ಯಾರದೋ ಪಾಪ, ಇನ್ಯಾರಿಗೋ ಶಾಪ (ಪ್ರಹಸನ - 65)
ಪ್ರಹಸನ - 65
ಯಾರದೋ ಪಾಪ,
ಇನ್ಯಾರಿಗೋ ಶಾಪ
******************************************
(ದೇವಸ್ಥಾನದ ಪೂಜೆ ಮುಗಿಸಿದ ಅರ್ಚಕ ಮನೆಗೆ ಬರುತ್ತಿದ್ದಂತೆ ಹೊರಗಿನಿಂದ ಓಡಿ ಬಂದ ಮಗ ತಬ್ಬಿಕೊಂಡಾಗ)
ಅಪ್ಪ : ತೂ ಥೂ ದೂರ ಸರಿಯೋ ಅನಿಷ್ಟ ಮುಂಡೇದೇ. ಮೈಲಿಗೆ ಆಗುತ್ತೆ.
ಮಗ : ಮೈಲಿಗೆ ಆದರೆ ಏನಾಗುತ್ತೆ ಅಪ್ಪಾ?
ಅಪ್ಪ : ದೇವರಿಗೆ ಕೋಪ ಬರುತ್ತೆ?
ಮಗ : ಕೋಪ ಬಂದ್ರೆ ದೇವರು ಏನು ಮಾಡುತ್ತೆ ಅಪ್ಪಾ?
ಅಪ್ಪ : ಅಪಚಾರ ಆದ್ರೆ ದೇವರಿಗೆ ಕೋಪ ಬರುತ್ತೆ. ಶಿಕ್ಷೆ ಕೊಡುತ್ತೆ. ಶಾಪ ಹಾಕುತ್ತೆ.
ಮಗ : ಎಲ್ಲರನ್ನೂ ಕಾಪಾಡುವ ದೇವರು ಯಾಕಪ್ಪಾ ಶಾಪ ಕೊಡುತ್ತೆ, ಶಿಕ್ಷೆ ಕೊಡುತ್ತೆ.
ಅಪ್ಪ : ಲೇ ಪ್ರಾರಬ್ಧ ಮುಂಡೇದೆ. ಅಲ್ಲಿ ನೋಡು ಟಿವಿಯಲ್ಲಿ ಏನು ಬರ್ತಿದೆ ಅಂತಾ.
ಮಗ : ಹೋ ಅದಾ.. ದಿನಾಲೂ ತೋರಿಸ್ತಿದ್ದಾರೆ ಅಪ್ಪಾ. ಅದ್ಯಾವುದೊ ಸುರಂಗ ಕುಸಿದಿದೆಯಂತೆ. ಕಾರ್ಮಿಕರು ಒಳಗೆ ಸಿಕ್ಕಾಕಿಕೊಂಡಿದ್ದಾರಂತೆ. ರಕ್ಷಣೆಗೆ ಬಂದ ಯಂತ್ರಗಳೂ ಹಾಳಾಗಿವೆಯಂತೆ.
ಅಪ್ಪ : ಅದೇ.. ಯಾಕೆ ಅವರಿಗೆ ಇಂತಾ ದುಸ್ತಿತಿ ಬಂತು ಗೊತ್ತಾ?
ಮಗ : ಗುಡ್ಡ ಕುಸೀತು ಅದಕ್ಕೆ ಅಲ್ವೇನಪ್ಪಾ.
ಅಪ್ಪ : ಗುಡ್ಡ ಕುಸಿಯೋದಿಕ್ಕೆ ಕಾರಣ ಯಾರು?
ಮಗ : ಯಾರಪ್ಪಾ ಅಷ್ಟು ದೊಡ್ಡ ಬೆಟ್ಟಾನ ಕುಸಿಯೋ ಹಾಗೆ ಮಾಡಿದೋರು?
ಅಪ್ಪ : ಲೇ ಶನಿ ಮುಂಡೇದೇ. ಇನ್ಯಾರು? ದೇವರು ಕಣಲೇ ದೇವ್ರು.
ಮಗ : ದೇವ್ರಲ್ಲಪ್ಪಾ.
ಸರಕಾರದವ್ರು. ಅಲ್ಲಪ್ಪಾ ಅದು ಭೂಕಂಪ ಆಗೋ ಜಾಗ ಅಂತೆ, ನೆಲದೊಳಗೆ ಪದುರು ಗಟ್ಟಿಯಾಗಿಲ್ವಂತೆ. ಮತ್ಯಾಕಪ್ಪಾ ಅಂತಾ ಜಾಗದಾಗ ಸುರಂಗದ ರಸ್ತೆ ಬೇಕಿತ್ತು.
ಅಪ್ಪ : ಚಾರ್ದಾಮ್ ಯಾತ್ರೆ ಮಾಡೋರಿಗೆ ಸುಲಭ ಆಗ್ಲಿ ಅಂತಾ ಸರಕಾರ ಮಾಡ್ತಿದೆ.
ಮಗ : ಪ್ರಕೃತಿ ವಿರುದ್ದ ಹೊಗೋದು ತಪ್ಪಲ್ವೇನಪ್ಪಾ.
ಅಪ್ಪ : ಅದನ್ನೆಲ್ಲಾ ದೇವರು ನೋಡ್ಲೋತಾನೆ ಸುಮ್ಕಿರೋ ಶನಿ ಮುಂಡೇದೇ.
ಮಗ : ಮತ್ತೆ ಸುರಂಗದಲ್ಲಿ ಸಿಕ್ಕಾಕಿಕೊಂಡು ನೀರು ಗಾಳಿ ಬೆಳಕು ಊಟ ಇಲ್ಲದೇ ಸಾಯ್ತಿದ್ದಾರಲ್ಲಾ ಅವರ ಗತಿ ಏನಪ್ಪಾ.
ಅಪ್ಪ : ದೇವರ ಶಾಪ ಸುಮ್ಕೆ ಬಿಡ್ತದಾ. ಬಲಿ ತಗೊಂಡೇ ತಗೊಳ್ಳುತ್ತೆ.
ಅಲ್ಲಿ ಭೋಗನಾಥೇಶ್ವರ ಅಂತಾ ಚಿಕ್ಕ ಗುಡಿ ಇತ್ತು. ಅದನ್ನ ಒಡೆದು ಹಾಕಿ ಸುರಂಗ ಶುರು ಮಾಡಿದ್ರು. ಅದಕ್ಕೆ ಸಿಟ್ಟಿಗೆದ್ದ ದೇವರು ಶಾಪ ಕೊಡ್ತು. ಕಾರ್ಮಿಕರು ಸಿಕ್ಕಾಕಿಕೊಂಡ್ರು. ದೇವರು ದೇವಸ್ಥಾನದ ನಾಶ ಅಂದ್ರೆ ಮಹಾಪಾಪ.
ಮಗ : ಹೌದಾ.. ಯಾರಪ್ಪಾ ಗುಡಿ ಒಡೆದವರು.
ಅಪ್ಪ : ಮತ್ಯಾರು? ರಸ್ತೆ ಗುತ್ತಿಗೆ ಹಿಡಿದ್ರಲ್ಲಾ ಕಂಟ್ರ್ತಾಕ್ಟರ್ರು.
ಮಗ : ಅಲ್ಲಪ್ಪಾ ನಾನು ಏನಾದ್ರೂ ತಪ್ಪು ಮಾಡಿದ್ರೆ ನೀನು ನನಗೆ ಹೊಡೆದು ಶಿಕ್ಷೆ ಕೊಡ್ತಿಯೋ ಇಲ್ಲಾ ನನ್ನ ತಪ್ಪಿಗೆ ಬೇರೆಯವರಿಗೆ ಹೊಡೀತೀಯೋ?
ಅಪ್ಪ : ಲೇ ಪೆದ್ದು ಮುಂಡೇದೇ. ನಿನಗೆ ನಾಲ್ಕು ಚೆನ್ನಾಗಿ ಬಾರ್ಸಿ ಬುದ್ದಿ ಕಲಿಸ್ತೇನೆ.
ಮಗ : ಹಂಗಾದ್ರೆ ನಿನಗಿರೋವಷ್ಟು ಬುದ್ದಿ ಆ ದೇವರಿಗೇ ಇಲ್ಲವೇನಪ್ಪಾ. ಗುಡಿ ಕೆಡವಿದ್ದು ಗುತ್ತಿಗೆ ಕಂಪನಿಯೋರು. ಅವರಿಗೆ ದೇವರು ಶಾಪ ಕೊಟ್ಟು ಶಿಕ್ಷೆ ಕೊಡೋದು ಬಿಟ್ಟು ಪಾಪ ಏನೂ ತಪ್ಪು ಮಾಡದ ಆ ಬಡ ಕೆಲಸಗಾರರಿಗ್ಯಾಕಪ್ಪ ಸಾವಿನ ಕೂಪಕ್ಕೆ ತಳ್ಳಿದಾ.. ಇದು ತಪ್ಪಲ್ವಾ ಅಪ್ಪಾ. ಅದೂ ದಿನಾ ಆ ಗುಡಿಗೆ ಭಕ್ತಿಯಿಂದಾ ನಮಸ್ಕಾರ ಮಾಡಿಯೇ ಕೆಲಸ ಶುರು ಮಾಡ್ತಿದ್ದವರಿಗೆ ಹೀಗೆ ಕಷ್ಟ ಕೊಟ್ಟಿದ್ದು ಕೆಟ್ಟದ್ದಲ್ವಾ ಅಪ್ಪಾ.
ಅಪ್ಪ : (ಕೋಪದಿಂದ) ದೇವರ ಬಗ್ಗೆ ಹಾಗೆಲ್ಲಾ ಮಾತಾಡ ಬೇಡೋ ಶನಿ ಮುಂಡೇದೇ.
ಮಗ : ಆಯ್ತು. ಮಾತಾಡೋದಿಲ್ಲ. ಆದರೆ ಇದಕ್ಕಾದರೂ ಉತ್ತರಾ ಹೇಳಪ್ಪಾ. ಈ ರಸ್ತೆ ಯೋಜನೆ ಮಾಡಿದ್ದು ಯಾರು?
ಅಪ್ಪ : ನಮ್ಮ ಕೇಂದ್ರ ಸರಕಾರ.
ಮಗ : ಯಾರ ಅನುಮತಿಯಿಂದಾ ಸುರಂಗ ಯೋಜನೆ ಶುರುವಾಗಿದ್ದು.
ಅಪ್ಪ : ವಿಶ್ವಗುರುಗಳಾದ ಪ್ರಧಾನಿ ಮೋದಿಯವರಿಂದ.
ಮಗ : ಹಾಗಾದ್ರೆ ಅವರು ಇನ್ನೂ ಚೆನ್ನಾಗಿಯೇ ಇದ್ದಾರಲ್ಲಪ್ಪಾ. ಈ ಯೋಜನೆಗೆ ಮೂಲ ಕಾರಣೀಕರ್ತರಾದವರಿಗೆ ದೇವರು ಇನ್ನೂ ಯಾಕಪ್ಪಾ ಶಾಪ ಕೊಟ್ಟಿಲ್ಲಾ. ಪಾಪ ಬಡ ಕೂಲಿ ಕಾರ್ಮಿಕರು ಏನಪ್ಪಾ ತಪ್ಪು ಮಾಡಿದ್ರು. ಅವರ ಜೀವಕ್ಕೇನಾದ್ರೂ ಆದರೆ ಅವರ ಮಕ್ಕಳಿಗೆ ಯಾರಪ್ಪಾ ದಿಕ್ಕು. ಯಾವುದು ತಪ್ಪು, ಯಾವುದು ಸರಿ ಅಂತಾ ದೇವರಿಗೆ ಗೊತ್ತಾಗೋದಿಲ್ಲವೇನಪ್ಪಾ. ನಿಜಕ್ಕೂ ದೇವರು ಯಾವಾಗಲೂ ಶ್ರೀಮಂತರ ಪರವಾಗಿ ಬಡವರ ವಿರುದ್ದವಾಗಿ ಇರ್ತಾನೇನಪ್ಪಾ.
ಅಪ್ಪ : ( ಕೋಪದಿಂದ ಕುದಿಯುತ್ತಾ, ಮಗನನ್ನು ಹಿಡಿದುಕೊಂಡು)
ದೇವರಿಗೆ ಪ್ರಶ್ನಿಸುವಷ್ಟು ದೊಡ್ಡವನಾಗಿದ್ದೀಯಾ ನೀನು. ಶಾಂತಮ್ ಪಾಪಮ್.
ಮಗ : ಯಾರಪ್ಪಾ ಅದು ಶಾಂತಮ್ಮಾ ಪಾಪಮ್ಮಾ.
ಅಪ್ಪ : ಅಯ್ಯೊ ಅಯ್ಯೋ ಅನಿಷ್ಟ ಮುಂಡೇದೇ. ನನಗೆ ಅಣಕಿಸ್ತೀಯಾ? ಇರು ನಿನ್ನ ಚರ್ಮಾ ಸುಲೀತೇನೆ? ( ಕೋಲೊಂದನ್ನ ತೆಗೆದುಕೊಂಡು ಹೊಡೆಯಲು ಮುಂದಾಗುವನು. ಆತನ ಹೆಂಡತಿ ಬಂದು ಕೋಲನ್ನು ಹಿಡಿದು)
ಹೆಂಡತಿ : ಸಾಕು ನಿಲ್ಲಿಸ್ರೀ ನಿಮ್ಮ ಅವತಾರಾನಾ? ಇಷ್ಟಕ್ಕೂ ನನ್ನ ಮಗಾ ಕೇಳಿದ್ರಲ್ಲಿ ತಪ್ಪೇನಿದೆ. ಗುಡಿ ಒಡೆದವರನ್ನ ಬಿಟ್ಟು ದೇವರು ಆ ಬಡವರಿಗ್ಯಾಕೆ ಶಿಕ್ಷೆ ಕೊಟ್ಟ ಅಂತಾ ಕೇಳಿದ್ರಲ್ಲಿ ಏನು ಪ್ರಾಬ್ಲಂ ಇದೆ.
ಅಪ್ಪ : ಲೆ ಲೇ ನೀನೂ ಈ ಅನಿಷ್ಟ ಮುಂಡೇ ಗಂಡನ ಪರವಾಗಿ ಮಾತಾಡ್ತಿಯಲ್ಲೇ. ಬಿಡು ಇವತ್ತು ಅವನ್ನ ಹುಟ್ಟಲಿಲ್ಲಾ ಅನ್ನಿಸ್ತೀನಿ.
ಮಗ : ಅಲ್ಲಪ್ಪಾ.. ಇರೋದನ್ನ ಇದ್ದಂಗೆ ಕೇಳಿದ್ರೆ ಯಾಕಪ್ಪಾ ಕೋಪ? ದೇವರು ಯಾಕೆ ಹಿಂಗೆ ಮಾಡ್ದಾ ಅದು ಹೇಳಪ್ಪಾ? ( ಅಮ್ಮನ ಹಿಂದೆ ಅಡಗಿಕೊಂಡು ಕೇಳುವನು)
ಮಗ : ಮಗ ಕೇಳೋ ಪ್ರಶ್ನೆಗೆ ಮೊದಲು ಉತ್ತರ ಕೊಟ್ಟು ಆಮೇಲೆ ಶಿಕ್ಷೆ ಕೊಡ್ರಿ. ಪಾಪ ಕೂಸು.
ಅಪ್ಪ : ಅಯ್ಯೋ ಅಯ್ಯೋ ದೈವದ್ರೋಹಿ ಮುಂಡೆದೇ. ದೇವರನ್ನ ಪ್ರಶ್ನೆ ಮಾಡೋದೇ ದೇವರಿಗೆ ಮಾಡೋ ಅಪಚಾರ. ಇವತ್ತು ಅವನ ಕಾಲು ಮುರೀದೇ ಬಿಡೋದಿಲ್ಲ. ( ಎನ್ನುತ್ತಾ ಕೋಪದಲ್ಲಿ ಮುಂದೆ ನೆಲದ ಮೇಲೆ ಬಿದ್ದಿದ್ದ ಕೋಲಿನ ಮೇಲೆ ಕಾಲಿಟ್ಟು ಜಾರಿ ಕೆಳಗೆ ಬೀಳುತ್ತಾ) ಅಯ್ಯೋ ಶಿವನೇ..ನನ್ನ ಕಾಲು ಮುರೀತಲ್ಲಪ್ಪಾ..
ಹೆಂಡತಿ : ಅದಕ್ಕೆ ಹೇಳೋದು ಕೋಪದ ಕೈಗೆ ಬುದ್ದಿ ಕೊಡಬೇಡಿ ಅಂತಾ. ತಪ್ಪಿಲ್ಲದವರಿಗೆ ಶಿಕ್ಷೆ ಕೊಡೋಕೆ ಹೋದ್ರೆ ನೀವೇ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮಗ : ಈಗ ಹೇಳಪ್ಪಾ ಆ ದೇವರು ನಿನ್ನ ಕಾಲು ಯಾಕೆ ಮುರಿದದ್ದು ಅಂತಾ?
ಅಪ್ಪ : (ನರಳುತ್ತಾ) ಅಯ್ಯೋ ಅನಿಷ್ಟವೇ. ಹೋಯ್ತು ನನ್ನ ಕಾಲು ಹೋಯ್ತು. ದೇವಾ ಈಶ್ವರಾ.. ನೋವು.. ನೋವು..
- ಶಶಿಕಾಂತ ಯಡಹಳ್ಳಿ
27-11-2023
( ನವೆಂಬರ್ 12 ರ ದೀಪಾವಳಿಯ ದಿನದಂದು ಉತ್ತರಾಖಂಡದಲ್ಲಿ ಚಾರ್ದಾಮ್ ಯಾತ್ರೆಗಾಗಿ ಸುರಂಗ ಮಾರ್ಗದ ಕಾಮಗಾರಿ ನಡೆಯುವಾಗ ಗುಡ್ಡ ಕುಸಿದು 41 ಜನ ಕಾರ್ಮಿಕರು ಸುರಂಗದ ಒಳಗೆ ಸಿಲುಕಿಕೊಂಡರು.
ಭೂತನಾಥ ದೇವರ ಪುಟ್ಟ ಗುಡಿಯನ್ನು ತೆರವುಗೊಳಿಸಿದ್ದೇ ಇದಕ್ಕೆ ಕಾರಣವೆಂದು ಕೆಲವರು ಪುಕಾರು ಎಬ್ಬಿಸಿದ್ದರು. ಈ ಸನ್ನಿವೇಶದ ಕುರಿತೇ ಈ ಪ್ರಹಸನ)
Comments
Post a Comment