ನಾನೂ ನೀನೂ ಜೋಡಿ ; ಹೀಗೊಂದು ಕೂಡಿಕೆ ಪ್ರಹಸನ (ಪ್ರಹಸನ-63)
(ಪ್ರಹಸನ-63)
**********************************************************
(ಕಮಲಮ್ಮ ಹಾಗೂ ತೆನೆಯಕ್ಕ ಕೈ ಕೈ ಹಿಡಿದುಕೊಂಡು ಡಾನ್ಸ್ ಮಾಡ್ತಾ ಬರ್ತಾರೆ. ಹಿನ್ನೆಲೆಯಲ್ಲಿ ಹಾಡು.)
ನಾನಿರುವುದೇ ನಿನಗಾಗಿ, ನೀನಿರುವುದು ನನಗಾಗಿ
ಬೇಸರವೇಕೆ, ಅವಸರವೇಕೆ
ದೇಶವ ಆಳೋಣ ಜೊತೆಯಾಗಿ
ಕೂಡಿ ಬಾಳೋಣ ಹಾಯಾಗಿ.
ಕಮಲಮ್ಮ : ( ಸುಧಾರಿಸಿಕೊಂಡು)
ಏನೇ ಆಗ್ಲಿ ನಾನೂ ನೀನೂ ಒಂದಾಗಿದ್ದು ಚೋಲೋ ಆತು ಅಲ್ವೇನಕ್ಕಾ.
ತೆನೆಯಕ್ಕ : ಏನ್ ಚೊಲೋನೋ ಏನೋ ಹೋಗು ಕಮಲಮ್ಮ. ನಿನ್ನ ಜೊತೆ ಸೇರದೇ ಇದ್ರೆ ಆ ಕೈಯವ್ವ ನನ್ನ ಪರಿವಾರದವರನ್ನೆಲ್ಲಾ ಹುರಿದು ನುಂಗಿಬಿಡ್ತಿದ್ಲು.
ಕಮಲಮ್ಮ : ಹೌದೌದು ಹಂಗೇ ಆಗ್ತಿತ್ತು ಬಿಡು. ಅದೇನೋ ಅಂತಾರಲ್ಲಕ್ಕಾ ಅಲ್ಪರಿಗೆ ಅಧಿಕಾರ ಬಂದ್ರೆ ಅರ್ಧ ರಾತ್ರೀಲಿ ಎದ್ದು ಸುದ್ದಿ ಆಗ್ತಾರೆ ಅಂತಾ. ಹಂಗಾಡ್ತಾಳೆ ಕೈಯವ್ವ. ಆಡ್ಲಿ ಆಡ್ಲಿ ಅದೇಟು ದಿನಾ ಆಡ್ತಾಳೆ ನೋಡೇ ಬಿಡೋವಾ.
ತೆನೆಯಕ್ಕ : ಅಬ್ಬಬ್ಬಾ ಅಂದ್ರ ಇನ್ನಾರು ತಿಂಗಳು ಇಲ್ಲಾ ಅಂದ್ರೆ ಒಂದು ವರ್ಷ ಮೆರೆದಾಡಬೋದು. ಮೆರೀಲಿ ಮೆರೀಲಿ ಏಟು ಮೆರಿತಾಳೊ ನೋಡೇ ಬಿಡೋವಾ.
ಸರಿಯಾದ ಟೈಂ ನೋಡಿ ಅವಳ ಕಾಲೆಳೆದು ಕೆಳಗೆ ಬೀಳಿಸೋಣಂತೆ ಕಮಲಮ್ಮಾ.. ನೀ ಒಬ್ಬಾಕಿ ನಂಜೊತೆ ಇದ್ರ ಸಾಕು ನೋಡು, ಬೀಳ್ಸಿ ಬಿಸಾಕಬೋದು. ಹೆಂಗೂ ಕಾಲೆಳೆಯೋದರಲ್ಲಿ ನಾನು ಎಕ್ಸಪರ್ಟ್ ಇದ್ರೆ ಆಪರೇಶನ್ ಮಾಡೋದರಲ್ಲಿ ನೀನು ಐನಾತಿ ಆಸಾಮಿ ಇದ್ದೀ ಅಲ್ವಾ. ನನ್ನಂತಾ ನನಗs ಆಪರೇಶನ್ ಮಾಡಿ ಕೆಡಿವಿಕೊಂಡು ಹೊಡಿದಿದ್ದೆ ನೀನು, ಇನ್ನು ಆ ಕೈಯವ್ವನ್ನ ಬಿಡ್ತೀಯಾ?
ಕಮಲಮ್ಮ : ಅದೆಂಗೆ ಬಿಡೋಕಾಯ್ತದೆ. ನಮ್ಮನೇ ಹಿರೀಕರು ಸರಿಯಾದ ಸಮಯಾನೋಡಿ ಗೂಟಾ ಹೊಡೀತಾರೆ ನೋಡ್ತಾ ಇರು. ಅಲ್ಲಾ ತೆನಿಯಕ್ಕಾ ನೀನು ನಮ್ಮನ್ನ ಬಿಟ್ಟು ಆ ಕೈಯವ್ವನ ಜೊತೆ ಕೈ ಮಿಗಿಲಾಯಿಸಿ 'ನಾನೂ ನೀನೂ ಜೋಡಿ, ಜೋಡಿಯತ್ತಿನ ಗಾಡಿ' ಅಂತಾ ಜಿಗಿದಾಡಿಕೊಂಡು ಹೋಗಿದ್ಯಲ್ಲಾ ಅದಕ್ಕ ನಿನಗೂ ಆಪರೇಶನ್ ಮಾಡಿ ಬೀಳಿಸಬೇಕಾಯ್ತು ಇದರಾಗ ನಂದೇನೂ ತಪ್ಪಿಲ್ಲವಾ ಮತ್ತೆ, ಏನೂ ತಪ್ಪು ತಿಳಕೋ ಬ್ಯಾಡ..
ತೆನೆಯಕ್ಕ : ಹೋಗಲಿ ಬಿಡು ಕಮಲಮ್ಮಾ ಬದುಕಿನ ರಾಜಕಾರಣ ಅಂದ್ರ ಇವೆಲ್ಲಾ ಇದ್ದಿದ್ದs. ಅದೇನೋ ಅಂತಾರಲ್ಲಾ ರಾಜಕಾರಣದ ಬದುಕಿನ್ಯಾಗ ಯಾರೂ ಖಾಯಂ ದೋಸ್ತರೂ ಅಲ್ಲಾ ದುಷ್ಮನ್ಗಳೂ ಅಲ್ಲಾ ಅಂತಾ.. ಇದೂ ಹಂಗ ಅನ್ಕೋಂಡು ಸಮಾಧಾನ ಮಾಡ್ಕೋ..
ಕಮಲಮ್ಮ : ನೂರಕ್ಕೆ ನೂರು ನಿಜಾ ಹೇಳ್ದೆ ನೋಡು. ಆದರೂ ನಿಂಜೊತೆ ನಾನು, ನಂಜೊತೆ ನೀನು ಸೇರಿ ಕೂಡಿಕೆ ಮಾಡ್ಕೊಂಡಿದ್ದೇನೋ ಸರಿ ಆದರss.
ತೆನೆಯಕ್ಕ : ಆದರ ಏನು? ಈಗ ನಾನು ನೀನು ಜೋಡಿ ಅಂತಾ ಇದ್ರಾಯ್ತು. ಯಾಕs ಅನುಮಾನ ಏನು?
ಕಮಲಮ್ಮ : ನಿನ್ನ ಹಿಂದಿನ ಹಿಸ್ಟರಿ ನೋಡಿದ್ರ ಅನುಮಾನ ಬರದs ಇರುತ್ತೇನೇ. ಮೂರು ಕೊಟ್ರ ಅತ್ತಿ ಕಡೆ, ಆರು ಕೊಟ್ರ ಸೊಸಿ ಕಡೆ ಅಂತ ಅಧಿಕಾರ ಕೊಟ್ಟವರ ಕಡೆ ಹೋಗೋ ಜಾಯಮಾನ ನಿಂದು. ಮತ್ತೆ ಮುಂದೇನೂ ಹಂಗೆನೇ ಮಾಡಿದ್ರೆ ಹೆಂಗೇ ಅಂತಾ ಯೋಚನೆ ಬಂತು ತಪ್ಪು ತಿಳೀಬ್ಯಾಡಾ ಅಕ್ಕಾ. ನಾನು ಯಾವಾಗಲೂ ಇರ್ತೀನಿ ನಿನ್ನ ಪಕ್ಕ.
ತೆನೆಯಕ್ಕ : ಅನ್ನವ್ವಾ ಅನ್ನು. ಸಿಚುವೇಶನ್ನು ಹೆಂಗ ಡಿಮಾಂಡ್ ಮಾಡುತ್ತೋ ಹಂಗs ಹೋಗಬೇಕಲ್ವೇನವ್ವಾ. ನಿನ್ನ ಹಿಸ್ಟರಿ ಬಯಾಲಜಿ ಸೋಶಿಯಾಲಜಿ ತೆಗದು ನೋಡಿದ್ರ ನನಗಿಂತಾ ಭಯಂಕರ ಐತಿ. ಈಗ್ಯಾಕ ಆ ಮಾತು ಬಿಡು.
ಕಮಲಮ್ಮ : ಕಮಲಮ್ಮನ ಜೊತೆ ಸೇರೋ ದೌರ್ಭಾಗ್ಯ ಇನ್ನೂ ಬಂದಿಲ್ಲಾ ಅಂತಾ ಹೇಳ್ತಿದ್ಯಲ್ಲಾ ಈಗ ನಂಜೊತೆಗೇನೇ ಬಂದು ಸೇರಿದೆ ಅಲ್ವೇನೇ?
ತೆನೆಯಕ್ಕ : ಅದಕ್ಕೆ ಹೇಳಿದ್ದು ಸಿಚುವೇಶನ್ನು ಡಿಮಾಂಡ್ ಮಾಡಬೇಕು ಅಂತಾ. ಅದೇನೋ ಅಂತಾರಲ್ಲಾ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅಂತಾ ಹಂಗಿತ್ತು ನಮ್ಮಿಬ್ಬರ ನಾಯಿಪಾಡು. ಅದಕ್ಕs ಒಂದಾದ್ವೀ..
ಕಮಲಮ್ಮ : ಹಾಂ. ದುಷ್ಮನ್ ಕಾ ದುಷ್ಮನ್ ದೋಸ್ತ್ ಅಂತಾ ಹೇಳ್ತಾರಲ್ಲಾ ಅದೇ ನಮ್ಮಿಬ್ಬರನ್ನೂ ಒಂದಾಗಿ ಸೇರಿಸಿದ್ದು ಗೊತ್ತೇನೇ ತೆನೆಯಕ್ಕಾ.. ಆದರೂ ನಿಂಜೊತೆ ಸೇರಿ ಆ ಕೈಯವ್ವನ ಬೈಯೋದಕ್ಕಿರೋ ಒಂದು ಅಸ್ತ್ರಾನೂ ಕಳಕೊಂಡಂಗಾಗೈತಿ ಏನ್ಮಾಡೋದು.
ತೆನೆಯಕ್ಕ : ಏನವ್ವಾ ಅಂತಾ ಅಸ್ತ್ರಾ. ಮಿಸೈಲಾ ರಾಕೆಟ್ಟಾ?
ಕಮಲಮ್ಮ : ಕೈಯವ್ವನ ಕಂಡಾಗೆಲ್ಲಾ ಕುಟುಂಬ ರಾಜಕಾರಣ, ವಂಶಾಡಳಿತ ಅಂತೆಲ್ಲಾ ಮಾತಿನ ಮಾರಕಾಸ್ತ್ರ ಬಿಡ್ತಾ ಇದ್ವಿ. ಆದರೆ ಈಗ ನೋಡು ವಂಶಾಡಳಿತವೇ ಪ್ರಧಾನ ಆಗಿರೋ ನಿಂಜೊತೆ ಕೈಜೋಡಿಸಿದ್ದೀವಿ. ಮಂದಿಗೆ ಹೆಂಗ್ ಮುಖಾ ತೋರಿಸೋದು. ಇನ್ನ ಮ್ಯಾಗೂ ಕೈಯವ್ವನ್ನ ಹಂಗs ಬೈದ್ರ ಅವ್ಳು ನಮ್ಗೂ ವಾಪಸ್ ಬೈತಾಳಲ್ವಾ. ಅದs ನನಗ ಬಾಳಾ ಚಿಂತಿ ತರಸೈತಿ. ಇರೋ ಒಂದು ಆಯುಧ ವಿರೋಧಿಗೆ ಕೊಟ್ಟು ಹೊಡಿಸಿಗೊಂಡಂಗೆ ಆಗೈತಿ.
ತೆನೆಯಕ್ಕ : ( ಪಕಪಕ ಜೋರಾಗಿ ನಕ್ಕು) ಏಂತಾ ಜೋಕ್ ಹೇಳಿದೆ ನಮ್ಮವ್ವಾ.. ನಂದೇನೋ ಕುಟುಂಬ ರಾಜಕಾರಣ ಒಪ್ಕೋತೇನೆ. ಆದರೆ ನಿಂದೇನು? ನೀನು ನಿನ್ನ ಮನೆ ನೋಡಿಕೊಳ್ಳೋಕೆ ಅಪ್ಪ ಮಕ್ಕಳಿಗೆ ಅಧಿಕಾರ ಕೊಟ್ಟಿದ್ದೀಯಲ್ಲಾ.. ಅದೇನೋ ಅಂತಾರಲ್ಲಾ ಹೇಳೋದು ವೇದಾಂತಾ, ತಿನ್ನೋದು ಬದ್ನೇ ಕಾಯಿ ಅಂತಾ ಹಂಗೈತೆ ನಿನ್ನ ಜೋಕು.
ಕಮಲಮ್ಮ : ಅದೇನೋ ಸಿಚುವೇಶನ್ ಡಿಮಾಂಡ್ ಅಂದ್ಯಲ್ಲಾ ನಮ್ದು ಹಂಗs ನೋಡು. ಆದರೂ ಈ ವಂಶಾಡಳಿತದ ಅಪವಾದದಿಂದಾ ಹೆಂಗವ್ವಾ ಹೊರಗ ಬರೂದು.
ತೆನೆಯಕ್ಕ : ಅಯ್ಯೋ ಅದಕ್ಯಾಕೆ ಇಷ್ಟೊಂದು ಚಿಂತಿ ಮಾಡ್ತೀ ಕಮಲವ್ವಾ ಭಾರೀ ಅನುಭವಸ್ತಳು ನೀನು, ನಿನಗೆ ನಾನು ಹೇಳಿಕೊಡಬೇಕಾ? ಅದೇನೋ ಅಂತಾರಲ್ಲಾ 'ಆರು ಹಡದವಳ ಮುಂದೆ ಮೂರು ಹೆತ್ತವಳು ಕೆಮ್ಮೋದನ್ನ ಹೇಳಿಕೊಟ್ಟಳಂತ' ಹಂಗಾತು ನೋಡು.
ಕಮಲಮ್ಮ : ಏನ್ ಮಾಡಂತೀ!!
ತೆನೆಯಕ್ಕ : ಯಾವುದನ್ನ ನೇರವಾಗಿ ಎದುರಿಸೋಕೆ ಆಗೋದಿಲ್ವೋ ಆಗ ವಿಷಯಾಂತರ ಮಾಡಿದ್ರಾಯ್ತು.
ಯಾವುದಾದರೂ ಕೋಮು ಗಲಭೆ ಹುಟ್ಟಿ ಹಾಕು. ನಿಮ್ಮನೇಲಿ ಸಾಕಿರೋ ಇಡಿ ಐಟಿ ಹೆಸರಿನ ಭಯಂಕರ ಬೇಟೆ ನಾಯಿಗಳನ್ನ ವಿರೋಧಿಗಳ ಮೇಲೆ ಚೂ ಬಿಡು. ಅದೂ ಆಗದಿದ್ರ ಕೈಯವ್ವಳ ಮೇಲೆ ಮುಸ್ಲಿಂ ತುಷ್ಟೀಕರಣ ಮಾಡ್ತಾಳೆ ಅಂತಾ ಆರೋಪ ಮಾಡಿ ಹಿಂದೂ ವಿರೋಧಿ ಅಂತಾ ಬಾಯಿ ಬಡ್ಕೋ. ಇದನ್ನೆಲ್ಲಾ ನಿನ್ನಂತಾ ಸೀನಿಯರ್ ಗೆ ನಾನು ಕಲಿಸಿಕೊಡಬೇಕಾ?
ಕಮಲಮ್ಮ : ಅದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ ಬಿಡಕ್ಕಾ. ಆದರೂ ವಂಶಾಡಳಿತ ಅನ್ನೋ ಚೂಪಾದ ಅಸ್ತ್ರ ಮೊಂಡಾಯ್ತಲ್ಲಾ ಅನ್ನೋ ಬೇಸರ ಇದೆ. ಇರ್ಲಿ ಬಿಡು ನೋಡಕೊಂಡರಾತು.
( ಯಾರೋ ಕಳ್ಳ ಕಳ್ಳ ಅಂತಾ ಕೂಗಿದ ಶಬ್ದ)
ತೆನೆಯಕ್ಕ : ಯಾರಯ್ಯಾ ಅದು ಕೂಗೋದು. ಕಳ್ಳ ಯಾರು? ನೀನು ಕಳ್ಳ, ನಿಮ್ಮಪ್ಪ ಕಳ್ಳ.
ಕಮಲಮ್ಮ : ಅದೇನೋ ನೀನು ಕರೆಂಟ್ ಕದ್ದಿದ್ದೀ ಅಂತಾ ಊರೆಲ್ಲಾ ಆ ಕೈಯವ್ವ ಹೇಳ್ಕೊಂಡು ತಿರುಗ್ತಾ ಅವ್ಳೆ. ನಿನಗೇನು ಬಂದಿತ್ತು ಹೋಗಿ ಹೋಗಿ ಕರೆಂಟ್ ಕದಿಯೋ ಕಾಯಿಲೆ.
ತೆನೆಯಕ್ಕ : ಕರೆಂಟ್ ಕದಿಯೋ ದೌರ್ಭಾಗ್ಯ ನನಗಂತೂ ಇನ್ನೂ ಬಂದಿಲ್ಲಾ ಬಿಡು ಕಮಲಮ್ಮಾ. ನಾನು ಮನೇಲಿಲ್ಲದಾಗ ನಮ್ಮ ಹುಡುಗ್ರು ನನ್ನ ಮನೆಗೆ ದೀಪಾಲಂಕಾರ ಮಾಡೋದಿಕ್ಕೆ ಕರೆಂಟ್ ಕಂಬದಿಂದಾ ಕನೆಕ್ಷನ್ ತಗೊಂಡಿದ್ದಾರೆ ಅಷ್ಟೇ. ನಾನೇನು ಈ ದೇಶ ಲೂಟಿ ಮಾಡಿಲ್ಲಾ, ದೊಡ್ಡ ಅಪರಾಧವನ್ನೂ ಮಾಡಲ್ಲಾ. ಈ ಕ್ಷುಲ್ಲಕ ಘಟನೆಯನ್ನ ದೊಡ್ಡದು ಮಾಡಿ ಕಡ್ಡಿ ಅಲ್ಲಾಡಿಸ್ತಾ ಇದ್ದಾಳೆ ಆ ಕೈಯವ್ವ. ನಮ್ಮಾಫೀಸಿನ ಗೋಡೆಗೇ ಕರೆಂಟ್ ಕಳ್ಳಾ ಅಂತಾ ಪೋಸ್ಟರ್ ಅಂಟಿಸಿದ್ದಾಳೆ ಎಷ್ಟು ಸೊಕ್ಕು ಇರಬೋದು.
ಕಮಲಮ್ಮ : 200 ಯುನಿಟ್ ಪ್ರೀ ಇತ್ತು ಮತ್ಯಾಕೆ ಕರೆಂಟ್ ಕಳ್ಳತನ ಮಾಡಬೇಕಿತ್ತು ಅಂತಾ ಗುಲ್ಲೆಬ್ಬಿಸ್ತಿದ್ದಾಳೆ ಏನ್ಮಾಡ್ತೀ ಈಗ.?
ತೆನೆಯಕ್ಕ : ಪ್ರೀ ಅಂತೆ ಪ್ರೀ ಅವಳ ಮುಖಾ ಮುಚ್ಚಾ. ನಂಗೇನು ಪ್ರೀ ಕೊಡೋದು, ಅದೆಷ್ಟು ದಂಡಾ ಕಟ್ಬೇಕೋ ಹೇಳ್ಲಿ ಕಟ್ತೇನೆ. ನನ್ನ ರೇಗಿಸಿದ್ರೆ ನಾನಂತೂ ಸುಮ್ಮನಿರೋದಿಲ್ಲಾ ನೋಡು, ಅವರ ಜಾತಕ ಬಿಡಿಸಿಡ್ತೀನಿ.
ಎಲ್ಲಾ ಪೆನ್ ಡ್ರೈವಲ್ಲಿ ಹಾಕಿಟ್ಟಿದ್ದೀನಿ ಗೊತ್ತಾ ಕಮಲಮ್ಮಾ.
ಕಮಲಮ್ಮ : ( ಮುಸಿ ಮುಸಿ ನಗುತ್ತಾ) ಗೊತ್ತಿದೆ.. ಎಲ್ಲಾರಿಗೂ ಗೊತ್ತಿದೆ. ಖಾಲಿ ಪೆನ್ ಡ್ರೈವ್ ತೋರಿಸಿ ಬಿಡ್ತೀನಿ ಬಿಡ್ತೀನಿ ಅಂತಾ ಹೇಳಿ ಏನೂ ಬಿಡಲಿಲ್ಲವಲ್ಲಾ ನೀನು. ಹೋಗಲಿ ಬಿಡು, ನಿನ್ನ ಬಗ್ಗೆ ನನಗೆ ಎಲ್ಲಾ ಗೊತ್ತಿದ್ದೂ ಮತ್ಯಾಕ ಈಗ ಆ ಮಾತು. ಈಗ ಪ್ರೀ ಸ್ಕೀಮ್ ಅಂದ್ಯಲ್ಲಾ ಅದರ ಆಸೆ ತೋರ್ಸಿನೇ ಕೈಯಮ್ಮ ಅಧಿಕಾಕ್ಕೇರಿ ಹೀಗೆ ಮೆರೀತಿರೋದು. ನಮ್ಮ ಮನೆಯ ದಂಡನಾಯಕನೇ ಹೇಳಿಲ್ವಾ ಈ ಉಚಿತಗಳನ್ನು ಕೊಟ್ರೆ ದೇಶವೇ ಹಾಳಾಗಿ ಬರ್ಬಾದಾಗಿ ಲಾಸಾಗಿ ಹೊಗುತ್ತೆ ಅಂತಾ.
ತೆನೆಯಕ್ಕ : ( ಜೋರಾಗಿ ನಕ್ಕು) ಹೋ ಮತ್ತೆ ನೀವು ಮಾಡಿದ್ದೇನೋ. ಕೈಯವ್ವಳ ಮೇಲೆ ಕಾಂಪಿಟೇಶನ್ನಿಗೆ ಬಿದ್ದಂಗೆ ಪುಂಕಾನುಪುಂಕವಾಗಿ ಪ್ರೀಬೀಸ್ ಪ್ರಾಮಿಸ್ ಕೊಡ್ತಾನೇ ಇದ್ದೀರಲ್ವಾ..
ಕಮಲಮ್ಮಾ : ಹೇ ನೀ ಸುಮ್ಕಿರು ತೆನೆಯಕ್ಕಾ, ಅದನ್ನೆಲ್ಲಾ ಯಾರು ಕೊಡ್ತಾರೆ. ಎಲ್ಲಾ ಎಲೆಕ್ಷನ್ ಜುಮ್ಲಾ. ಬಾಯಲ್ಲಿ ಹೇಳಿದ್ರೆ ಕೊಟ್ಟಂಗಾಯ್ತಾ.
ನಾವು ಯಾವುದನ್ನೂ ಕೊಡೋದೂ ಇಲ್ಲಾ, ಹಂಗೆಲ್ಲಾ ಪ್ರೀ ಕೊಟ್ಟು ದೇಶ ದಿವಾಳಿ ಆಗೋಕೂ ಬಿಡಾಂಗಿಲ್ಲ. ನಿಜವಾದ ದೇಶಪ್ರೇಮಿಗಳು ನಾವು.
ತೆನೆಯಕ್ಕ : ಹೌದೌದು..ನೀವು ಕಪ್ಪು ಹಣ ತರಲಿಲ್ಲಾ, ತಲಾ ಹದಿನೈದು ಲಕ್ಷ ಕೊಡಲಿಲ್ಲ, ಮತ್ತೆ ಮತ್ತೆ ಭರವಸೆ ಕೊಡೋದು ಬಿಡಲಿಲ್ಲಾ ಹೌದಲ್ವೋ ಕಮಲಮ್ಮಾ, ಅದೇನು ನಿನ್ನ ಮಹಿಮೆಯಮ್ಮಾ.
ಕಮಲಮ್ಮ : ಜುಮ್ಲಾ ತೆನೆಯಕ್ಕಾ ಎಲ್ಲಾ ಜುಮ್ಲಾ. ಅಧಿಕಾರ ಪಡಿಯೋಕೆ ಸಾವಿರಾರು ಸುಳ್ಳು ಹೇಳಬೇಕಾಗುತ್ತೆ. ನೀನೇನು ಕಡಿಮೆ ಸುಳ್ಳು ಹೇಳಿದ್ದೀಯಾ. ನಿನಗೆ ಸುಳ್ಳಕ್ಕಾ ಅಂತಾನೇ ಕೈಯವ್ವ ಕರೀತಾಳೆ. ಹೋಗಲಿ ಬಿಡು ಸುಳ್ಳೇ ನಮ್ಮನೆ ದೇವ್ರಾಗಿರುವಾಗ ಯಾಕೆ ನಮ್ಮಿಬ್ರಲ್ಲಿ ಜಗಳ. ನಮ್ಮಿಬ್ಬರ ಶತ್ರು ಒಬ್ಬರೇ ಆಗಿರುವಾಗ ನಾವು ನಾವೇ ಕಾಲೆಳೆದುಕೊಳ್ಳೋದು ಬ್ಯಾಡ ಬಿಡು ತೆನೆಯಕ್ಕಾ. ಬಾ ಜೊತೆಗೂಡಿ ಹಾಡೋಣ
ಹಾಡು : ನಾನು ನೀನು ಜೋಡಿ.
ಜೋಡಿ ಎತ್ತಿನ ಗಾಡಿ.
ಗಾಡಿ ಮೇಲೆ ಜೊತೆಗೂಡಿ
ಮಾಡೋಣ ಜನರಿಗೆ ಮೋಡಿ
*- ಶಶಿಕಾಂತ ಯಡಹಳ್ಳಿ*
Comments
Post a Comment