ವಿಷಭಟ್ಟನ ವ್ಯರ್ಥ ಪ್ರಲಾಪ (ಪ್ರಹಸನ -62)

(ಪ್ರಹಸನ -62)

 ವಿಷಭಟ್ಟನ ವ್ಯರ್ಥ ಪ್ರಲಾಪ

***************************

 

( ಮೂರು ದಾರಿ ಸೇರುವಲ್ಲಿ ನಿಂತ ವಿಷಭಟ್ಟ ಎದೆ ಬಾಯಿ ಬಡಿದುಕೊಂಡು ಗೋಳಾಡತೊಡಗಿದ)

 

ವಿಷಭಟ್ಟ : ಅಯ್ಯೋ ಅಯ್ಯಯ್ಯೋ.. ಅನ್ಯಾಯ ಕೇಳೋರು ಯಾರು ಇಲ್ವಾ. ದೇವರಿಗೆ ಅವಮಾನ, ಗಣೇಶನಿಗೆ ಅಪಮಾನ.. ಅಯ್ಯಯ್ಯೋ ಅನ್ಯಾಯಾ. ಹಿಂದೂಗಳ ಭಾವನೆಗಳಿಗಾಗಿದೆ ಆಳದ ಗಾಯ..

 

ಸಂಬರ್ಗಿ : ನಾನಿದ್ದೀನಿ ಬಟ್ರೆ.. ಇಂತಾದ್ದನ್ನು ಕೇಳಿಯೂ ಮುಚಗೊಂಡಿರೋಕಾಗುತ್ತಾ. ಯಾರಾದ್ರೂ ನಮ್ಮ ಗಣೇಶನಿಗೇನಾದ್ರೂ ಅಂದಬಿಟ್ರೆ ಸುಮ್ನೆ ಇರೋಕಾಗುತ್ತಾ.?

 

ವಿಷಭಟ್ಟ : ಬಾರಯ್ಯಾ ಬಾ.. ನೀನೊಬ್ಬನಾದ್ರೂ ಬಂದ್ಯಲ್ಲಾ. ಏನಂತಾ ಹೇಳ್ಲಿ. ಹೇಗಂತಾ ಹೇಳ್ಲಿ. ನಮ್ಮ ಗಣೇಶನಿಗೆ ಪೂಜೆ ಮಾಡಬ್ಯಾಡ ಅಂತಾರಲ್ಲಾ.. ಪ್ರಾರ್ಥನೆ ಮಾಡಬ್ಯಾಡಾ ಅಂತಾರಲ್ಲಾ. ಇದಕಿಂತಾ ಅನ್ಯಾಯ ಬೇಕಾ.. ಅಯ್ಯೋ ಗಜಾನನಾ ಗಣಪತಿ ವಿಘ್ನೇಶ್ವರಾ.. ನಿನಗೇ ವಿಘ್ನ ಬಂದೊದಗಿದೆಯಲ್ಲಾ ಭಗವಂತಾ..

 

ಮುತಾಲಿಕಜ್ಜ : ಯಾರು ಯಾರು ಹಂಗೇಳಿದ್ದು. ಹಿಂದೂ ದೇವರಿಗೆ ಅನ್ಯಾಯ ಆದರೆ ನಾನಂತೂ ಸಹಿಸೋದಿಲ್ಲಾ. ದಂಡೆತ್ತಿ ಹೋಗಿ ದಾಳಿ ಮಾಡ್ತೇನೆ.. ಶ್ರೀರಾಮನ ಮೇಲಾಣೆ. ಜೈಶ್ರೀರಾಂ..

 

ವಿಷಭಟ್ಟ : ನಿಮ್ಮಂತೋರಿಗಾಗಿಯೇ ಕಾಯ್ತಾ ಇದ್ದೆ . ವಿಷ ಕಾರೋದರಲ್ಲಿ ನೀವು ನನಗಿಂತಾ ಪೇಮಸ್ಸು. ನನ್ನ ಅಸ್ತ್ರ ಪೆನ್ನಾದ್ರೆ, ನಿಮಗೆ ನಿಮ್ಮ ನಾಲಿಗೇನೇ ಗನ್ನು. ಆದರೇನು ಮಾಡೋದು ನಾನೆಷ್ಟೇ ವಿಷ ಕಾರಿದ್ರೂ, ನೀವೆಷ್ಟೇ ದ್ವೇಷ ಹುಟ್ಸಿದ್ರೂ ಹಿಂದೂಗಳೆಲ್ಲಾ ನಮ್ಮ ಬೆಂಬಲಕ್ಕೆ ಬರ್ತಾನೇ ಇಲ್ಲಾ. ನಿಮ್ಮಂತಾ ಹಿಂದೂ ಹುಲಿಯನ್ನೇ ಇಲೆಕ್ಷನ್ನಲ್ಲಿ ಮಣ್ಣು ಮುಕ್ಕಿಸಿ ಇಲಿಯಾಗಿಸಿ ಬಿಲಾ ಸೇರಿಸಿದ್ರು.. 

 

ಮುತಾಲಿಕಜ್ಜ : ಹಿಂದೂಗಳಿಗೆ ಧರ್ಮಾಭಿಮಾನ ಅನ್ನೂದ ಸ್ವಲ್ಪಾನೂ ಇಲ್ಲಾ ಬಿಡಿ ಬಟ್ರೆ. ಅವರನ್ನ ನಂಬಿ ನಾನೂ ಕೆಟ್ಟೆ. ನಮ್ಮ ಜನರೇ ನಮ್ಮನ್ನ ನಂಬತಾ ಇಲ್ಲಾ. ನಮಗೋ ದ್ವೇಷದ ವ್ಯಾಪಾರ ಬಿಟ್ಟು ಬೇರೆ ದಂದೆ ಯಾವುದೂ ಗೊತ್ತಿಲ್ವಲ್ಲಾ.. ಏನು ಮಾಡೋದು

 

ಸಂಬರ್ಗಿ : ಅಜ್ಜಾವ್ರೆ ಒಂದು ಕೆಲ್ಸಾ ಮಾಡಿ. ನೀವು ಬಿಗ್ ಬಾಸ್ ಗೆ ಸೇರಿಕೊಂಡು ಮಂಗಾಟ ಮಾಡಿ ಜನರನ್ನ ಮರಳು ಮಾಡಿ. ಆಗಲಾದ್ರೂ ನನ್ನಂಗೆ ನೀವೂ ಪೇಮಸ್ ಆಗಬೋದು

 

ಮುತಾಲಿಕಜ್ಜ : ನನಗೆ ಅಜ್ಜಾ ಅಂತಿಯೇನಲೇ ಬಚ್ಚಾ. ನನಗಾದ್ರೂ ಒಂದೈವತ್ತು ಜನಾ ಹಿಂಬಾಲಕರು ಅಂತಾ ಇನ್ನೂ ಇದ್ದಾರಲೇ ಲವರ್ಸಗಳ ಮೇಲೆ ದಾಳಿ ಮಾಡೋಕೆ. ನಿನ್ನ ಹಿಂದೆ ಒಂದು ನಾಯಿನೂ ಇಲ್ವಲ್ಲಲೇ. ಬಿಗ್ ಬಾಸ್ಗೆ ಹೋಗಬೇಕಂತೆ. ಅದು ಮೊದಲೇ ಹುಚ್ಚರ ಸಂತೆ, ನಾನೂ ಹೋದರೆ ಇಲ್ಲಿ ಯಾರು ರಾತ್ರಿ ಪಾರ್ಟಿಗಳ ಮೇಲೆ ದಾಳಿ ಮಾಡಿಸೋರು? ವಾಲಂಟೈನ್ ಡೇ ವಿರೋಧಿಸೋರು. ಲವ್ ಜಿಹಾದ್ ಆಗದಂಗೆ ತಡೆಯೋರು. ಮುಸ್ಲಿಂರು ಬಾಲ ಬಿಚ್ಚದಂಗೆ ತಡೆಯೋರು..

 

ವಿಷಭಟ್ಟ : ಅಯ್ಯೋ ಸುಮ್ಕಿರಿ ಸಾಕು ವಿಷಯಾಂತರ ಬೇಡ. ಗಣೇಶನಿಗೆ ಅದೂ ನಮ್ಮ ಆದಿದೈವ ಗಣಪತಿಗೆ ಅವಮಾನ ಆಗಿದೆ. ಅದಕ್ಕೇನು ಮಾಡೋದು ಅದನ್ನ ಹೇಳಿ ಮೊದಲು.

 

ಮುತಾಲಿಕಜ್ಜ : ಯಾವ ಗಣೇಶಾ.. ನಿಮ್ಮ ಪೇಪರನಾಗ ಕೆಲಸಾ ಮಾಡೋವ್ನಾ?. ಯಾರು ಅವಮಾನ ಮಾಡಿದ್ದು. ನೀವು ಸಂಬಳ ಕೊಡದೇ ದುಡಿಸಿಕೊಂಡು ಬೈಕೊಂಡು ಹೊರಗೆ ಹೋದವರಾ

 

ವಿಷಭಟ್ಟ : ಅಯ್ಯೋ ಅದ್ಯಾವದೂ ಅಲ್ಲಾ ಅಜ್ಜಾ. ನಮ್ಮ ಗಾಡು, ನಮ್ಮ ಆರಾಧ್ಯ ದೈವಾ.. ಲಾರ್ಡ್ ಗಣೇಶನ ಪೂಜೆ ಮಾಡಬಾರದು ಅಂತಾ ಹೇಳಿದ್ದಾರೆ. ನಮ್ಮ ಹಿಂದು ಧರ್ಮದ  ಪವರ್ಪುಲ್ ದೇವರಿಗೆ ಪ್ರಾರ್ಥನೆ ಮಾಡಬಾರದಂತೆ.

 

ಮುತಾಲಿಕಜ್ಜ : ಯಾರು ಹಂಗೇಳಿದ್ದು. ನಾನು ಇದನ್ನ ವಿರೋಧಿಸ್ತೀನಿ. ಹಿಂದೂ ದೇವರಿಗೆ ಆದ ಅಪಮಾನ ನನಗೆ ಆದ ಅವಮಾನ. ಎಲ್ಲಿ ನನ್ನ ಹಿಂಬಾಲಕರು. ಎಲ್ಲಿ ನಾನು ಸಾಕಿಕೊಂಡ ಹುಡುಗರು. ಬನ್ರೋ ದಂಡೆತ್ತಿ ದಾಳಿಗೆ ಹೋಗೋಣ..

 

ವಿಷಭಟ್ಟ : ಸ್ವಾಮಿಗಳು.. ಲಿಂಗಾಯತ ಮಠದ ಗುರುಗಳು ಹೀಗೆ ಉಪದ್ವ್ಯಾಪಿ ಹೇಳಿಕೆ ನೀಡಿ ಗಣೇಶನಿಗೆ ಪೂಜೆ ಮಾಡಕೂಡದು ಅಂತಾ ಹೇಳಿದ್ದಾರೆ, ಹಿಂದೂಗಳ ಭಾವನೆಗಳಿಗೆ ಹರ್ಟ್ ಮಾಡಿದ್ದಾರೆ. ಈಗೇನ್ಮಾಡೋದು?

 

ಮುತಾಲಿಕಜ್ಜ : ಅವರಿಗೆ ಅಷ್ಟೊಂದು ದೈರ್ಯವಾ. ಅವರು ಗಣೇಶನ ಅಪ್ಪ ಶಿವನ ಪೂಜೆ ಮಾಡ್ತಾರೆ, ಶಿವನ ಮಗನ ಪೂಜೆ ಯಾಕೆ ಬೇಡಾಂತೆ

 

ಸಂಬರ್ಗಿ : ಅವರದು ಅದ್ಯಾವುದೋ ಇಷ್ಟ ಲಿಂಗ ಪೂಜೆಯಂತೆ. ವಚನಗಳೇ ಪ್ರಾರ್ಥನೆಯಂತೆ. ನಮ್ಮ ಸ್ಥಾವರ ಶಿವನೂ ಬೇಡ್ವಂತೆ, ಗಣೇಶನ ಪೂಜೆ ಅವರ ಸಂಸ್ಕೃತಿಯೇ ಅಲ್ಲವಂತೆ

 

ಮುತಾಲಿಕಜ್ಜ : ಅವರ ಜಾತಿಯವ್ರು ಗಣೇಶನ ಪೂಜೆ ಮಾಡ್ಲಿ ಬಿಡ್ಲಿ ನಮಗೇನು. ನಮ್ಮ ಹಿಂದೂಗಳಿಗೆ ಮಾತ್ರ ಗಣೇಶನ ಪೂಜೆ ಮಾಡಬೇಡಿ ಅಂತೇನಾದ್ರೂ ಹೇಳಿದ್ರೆ ನಾನಂತೂ ದಂಡು ಕಟ್ಕೊಂಡು ದಾಳಿಗೆ ಹೋಗೋನೇ. ನಾನು ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ, ಇನ್ನು ಜಂಗಮಯ್ಯನ ಗಂಟೆಗೆ ಹೆದರ್ತೀನಾ? ಆದರೆ ನನ್ನ ಟಾರ್ಗೆಟ್ ಏನಿದ್ರೂ ಮುಸ್ಲಿಂನವರು ಮಾತ್ರ. ಅಲ್ಲೆಲ್ಲೋ ಲವ್ ಜಿಹಾದ್ ನಡೆದಿದೆಯಂತೆ ಅರ್ಜೆಂಟಾಗಿ ಹೋಗಬೇಕು ಬರ್ತೇನೆ ಬಟ್ರೆ. ಸ್ವಾಮಿಗಳ ಉಪದ್ವ್ಯಾಪದ ಬಗ್ಗೆ ನಿಮ್ಮ ವಿಷವಾಣಿಯಲ್ಲಿ ಬರೆದು ಹಾಕಿ.. ( ಹೊರಡುವರು)

 

ವಿಷಭಟ್ಟ : ಎಲ್ಲಾ ಬರದಾಯ್ತು. ಯಾರೂ ನನ್ನ ಬೆಂಬಲಕ್ಕೆ ಬರ್ತಿಲ್ವೇ. ಬೇನಾಮಿ ಬೆಂಬಲಿಗರನ್ನ ನಾನೇ ಸೃಷ್ಟಿ ಮಾಡ್ಕೋಬೇಕಿದೆ. ಲಿಂಗಾಯತರು ಈಗ ನನ್ನ ವಿರುದ್ದ ತಿರುಗಿ ಬಿದ್ದವರೆ. ನಮ್ಮ ವೈದಿಕರು ಮೌನವಾಗಿದ್ದಾರೆ. ಅಜ್ಜನೂ ಸಹ ಹೊರಟು ಹೋದ. ಏನ್ಮಾಡೋದು

 

ಸಂಬರ್ಗಿ : ನಾನಿದ್ದೀನಿ ಭಟ್ಟರೇ. ನಿಮ್ಮ ಪರವಾಗಿ ನಾನು ಪಾಯ್ಸನ್ ಸ್ಪ್ರೇ ಮಾಡೊ ಕೆಲಸ ಮಾಡ್ತೇನೆ

 

ವಿಷಭಟ್ಟ : ನೀನಿನ್ನೂ ಬಚ್ಚಾ. ನೀನು ತಿಂಗಳೆಲ್ಲಾ ತಿಣಕಿದ್ರೂ ಮೂರು ಜನ ಹಿಂಬಾಲಕರು ನಿಂಜೊತೆ ಬರೋದಿಲ್ಲ. ಸುಮ್ಕಿರಯ್ಯಾ

 

ಸಂಬರ್ಗಿ : ಏನ್ ಸರ್ ಹಿಂಗೇಳಿದ್ರಿ. ನಾನು ಅಂದ್ರೇನು ನನ್ನ ಕೆಪಾಸಿಟಿ ಅಂದ್ರೇನು. ನನಗೆ ಹಿಂದೆ ಮುಂದೆ ದಂಡು ದಳಪತಿಗಳು ಯಾರೂ ಬೇಕಿಲ್ಲಾ. ನಾನೊಬ್ಬನೇ ಒನ್ ಮ್ಯಾನ್ ಆರ್ಮಿ ಇದ್ದಂಗೆ. ಸಿಂಹ ಯಾವಾಗ್ಲೂ ಸಿಂಗಲ್ಲಾಗೇ ಇರುತ್ತೆ. ಈಗ ನೋಡಿ ನಾನೇನು ಮಾಡ್ತೇನೆ ಅಂತಾ.

 

ವಿಷಭಟ್ಟ : ಏನ್ ಮಾಡ್ತೀ. ಯಾರಾದರೂ ಬಿಟ್ಟಿ ಊಟಾ ಕೊಡ್ಸಿದ್ರೆ ತಿಂದು ಮನೆಗೋಗಿ ಮಲ್ಕೋಳ್ತಿ ಹೌದಲ್ಲೋ.

 

ಸಂಬರ್ಗಿ : ಇಲ್ಲಾ ಸರ್.. ಮಲಗಿದ ಸರ್ಪವನ್ನ ಸ್ವಾಮಿಗಳು ಕೆಣಕಿದ್ದಾರೆ. ನಮ್ಮ ದೇವರನ್ನ ಅಣಕಿಸಿದ್ದಾರೆ. ನಾನು ಸುಮ್ಮನಿರೋದಿಲ್ಲ. ನಾನು ಪೊಲೀಸ್ ಸ್ಟೇಶನ್ನಿಗೆ ಹೋಗ್ತೇನೆ. ದೂರು ದಾಖಲಿಸ್ತೇನೆ. ಕೋರ್ಟಿಗೆ ಹೋಗ್ತೇನೆ.. ಪಾಠ ಕಲಿಸ್ತೇನೆ. ಧಿಕ್ಕಾರಾ ಧಿಕ್ಕಾರಾ.. ಸ್ವಾಮಿಗಳಿಗೆ ಧಿಕ್ಕಾರ. (ಕೂಗುತ್ತಾ ಹೊರಡುವನು)

 

ವಿಷಭಟ್ಟ: ಹೋಗಪ್ಪಾ ಹೋಗು. ಏನು ಮಾಡ್ತೀಯೋ ಮಾಡ್ಕೋ. ನನಗೇ ಯಾರೂ ಕ್ಯಾರೇ ಅಂತಿಲ್ಲಾ. ನಮ್ಮ ಹೋರಿ ಸ್ವಾಮಿಗಳೇ ನನ್ನ ಬೆಂಬಲಿಸಿ ಒಂದು ಹೇಳಿಕೆ ಕೊಡ್ತಿಲ್ಲಾ. ಸಂಘ ಪರಿವಾರದವರೇ ಸಾತ್ ಕೊಡ್ತಿಲ್ಲಾ. ಏನ್ ಮಾಡ್ಲಿ. ಹಾಂ ಅಲ್ಯಾರೋ ದೊಡ್ಡ ಮನುಷ್ಯರು ಹಣೆಗೆ ಕುಂಕಮ ತಿಲಕ ಇಟ್ಕೊಂಡೋರು ಬರ್ತಿದ್ದಾರೆ. ಅಯ್ಯೋ ಅನ್ಯಾಯ.. ಅಯ್ಯಯ್ಯೋ ಅನ್ಯಾಯಾ? ಗಣೇಶನಿಗೆ ಅವಮಾನ.. ಹೇಳೋರು ಕೇಳೋರು ಯಾರೂ ಇಲ್ವಾ..?

 

ಎತ್ನಾಲ : ಹೋ ವಿಷಭಟ್ರು.. ಹಿಂಗ್ ಬೀದ್ಯಾಗ ಅರೆಬೆತ್ತಲಾಗಿ ನಿಂತು ಯಾಕೆ ಬಾಯಿಬಡ್ಕೋತಿದ್ದೀರಾ? ಯಾಕ್ರೀ ನಿಮ್ಮ ಹೋರಿ ಸ್ವಾಮಿಗಳು ಮತ್ಯಾವುದಾದರೂ ಹಸು ಮೇಸೋಕೋಗಿ ಸಿಕ್ಕಿಬಿದ್ರಾ?

 

ವಿಷಭಟ್ಟಹೋ ಅದೆಲ್ಲಾ ಹಳೇ ಕತೆ. ನಮ್ಮ ಬ್ರಾಹ್ಮಣ ಮಠದ ಸ್ವಾಮಿಗಳು ಎಂಥಾದ್ದೇ ಕರ್ಮಕಾಂಡ ಮಾಡಿದ್ರೂ ನಾವು ಮುಚ್ಚಾಕ್ತೀವಿ ಎತ್ನಾಲ್ರೇ. ಆದರೆ ಲಿಂಗಾಯತ ಮಠದ ಸ್ವಾಮಿ ಇದ್ದಾರಲ್ಲಾ ಅವ್ರು ನಾಟಕಾ ಗೀಟಕಾ ಮಾಡ್ಕೊಂಡು ಇರೋದು ಬಿಟ್ಟು ನಮ್ಮ ದೇವರ ಬುಡಕ್ಕೆ ಬೆಂಕಿ ಬಾಂಬು ಇಡ್ತಾ ಅವ್ರೆ. ಗಣೇಶನ ಪೂಜೆ ಮಾಡಬಾರದು ಅಂತಾ ಹೇಳಿದ್ದಾರೆ. ನೀವು ದೊಡ್ಡ ಹಿಂದೂ ನಾಯಕ್ರು. ನೀವು ಇದರ ವಿರುದ್ಧ ದ್ವನಿ ಎತ್ತಲೇಬೇಕು.

 

ಎತ್ನಾಲ : ಗೊತ್ತಾಯ್ತು. ಎಲ್ಲಾ ಗೊತ್ತಾತು. ಆದರೆ ಈಗ ನನ್ನ ಟೈಮ್ ಕರಾಬಾಗೈತಿನನ್ನ ಮಾತ್ನ ಯಾರು ಕೇಳ್ತಾರ ಭಟ್ಟಣ್ಣಾ. ಮಾತಾಡಿ ಮಾತಾಡಿ ನಾನs ಕೆಟ್ಟವನಾಗಿ ಮೂಲಿಗುಂಪಾಗೇನಿ. ನಮ್ಮ ಪಕ್ಷದಾಗ ನನ್ನ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲಾ. ಪಕ್ಷದ ಅಧ್ಯಕ್ಷನ್ನೂ ಮಾಡ್ಲಿಲ್ಲ. ನಾನ್ಯಾವ ಬಾವಿಗೆ ಬಿದ್ದು ಸಾಯ್ಲಿ ಹೇಳು.

 

ವಿಷಭಟ್ಟ : ಹಿಂಗಂದ್ರ ಹೆಂಗೆ ಸರ್. ಈಗ ಹಿಂದೂ ಧರ್ಮ ಅನ್ನೋದು ಏನಾದ್ರೂ ಉಳಿದಿದೆ ಅಂದ್ರೆ ಅದು ನಿಮ್ಮಂತವರಿಂದ್ಲೇ. ಹಿಂದೂ ದೇವರಿಗೆ ಅವಮಾನ ಆದರೆ ನಿಮಗೆ ಅಪಮಾನ ಆದಂಗೆ. ನೀವು ಸುಮ್ಮನಿರಕೂಡದು

 

ಎತ್ನಾಲ : ಹೌದೌದು. ಸುಮ್ಕಿದ್ರ ನಮ್ಮಂದೀನs ನನಗ ಹಳ್ಳಾ ತೆಗ್ದು ಜೀವಂತ ಹೂತಾಕಿ ಬಿಡ್ತಾರs. ನನ್ನ ಹೇಳಿಕೇನೂ ಬರ್ಕೊ. " ಕಮ್ಯೂನಿಸ್ಟರು, ನಕ್ಸಲೈಟರು ಸ್ವಾಮಿಗಳಾಗಿ ಮಠ ಸೇರ್ಕೊಂಡಾರs. ಇದನ್ನ ನಾನು ವಿರೋಧಿಸ್ತೀನಿ ". ಚೊಲೋ ಹೇಳಿಕೆ ಕೊಟ್ಟೆ ಹೌದಲ್ಲೋ.

 

ವಿಷಭಟ್ಟ : ಹೋ.. ಇಷ್ಟಾದ್ರೂ ಶಬ್ದ ಹೊರಗೆ ಬಂತಲ್ಲಾ. ಇದನ್ನೇ ದೊಡ್ಡದು ಮಾಡಿ ಪ್ರಚಾರ ಮಾಡಿದ್ರಾಯ್ತುನಮ್ಮ ಹಿಂದೂ ಧರ್ಮವನ್ನ ಗಣೇಶನೇ ಕಾಪಾಡಬೇಕು

 

ಸಂಬರ್ಗಿ : ( ವಾಪಸ್ ಬಂದು) ಸರ್ ಇವನ್ಯಾರೋ ನಿಮ್ಮನ್ನೇ ಗುರಾಯಿಸ್ತಾ ನಿಂತಿದ್ದಾ. ಇವನ್ಯಾರವ ಯಾರಿವ ಅಂತಾ ಸ್ವಲ್ಪ ವಿಚಾರಿಸಿ.

 

ಶರಣ : ಇವನಾರವ ಇವನಾರವ ಎಂದೆನಿಸದಿರಯ್ಯಾ. ಇವನಮ್ಮವ ಇವನಮ್ಮವ ಎಂದೆಣಿಸಯ್ಯಾ..

 

ಎತ್ನಾಲ : ಇವನೂ ನಕ್ಸಲೈಟs ಇರಬೇಕು ಅಂತಾ ಅನಸ್ತೈತಿ. ಯಾರ್ಲೇ ತಮ್ಮಾ ನೀನು? ಇಲ್ಲಿ ನಮ್ಮ ದೇವರ್ಗೆ ಅವಮಾನ ಆಗೈತಿ ಅಂತಾ ನಾವs ಉರ್ಕೊಂಡು ಸಾಯ್ತಿದ್ದೀವಿ.

 

ಶರಣ : ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ. ಪಂಚಲೋಹದ ದೇವರು ದೇವರಲ್ಲತನ್ನತಾನರಿದು ತಾನಾರೆಂದು ತಿಳಿದೊಡೆ ತನಗೆ ತಾನೇ ದೇವ ನೋಡಾ ಕೂಡಲಸಂಗಮದೇವಾ.

 

ಎತ್ನಾಲ : ತೋ ಥೋ.. ಇವ್ನು ಪಕ್ಕಾ ಕಮ್ಯೂನಿಸ್ಟ್ ಅನ್ನೋದು ಗ್ಯಾರಂಟಿ ಆತು. ಯಾರು ದೇವರನ್ನ ಪ್ರಶ್ನೆ ಮಾಡ್ತಾರೋ ಅವರೆಲ್ಲಾ ಪಕ್ಕಾ ಕಮ್ಯೂನಿಸ್ಟರು ಇಲ್ಲಾ ನಕ್ಸಲೈಟರು ಆಗೇ ಆಗಿರ್ತಾರs..

 

ಸಂಬರ್ಗಿ : ಇರಿ ಟೆಸ್ಟ್ಮಾಡ್ತೀನಿ. ರ್ರೀ ಸ್ವಾಮಿ ನೀವು ದೇವರನ್ನ ನಂಬ್ತೀರೋ ಇಲ್ವೋ

 

ಶರಣ : ನಂಬ್ತೀವಿ

 

ಸಂಬರ್ಗಿ : ಮತ್ತೆ ನಿಮ್ಮ ಸ್ವಾಮಿಗಳು ಹಿಂದೂ ದೇವರುಗಳು ಕೇವಲ ಕಾಲ್ಪನಿಕ ಅಂತಾ ಹೇಳ್ತಿದ್ದಾರಲ್ಲೋ. ನಾವು ನಿಮ್ಮ ಸ್ವಾಮಿಗೋಳನ್ನ ಸುಮ್ಕೆ ಬಿಡೋದಿಲ್ಲಾ. ಸ್ಟೇಶನ್ನಿಗೆ ಕರಿಸ್ತೇವೆ. ಕೋರ್ಟಿಗೆ ಎಳಿತೇವೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆದ್ರೆ ಸುಮ್ನೆ ಬಿಡ್ತೀವಾ?

 

ಎತ್ನಾಲ : ಹೌದೌದು ನಕ್ಸಲೈಟ್ ಅಂತಾ ಸಾಬೀತು ಮಾಡ್ತೇವೆ. ಹಾದಿ ಬೀದೀಲಿ ಡಂಗುರಾ ಹೊಡೀತೀವಿ.

 

ವಿಷಭಟ್ಟ : ದೈವದ್ರೋಹಿ, ಧರ್ಮದ್ರೋಹಿ ಅಂತಾ ಪುಕಾರು ಹುಟ್ಟಿಸ್ತೇವೆ. ಬೈತೇವೆ, ನಿಂದಿಸ್ತೇವೆ. ಮಾನಾ ಮರ್ಯಾದೆ ಕಳೀತೇವೆ..

 

ಶರಣ : ಆಯ್ತು.. ನಿಮಗೇನು ಅನ್ನಿಸುತ್ತೋ ಅದನ್ನೇ ಮಾಡಿ. ಆದರೆ ನನ್ನದೊಂದು ಕೋರಿಕೆ. ಅಲ್ಲಿ ನೋಡಿ ಕಂಬಕ್ಕೆ ನಮ್ಮ ಮಠದ ಸ್ವಾಮಿಗಳ ಪೋಸ್ಟರ್ ಅಂಟ್ಸಿದ್ದಾರೆ. ನೀವು ಮೂವರೂ ಬಾಟಲಲ್ಲಿರುವ ನೀರನ್ನು ನಿಮ್ಮ ಬಾಯಲ್ಲಿ ಹಾಕಿಕೊಂಡು ಜೋರಾಗಿ ಅದಕ್ಕೆ ಉಗೀರಿ. ನಿಮ್ಮ ಮನದೊಳಗಿರುವ ಸೇಡನ್ನು ಉಗಿಯುವ ಮೂಲಕ ತೀರಿಸಿಕೊಳ್ಳಿ.

 

ಸಂಬರ್ಗಿ : ಹೋ ಅಷ್ಟೇಯಾ. ಕೊಡು ನೀರು. ಸ್ವಾಮಿ ಮುಖಕ್ಕೆ ಉಗಿಯೋದು ಕೂಡಾ ನಾವು ತೋರಿಸುವ ಪ್ರತಿಭಟನೆ. (ತಾನೂ ಬಾಯಲ್ಲಿ ನೀರು ಹಾಕಿಕೊಂಡು ಇನ್ನೂ ಇಬ್ಬರಿಗೂ ನೀರು ಬಾಯಿಗೆ ಹಾಕಿಕೊಳ್ಳಲು ಕೊಡುತ್ತಾನೆ

 

ಶರಣ : ಈಗ ಏಕಕಾಲದಲ್ಲಿ ಎಲ್ಲರೂ ಸ್ವಾಮಿಗಳ ಪೊಟೋಗೆ ಉಗೀರಿ. ಒಂದು ಎರಡು ಮೂರು.

 

( ಮೂರು ಜನ ಮೇಲಕ್ಕೆ ಮುಖ ಮಾಡಿ ಪೋಸ್ಟರಿಗೆ ಉಗಿಯುತ್ತಾರೆ. ಉಗಿದ ನೀರೆಲ್ಲಾ ಅವರ ಮುಖದ ಮೇಲೆಯೇ ಬೀಳುತ್ತದೆ. )

 

ವಿಷಭಟ್ಟ : ( ಮುಖವನ್ನು ವರೆಸಿಕೊಳ್ಳುತ್ತಾ) ಎಲ್ಲಿ ಎಲ್ಲಿ ದ್ರೋಹಿ ಕಮ್ಯೂನಿಸ್ಟಾ..

 

ಎತ್ನಾಲ : ನಮ್ಮ ಮುಖಕ್ಕೆ ನಾವೇ ಉಗಿದುಕೊಳ್ಳುವ ಹಾಗೆ ಮಾಡಿದ ಧರ್ಮದ್ರೋಹಿಯನ್ನು ಹಿಡೀರಿ ಹೊಡೀರಿನಕ್ಸಲವಾದಿಯನ್ನ ಬಿಡಬೇಡಿ.

 

ಸಂಬರ್ಗಿ : ನಮಗೆ ಹೀಗೆ ಅವಮಾನ ಮಾಡಿದವನ ವಿರುದ್ದ ಪೊಲೀಸ್ ದೂರು ಕೊಡುತ್ತೇನೆ. ಕೋರ್ಟಿಗೆಳೆಯುತ್ತೇನೆ. ಇಲ್ಲೇ ಇದ್ದನಲ್ಲಾ ಎಲ್ಲಿ ಮಾಯವಾದ.

 

( ಅಷ್ಟರಲ್ಲಿ ದ್ವನಿಯೊಂದು ಕೇಳಿಬರುತ್ತದೆ. ಮೂವರೂ ಪ್ರತಿಮೆಯಂತೆ ನಿಲ್ಲುತ್ತಾರೆ)

 

ಶರಣ : ಎಲೆ ಎಲವೋ ಮೂರ್ಖರಾ. ಇಷ್ಟೇ ನಿಮ್ಮ ಯೋಗ್ಯತೆ. ನಿಜ ಶರಣರಿಗೆ ನೀವೆಷ್ಟೇ ಬೈದು ನಿಂದಿಸಿ ಅಪಪ್ರಚಾರ ಮಾಡಿದರೂ ಅದು ನಿಮ್ಮ ಮುಖಕ್ಕೇ ಬಂದು ಬೀಳುತ್ತದೆಯೇ ಹೊರತು ಶರಣರ ಕೂದಲನ್ನೂ ಕೊಂಕಿಸಲು ಸಾಧ್ಯವಿಲ್ಲನಿಮ್ಮ ನಂಜಿನ ನಾಲಿಗೆಯಿಂದ ನೀವದೆಷ್ಟೇ ವಿಷ ಕಾರಿದರೂ ನಿಸ್ವಾರ್ಥಿ ಶರಣರ ಮುಂದೆ ನಿಮ್ಮಂತಾ ಮತಾಂಧರೆಲ್ಲಾ ಕ್ರಿಮಿಗಳು. ದೇಶದಲ್ಲಿ ನಿಮ್ಮಜ್ಜಂದಿರು ನೆಟ್ಟ ವೇದ ಶಾಸ್ತ್ರ ಸಂಪ್ರದಾಯಗಳ ಆಲದ ಮರಕ್ಕೆ ನೀವು ನೇತಾಕಿಕೊಳ್ಳಿ. ಸತ್ಯಶೀಲ ಶಿವಶರಣರ ಗುರು ಲಿಂಗ ಜಂಗಮ ಕಾಯಕ ದಾಸೋಹ ತತ್ವಗಳಿಗೆ ನಿಮ್ಮಿಂದ ಲೋಪವಾಗದಿರಲಿ. ನಿಂದನೆಗಳಿಂದ ನಿಜಶರಣರ ಮೌನವಾಗಿರಿಸಲು ಯಾರಿಂದಲೂ ಸಾಧ್ಯವಿಲ್ಲ ಯಾಕೆಂದರೆ *ನ್ಯಾಯನಿಷ್ಠುರಿಯಾದ ಲೋಕವಿರೋಧಿ ಶರಣನಾರಿಗೂ ಅಂಜುವವನಲ್ಲ"*

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ