ಧರ್ಮದ ಮೇಲೆ ಧರ್ಮ ಏನಿದರ ಮರ್ಮ (ಪ್ರಹಸನ - 67)
ಪ್ರಹಸನ - 67
ಧರ್ಮದ ಮೇಲೆ ಧರ್ಮ ಏನಿದರ ಮರ್ಮ
***************************************
( ಹಣೆಗೆ ವಿಭೂತಿ ಪಟ್ಟಿ ಬಳಿದುಕೊಂಡು ಕೊರಳಿಗೆ ಶಿವಲಿಂಗ ಕಟ್ಟಿಕೊಂಡಿರುವ ಲಿಂಗಾಯತ ಧರ್ಮೀಯನ ಬೆನ್ನ ಮೇಲೆ ತಲೆಗೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆಗಳ ಹಾಕಿ, ಮೈತುಂಬ ವಿಭೂತಿ ಪಟ್ಟ ಬಳಿದುಕೊಂಡಿರುವ ವೀರಶೈವ ಜಗದ್ಗುರು ಕೂತಿದ್ದಾರೆ. ಅವರ ಹಿಂದೆ ಜುಟ್ಟು ಬಿಟ್ಟಿರುವ ನಾಮಧಾರಿ ಬ್ರಾಹ್ಮಣ. ಈ ಮೂವರ ಸವಾರಿ ಮುನ್ನಡೆದಿದೆ. ಬೆನ್ನ ಭಾರ ತಡೆಯಲಾಗದ ಲಿಂಗಾಯತ..)
ಲಿಂಗಾಯತ : ಅಯ್ಯೋ ಈ ಭಾರ ತಾಳಲಾರೆ. ಕೆಳಗೆ ಇಳೀರಿ ಅಯ್ಯನೋರೆ. ಇನ್ನೂ ಎಷ್ಟು ಕಾಲ ಅಂತಾ ನಿಮ್ಮ ಹೆಣಭಾರ ಹೊತ್ತು ನಾವು ಸಾಗುವುದು. ಸಾಕು ಸಾಕಿನ್ನು..
ವೈದಿಕ ಪಂಡಿತ : ಅಯ್ಯೋ ಹಾಗಂದ್ರೆ ಹೇಗೆ. ಹೊರಬೇಕಯ್ಯಾ, ಭಾರ ಹೊರಬೇಕು. ಶೂದ್ರ ದಲಿತ ಧರ್ಮದವರ ಕೆಲಸವೇ ಇದು. ಏನೂ ಮಾಡೋಕಾಗೋದಿಲ್ಲಾ ಎಲ್ಲಾ ನಿಮ್ಮ ಪೂರ್ವ ಜನ್ಮದ ಕರ್ಮ.
ವೀರಶೈವ : ಕರ್ಮ ಅಷ್ಟೇ ಅಲ್ಲಾ ಅದು ಪಂಚಮುಖಿ ಗುರುಪೀಠಕ್ಕೆ ನೀವು ಸಲ್ಲಿಸಬೇಕಾದ ಗೌರವ.
ಲಿಂಗಾಯತ : ಆಗೋಲ್ಲಾಂದ್ರೆ ಆಗೋದಿಲ್ಲ, ಮತ್ತೆ ಮತ್ತೆ ಈ ಶೈವರ ಶವಭಾರ ಹೊತ್ತು ಮುಂದೆ ಸಾಗೋದಕ್ಕೆ ಇನ್ಮುಂದೆ ಸಾಧ್ಯವೇ ಇಲ್ಲಾ. ಕೆಳಗೆ ಇಳೀರಿ ಸ್ವಾಮಿಗೋಳೆ. ನಮ್ಮ ಕಷ್ಟ ನಮಗೆ. ( ಎಂದು ಕೆಳಕ್ಕೆ ಇಳಿಸುತ್ತಾ..)
ಲಿಂಗಾಯತ : ನೋಡಿ ಜಂಗಮ ಜಗದ್ಗುರುವೇ ಇನ್ನು ನಿಮ್ಮ ವೀರಶೈವ ಧರ್ಮದ ಸಹವಾಸ ಸಾಕು. ನಮಗೆ ನಮ್ಮ ಲಿಂಗಾಯತ ಧರ್ಮವೊಂದೇ ಬೇಕು. ನಿಮ್ಮದೇ ಬೇರೆ, ನಮ್ಮದೇ ಬೇರೆ..
ವೀರಶೈವ : ನೋಡ್ರಯ್ಯಾ ಯಾರು ಏನೇ ಹೇಳಲಿ, ನಮ್ಮಿಬ್ಬರನ್ನ ಬೇರೆ ಮಾಡಲು ಎಷ್ಟೇ ಪ್ರಯತ್ನ ಮಾಡಲಿ, ನಾವಿಬ್ಬರೂ ಒಂದೇ. ವೀರಶೈವ ಲಿಂಗಾಯತ ಒಂದೇ ಒಂದೇ ಒಂದೇ. ನಿಮ್ಮ ಮೇಲೆ ಸವಾರಿ ಮಾಡುವುದೇ ನಮ್ಮ ಧರ್ಮ, ಪಂಚಪೀಠದ ಭಾರ ಹೊರುವುದೇ ನಿಮ್ಮ ಕರ್ಮ.
ಲಿಂಗಾಯತ : ಅದೆಲ್ಲಾ ಸಾಧ್ಯವೇ ಇಲ್ಲ. ನಾವು ಲಿಂಗಾಯತರು. ನಮ್ಮದು ಸ್ವತಂತ್ರ ಧರ್ಮ. ನಿಮ್ಮ ಜೊತೆ ನಮ್ಮನ್ನ ಸೇರಿಸ್ಕೋಬೇಡಿ ಸ್ವಾಮಿಗೋಳೇ. ನಮ್ಮ ಧರ್ಮ ನಮಗಿರಲಿ. ನಿಮ್ಮದು ನಿಮಗೆ..
ವೀರಶೈವ : ಅದೆಂಗಾಗುತ್ತೆ. ನಾವಿದ್ದರೆ ನೀವು. ನಾವು ಜಂಗಮರು, ಲಿಂಗಾಯತರ ಗುರುಗಳು. ಗುರುಗಳ ಬಿಟ್ಟು ದೂರಾಗುವುದು ಗುರುದ್ರೋಹ. ಇದನ್ನೆಲ್ಲಾ ಗುರುಪೀಠದ ವೀರಶೈವರಿಗೆ ಸಹಿಸೋಕಾಗೋದಿಲ್ಲ.
ಲಿಂಗಾಯತ : ಸ್ವಾಮಿಗೋಳೆ ನಿಮ್ಮ ವೀರಶೈವ ಯಾರಿಂದಾ ಯಾವಾಗ ಹುಟ್ಟಿತು ಅಂತಾ ಸ್ವಲ್ಪ ಹೇಳ್ತೀರಾ?
ವೀರಶೈವ : ನಮ್ಮದು ಸನಾತನ ಧರ್ಮ. ಸನಾತನಕ್ಕೆ ಆದಿ ಅಂತ್ಯ ಇರೋದಿಲ್ಲವೋ ಮೂರ್ಖ. ಲೋಕದಲ್ಲಿ ಧರ್ಮಪರಿಪಾಲನೆಗಾಗಿ ಸ್ವತಃ ಆ ಪರಶಿವನೇ ಪಂಚಾಚಾರ್ಯರ ಮೂಲಕ ವೀರಶೈವ ಧರ್ಮ ಹುಟ್ಟುಹಾಕಿದ್ದು.
ನಾಲ್ಕೂ ಯುಗಗಳಿಂದಾ ಈ ನಮ್ಮ ಸದ್ದರ್ಮ ಲೋಕಕಲ್ಯಾಣ ಮಾಡುತ್ತಾ ಬಂದಿದೆ.
ಲಿಂಗಾಯತ : ಅಲೆಲೆಲೇ.. ನಿಮ್ಮ ಪೀಠಗಳು ಯಾವವು ಅಯ್ನೋರೆ ?
ವೀರಶೈವ : ಬಾಳೆಹೊನ್ನೂರು, ಉಜ್ಜಯಿನಿ, ಶ್ರೀಶೈಲ, ಕಾಶಿ, ಕೇದಾರದ ಪುಣ್ಯ ಸ್ಥಳಗಳಲ್ಲಿ ಶಿವನ ಐದು ಮುಖಗಳಿಂದ ಪಂಚಪೀಠಗಳು ಉದ್ಬವಿಸಿವೆ. ನಮ್ಮದು ಬಹು ದೊಡ್ಡ ಜಗದ್ಗುರು ಪೀಠ ಪರಂಪರೆ.
ಲಿಂಗಾಯತ : ಹೌದೌದು.. ಇರಬಹುದು. ನಿಮ್ಮ ಈ ಪೀಠಗಳಿಗೆ ಪೀಠಾಧಿಪತಿ ಯಾರು ಸ್ವಾಮಿಗೋಳೇ.
ವೀರಶೈವ : ರೇವಣಸಿದ್ದ, ಮರುಳಸಿದ್ಧ, ಏಕೋರಾಮ, ವಿಶ್ವಾರಾಧ್ಯ ಮತ್ತು ಪಂಡಿತಾರಾಧ್ಯರೆಂಬ ಪಂಚಾಚಾರ್ಯರು ಲಿಂಗೋದ್ಬವರು ಅರ್ಥವಾಯ್ತಾ .
ಲಿಂಗಾಯತ : ಅಂದರೆ ಇವರೆಲ್ಲಾ ಎಲ್ಲರೂ ಹುಟ್ಟುವ ಹಾಗೆ ಹುಟ್ಟಿಲ್ಲವೆಂದಾಯ್ತು. ಶಿಲಾ ಸಂಜಾತರು ಅಲ್ವಾ ಅಯ್ನೋರೆ.
ವೀರಶೈವ : ಮಹಾಮಹಿಮರ ಹುಟ್ಟು ಅಸಾಮಾನ್ಯವಾಗಿರುತ್ತದೋ ಅವಿವೇಕಿ. ಅವನ್ನೆಲ್ಲಾ ಪ್ರಶ್ನಿಸಬಾರದು.
ವೈದಿಕ ಪಂಡಿತ : ಹೌದೌದು ಋಷಿಮೂಲವನ್ನಂತೂ ಪ್ರಶ್ನಿಸಲೇಬಾರದು. ಅದೆಲ್ಲಾ ಬ್ರಹ್ಮರಹಸ್ಯ.
ಲಿಂಗಾಯತ : ಪ್ರಶ್ನಿಸಿದರೆ ಎಲ್ಲಿ ನಿಮ್ಮ ಕಟ್ಟುಕತೆ ಬಟ್ಬಬಯಲಾಗುತ್ತದೋ ಎನ್ನುವ ಭಯವಾ ವೈದಿಕರೆ.
ವೀರಶೈವ : ಯೇ ದಡ್ಡ ಶಿಖಾಮಣಿ. ನಮ್ಮದು ಬಲು ದೊಡ್ಡ ಪ್ರಾಚೀನ ಗುರುಪರಂಪರೆ. ಜಗದ್ಗುರು ಪರಂಪರೆ. ನಮ್ಮವೇ ಸಹಸ್ರಾರು ಮಠಗಳು ಇವೆ. ಬೇಕಾದಷ್ಟು ಜಂಗಮ ಜಗದ್ಗುರುಗಳೂ ಇದ್ದಾರೆ.
ಲಿಂಗಾಯತ : ಅಂದರೆ ಇರುವ ಒಂದು ಜಗತ್ತಿಗೆ ಇಷ್ಟೊಂದು ಜಗದ್ಗುರುಗಳು ಅದು ಹೇಗೆ ಅಯ್ನೋರೆ?
ವೀರಶೈವ : ಅದೆಲ್ಲಾ ನಿಮ್ಮಂತೋರಿಗೆ ಅರ್ಥವಾಗದ ಜಗತ್ ಸೃಷ್ಟಿ ರಹಸ್ಯ.
ಲಿಂಗಾಯತ : ಹೋಗಲಿ ನಮ್ಮ ಲಿಂಗಾಯತ ಧರ್ಮಕ್ಕೂ ನಿಮ್ಮ ವೀರಶೈವಕ್ಕೂ ಎತ್ತಲಿಂದೆತ್ತ ಸಂಬಂಧ ಗುರುಗಳೇ..
ವೀರಶೈವ : ಇದೆ, ಸಂಬಂಧ ಇದೆ. ವೀರಶೈವರಾದ ನಾವು ಶಿವನ ಆರಾಧಕರಾದ ಶೈವರು. ಲಿಂಗಾಯತರಾದ ನೀವೂ ಶಿವನ ಅನುಯಾಯಿಗಳಾದ ಶೈವರು. ಹೀಗಾಗಿ ವೀರಶೈವ ಲಿಂಗಾಯತ ಬೇರೆ ಬೇರೆ ಎಂದರೆ ಆ ಶಿವ ಮೆಚ್ಚುವನಾ?
ಲಿಂಗಾಯತ : ಮತ್ತೆ ಲಿಂಗಾಯತ ಧರ್ಮ ಸ್ಥಾಪಕರಾದ ಬಸವಣ್ಣನವರಿಗೂ ವೀರಶೈವಕ್ಕೂ ಎಂತಹ ಸಂಬಂಧ?
ವೀರಶೈವ : ಇದೆ.. ಅಲ್ಲೂ ಕರಳುಬಳ್ಳಿ ಸಂಬಂಧ ಇದೆ. ಬಸವಣ್ಣನವರೂ ಶೈವ ಬ್ರಾಹ್ಮಣ ಕುಲ ಸಂಜಾತರು ಎಂಬುದನ್ನು ಯಾರೂ ಮರೆಯಬಾರದು. ಲಿಂಗಾಯತವನ್ನು ಹುಟ್ಟುಹಾಕಿದವರೇ ನಮ್ಮ ಶೈವ ಬ್ರಾಹ್ಮಣ ಮತದ ಬಸವಣ್ಣ. ಶೈವರೆಲ್ಲಾ ವೀರಶೈವರು. ಲಿಂಗಾಯತರಿಗೆಲ್ಲಾ ಗುರುಗಳು. ಬಸವಣ್ಣನವರಿಗೆ ದೀಕ್ಷೆ ಕೊಟ್ಟವರೂ ಶೈವಗುರು ಜಾತಮುನಿಗಳು.
ಲಿಂಗಾಯತ : ಲಿಂಗಾಯತರಿಗೆ ವಚನಗಳೇ ಧರ್ಮಗ್ರಂಥಗಳು.
ವೀರಶೈವಕ್ಕೆ ಧರ್ಮಗ್ರಂಥ ಯಾವುದು ಸ್ವಾಮಿಗೋಳೇ..
ವೀರಶೈವ : ಇವೆ.. ನಮಗೂ ಇವೆ. ಒಂದಲ್ಲಾ ಇಪ್ಪತ್ತೆಂಟಿವೆ. ಅವುಗಳಿಗೆ ಆಗಮಗಳು ಅಂತಾ ಕರೀತಾರೆ.
ಲಿಂಗಾಯತ : ಮತ್ತೆ ಬಸವಣ್ಣನವರು 'ಆಗಮನಗಳ ಮೂಗು ಕೊಯ್ಯುವೆ' ಅಂತಾ ಹೇಳಿದ್ದಾರಲ್ಲಾ ಅಯ್ನೋರೆ, ಅಲ್ಲಮಪ್ರಭುಗಳು
'ಆಗಮಗಳೆಂಬುವು ಋಷಿಯ ಮರುಳಾಟ' ಅಂತಾ ವಚನ ಬರೆದಿದ್ದಾರೆ. ಅಂದರೆ ನಿಮ್ಮ ಆಗಮಗಳನ್ನು ಶಿವಶರಣರು ಒಪ್ಪದೇ ಖಂಡಿಸಿದ್ದಾರೆ ಅಂದಮೇಲೆ ನಮ್ಮದೇ ಬೇರೆ ಧರ್ಮ ನಿಮ್ಮದೇ ಬೇರೆ ಅಂತಾಯ್ತಲ್ವಾ ಗುರುವೇ ಗುರುಪೀಠವೇ.
ವೀರಶೈವ : ಶಿವ ಶಿವಾ.. ಅದು ಅದು.. ಏನೋ ವೈದಿಕರ ವೇದಗಳಿಗೆ ಒರೆಯ ಕಟ್ಟುವ ಸಿಟ್ಟಿನಲ್ಲಿ ಶರಣರು ಆಗಮಗಳ ಬಗ್ಗೆಯೂ ತಪ್ಪಾಗಿ ಹಾಗೆ ಹೇಳಿರಬಹುದು.
ವೈದಿಕ ಪಂಡಿತ : ಯಾರದು ನಮ್ಮ ವೇದಗಳ ಬಗ್ಗೆ ನಿಂದಿಸುತ್ತಿರುವುದು. ಸನಾತನ ಧರ್ಮದ ಪುರಾತನ ಗ್ರಂಥಗಳ ಬಗ್ಗೆ ಹಾಗೆಲ್ಲಾ ಅಪಚಾರ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಹರಿ ಓಂ..
ಲಿಂಗಾಯತ : ಓಹೋ ಪುರೋಹಿತ ಪಂಡಿತರು ಇಲ್ಲೇ ಇದ್ದೀರೋ. ಬಸವಾದಿ ಶರಣರು ವಚನಗಳಲ್ಲಿ ನಿಮ್ಮ ಜಾತಕ ಬಿಡಿಸಿಟ್ಟಿದ್ದು ಸಾಲದೇ. "ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರವರ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ, ಬಚ್ಚಲ ನೀರು ಬೀದಿಯ ದೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ" ಅಂತಾ ಬಸವಣ್ಣನವರೇ ನಿಮ್ಮ ಆಶಾಡಭೂತಿತನ ಬಿಡಿಸಿಟ್ಟಿದ್ದಾರಲ್ವಾ.
ವೀರಶೈವ : ಇದು ವೀರಶೈವ ಲಿಂಗಾಯತರ ವಾದ ವಿವಾದ. ವೈದಿಕರು ನಡುವೆ ಮೂಗು ತೂರಿಸಬಾರದು.
ವೈದಿಕ : ನೀವು ಹೇಳಿದಿರಿ ಅಂತಾ ಸುಮ್ಮನಾಗ್ತೇನೆ. ಎಷ್ಟೇ ಆದರೂ ನೀವೂ ನಮ್ಮೋರೇ ಅಲ್ವೇ.. ನಮ್ಮಂತೆ ಎಲ್ಲಾ ದೇವರುಗಳ ಪೂಜೆ ಮಾಡ್ತೀರಿ. ಹೋಮ ಹವನ ಮಾಡ್ತೀರಿ. ನಾವು ಹರ ಅಂತೀವಿ ನೀವು ಹರಿ ಅಂತೀರಿ. ಮಿಕ್ಕೆಲ್ಲಾ ಆರಾಧನೆ ಆಚರಣೆಗಳು ಸೇಮ್ ಟು ಸೇಮ್. ಮುಂದುವರೆಸಿ.
ಲಿಂಗಾಯತ : ಪಂಡಿತರೇ ಹೇಳಿದ್ರಲ್ಲಾ ವೀರಶೈವರೂ ವೈದಿಕರಂತೆಯೇ ಅಂತಾ. ನೀವು ಶಿವನ ಜೊತೆ ಗಣಪತಿ ಪಾರ್ವತಿ ಅಷ್ಟೇ ಯಾಕೆ ಎಲ್ಲಾ ದೇವರ ಪೂಜಕರು. ಅಂದರೆ ಬಹುದೇವೋಪಾಸಕರು. ಆದರೆ ನಾವು ಲಿಂಗಾಯತರು ಲಿಂಗವನ್ನು ಹೊರತು ಪಡಿಸಿ ಬೇರೆ ಯಾವ ದೇವರನ್ನೂ ಪೂಜಿಸುವವರಲ್ಲ.
ನಾವು ಏಕದೇವೋಪಾಸಕರು ಹಾಗಾಗಿ ನಿಮ್ಮ ಧರ್ಮಕ್ಕೂ ನಮ್ಮದಕ್ಕೂ ಸಂಬಂಧವೇ ಇಲ್ಲಾ.
ವೀರಶೈವ : ಅದೆಂಗಾಗುತ್ತೆ. ನಮ್ಮದೂ ಲಿಂಗ, ನಿಮ್ಮದೂ ಲಿಂಗ. ಎರಡೂ ಧರ್ಮದ ಲಿಂಗ ಒಂದೇ ಅಂದ ಮೇಲೆ ನಮ್ಮ ಧರ್ಮ ಅದು ಹೇಗೆ ಭಿನ್ನವಾಗುತ್ತದೆ.
ಲಿಂಗಾಯತ : ಆಗುತ್ತೆ ಅಯ್ನೋರೆ ಆಗುತ್ತೆ. ನಮ್ಮದು ಅಂಗೈಯಲ್ಲಿರುವ ಇಷ್ಟ ಲಿಂಗ. ನಿಮ್ಮದೋ ಸ್ಥಾವರ ಲಿಂಗ. ಭಗವಂತ ಭಕ್ತನ ನಡುವೆ ಗಂಟೆ ಅಲ್ಲಾಡಿಸಲು ಪೂಜಾರಿಗಳು ಬೇಡಾ ಅಂತಾನೇ ಬಸವಣ್ಣನವರು ಇಷ್ಟಲಿಂಗ ಕೊಟ್ಟು ದೇವರ ಜೊತೆ ನೇರವಾಗಿ ಸಂವಾದ ಮಾಡಲು ಲಿಂಗವಂತರಿಗೆ ಹೇಳಿದ್ದಾರೆ.
ವೀರಶೈವ : ಹಂಗಂದ್ರೆ ಹೆಂಗೆ. ಪೂಜಾರಿಗಳು ಅರ್ಚಕರು ಪುರೋಹಿತರು ಅಯ್ನೋರ ಮಧ್ಯಸ್ತಿಕೆ ಇಲ್ಲದೇ ಶಿವ ಒಲಿಯಲು ಸಾಧ್ಯವೇ ಇಲ್ಲ. ಎಲ್ಲರಿಗೂ ಪೂಜಾವಿಧಾನ ಗೊತ್ತಿರೋದಿಲ್ಲ.
ಸಂಸ್ಕೃತ ಶ್ಲೋಕಗಳನ್ನು ಹೇಳಲು ಬರೋದಿಲ್ಲ. ಆದ್ದರಿಂದ ಭಗವಂತನ ಕೃಪೆಗೆ ಭಕ್ತರು ಪಾತ್ರರಾಗಬೇಕೆಂದರೆ ಗುರುಗಳು ಬೇಕೆ ಬೇಕು. ಅದಕ್ಕೆ ನಮ್ಮ ಗುರುಪೀಠಗಳು ಜಂಗಮ ಮಠಗಳು ಇರೋದು. ಜನರಿಗೆ ಮೋಕ್ಷ ಸದ್ಗತಿ ಸ್ವರ್ಗ ಸಿಗೋದು ಬೇಡ್ವಾ?
ಲಿಂಗಾಯತ : ಅದೇ ನಿಮಗೂ ನಮಗೂ ಇರೋ ವ್ಯತ್ಯಾಸ. ಅರ್ಥವಾಗದ ನಿಮ್ಮ ಶ್ಲೋಕಗಳ ಬಿಟ್ಟಾಕಿ ಎಲ್ಲರಿಗೂ ಅರ್ಥವಾಗುವ ಸರಳ ಕನ್ನಡದಲ್ಲಿ ವಚನಗಳನ್ನು ಬಸವಾದಿ ಶರಣರು ರಚಿಸಿ ಕೊಟ್ಟಿದ್ದಾರೆ.
ಕರದಲ್ಲಿ ಇಷ್ಟಲಿಂಗವ ಇಟ್ಟಿದ್ದಾರೆ. ಅಷ್ಟು ಸಾಕು ನಮಗೆ, ನಡುವೆ ದೇವರ ದಲ್ಲಾಳಿಗಳ ಅಗತ್ಯ ಲಿಂಗಾಯತರಿಗಿಲ್ಲ.
ನಿಮ್ಮ ಮೋಕ್ಷ ಸ್ವರ್ಗ ನರಕ ಕರ್ಮ ಸಿದ್ದಾಂತಗಳನ್ನೇ ಶರಣರು ಧಿಕ್ಕರಿಸಿ ಅದೆಲ್ಲಾ ತೋರುಂಬಲಾಭ ಅಂತಾ ಹೇಳಿದ್ದಾರೆ. ಅದಕ್ಕೆ ನಿಮ್ಮ ನಮ್ಮ ಧರ್ಮಗಳಲ್ಲಿ ಸಾಕಷ್ಟು ಭಿನ್ನತೆ ಇದೆ.. ನಮ್ಮದು ಸ್ವತಂತ್ರ ಧರ್ಮ.
ವೀರಶೈವ : ತಪ್ಪು ತಪ್ಪು, ಮಹಾತಪ್ಪು. ಹಾಗೆಲ್ಲಾ ಹೇಳಬಾರದು. ನಾವು ವೀರಶೈವರು ಲಿಂಗಾಯತರ ಗುರುಗಳು. ಗುರು ನಿಂದನೆ ಮಹಾಪಾಪ.
ವೈದಿಕ ಪಂಡಿತ : ಹೌದೌದು. ಗುರು ನಿಂದನೆ ಮಹಾ ಪಾತಕ. ದೈವ ನಿಂದನೆ ರವರವ ನರಕ.
ಲಿಂಗಾಯತ : ಆಚಾರ ವಿಚಾರಗಳಲ್ಲಿ ನೀವಿಬ್ಬರೂ ಸನಾತನಿಗಳು ಒಂದೇ ಅಂತಾ ನಮಗೆಲ್ಲಾ ಗೊತ್ತಿದೆ ಸುಮ್ಮನಿರಿ. ನಿಮ್ಮ ಆಚಾರಗಳಿಗೆ ಲಿಂಗಾಯತರಲ್ಲಿ ಸಮ್ಮತಿ ಇಲ್ಲ. ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು.
ವೀರಶೈವ : ಅದಕ್ಕೆ ನಮ್ಮ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ನಾವು ಬಸವಣ್ಣನವರನ್ನು 'ಸಾಂಸ್ಕೃತಿಕ ನಾಯಕ' ಅಂತಾ ಘೋಷಿಸಬೇಕು ಅಂತಾ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ನಮಗೂ ಬಸವಣ್ಣನವರ ಮೇಲೆ ಪ್ರೀತಿ ಇದೆ.
ಲಿಂಗಾಯತ : ನೋಡಿದ್ರಾ ನಿಮ್ಮ ಹುನ್ನಾರ. ಬಸವಣ್ಣನವರನ್ನು ನಾಯಕ ಅಂತೀರಾ ಹೊರತು ಲಿಂಗಾಯತ ಧರ್ಮ ಸ್ಥಾಪಕರು ಅಂತಾ ನೀವು ಒಪ್ಪೋದಿಲ್ಲ. ಇನ್ನು ನಾವು ಲಿಂಗಾಯತರು ಯಾಕೆ ನಿಮ್ಮ ವೀರಶೈವ ಧರ್ಮವನ್ನು ಒಪ್ಪಿಕೊಳ್ಳಬೇಕು.
ಅದಕ್ಕೆ ಹೇಳಿದ್ದು ನೀವೇ ಬೇರೆ, ನಾವೇ ಬೇರೆ. ನಮಗೆ ವಚನವೇ ಸಂವಿಧಾನ, ಬಸವಣ್ಣನವರೇ ಸ್ಥಾಪಕರು, ಸಮಸ್ತ ಶರಣರೇ ಮಾರ್ಗದರ್ಶಕರು,
ಇಷ್ಟಲಿಂಗ ಪೂಜಿಸುವ ಲಿಂಗಯತರಾದ ನಾವು ಏಕ ದೇವೋಪಾಸಕರು. ಶಿವ ನಾಮದೇಯವನ್ನು ಹೊರತು ಪಡಿಸಿ ಬೇರೆ ಯಾವುದೇ ಸಾಮ್ಯತೆಗಳು ಈ ಎರಡೂ ಧರ್ಮಗಳಲ್ಲಿಲ್ಲ. ಹೀಗಾಗಿ ನೀವೇ ಬೇರೆ ನಾವೇ ಬೇರೆ.
ವೈದಿಕ ಪಂಡಿತ : ಅಯ್ಯೋ ಬೇರೆ ಹೋದರೆ ಹೋಗಲಿ ಬಿಡಿ ಅಯ್ನೋರೆ. ಎಲ್ಲಿಗೆ ಹೋಗ್ತಾರೆ. ಲಿಂಗಾಯತರ ಮನಸಲ್ಲಿ ಈಗಾಗಲೇ ಎಲ್ಲಾ ದೇವರಗಳನ್ನು ತುಂಬಿದ್ದಾಗಿದೆ.
ಸ್ವರ್ಗ ನರಕ ಪಾಪ ಪುಣ್ಯದ ಭಯ ಹುಟ್ಟಿಸಿಯಾಗಿದೆ. ಲಿಂಗಾಯತ ಅಂತಾ ಹೇಳಿಕೊಳ್ಳುವವರ ಡಿ ಎನ್ ಎ ದಲ್ಲಿಯೇ ನಮ್ಮ ದೈವಾಚರಣೆಗಳನ್ನು ಬಿತ್ತಲಾಗಿದೆ. ಇನ್ನೆಲ್ಲಿ ಹೋಗ್ತಾರೆ. ಮತ್ತೆ ನಮ್ಮ ದಾರಿಗೆ ಬಂದೇ ಬರ್ತಾರೆ. ಸತ್ತ ಮೇಲೆ ಸ್ವರ್ಗಕ್ಕೆ ಹೋಗೋ ಆಸೆ ಯಾರಿಗೆ ಇರೋದಿಲ್ಲ ಹೇಳಿ.
ವೀರಶೈವ : ನೀವು ಹೇಳೋದು ಸರಿ ಪಂಡಿತರೆ. ಆದರೆ ಈ ಲಿಂಗಾಯತರು ಸ್ವತಂತ್ರ ಧರ್ಮ ಅಂತಾ ಬೇರೆ ಹೋದರೆ ನಾವು ವೀರಶೈವರು ಅಲ್ಪಸಂಖ್ಯಾತರಾಗ್ತೇವೆ. ಜನಸಂಖ್ಯೆ ಆಧಾರದಲ್ಲಿ ಹಂಚಲಾಗುವ ಸರಕಾರದ ಮೀಸಲಾತಿಯಲ್ಲಿ ನಮ್ಮ ಪಾಲು ಅತೀ ಕಡಿಮೆಯಾಗುತ್ತದೆ. ರಾಜಕೀಯ ಪ್ರಾಬಲ್ಯಕ್ಕೆ ಚ್ಯುತಿ ಬರುತ್ತದೆ. ವೀರಶೈವ ಲಿಂಗಾಯತರ ಎಲ್ಲಾ ಪಂಗಡಗಳು ಒಂದಾದರೆ ನಮ್ಮದು ಪ್ರಬಲ ಜಾತಿಯಾಗುತ್ತದೆ. ಆಗ ಯಾವುದೇ ಸರಕಾರ ಇದ್ದರೂ ನಾವು ನಿಯಂತ್ರಿಸಬಹುದು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಲಿಂಗಾಯತರ ನಿಯಂತ್ರಣವನ್ನು ನಾವು ಗುರುಮಠದ ವೀರಶೈವರು ನಮ್ಮ ಕೈಯಲ್ಲಿಟ್ಟುಕೊಳ್ಳಬಹುದು. ಇದೆಲ್ಲಾ ಈ ಮೂರ್ಖ ಲಿಂಗಾಯತರಿಗೆ ಅರ್ಥವಾಗುವುದಿಲ್ಲ.
ಮಾತೆತ್ತಿದರೆ ಸ್ವತಂತ್ರ ಧರ್ಮ ಅಂತಾ ಹೇಳ್ತಾವೆ. ಅದಕ್ಕೆಲ್ಲಾ ನಾವು ಅವಕಾಶ ಕೊಡ್ತೀವಾ?
ವೈದಿಕ ಪಂಡಿತ : ಹೌದೌದು, ಹಾಗೆಲ್ಲಾ ಬಿಡೋಕಾಗೋದಿಲ್ಲ. ಜಾತಿಗಳು ಯಾವುದೇ ಇರಲಿ, ಅವೆಲ್ಲಾ ಪುರೋಹಿತಶಾಹಿಗಳ ಕಂಟ್ರೋಲಲ್ಲಿಯೇ ಇರಬೇಕು. ಈಗ ನಮ್ಮನ್ನೇ ನೋಡಿ ಶೂದ್ರರು ದಲಿತರನ್ನ ಹೇಗೆ ದೇವರು ಹಿಂದೂ ಧರ್ಮದ ಹೆಸರಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇವೆ. ಅವರೇನಾದ್ರೂ ನಮ್ಮನ್ನ ಬಿಟ್ಟು ಬೇರೆ ಆಗ್ತಾರೆ ಅಂತಂದ್ರೆ 'ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು' ಅಂತಾ ಹೇಳಿ ಸುಮ್ಮನಾಗಿಸ್ತೀವಿ.
ನಮಗೆ ಅವರ ಶ್ರಮ ಬೇಕು, ಅವರ ಮತ ಬೇಕು. ಆಳುವ ಅಧಿಕಾರ ಬೇಕು. ಆದರೆ ಅವರನ್ನ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಎಲ್ಲಿಡಬೇಕೋ ಅಲ್ಲಿಡಬೇಕು. ಅದೇ ಪುರೋಹಿತರ ತಂತ್ರ, ಬ್ರಾಹ್ಮಣ್ಯದ ಮಹಾಮಂತ್ರ.
ವೀರಶೈವ : ನಿಮ್ಮದೇ ತಂತ್ರ ಮಂತ್ರಗಳು ನಮ್ಮದೂ ಕೂಡಾ ಪಂಡಿತರೇ. ಎಷ್ಟೇ ಆದರೂ ನಮ್ಮದೂ ನಿಮ್ಮ ಹಾಗೆಯೇ ಸನಾತನ ಪರಂಪರೆಯೇ ಅಲ್ವಾ. ಈ ಶೂದ್ರ ದಲಿತರು ಮತಾಂತರಗೊಂಡು ಲಿಂಗಾಯತರಾದ ಇವರನ್ನು ಹತ್ತಿರ ಸೇರಿಸಬಾರದು, ದೂರವೂ ಇಡಬಾರದು. ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಳ್ಳಬೇಕು.
ಇದನ್ನೆಲ್ಲಾ ಗುರುಪೀಠದವರಿಗೆ ಹೇಳಿಕೊಡಬೇಕಾ.
ಲಿಂಗಾಯತ : ಏನದು ಇಬ್ಬರೂ ಗುಸು ಗುಸು ಪಿಸಪಿಸಾ ಅಂತಾ ಮಾತಾಡ್ತೀರಾ? ನಮ್ಮನ್ನ ನಮ್ಮ ಪಾಡಿಗೆ ಬಿಟ್ಟು ಬಿಡಿ ಸಾಕು. ನಮ್ಮ ಧರ್ಮ ನಾವು ನೋಡಿಕೊಳ್ತೇವೆ.
ವೀರಶೈವ : ಗುರುಗಳನ್ನು ಬಿಟ್ಟು ಭಕ್ತರು ಬೇರೆಯಾಗಲು ಸಾಧ್ಯವೇ ಇಲ್ಲ. ಪಂಚಮಹಾಪೀಠಗಳು ಇರೋದೆ ನಿಮ್ಮನ್ನೆಲ್ಲಾ ಕಾಪಾಡೋಕೆ.. ಸುಮ್ನೆ ಹಠ ಮಾಡ್ಬೇಡಿ.
ಲಿಂಗಾಯತ : ನಮಗೆ ನಮ್ಮದೇ ಆದ ಮಠಗಳಿವೆ. ಅವುಗಳಿಗೆ ಸ್ವಾಮಿಗಳೂ ಇದ್ದಾರೆ. ನಿಮ್ಮ ಪಂಚಪೀಠಗಳ ಅಗತ್ಯ ನಮಗಿಲ್ಲ. ನಮ್ಮದು ಸ್ವತಂತ್ರ ಧರ್ಮ. ಬಸವ ಧರ್ಮ.
ವೀರಶೈವ : ( ಗಹಗಹಿಸಿ ನಕ್ಕು) ಈ ನಮ್ಮ ಗುರುಪೀಠ ಹಾಗೂ ನಿಮ್ಮ ವಿರಕ್ತ ಮಠಗಳೆಲ್ಲಾ ಅಂತರಂಗದಲ್ಲಿ ಒಂದೇ. ಎಲ್ಲಾ ಸ್ವಾಮಿಗಳ ವೇಷ ಭೂಷಣ ಬಣ್ಣ ಒಂದೇ. ನಾಮ ವಿಭೂತಿಯಾದಿ ಸಂಕೇತಗಳು ಭಿನ್ನವಾದರೂ ಅದರ ಒಳಾರ್ಥ ಒಂದೇ. ಅದೇ ಪಾದಪೂಜೆ, ಪ್ರವಚನ, ಬಹುದೇವೋಪಾಸನೆ. ನಿಮ್ಮ ಮಠಗಳಲ್ಲೇ ಸಂಸ್ಕೃತ ಪಾಠಶಾಲೆಗಳೇ ಇವೆ. ಇಷ್ಟೆಲ್ಲಾ ಸಾಮ್ಯತೆಗಳಿರುವಾಗ ವೀರಶೈವ ಲಿಂಗಾಯತ ಬೇರೆ ಬೇರೆ ಎಂದರೆ ಒಪ್ಪುವವರು ಯಾರು?
ವೈದಿಕ ಪಂಡಿತ : ಹೌದು. ವೈದಿಕಾಚರಣೆಗಳೇ ವೀರಶೈವಾಚರಣೆಗಳು, ವೀರಶೈವಾಚರಣೆಗಳೇ ಲಿಂಗಾಯತರ ಆಚರಣೆಗಳು. ಇವೆಲ್ಲಾ ಸೇರಿಯೇ ಆಗಿದ್ದು ಹಿಂದೂ ಧರ್ಮ. ಈ ದೇಶದಲ್ಲಿ ಹುಟ್ಟಿದ ಬೌದ್ದ ಜೈನ ಸಿಕ್ಕ ಮಿಕ್ಕೆಲ್ಲ ಧರ್ಮಗಳೂ ಸಹ ಹಿಂದೂ ಧರ್ಮದ ಭಾಗವೇ. ಒಂದು ದೇಶ ಒಂದು ಧರ್ಮ. ಅದೇ ಹಿಂದುತ್ವ ಧರ್ಮ.
ಲಿಂಗಾಯತ : ಪುರೋಹಿತಶಾಹಿ ಹಿಂದುತ್ವ ಧರ್ಮಕ್ಕೆ ದಿಕ್ಕಾರವಿರಲಿ. ತಾರತಮ್ಯ ತುಂಬಿರುವ ನಿಮ್ಮ ಜಾತಿ ಧರ್ಮಗಳಿಗೆ ದಿಕ್ಕಾರವಿರಲಿ. ದಯೆ ಇಲ್ಲದ ಧರ್ಮಗಳಿಗೆಲ್ಲಾ ದಿಕ್ಕಾರವಿರಲಿ. ಅಸಮಾನತೆ ಮೌಢ್ಯತೆ ಶೋಷಣೆಗಳ ವಿರುದ್ಧ ಬಂಡೆದ್ದು ಹುಟ್ಟಿದ ಲಿಂಗಾಯತವೇ ನಿಜವಾದ ಧರ್ಮ. ನಮಗೆ ಯಾರ ಹಂಗೂ ಬೇಕಿಲ್ಲ. ಲಿಂಗಾಯತರಿಗೆ ಪಂಚಪೀಠಗಳ ಅಗತ್ಯವಿಲ್ಲ. ಜಗದ್ಗುರು ಪೀಠಗಳು ಬೇಕಿಲ್ಲ. ನಮ್ಮದು ಸರ್ವತಂತ್ರ ಸ್ವತಂತ್ರ ಧರ್ಮ.
ವೈದಿಕ ಪಂಡಿತ : (ಲಿಂಗಾಯತದ ಒಂದು ಕೈ ಹಿಡಿದುಕೊಂಡು) ಹಿಡ್ಕೊಳ್ಳಿ ಬಿಡಬೇಡಿ. ಹಿಂದೂ ಧರ್ಮದಿಂದ ಸ್ವತಂತ್ರ ಆಗೋದಕ್ಕೆ ಸಾಧ್ಯವೇ ಇಲ್ಲ.
ವೀರಶೈವ : (ಇನ್ನೊಂದು ಕೈ ಹಿಡಿದೆಳೆದು) ವೀರಶೈವ ಲಿಂಗಾಯತ ಒಂದೇ. ಬೇರೆ ಆಗಲು ಸಾಧ್ಯವೂ ಇಲ್ಲಾ. ನಾವು ಬಿಡುವುದೂ ಇಲ್ಲ.
ವೈದಿಕ ಪಂಡಿತ : ( ಇತ್ತ ಎಳೆಯುತ್ತಾ) ನಾವೆಲ್ಲಾ ಒಂದು, ನಾವೆಲ್ಲಾ ಹಿಂದೂ.
ಲಿಂಗಾಯತ : ಬಿಡ್ರೀ ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ. ನಮ್ಮದು ಸ್ವತಂತ್ರ ಧರ್ಮ. ಸಮಾನತೆ ಸಾರುವ ಧರ್ಮ. ಲಿಂಗಾಯತ ಧರ್ಮ.
ವೀರಶೈವ : (ಅತ್ತ ಎಳೆಯುತ್ತಾ) ಇಲ್ಲಾ ನಾವು ಬಿಡೋದಿಲ್ಲ.
ವೈದಿಕ ಪಂಡಿತ : ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು
ಲಿಂಗಾಯತ : ಇಲ್ಲಾ ನಮ್ಮದು ಸ್ವತಂತ್ರ ಧರ್ಮ.
ವೀರಶೈವ : ವೀರಶೈವ ಲಿಂಗಾಯತ ಒಂದೇ.
ಲಿಂಗಾಯತ : ಮೊದಲು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಬಸವಣ್ಣ ಲಿಂಗಾಯತ ಧರ್ಮದ ಗುರು, ನಿಮ್ಮ ಧರ್ಮಗಳ ಗುರು ಯಾರು? ವಚನಗಳೇ ನಮ್ಮ ಧರ್ಮಗ್ರಂಥ, ನಿಮ್ಮ ಧರ್ಮಗ್ರಂಥ ಯಾವುದು? ಲಿಂಗವಂತರಿಗೊಬ್ಬನೇ ದೇವರು, ನಿಮ್ಮ ದೇವರುಗಳೆಷ್ಟು?
ವೀರಶೈವ : ಸಾಕು ನಿಲ್ಲಿಸು ನಿನ್ನ ಅಧಿಕಪ್ರಸಂಗತನ.
ಲಿಂಗಾಯತ : ಇಲ್ಲಾ ನಾನು ಪ್ರಶ್ನಿಸಲೇಬೇಕು.
ಹೇಳಿ ಲಿಂಗಾಯತರದ್ದು ಕಾಯಕಸಿದ್ದಾಂತ, ನಿಮ್ಮದೋ ಕರ್ಮಸಿದ್ದಾಂತ.
ಮೌಡ್ಯಾಚರಣೆಗಳ ದಿಕ್ಕರಿಸಿದ್ದು ಬಸವ ಧರ್ಮ. ನಿಮ್ಮ ಧರ್ಮವೋ ಮೌಢ್ಯಗಳ ಆಗರ. ವರ್ಣಬೇಧ, ಲಿಂಗಬೇಧ ಇಲ್ಲದ್ದು ಶರಣಧರ್ಮ. ನಿಮ್ಮ ಧರ್ಮವೋ ಅಸಮಾನತೆಯ ಸಾಗರ. ಇಷ್ಟೆಲ್ಲಾ ವೈರುದ್ಯಗಳಿದ್ದಾಗ ಅದು ಹೇಗೆ ಲಿಂಗಾಯತ ವೀರಶೈವ ಒಂದೇ ಧರ್ಮ ಹೇಳಿ. ಇಷ್ಟೆಲ್ಲಾ ಭಿನ್ನತೆಗಳಿದ್ದಾಗ ಅದು ಹೇಗೆ ಬಸವಧರ್ಮ ಹಿಂದೂ ಧರ್ಮದ ಭಾಗವಾಗುತ್ತೇ ಉತ್ತರಿಸಿ.
( ಅತ್ತ ವೈದಿಕ, ಇತ್ತ ವೀರಶೈವ ಇಬ್ಬರೂ ಲಿಂಗಾಯತನ ಕೈ ಹಿಡಿದು ಎಳೆದಾಡುತ್ತಾರೆ. ಕೊನೆಗೆ ಲಿಂಗಾಯತನ ಬಾಯಿಗೆ ಬಟ್ಟೆ ತುರುಕಿ ಬಗ್ಗಿಸಿ ನಿಲ್ಲಿಸಿ ವೀರಶೈವ ಬೆನ್ನೇರುತ್ತಾನೆ. )
ವೈದಿಕ ಪಂಡಿತ : ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು..
ವೀರಶೈವ: ವೀರಶೈವ ಲಿಂಗಾಯತ ಎರಡೂ ಒಂದು, ಬೇರೆ ಎನ್ನುವವರ ಬಾಯಿ ಬಂದು.
ಲಿಂಗಾಯತ : (ಇಲ್ಲಾ ಇಲ್ಲಾ ಎನ್ನುವ ಹಾಗೆ ತಲೆ ಅಲ್ಲಾಡಿಸುತ್ತಾನೆ.
ಮತ್ತೆ ಮೂವರ ಸವಾರಿ ಮೊದಲಿನಂತೆ ಮುಂದುವರೆಯುತ್ತದೆ..)
- ಶಶಿಕಾಂತ ಯಡಹಳ್ಳಿ
26-12-2023
Comments
Post a Comment