪರ್ದಿಸಬಹುದಲ್ಲವೇ ಗುರುಗಳೇ.
ವಿಶ್ವಗುರು : ಹೋ ಸ್ಪರ್ಧಿಸಬಹುದಾಗಿತ್ತು ಆದರೆ..
ಮಹಿಳೆ : ಆದರೆ ಅಂದರೆ ಏನು ದೊರೆ..
ವಿಶ್ವಗುರು : ಅಂದರೆ ಈಗಲೇ ಆಗಲಿಕ್ಕಿಲ್ಲ, ಅಂದರೆ ಆಗೋದಿಲ್ಲ..
ಮಹಿಳೆ : (ನಿರುತ್ಸಾಹದಿಂದ)
ಆಗಲ್ವಾ, ಯಾಕೆ? ಯಾವತ್ತೋ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿಗೆ ಅನುಮತಿ ಸಿಕ್ಕಿದೆ, ಈಗ ಲೋಕಸಭೆಯಲ್ಲೂ ಎಲ್ಲರೂ ಒಪ್ಪಿದ್ದಾರೆ. ಇನ್ನೇನು ರಾಷ್ಟ್ರಪತಿಗಳು ಸಹಿ ಹಾಕಿದರೆ ಆಯ್ತಲ್ಲವೇ, ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಇದೆಯಲ್ವಾ?
ವಿಶ್ವಗುರು : ಇದೆ,.. ಆದರೆ ಇಲ್ಲಾ.... ಅಂದರೆ ಅರ್ಜೆಂಟಲ್ಲಿ ಆಗೋದಿಲ್ಲ, ಅದಕ್ಕೆ ನೂರೆಂಟು ಪ್ರೊಸಿಜರ್ ಇದ್ದಾವೆ..
ಮಹಿಳೆ : ಅದೇ ಯಾಕೆ ದೊರೆ.. ವಿಶೇಷ ಅಧಿವೇಶನ ಕರೆದು ತರಾತುರಿಯಲ್ಲಿ ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದಾದರೂ ಯಾಕೆ?
ವಿಶ್ವಗುರು : ಅದೆಲ್ಲಾ ನಿಮಗೆ ಅರ್ಥ ಆಗೋದಿಲ್ಲ. ಇಷ್ಟು ಬೇಗ ಅನುಷ್ಟಾನ ಅಷ್ಟು ಸುಲಭವಲ್ಲ. ಜಾತಿ ಗಣತಿ ಮಾಡಿಸಬೇಕು, ಒಳಮೀಸಲು ನಿಗಧಿಪಡಿಸಬೇಕು, ಲೋಕಸಭಾ ಸೀಟುಗಳ ಮರು ಹಂಚಿಕೆ ಮಾಡಬೇಕು.. ಹೋ ತುಂಬಾ ವಿಳಂಬದ ಕೆಲಸಗಳಿವೆ..
ಮಹಿಳೆ : ಅಂದರೆ ಇಷ್ಟು ತರಾತುರಿಯಲ್ಲಿ ತಂದ ಮಸೂದೆಗೆ ಅರ್ಥವಿಲ್ಲಾ.. ಮಹಿಳೆಯರು ಸಂಭ್ರಮಿಸಿದ್ದು ವ್ಯರ್ಥವಾಯ್ತಲ್ಲಾ.. ಮತ್ಯಾವಾಗ ಮೀಸಲಾತಿ ಜಾರಿಗೆ ಮಾಡ್ತೀರಿ ದೊರೆಗಳೇ..
ವಿಶ್ವಗುರು : ಮಾಡ್ತೇವೆ, ಮಾಡಬೇಕು ಅಂತಾನೇ ಇದ್ದೇವೆ. ಈ ದೇಶದ ಮಹಿಳೆಯರೆಲ್ಲಾ ಬರುವ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿದರೆ ಮುಂದೊಮ್ಮೆ ಎಂದಾದರೂ ಮಸೂದೆ ಜಾರಿ ಮಾಡೇ ಮಾಡ್ತೇವೆ.. ಅದಕ್ಕಾಗಿಯೇ ಅಲ್ವಾ ದೇವರು ನನ್ನನ್ನು ಆಯ್ಕೆ ಮಾಡಿದ್ದು.
ಮಹಿಳೆ : ಅಂದರೆ ಈಸಲದ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗೋದಿಲ್ಲ ಅಂದಂಗಾಯ್ತು..
ವಿಶ್ವಗುರು : ಸಿಗುತ್ತೆ.. ಸಿಕ್ಕೇ ಸಿಗುತ್ತೆ. ಈಗಲ್ಲಾ.. ಅದರ ಮುಂದಿನ ಇಲ್ಲವೇ ಅದರ ಮುಂಬರುವ ಚುನಾವಣೆ ವೇಳೆಗಾದರೂ ಸಿಗಬಹುದು. ದಶಕಗಳಿಂದಾ ಮಹಿಳಾ ಮೀಸಲಾತಿ ಜಾರಿಗಾಗಿ ಪ್ರಯತ್ನಗಳು ಆಗಿವೆಯಾದರೂ ಬಿಲ್ ಪಾಸ್ ಆಗಿತ್ತಾ. ಇಲ್ವಲ್ಲಾ. ಆದರೆ ಅದನ್ನ ನಾನು ಮಾಡಿದ್ದೇನೆ.. ಸಂತಸ ಪಡಲು ಇದಕ್ಕಿಂತಾ ಬೇರೆ ಏನು ಬೇಕು ನಿಮಗೆ.. ಹೋಗಿ ಖುಷಿಪಡಿ, ಸಂಭ್ರಮಾಚರಣೆ ಮಾಡಿ..
ಮಹಿಳೆ : ಸಂಭ್ರಮ ಆಚರಿಸೋಣ.. ಅಲ್ಲಾ ದೊರೆಗಳೆ, 2014 ರಿಂದಾ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡ್ತೇವೇ ಅಂತಾ ಘೋಷಣೆ ಮಾಡಿದ್ರಿ..
ವಿಶ್ವಗುರು : ಹೌದು ಮಾಡಿದ್ದೆವು. ಈಗ ಮಸೂದೆ ಮಂಡಿಸಿ ಅನುಮತಿ ಪಡೆದು ಕೊಟ್ಟ ಮಾತಿನಂತೆ ನಡೆದಿದ್ದೇವೆ.
ಹೌದೋ ಅಲ್ವೋ..
( ಹಿಂದಿನಿಂದ ಚಪ್ಪಾಳೆ. ವಿಶ್ವಗುರುವಿಗೆ ಜೈ ಎನ್ನುವ ಘೋಷಣೆಗಳು ಮೊಳಗುತ್ತವೆ)
ಮಹಿಳೆ : ಪ್ರಣಾಳಿಕೆಯಲ್ಲಿ ಕೊಟ್ಟ ಮಾತು ಒಂಬತ್ತು ವರ್ಷಗಳ ನಂತರ ಈಗ ನಿಮಗೆ ನೆನಪಾಯ್ತಾ ದೊರೆ. ಅದೂ ಚುನಾವಣೆಯ ಸಮಯದಲ್ಲಿ. ಆಗಲೇ ಮಾಡಿದ್ರೆ ಈಗ ಮೀಸಲಾತಿ ಈ ಚುನಾವಣೆಯಲ್ಲಾದ್ರೂ ಸಿಗ್ತಾ ಇತ್ತು ನಮಗೆ..
ವಿಶ್ವಗುರು : ಅದೆಲ್ಲಾ ದೇವರ ಚಿತ್ತಾ ಅನ್ನೋದು ನಿಮಗೆ ಗೊತ್ತಾ. ಇಷ್ಟು ವರ್ಷ ಬಿಟ್ಟು ಆ ದೇವರು ಈ ಮಸೂದೆ ಜಾರಿ ತರಲು ನನ್ನನ್ನು ಈಗ ಆಯ್ಕೆ ಮಾಡಿಕೊಂಡಿದ್ದರಿಂದ ಈಗ ಮಂಡನೆಯಾಗಿದೆ ಅಷ್ಟೇ.
ಮಹಿಳೆ : ಓ ಹೋ.. ನಿಮಗೆ ಬೇಕಾದಾಗ ನಿಮ್ಮ ದೇವರು ನಿಮ್ಮನ್ನು ಆಯ್ಕೆ ಮಾಡುತ್ತಾನೆಂದರೆ ಆ ದೇವರೂ ನಿಮ್ಮ ಅನತಿಯಂತೇ ನಡೆಯುವವ ಅಂತಾಯ್ತು.. ಯಾಕ್ರೀ ಸ್ವಾಮಿ ಬೊಗಳೇ ಬಿಡ್ತೀರಿ. ಮಹಿಳೆಯರ ಮೂಗಿಗೆ ತುಪ್ಪಾ ಹಚ್ಚತೀರಿ? ಸಾಕು ನಿಲ್ಲಿಸಿ ಈ ಚುನಾವಣಾ ಗಿಮಿಕ್ ನಾಟಕ. ಸಾಕು ಮಾಡಿ ಮಹಿಳೆಯರ ಮತ ಸೆಳೆಯಲು ನೀವಾಡುತ್ತಿರುವ ಮಸೂದೆ ಮಂಡನೆಯ ಪ್ರಹಸನ. ನಮ್ಮನ್ನೇನು ಮೂರ್ಖರು ಅಂದ್ಕೊಂಡಿದ್ದೀರಾ?
ವಿಶ್ವಗುರು : ನೀವೆಲ್ಲಾ ನಮಗೆ ದೇವತೆಗಳಿದ್ದಂತೆ. ಮುಂಬರುವ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನಮಗೆ ಬೇಕೇ ಬೇಕು. ನಿಮಗಾಗಿ ಈ ಮಸೂದೆ, ಕಳೆಯಬೇಕಿದೆ ಮಹಿಳೆಯರ ಶತಮಾನದ ಬಾಧೆ.
ಮಹಿಳೆ : ಹ ಹಹ್ಹ.. ಕೊಟ್ಟ ಮಾತು ಯಾವತ್ತಾದ್ರೂ ನೀವು ಉಳಿದಿಕೊಂಡಿದ್ದೀರಾ?
ಎಲ್ಲಿ ವಿದೇಶಿ ಬ್ಯಾಂಕಲ್ಲಿರುವ ಕಪ್ಪು ಹಣ? ಎಲ್ಲಿ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ? ಎಲ್ಲಿ ವರ್ಷಕ್ಕೆರೆಡು ಕೋಟಿ ಉದ್ಯೋಗ? ಎಲ್ಲಿ ಆಯ್ತು ರೈತರ ಆದಾಯ ದ್ವಿಗುಣ? ಎಲ್ಲಿ..ಎಲ್ಲಿ ಅಚ್ಚೇ ದಿನ್.. ಬರೀ ಇಂತಹ ಹುಸಿ ಭರವಸೆಯಿಂದಾ ಏನೂ ಆಗೋದಿಲ್ಲ ದೊರೆಯೇ, ಮಹಿಳಾ ಮೀಸಲಾತಿ ಸಹ ಇನ್ನೊಂದು ಚುನಾವಣಾ ಪೂರ್ವ ಸುಳ್ಳು ಆಶ್ವಾಸನೆ ಅಂತಾ ನಮಗೆ ಗೊತ್ತಾಗಿದೆ. ಜಾರಿಗೆ ತರೋದಿದ್ರೆ ಈ ಚುನಾವಣೆಯಲ್ಲೇ ಮಹಿಳಾ ಮೀಸಲಾತಿ ಜಾರಿ ಮಾಡಿ. ಇಲ್ಲದೇ ಹೋದರೆ ಮಹಿಳೆಯರ ಮತ ಮರೆತು ಬಿಡಿ.
ವಿಶ್ವಗುರು : ನೀವ್ಯಾರೋ ವಿರೋಧ ಪಕ್ಷದವರು ಕಳುಹಿಸಿರುವ ಏಜಂಟರೇ ಇರಬೇಕು. ಬಾಣ ಬಿಡುವುದು ನಮ್ಮ ಕೆಲಸ. ಅದು ಗುರಿ ಮುಟ್ಟಿದರೇ ಸರಿ. ಮುಟ್ಟದೇ ಹೋದರೆ ಬೇರೆ ಬಾಣಗಳು ಸಿದ್ದವಾಗೇ ಇರ್ತಾವೇ. ಮಹಾಜನಗಳೇ ನಿಮಗೆ ಮಹಿಳಾ ಮೀಸಲಾತಿ ಬೇಕೋ ಬೇಡವೋ?
ಭಕ್ತಗಣ : ಬೇಕು.. ಬೇಕೆ ಬೇಕು..
ವಿಶ್ವಗುರು : ಅದಕ್ಕಾಗಿಯೇ ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆಂಬುದನ್ನು ನೀವು ನಂಬುತ್ತೀರೋ ಇಲ್ಲವೋ?
ಭಕ್ತಗಣ : ನಂಬುತ್ತೇವೆ? ನೀವೇ ನಮ್ಮ ದೇವರು. ಜೈ ವಿಶ್ವಗುರು ಮಹಾರಜ್ ಕೀ.. ಜೈ.
ವಿಶ್ವಗುರು : ನಿಮ್ಮ ಈ ದೇವರನ್ನು ಪ್ರಶ್ನಿಸುವ ದೇಶದ್ರೋಹಿಗಳನ್ನು ಏನು ಮಾಡಬೇಕು?
ಭಕ್ತಗಣ : ಪಾಕಿಸ್ತಾನಕ್ಜೆ ಗಡಿಪಾರು ಮಾಡಬೇಕು.
ಒಬ್ಬ : ಮಹಿಳಾ ಮೀಸಲಾತಿ ತಂದ ವಿಶ್ವಗುರುವಿಗೆ
ಎಲ್ಲರೂ : ಜೈ..
ಇನ್ನೊಬ್ಬ : ಮಹಿಳೆಯರ ಉದ್ದಾರಕ್ಕಾಗಿ ದೇವರೇ ಕಳುಹಿಸಿಕೊಟ್ಟ ದೇವದೂತನಿಗೆ.
ಎಲ್ಲರೂ : ಜೈ ಜೈಜೈ..
ಮಹಿಳೆ : ಜನರೇ ಇದನ್ನೆಲ್ಲಾ ನಂಬಬೇಡಿ. ಹೆತ್ತ ತಾಯಿಯನ್ನೇ ನಿರ್ಲಕ್ಷಿಸಿ ಮನೆ ತೊರೆದವನಿಂದ ಮಹಿಳೆಯರಿಗೆ ಗೌರವ ಸಿಕ್ಕೀತೆ? ಮದುವೆಯಾದ ಪತ್ನಿಯನ್ನೇ ತೊರೆದವನಿಂದ ಮಹಿಳೆಯರಿಗೆ ನ್ಯಾಯ ಸಿಕ್ಕೀತೆ? ಯೋಚಿಸಿ, ಅರ್ಥ ಮಾಡಿಕೊಳ್ಳಿ. ಇದೆಲ್ಲಾ ಎಲೆಕ್ಷನ್ ನಾಟಕ..
ಒಬ್ಬ : ಮಹಿಳಾ ರಕ್ಷಕ ವಿಶ್ವಗುರುವಿಗೆ..
ಭಕ್ತಗಣ : ಜೈ ಹೋ...
( ಜೈಕಾರದ ಘೋಷಣೆಗಳಲ್ಲಿ ಆ ಮಹಿಳೆಯ ದ್ವನಿ ಉಡುಗಿ ಹೋಗುತ್ತದೆ. ಜೈಕಾರಗಳು ನಿರಂತರವಾಗಿ ಮೊಳಗುತ್ತವೆ?
*- ಶಶಿಕಾಂತ ಯಡಹಳ್ಳಿ*
Comments
Post a Comment