ವಿಶ್ವಗುರುವಿನಾಟ ಬಲ್ಲವರು ಯಾರು? (ಪ್ರಹಸನ - 66)
ಪ್ರಹಸನ - 66
ವಿಶ್ವಗುರುವಿನಾಟ ಬಲ್ಲವರು ಯಾರು?
*********************************
(ರಿಟೈರಾದ ಮೇಸ್ಟ್ರು ಬರುವುದಕ್ಕೂ ಹಳೆಯ ಶಿಷ್ಯನೊಬ್ಬ ಹಾಡುತ್ತಾ ಎದುರಾಗುವುದಕ್ಕೂ ಸರಿಯಾಗುತ್ತದೆ)
ಶಿಷ್ಯ : (ಹಾಡು) ಗುರುವೆ ನಿನ್ನಾಟ ಬಲ್ಲವರ್ಯಾರ್ಯಾರೋ?
ಮೇಸ್ಟ್ರು : ಓ ಹೋ ಏನೋ ಶಿಷ್ಯಾ, ಹಾಡು ಬೇರೆ ಹಾಡ್ತಾ ಇದ್ದೀಯಾ?
ಶಿಷ್ಯ : ಹೋ ಮೇಸ್ಟ್ರೇ , ಗುರುವಿನ ನಾಮಸ್ಮರಣೆ ಮಾಡ್ತಿದ್ದೆ..
ಮೇಸ್ಟ್ರು : ಥ್ಯಾಂಕ್ಯೂ ಕಣಪ್ಪಾ. ಈಗಿನ ಕಾಲದಲ್ಲೂ ನನ್ನಂತಾ ಗುರುವಿನ ನೆನಪು ಮಾಡಿಕೊಳ್ಳೂ ಶಿಷ್ಯನೊಬ್ಬ ಇದ್ದಾನೆ ಅನ್ನೋದೆ ನನ್ನ ಆತ್ಮಕ್ಕೆ ತೃಪ್ತಿ, ಮನಸಿಗೆ ಧನ್ಯತೆ ಕೊಡುತ್ತೆ. ( ಕಣ್ಣಲ್ಲಿ ನೀರು ಹನಿಗೂಡುತ್ತವೆ)
ಶಿಷ್ಯ : ಅಯ್ಯೋ ಮೇಸ್ಟ್ರೇ. ನೀವು ತಪ್ಪು ತಿಳಕೊಂಡು ಭಾವುಕರಾಗ್ತಿದ್ದೀರಿ. ನಾನು ನಿಮ್ಮನ್ನಲ್ಲ ಆ ಗುರುವಿನ ಸ್ಮರಣೆ ಮಾಡೋದು.
ಮೇಸ್ಟ್ರು : ನಿನಗೆ ಗುರು ನಾನಲ್ವಾ ?
ಶಿಷ್ಯ : ನೀವು ಬರೀ ಮೇಸ್ಟ್ರು ಅಷ್ಟೇಯಾ? ಅವರು ನನಗೆ ನಿನಗೆ ಎಲ್ಲರಿಗೂ ಗುರುಗಳು, ಮಹಾಗುರುಗಳು..
ಮೇಸ್ಟ್ರು : ಯಾರಪ್ಪಾ ಅದು ಅಂತಾ ಮಹಾಗುರು?
ಶಿಷ್ಯ : ಏನ್ ಮೇಸ್ಟ್ರೇ ಹಿಂಗ್ ಕೇಳ್ತೀರಿ?. ಅತಳ ಸುತಳ ಪಾತಾಳ ತಳಾತಳ ಅಷ್ಟೇ ಯಾಕೆ ಇಡೀ ಅಖಿಲ ಕೋಟಿ ಬ್ರಹ್ಮಾಂಡವೇ ಮಾನ್ಯ ಮಾಡಿದ ನಮ್ಮ ವಿಶ್ವಗುರುಗಳ ಬಗ್ಗೆ ನಿಮಗೆ ಗೊತ್ತಿಲ್ವಾ?
ಮೇಸ್ಟ್ರು : ಇಡೀ ಬ್ರಹ್ಮಾಂಡವೇ ಮೆಚ್ಚಿದ ಗುರುಗಳಾ? ಯಾರು ಗುರು ಬಸವಣ್ಣನವರಾ?
ಶಿಷ್ಯ : ತಪ್ಪು ಉತ್ತರ.
ಮೇಸ್ಟ್ರು : ಹೋಗಲಿ ಜಗತ್ತೇ ಒಪ್ಪಿಕೊಂಡ ಮಹಾತ್ಮಾ ಗಾಂಧಿಯವರಾ ಇಲ್ಲಾ ಗೌತಮ ಬುದ್ದನಾ?
ಶಿಷ್ಯ : ಮತ್ತೆ ತಪ್ಪು ಉತ್ತರ. ಕ್ಲೂ ಕೊಡ್ತೇನೆ ವಿಶ್ವಗುರು ಯಾರು ಅಂತಾ ಹೇಳಿ ನೋಡೋಣ ಮೇಸ್ಟ್ರೆ? ಅವರು ಚೌಕಿದಾರರು!
ಮೇಸ್ಟ್ರು : ಏ ಥೂ.. ಚೌಕೀದಾರ ಅಂದ್ರೆ ವಾಚ್ಮನ್ ಗಳು ಎಂದಾದರೂ ಗುರು ಆಗಲು ಸಾಧ್ಯವೇ? ಕೆಲವು ಶೋಕಿಲಾಲಗಳು ಗುರು ಅಂತಾ ಮೆರೀತಾರೇ ಹೊರತು ಚೌಕೀದಾರರಲ್ಲ ಬಿಡು.
ಶಿಷ್ಯ : ಅಯ್ಯೋ ಹಂಗಲ್ಲಾ ಮೇಸ್ಟ್ರೆ. ಈಗ ಹೇಳಿ ಪ್ರಧಾನ ಸೇವಕ.
ಮೇಸ್ಟ್ರು : ಸೇವಕ ಅಂದ್ರೆ ಸರ್ವೆಂಟ್. ಎಂದಾದರೂ ಸರ್ವೆಂಟ್ ಆಗಿದ್ದವರು ಗುರುಗಳು ಆಗೋಕೆ ಸಾಧ್ಯವಾ? ನೋ ಚಾನ್ಸ್.
ಶಿಷ್ಯ : ಈ ಪ್ರಶ್ನೆಗೆ ಉತ್ತರ ಕೊಡಿ ಮೇಸ್ಟ್ರೆ. ಹಣಾ ಜಣಜಣ ಕಾಂಚಾನಾ. ಅದೇ ಕಪ್ಪು ಹಣ ತರ್ತೇನೆ ಅಂದವರು ಯಾರು?
ಮೇಸ್ಟ್ರು : ಯಾರು?
ಶಿಷ್ಯ : ಹೋಗಲಿ. ಕಪ್ಪು ಹಣ ತಂದು ಎಲ್ಲರ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದವರು ಯಾರು?
ಮೇಸ್ಟ್ರು : ಯಾರು?
ಶಿಷ್ಯ : ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇನೆ ಅಂದವರು ಯಾರು?
ಮೇಸ್ಟ್ರು : ಅದೇ ಯಾರು?
ಶುಷ್ಯ : ( ಸಹನೆ ಕಳೆದುಕೊಂಡು) ಮೇಸ್ಟ್ರೆ.. ನೋಟ್ ಬ್ಯಾನ್ ಮಾಡಿದವರು ಯಾರು?
ಮೇಸ್ಟ್ರು : ಮತ್ಯಾರು ಪ್ರಧಾನಿ ಮೋದಿಯವರು.
ಶಿಷ್ಯ : ಹಾಂ. ಅವರೇ ನಮ್ಮ ವಿಸ್ವಗುರುಗಳು ಮೇಸ್ಟ್ರೆ.
ಮೇಸ್ಟ್ರು : ಅಲ್ಲಯ್ಯಾ. ಕೊಟ್ಟ ಯಾವ ಭರವಸೆಯನ್ನೂ ಈಡೇರಿಸದೇ ಇದ್ದವರು ಹೆಂಗಯ್ಯಾ ವಿಶ್ವಗುರು ಆಗ್ತಾರೆ?
ಶಿಷ್ಯ : ಅಲ್ಲೇ ಮಜಾ ಇರೋದು ಮೇಸ್ಟ್ರೆ. ಅವರು ಹೇಳಿದ್ದೆಲ್ಲಾ ಎಲೆಕ್ಷನ್ ಜುಮ್ಲಾ ಅಂತಾ ಶಾಜೀ ರವರು ಹೇಳಿದ್ದಾರಲ್ಲಾ.
ಅಲ್ಲಿಂದಲ್ಲಿಗೆ ಎಲ್ಲಾ ಊಫಿ.. ಮುಗೀತು ಅಂತಾ ಅರ್ಥ. ಆದರೆ ನಿರಂತರವಾಗಿ ವಿಶ್ವಪರ್ಯಟನೆ ಮಾಡಿ ಈ ದೇಶದ ಕೀರ್ತಿ ಪತಾಕೆಯನ್ನು ಭೂಮಂಡಲದಲ್ಲಿ ಹಾರಿಸಿದವರು ಯಾರು?
ಮೇಸ್ಟ್ರು : ( ಕನ್ನಡಕ ಸರಿ ಮಾಡಿಕೊಳ್ಳುತ್ತಾ,
ಆಕಾಶದತ್ತ ನೋಡಿ) ಯಾರು?
ಶಿಷ್ಯ : ಅಯ್ಯೋ ನೀವಿನ್ನೂ ಅಪ್ಡೇಟೆ ಆಗಿಲ್ವಲ್ಲಾ ಮೇಸ್ಟ್ರೇ. ಹೋಗಲಿ ಯೋಚನೆ ಮಾಡಿ ಹೇಳಿ. ಹತ್ತು ಲಕ್ಷದ ಬಟ್ಟೆ ತೊಟ್ಟು, ಹತ್ತಾರು ವೇಷ ಹಾಕಿ ಜಗಜಗ ಭಗಭಗ ಅಂತಾ ಮಿಂಚತಾ ಇರೋರು ಯಾರು?
ಮೇಸ್ಟ್ರು : ಅದೇ ಅಂತವರು ಯಾರು?
ಶಿಷ್ಯ : ( ಸಿಟ್ಟಿನಿಂದ ಕೂದಲು ಕಿತ್ತುಕೊಂಡು)
ಅವರೇ ಮೇಸ್ಟ್ರೇ ನಮ್ಮ ವಿಶ್ವಗುರುಗಳು. ಅಷ್ಟೂ ನಿಮಗೆ ಗೊತ್ತಾಗೋದಿಲ್ವಾ? ಹಿಂದೂ ಹೃದಯ ಸಾಮ್ರಾಟ, ವಿಶ್ವಕ್ಕೇ ಹೆಮ್ಮೆಯ ಕಿರೀಟ, ಸರ್ವ ಹಿಂದೂಗಳ ಬಂಧು ಮೋದಿ ಮಹಾರಾಜರು ನಮ್ಮ ವಿಶ್ವಗುರುಗಳು.
ಮೇಸ್ಟ್ರು : ಹೌದಾ? ಹಂಗಾ? ಆಯ್ತಪ್ಪಾ ಶಿಷ್ಯೋತ್ತಮಾ. ಇಷ್ಟೊತ್ತು ನೀನು ಪ್ರಶ್ನೆ ಕೇಳಿದೆ. ಈಗ ನಾನು ಪ್ರಶ್ನೆ ಕೇಳ್ತೇನೆ ಉತ್ತರ ಕೊಡು.
ಶಿಷ್ಯ : ಕೇಳಿ ಮೇಸ್ಟ್ರೇ. ಏಷ್ಟಾದರೂ ಕ್ವಶ್ಚನ್ ಕೇಳಿ ಆನ್ಸರ್ ಹೇಳ್ತೇನೆ. ಎಷ್ಟೇ ಆದ್ರೂ ನಾನು ನಿಮ್ಮ ಶಿಷ್ಯ ಅಲ್ವಾ?
ಮೇಸ್ಟ್ರು : ಈ ಭೂಮಿಯಲ್ಲಿರೋದು ಒಟ್ಟು ಎಷ್ಟು ದೇಶಗಳು?
ಶಿಷ್ಯ : ಎಷ್ಟೋ ಇದ್ದಾವೆ, ಇರ್ತಾವೆ ಇರ್ತಾವೆ ಬಿಡಿ ಮೇಸ್ಟ್ರೇ ?
ಮೇಸ್ಟ್ರು : ಒಟ್ಟು 195 ದೇಶಗಳು. ಯಾವ್ಯಾವ ಧರ್ಮದವರ ಜನಸಂಖ್ಯೆ ಎಷ್ಟು ಅಂತಾದ್ರೂ ಗೊತ್ತಿದೆಯಾ?
ಶಿಷ್ಯ : ಅದನ್ನೆಲ್ಲಾ ಯಾರು ಲೆಕ್ಕ ಇಡ್ತಾರೆ ಬಿಡಿ ಮೇಸ್ಟ್ರೆ?
ಮೇಸ್ಟ್ರು : ಒಟ್ಟು ವಿಶ್ವದ ಜನಸಂಖ್ಯೆ ಸರಿಸುಮಾರು 800 ಕೋಟಿ. ಅದರಲ್ಲಿ ಕ್ರಿಶ್ಚಿಯನ್ನರು 256 ಕೋಟಿ, ಮುಸ್ಲಿಮರು 210 ಕೋಟಿ, ಬೌದ್ದರು 56 ಕೋಟಿ. ಇತರ ಧರ್ಮೀಯರು ಬುಡಕಟ್ಟು ಜನರು 50 ಕೋಟಿ. ಯಾವ ಧರ್ಮವನ್ನೇ ನಂಬದವರು ಹಾಗೂ ಯಹೂದಿಗಳು 110 ಕೋಟಿ.
ಶಿಷ್ಯ : ಮತ್ತೆ ನಾವು ಹಿಂದೂಗಳು..?
ಮೇಸ್ಟ್ರು : ಹಾಂ.. ಹಿಂದೂಗಳು ಅಂದರೆ ಭಾರತ ನೇಪಾಳ ಹಾಗೂ ಎಲ್ಲಾ ದೇಶದಲ್ಲಿರುವ ಹಿಂದೂಗಳು 118 ಕೋಟಿ.
ಶಿಷ್ಯ : ಅಷ್ಟೇನಾ?
ಮೇಸ್ಟ್ರು : 195 ದೇಶಗಳ ಪೈಕಿ 56 ಮುಸ್ಲಿಂ ದೇಶಗಳು. 15 ಪಕ್ಕಾ ಕ್ರಿಶ್ಚಿಯನ್ ರಾಷ್ಟ್ರಗಳು. ಕ್ರೈಸ್ತರೇ ಮೆಜಾರಿಟಿ ಇರುವ ಬೇರೆ 20 ದೇಶಗಳು. ಜೊತೆಗೆ ಬೌದ್ದ ಧರ್ಮೀಯರ, ಕಮ್ಯೂನಿಸ್ಟ್ ಪ್ರಭುತ್ವದ ದೇಶಗಳಿವೆ.
ಶಿಷ್ಯ : ಹೋ ಇಷ್ಟೆಲ್ಲಾ ಇವೆಯಾ? ನನಗೆ ಗೊತ್ತೇ ಇರಲಿಲ್ಲ ಮೇಸ್ಟ್ರೆ.
ಮೇಸ್ಟ್ರು : ನೀನೂ ಅಪ್ಡೇಟ್ ಆಗಬೇಕಯ್ಯಾ. ಇಷ್ಟೆಲ್ಲಾ ದೇಶಗಳು, ಇಷ್ಟೆಲ್ಲಾ ಧರ್ಮದವರು ನಿಮ್ಮ ಮೋದಿಯವರನ್ನ ವಿಶ್ವಗುರು ಅಂತಾ ಒಪ್ಪಿಕೊಂಡಿಲ್ಲಾ,
ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಶಿಷ್ಯ : ಹೌದಾ! ಒಪ್ಪಿಕೊಳ್ಳೋಕೆ ಅವರಿಗೆಲ್ಲಾ ಏನು ರೋಗ ಮೇಸ್ಟ್ರೆ. ನಾವೆಲ್ಲಾ ಒಪ್ಪಿದ್ದಾಯ್ತಲ್ಲಾ.
ಮೇಸ್ಟ್ರು : ಹೋಗಲಿ ನಮ್ಮದೇ ದೇಶದಲ್ಲಿರುವ ಮುಸ್ಲಿಂ ಕ್ರಿಶ್ಚಿಯನ್ ಬೌದ್ದರನ್ನು ಬಿಡು, ಎಲ್ಲಾ ಹಿಂದೂಗಳಾದರೂ ವಿಶ್ವಗುರು ಅಂತಾ ಹೇಳೋದಿಲ್ಲಾ, ಹೇಳೋದಿಕ್ಕೆ ನಿನ್ನ ತರಾ ಎಲ್ಲರಿಗೂ ಹುಚ್ಚೂ ಹಿಡಿದಿಲ್ಲ. ಜಗತ್ತಿನ ಎಲ್ಲಾ ಜಾತಿ ಧರ್ಮ ಜನಾಂಗದವರು ಅಂಗೀಕರಿಸದ ವ್ಯಕ್ತಿಯನ್ನು ಹೇಗಯ್ಯಾ ವಿಶ್ವಗುರು ಅಂತಾ ಕರೆಯೋದು? ಹೋಗಲಿ ಇಡೀ ವಿಶ್ವಕ್ಕೆ ನಿಮ್ಮ ಸ್ವ ಘೋಷಿತ ವಿಶ್ವಗುರು ಕೊಟ್ಟ ಕೊಡುಗೆಯಾದರೂ ಏನು?
ಶಿಷ್ಯ : ಕೊಡುಗೆ ಅಂದ್ರೆ ಎಂತಹುದು ಮೇಸ್ಟ್ರೇ?
ಮೇಸ್ಟ್ರು : ಬುದ್ಧ ಶಾಂತಿ ಸಂದೇಶವನ್ನು ವಿಶ್ವಕ್ಕೆ ಕೊಡುಗೆಯಾಗಿ ಕೊಟ್ಟ, ಬಸವಣ್ಣನವರು ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಕೊಟ್ಟರು. ಗಾಂಧೀಜಿಯವರು ಅಹಿಂಸಾ ತತ್ವವನ್ನು ಭೂಮಂಡಲಕ್ಕೆ ಕೊಟ್ಟರು ಹಾಗೂ ಎಲ್ಲರೂ ಒಪ್ಪಿಕೊಂಡರು.
ಅಂಬೇಡ್ಕರರು ಸಮಾನತೆ ಹಾಗೂ ಸಹಬಾಳ್ವೆಯನ್ನು ಹೇಳಿದರು. ಇವರೆಲ್ಲಾ ವಿಶ್ವಗುರುವಾಗುವುದಕ್ಕೆ ಅರ್ಹರು. ನಿಮ್ಮ ವಿಶ್ವಗುರುಗಳು ವಿಶ್ವವೇ ಕೊಂಡಾಡುವಂತೆ ಏನು ಕೊಡುಗೆ ಕೊಟ್ಟಿದ್ದಾರೆ?
ಶಿಷ್ಯ : ಕೊಟ್ಟಿದ್ದಾರಲ್ಲಾ. ಜಾಸ್ತೀನೇ ಕೊಟ್ಟಿದ್ದಾರೆ.
ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನ ಹೇಗೆ ಖಾಸಗೀಕರಣ ಮಾಡೋದು ಅಂತಾ ವಿಶ್ವಕ್ಕೆ ತೋರಿಸಿ ಕೊಟ್ಟಿದ್ದಾರೆ ಮೇಸ್ಟ್ರೆ. ಅದರಿಂದ ಉತ್ಪಾದನೆ ಹೆಚ್ಚಾಗಿ ಸರಕಾರಕ್ಕೆ ತೆರಿಗೆ ಹೆಚ್ಚೆಚ್ಚು ಬರುತ್ತಲ್ವಾ?
ಮೇಸ್ಟ್ರು : ಜನತೆಯ ಆಸ್ತಿಯನ್ನ ಮಾರಿಕೊಳ್ಳುವುದು ಸಾಧನೆಯಲ್ಲಾ ದೇಶಕ್ಕೇ ವೇದನೆ ಗೊತ್ತೇನಯ್ಯಾ?
ಶಿಷ್ಯ : ಇಡೀ ವಿಶ್ವವೇ ಬೆರಗಾಗುವಂತೆ ಭವ್ಯ ದಿವ್ಯ ರಾಮಮಂದಿರ ಕಟ್ಟಿಸಿದ್ದಾರಲ್ಲಾ ಮೇಸ್ಟ್ರೆ, ಇದಕ್ಕಿಂತಾ ದೊಡ್ಡ ಕೊಡುಗೆ ಇನ್ನೇನು ಬೇಕು?
ಮೇಸ್ಟ್ರು : ಅದು ರಾಮಭಕ್ತರಿಗಾಗಿ ಮಾತ್ರ. ವಿಶ್ವದ ಜನತೆಗೂ ಇಲ್ಲಿಯ ರಾಮಮಂದಿರಕ್ಕೂ ಏನಯ್ಯಾ ಸಂಬಂಧ.
ಶಿಷ್ಯ : ಅಯ್ಯೋ ಮೇಸ್ಟ್ರೇ ನಾನು ಏನೇ ಹೇಳಿದರೂ ಅದಕ್ಕೊಂದು ಕೊಂಕು ನುಡೀತೀರಾ. ಯಾರೇ ಒಪ್ಪಲಿ ಬಿಡಲಿ ನಾವಂತೂ ವಿಶ್ವಗುರು ಅಂತಾ ಒಪ್ಪಿಕೊಂಡಿದ್ದೇವೆ ಬಿಡಿ.
ಮೇಸ್ಟ್ರು : ನೀವು ಅಂದ್ರೆ ಯಾರು?
ಶಿಷ್ಯ : ನಾವು ಅಂದ್ರೆ ನಾವೇ ಮೇಸ್ಟ್ರೇ. ಸಮಸ್ತ ಹಿಂದೂಗಳು.
ಮೇಸ್ಟ್ರು : ವಿಶ್ವದ 800 ಕೋಟಿ ಜನಸಂಖ್ಯೆಯಲ್ಲಿ ನೀವು ವಿಶ್ವಗುರುವಿನ ಅನುಯಾಯಿಗಳು ಎಷ್ಟಿದ್ದೀರಪ್ಪಾ? ಓಟಿನ ಲೆಕ್ಕ ನೋಡಿದ್ರೆ ಇಪ್ಪತ್ತು ಕೋಟೀನೂ ಮೀರೋದಿಲ್ಲವಲ್ಲಾ. ಓಟು ಕೊಟ್ಟವರೆಲ್ಲಾ ಅಂಧಭಕ್ತರೂ ಅಲ್ಲಪ್ಪಾ. ವಾಸ್ತವ ಹಿಂಗಿದ್ರೂ ವಿಶ್ವಗುರು ಅಂತಾ ಹೇಗಯ್ಯಾ ಜಗತ್ತು ಒಪ್ಪಿಕೊಳ್ಳುತ್ತೆ.
ಶಿಷ್ಯ: ಲೆಕ್ಕ ಗಿಕ್ಕಾ, ಅಂಕಿ ಅಂಶಾ ಎಲ್ಲಾ ಬಿಟ್ಟಾಕಿ ಮೇಸ್ಟ್ರೇ. ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡಿ.
ಮೇಸ್ಟ್ರು : ಆಯ್ತು ಅದನ್ನೂ ಕೇಳೇ ಬಿಡಯ್ಯಾ.
ಶಿಷ್ಯ : ಮೇಸ್ಟ್ರೆ ನಮ್ಮ ಭೂಮಿಯಲ್ಲಿ ಎಷ್ಟು ಜಗತ್ತು ಇವೆ.
ಮೇಸ್ಟ್ರು : ಈ ಇಡೀ ಭೂಮಿಯೇ ಒಂದು ಜಗತ್ತು ಅಂತಾ ಸ್ಕೂಲಲ್ಲೇ ಪಾಠ ಹೇಳಿ ಕೊಟ್ಟದ್ದೆನಲ್ವಾ?
ಶಿಷ್ಯ : ಸರಿ ಮೇಸ್ಟ್ರೇ ಒಂದೇ ಜಗತ್ತು ಅನ್ನೋದು ನಿಜ ಆದ್ರೆ, ಈ ಚಿಕ್ಕ ಪುಟ್ಟ ಮಠದ ಸ್ವಾಮಿಗಳು ತಮ್ಮನ್ನ ತಾವು ಯಾಕೆ ಜಗದ್ಗುರುಗಳು ಅಂತಾ ಕರೆದುಕೊಳ್ತಾರೆ.
ಮಠದ ವ್ಯಾಪ್ತಿ ಹೊರಗೆ ಈ ಸ್ವಾಮಿಗಳು ಯಾರು ಅನ್ನೋದೆ ಗೊತ್ತಿರೋದಿಲ್ಲ ಆದರೂ ಇವರು ಯಾವ ಜಗತ್ತಿಗೆ ಗುರುಗಳು?
ಮೇಸ್ಟ್ರು : ಜಗದ್ಗುರು ಅಂತಾ ಆಯಾ ಮಠದ ಅಂಧಭಕ್ತರು ಕರೀತಾರೆ, ಸ್ವಾಮಿಗಳೂ ಖುಷಿಯಿಂದಾ ಸಂಭ್ರಮಿಸ್ತಾರೆ ಅಷ್ಟೇ..?
ಶಿಷ್ಯ : ಹಾಂ. ನಮ್ಮ ವಿಶ್ವಗುರುಗಳದ್ದೂ ಹಂಗೇನೇ ಮೇಸ್ಟ್ರೇ. ವಿಶ್ವದ ಜನ ಒಪ್ಪಲಿ ಬಿಡಲಿ, ಎಲ್ಲಾ ಹಿಂದೂಗಳು ಒಪ್ಪದೇ ಇರಲಿ, ಮೋದಿ ಭಕ್ತಾದಿಗಳು ಅವರನ್ನು ವಿಶ್ವಗುರು ಅಂತಾ ಕರೀತಾರೆ, ಒಪ್ಪಿಕೊಳ್ತಾರೆ, ಮಠಕ್ಕೊಬ್ಬ ಜಗದ್ಗುರು ಇದ್ದ ಹಾಗೆ, ನಮ್ಮ ಸಂಘ ಪರಿವಾರಕ್ಕೊಬ್ಬ ವಿಶ್ವಗುರು ಇದ್ದಾರೆ. ಒಂದು ಮಠದ ಪ್ರಭಾವಿ ಜಗದ್ಗುರು ಆಗಾಗ ವ್ಯಾಪ್ತಿ ಮೀರಿ ತನ್ನ ಪ್ರಭಾವ ಬೀರಲು ಪ್ರಯತ್ನಿಸುತ್ತಾರೋ ಹಾಗೆಯೇ ನಮ್ಮ ವಿಶ್ವಗುರುಗಳು ಬೇರೆ ದೇಶಗಳಿಗೆ ಹೋಗಿ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಅಷ್ಟೇಯಾ. ಅರ್ಥ ಆಯ್ತಾ ಮೇಸ್ಟ್ರೇ.
ಮೇಸ್ಟ್ರು : ಆಯ್ತಪ್ಪಾ ಆಯ್ತು. ಅಂಧಭಕ್ತರ ಅಂತರಾತ್ಮ ಎಂಥಾದ್ದು ಅಂತಾ ಅರ್ಥ ಆಯ್ತು. ಈ ಮಠದ ಸ್ವಾಮಿಗಳು ತಮ್ಮನ್ನ ತಾವು ಜಗದ್ಗುರು ಅಂತಾ ಬಿಂಬಿಸಿಕೊಂಡಂಗೆ ನಿಮ್ಮ ದೊರೆಗಳು ವಿಶ್ವಗುರು ಅಂತಾ ಬಿಲ್ಡಪ್ ತಗೋತಿದ್ದಾರೆ ಅಂತಾನೂ ಅರ್ಥ ಆಯ್ತು.
ಶಿಷ್ಯ : ಹಾಂ.. ಹಾಂಗ್ ಬನ್ನಿ ದಾರೀಗೆ. ಈಗಲಾದರೂ ಮೋದಿ ಮಹಾರಾಜರನ್ನ ವಿಶ್ವಗುರು ಅಂತಾ ಒಪ್ಕೊಳ್ಳಿ ಮೇಸ್ಟ್ರೇ.
ಮೇಸ್ಟ್ರು : ಆಹಾ ಏನು ಲಾಜಿಕ್ಕು..
ಶಿಷ್ಯ : ಇದೆಲ್ಲಾ ಬರೀ ಲಾಜಿಕ್ ಅಲ್ಲಾ ಮೇಸ್ಟ್ರೆ.. ಎಲ್ಲಾ ಮ್ಯಾಜಿಕ್ಕು. ಲಕ ಲಕ ಹೊಳೆಯುವ ಗಿಮಿಕ್ಕು.
ಮೇಸ್ಟ್ರು : (ವ್ಯಂಗ್ಯವಾಗಿ) ಆಹಾ, ಎಂತಾ ಸೌಭಾಗ್ಯ ನನ್ನದು. ನಿನ್ನಂತಾ ಅದ್ಬುತ ಲಾಜಿಕ್ ಶಿಷ್ಯನನ್ನು ಪಡೆದ ನನ್ನ ಜನ್ಮ ಪಾವನವಾಯ್ತು. ಬಾ ವಿಶ್ವಗುರುವಿನ ಅಂಧಭಕ್ತಾಸುರನೇ. ನಿನಗೆ ದೊಡ್ಡ ನಮಸ್ಕಾರ. (ತೆರಳುವರು)
ಶಿಷ್ಯ : (ಹಾಡು ಮುಂದುವರೆಸುತ್ತಾನೆ)
ಗುರುವೆ ನಿನ್ನಾಟ ಬಲ್ಲವರ್ಯಾರ್ಯಾರು?
ಪ್ರಭುವೇ ನಿನ್ನಾಟ ಕಂಡವರು ಯಾರ್ಯಾರು?
- ಶಶಿಕಾಂತ ಯಡಹಳ್ಳಿ
01-12-2023
Comments
Post a Comment