ಕರಸೇವಕರ ಹೆಸರಲ್ಲಿ (ಪ್ರಹಸನ - 68)

 

ಪ್ರಹಸನ - 68

ಕರಸೇವಕರ ಹೆಸರಲ್ಲಿ

************************

 

ಹೆಂಡತಿ : ರ್ರೀಎಲ್ಲಿಗೆ ಹೋಗ್ತಿದ್ದೀರಿಹೊರಗೆ ಹೋಗಬ್ಯಾಡ್ರಿ..

 

ಗಂಡ : ಹಾಕಿದ್ಯಾ? ನಿನ್ನ ಹೊಲಸ ಬಾಯಿಯಿಂದಾ ಅಡ್ಡ ಮಾತು ಆಡಿದ್ಯಾ. ಹೋದ ಕೆಲಸಾ ಹಾಳಾದಂಗs. ಸುಮ್ಕೆ ಅಡುಗೆ ಮಾಡ್ಕೊಂಡು ಬಿದ್ದಿರೋಕೇನು ದೊಡ್ಡ ರೋಗಾ ನಿಂಗೆ..

 

ಹೆಂಡತಿ : ಅದು ಹಾಂಗಲ್ರೀ. ನಿಮ್ಮ ಮೇಲೆ ಹತ್ತಾರು ಪೊಲೀಸ್ ಕೇಸಗಳಿವೆಯಲ್ಲಾ. ಪೋಲೀಸರ ಕಣ್ಣಿಗೆ ಬಿದ್ರೆ ಅಷ್ಟೇ, ಹಿಡಿದು ಒಳಗಾಗ್ತಾರಲ್ಲಾ ಅಂತಾ ನಂದು ಒಂದು ಇದು.

 

ಗಂಡ : ಅದು ಇಲ್ಲಾ ಇದು ಇಲ್ಲಾ. ಅದೆಂಗೆ ಆರೆಸ್ಟ್ ಮಾಡ್ತಾರೆ. ನನ್ನ ಏನಂತಾ ತಿಳ್ಕೊಂಡಿದ್ದಾರೆ ಅವರು. ಪೋಲೀಸರಿಗೆ ಹಣ್ಣು ಚಳ್ಳೇ ತಿನ್ಸೋದು ಹೇಗೆ ಅಂತಾ ನನಗ್ಗೊತ್ತು, ಮುಚ್ಕೊಂಡಿರು.

 

ಹೆಂಡತಿ : ಅದು ಹಂಗಲ್ರೀ, ನಿಮ್ಮ ಮೇಲೆ ಕಳ್ಳತನ ದರೋಡೆ ಅತ್ಯಾಚಾರದಂತಾ ಕೇಸುಗಳಿವೆಯಲ್ಲಾ, ಅದಕ್ಕೆ ಸಿಕ್ಕಾಕೊಂಡ್ರೆ ಸಿಗಿದಾಕಿಬಿಡ್ತಾರೇನೋ ಅಂತಾ ಅನುಮಾನ.

 

ಗಂಡ : ಸಿಗಿದಾಕೋಕೆ ನಾನೇನು ಬಾಳೆ ದಿಂಡು ಅನ್ಕೊಂಡಿದ್ದೀಯಾ? ಕರಸೇವಕ ಕಣೆಶ್ರೀರಾಮದೇವರ ಭಕ್ತ. ನನಗೆ ಯಾರೂ ಏನೂ ಮಾಡೋಕೆ ಆಗೋದಿಲ್ಲಾ ತಿಳ್ಕೋ.

 

ಹೆಂಡತಿ : ಕರಸೇವೇನಾನೀವ್ಯಾವಾಗ ಕರಸೇವೆ ಶುರುಮಾಡಕೊಂಡ್ರಿ.. ನನಗೆ ಗೊತ್ತೇ ಅಗಿಲ್ವಲ್ಲಾ.

 

ಗಂಡ : ಅದನ್ನೆಲ್ಲಾ ಹೇಳಿ ಕೇಳಿ ಮಾಡ್ತಾರೇನೆ. ಕರಸೇವಕ ಅಂದ್ರೆ ಕರಸೇವಕ ಅಷ್ಟೇ ಸುಮ್ಮನಿರು.

 

ಹೆಂಡತಿ : ಅದೇ ಅದ್ಯಾವಾಗ ಕರಸೇವೆ ಮಾಡಿದ್ರೀ, ಎಲ್ಲಿ ಮಾಡಿದ್ರಿ, ಹೆಂಗ ಮಾಡಿದ್ರಿ. ಒಬ್ಬರೇ ಮಾಡಿದ್ರಾ ಇಲ್ಲಾ ಜೊತೆಗೆ ಯಾರಾದ್ರೂ ಇದ್ರಾ?

 

ಗಂಡ : ನೀನೇನು ಹೆಂಡ್ತೀನಾ ಇಲ್ಲಾ ಕ್ವಶ್ಚನ್ ಪೇಪರಾ? ಬರೀ ಪ್ರಶ್ನೆ ಪ್ರಶ್ನೆ ಪ್ರಶ್ನೆ. ಹೆಂಗೋ ಮಾಡ್ಕೊಂಡೆ ಈಗೇನು?

 

ಹೆಂಡತಿ : ಅದೇ ಹೆಂಗ್ ಯಾವಾಗ ಕರಸೇವೆ ಮಾಡಿಕೊಂಡ್ರಿ. ನನಗೂ ಹೇಳಿದ್ರೆ ನಾನೂ ಬಂದು ನಿಮ್ಮ ಕರಸೇವೆಗೆ ಸಹಾಯ ಮಾಡ್ತಾ ಇರಲಿಲ್ವಾ.

 

ಗಂಡ : ತೋ ಥೋ ಕರಸೇವೆ ಅಂದ್ರೆ ಏನೂ ಅಂತಾ ತಿಳ್ಕೊಂಡಿದ್ದೀಯಾ?

 

ಹೆಂಡತಿ : ಅದೇ ನಾನು ತವರಿಗೆ ಹೋದಾಗ ನೀವು ಕರಸೇವೆ ಮಾಡಿಕೊಂಡು ಆನಂದ ಪಡ್ತೀರಿ ಅಂತಾ ನೀವೇ ಯಾವತ್ತೋ ಹೇಳಿದ್ರಲ್ಲಾ ಅದಕ್ಕೆ ಕೇಳಿದೆ.

 

ಗಂಡ : ಚಿ ಛೀ.. ಅದು ಇದಲ್ಲಾ ಬಾಯಿ ಮುಚ್ಚು. ಕರಸೇವೆ ಅಂದ್ರೆ ಪವಿತ್ರಕಾರ್ಯ. ಅದು ದೇವರಿಗಾಗಿ ಮಾಡೋದು.

 

ಹೆಂಡತಿ : ನಿಮ್ಮ ಖುಷಿಗೆ ನೀವು ಮಾಡ್ಕೊಳ್ಳೋ ಕರಸೇವೆಗೆ ಯಾಕ್ರೀ ದೇವರ ಹೆಸರು ಬಳಿಸ್ತೀರಿ. ಶಾಂತಂ ಪಾಪಂ.

 

ಗಂಡ : ತೊ ಥೋ. ಲೇ ಲೇ ಕಮಂಗಿ. ಕರಸೇವೆ ಅಂದ್ರೆ ಶ್ರೀರಾಮ ದೇವರಿಗಾಗಿ ಮಾಡೋ ಸೇವೆ ಕಣೆ.

 

ಹೆಂಡತಿ : ರಾಮ ರಾಮಾ, ನೀವು ಮಾಡೋದನ್ನ ದೇವರು ಮೆಚ್ಚತಾನೇನ್ರಿ

 

ಗಂಡ : ಏನು ಮಾಡೋದನ್ನ?

 

ಹೆಂಡತಿ : ಅದೇ ಕರಸೇವೆ ಮಾಡೋದನ್ನ

 

ಗಂಡ : (ಕಂಬಕ್ಕೆ ತಲೆ ಚಚ್ಚಿಕೊಂಡು) ಹೆಂಗಪ್ಪಾ ಹೇಳೋದು ಇವಳಿಗೆ. ನೋಡೇ ಶ್ರೀರಾಮಚಂದ್ರ ದೇವರಿಗೆ ಗುಡಿ ಕಟ್ಟೋದಕ್ಕೆ ನಮ್ಮ ಕೈಲಾದ ಸಹಾಯ ಮಾಡೋದಕ್ಕೆ ಕರಸೇವೆ ಅಂತಾರೆ.. ತಿಳೀತಾ.

 

ಹೆಂಡತಿ : ಹೌದಾ.. ಹಂಗಾದ್ರೆ ರಾಮದೇವರಿಗೆ ಇಷ್ಟು ದಿನಾ ಗುಡಿ ಇರಲೇ ಇಲ್ವಾ. ಯಾಕೆ ಮತ್ತೆ ವನವಾಸಕ್ಕೆ ಹೋಗಿ ಕಾಡು ಸೇರಿಕೊಂಡ್ರಾ.

 

ಗಂಡ : ( ಸಹನೆ ಕಳೆದುಕೊಂಡು) ಇದ್ದಾವೆ.. ಊರಿಗೆ ಎರಡೋ ಮೂರೋ ಗುಡಿ ಇರ್ತಾವೆ. ರಾಮದೇವರದ್ದು ಅಷ್ಟೇ ಯಾಕೆ ಸೀತಮಾತೆದು, ಹಣಮಂತಂದು ಹೀಗೆ ಬೇಕಾದಷ್ಟು ಗುಡಿ ಇದ್ದೇ ಇರ್ತಾವೆ.. ಆಯ್ತಾ..

 

ಹೆಂಡತಿ : ದೇಶದ ತುಂಬಾ ರಾಮದೇವರ ಗುಡಿ ಇವೆ ಅಂದಮ್ಯಾಗೆ ಮತ್ತೊಂದು ಗುಡಿ ಯಾಕ ಬೇಕು? ಬೇಕೇ ಬೇಕಪ್ಪಾ ಅಂದ್ರೆ ಸೀತಮ್ಮನ ಗುಡಿಯೊಳಗೆ ಹೋಗಿ ರಾಮದೇವರು ಸಂಸಾರ ಮಾಡಿಕೊಂಡು ಇದ್ರಾತಪ್ಪಾ. ಇಲ್ಲಾ ಹಣಮಪ್ಪನ ಹೊರಗಾಕಿ ಹನುಮನ ಗುಡಿಯೊಳಗ ಹೋಗಿದ್ರೂ ಯಾರೂ ಕೇಳವ್ರಿಲ್ಲಾ ಅಲ್ವೇನ್ರೀ. ಆಂಜನೇಯನಿಗೇನು ಹೆಂಡ್ರಾ ಮಕ್ಳಾ..

 

ಗಂಡ : ಹೆಂಗಪ್ಪಾ ಇವ್ಳಿಗೆ ತಿಳಿಸಿ ಹೇಳೋದು. ನೋಡೆ ಅಲ್ಲಿ, ನಮ್ಮ ರಾಮಚಂದ್ರ ದೇವರು ಹುಟ್ಟಿದ್ರಲ್ಲಾ ಅಯೋದ್ಯೆ, ಅಲ್ಲಿ ದೊಡ್ಡ ದೇವಸ್ಥಾನ ಕಟ್ಟಬೇಕಿದೆ

 

ಹೆಂಡತಿ : ಅಲ್ಲೇ ಯಾಕೆ? ಇಲ್ಲೇ ನಮ್ಮೂರಾಗ ಕಟ್ಟಿದ್ರೆ ದೇವರು ಬೇಡಾ ಅನ್ನುತ್ತಾ..

 

ಗಂಡ : ಲೇ ಪೆದ್ದಿ.. ಅಯೋಧ್ಯೆಯೊಳಗ ಸಾಬರು ಬಾಬರಿ ಮಸೀದಿ ಅಂತಾ ಮಾಡ್ಕೊಂಡಿದ್ರು. ಅದನ್ನ ಒಡದಾಕಿ ಅಲ್ಲೇ ರಾಮಮಂದಿರ ಕಟ್ಟಬೇಕು ಅಂತಾ ದೇವರ ಸಂಕಲ್ಪ ಆಗಿತ್ತು. ಅದಕ್ಕೆ..

 

ಹೆಂಡತಿ : ಇದು, ಇಲ್ಲಿದೆ ನೋಡ್ರೀ ಅಸಲಿ ವಿಷ್ಯಾ? ಏನೋ ಒಂದು ಕೆಡುವೋದು ಇನ್ನೊಂದು ಕಟ್ಟೋದು, ಹಿಂಗಾದ್ರ ಹೆಂಗ ಅಂತೀನಿ. ದೇವರು ಎಲ್ಲಾ ಕಡೆ ಇರ್ತಾನಾ ಅಂತಾ ಮಠದ ಸ್ವಾಮಿಗೋಳು ಪ್ರವಚನಾ ಕೊಟ್ರಲ್ವಾ. ಮತ್ಯಾಕೆ ಅಲ್ಲೇ ಆಗ್ಬೇಕು ಅನ್ನೋದು.

 

ಗಂಡ : ನೋಡೇ ನಿನ್ನ ಪ್ರಶ್ನೆಗೆ ನನ್ನತ್ರ ಉತ್ತರಾ ಇಲ್ಲಾ. ಬೇರೆ ಏನಾದ್ರೂ ಹೇಳು.

 

ಹೆಂಡತಿ : ಮಾಡಬಾರದ ಮನೆಹಾಳ ಕೆಲಸಾನೆಲ್ಲಾ ಮಾಡಿದ್ದೀರಲ್ಲಾ, ಪೊಲೀಸರು ಹಿಡಕೊಂಡು ಹೋದ್ರೆ ಏನ್ಮಾಡ್ತೀರಿ?

 

ಗಂಡ : ಅದ್ಯಾವ ಮಿಂಡ್ರಿಗಳಿಗೆ ಕರಸೇವಕನ ಮೈ ಮುಟ್ಟೋ ಧೈರ್ಯ ಐತೆ ಹೇಳು

 

ಹೆಂಡತಿ : ಅದೇನು ಕರಸೇವೆ ಮಾಡಿದ್ದಿಯೋ ನನ್ನ ಧೀರಾ, ಅದನ್ನಾದ್ರೂ ಹೇಳು.

 

ಗಂಡ : ರಾಮದೇವರ ಗುಡಿಗೆ ಪವಿತ್ರ ಇಟ್ಟಿಗೆ ಕಲೆಕ್ಟ್ ಮಾಡಿ ಅಯೋದ್ಯೆಗೆ ಕಳಿಸಿದ್ದೆ ಗೊತ್ತಾ

 

ಹೆಂಡತಿ : ಹೌದಾ.. ಇಟ್ಟಿಗೆ ಅಂದ್ರೆ ಇಟ್ಟಿಗೆ ಅಷ್ಟೇ ಅಲ್ವೇನ್ರೀ. ಅದರಲ್ಲಿ ಪವಿತ್ರಾ ಅಪವಿತ್ರಾ ಅಂತಾ ಇರ್ತದಾ.. ಅಂತಾ ಬ್ರ್ಯಾಂಡ್ ಇಟ್ಟಿಗೆ ಮಾಡಿದ್ದಾರಾ?

 

ಗಂಡ : ಲೇ ಮಂಕದಿನ್ನೆ. ರಾಮದೇವರ ಗುಡಿಗೆ ಬಳಸುವ ಇಟ್ಟಿಗೆಗೆ ಪೂಜೆ ಮಾಡಿ ಕಳಿಸಿದ್ರೆ ಅದು ಪವಿತ್ರ ಇಟ್ಟಿಗೆ ಆಗ್ತದೆ ಅರ್ಥ ಆಯ್ತಾ

 

ಹೆಂಡತಿ : ನಾವೂ ಮನೆ ಕಟ್ಟೋವಾಗ ಭೂಮಿ ಪೂಜೆ, ಗುದ್ದಲಿ ಪೂಜೆ, ಇಟ್ಟಿಗೆ ಪೂಜೆ ಮಾಡೀನೇ ಮನೆ ಕಟ್ಟಿಲ್ವೇನ್ರಿ. ಅವು ಕೂಡಾ ಪವಿತ್ರ ಇಟ್ಟಿಗೆ ಅಲ್ವೇನ್ರೀ.

 

ಗಂಡ : ನಮ್ದು ಮನೆ ಕಣೆ, ಅದು ಮಂದಿರ. ರಾಮದೇವರ ಮಂದಿರಕ್ಕೆ ಇದೇ ಕೈಯಿಂದಾ ಇಟ್ಟಿಗೆ ಪೂಜೆ ಮಾಡಿ ಲಾರೀಲಿ ತುಂಬಿ ಅಯೋದ್ಯೆಗೆ ಕಳಿಸಿಕೊಟ್ಟಿರುವುದರಿಂದಾ ನಾನು ಒಬ್ಬ ಕರಸೇವಕ..

 

ಹೆಂಡತಿ : ಹೌದೇನ್ರೀ. ಹಂಗಾದ್ರೆ ನೀವು ಎಷ್ಟು ಕಳ್ಳತನ ಮಾಡಿದ್ರಿ. ಧರ್ಮದ ಹೆಸರಲ್ಲಿ ಎಷ್ಟು ಸಲ ಗಲಭೆಮಾಡ್ಸಿ ಬೆಂಕಿ ಹಾಕ್ಸಿದ್ರಿ. ರೇಪ್ ಕೇಸ್ ಕೂಡಾ ನಿಮ್ಮೇಲೆ ಇವೆ ಅಲ್ವರ್ರಾ. ಆದ್ರೂ ನಿಮ್ಮನ್ನ ಪೊಲೀಸರೂ ಏನೂ ಮಾಡೋದಿಲ್ಲಾ ಅಂತೀರಾ.

 

ಗಂಡ : ಒಮ್ಮೆ ಕರಸೇವಕ ಆದ್ರೆ ಮುಗೀತು, ಮುಂದೆ ಏನೇ ಮಾಡಿದ್ರೂ ಬಾರಾ ಪಾಪ್ ಮಾಪ್. ಯಾರೂ ಏನೂ ಮಾಡೋಕಾಗೋದಿಲ್ಲ. ಟಿವಿ ನೋಡಿದ್ಯಾ. ಕರಸೇವಕನನ್ನ ಆರೆಸ್ಟ್ ಮಾಡಿದ್ದಕ್ಕೆ ಹೆಂಗೆ ನಮ್ಮ ಸಂಘಿಗಳು, ಪಕ್ಷದವರು ಬೀದಿ ಗಿಳಿದು ಹೋರಾಟ ಮಾಡ್ತಿದ್ದಾರೆ ಅಂತಾ.

 

ಹೆಂಡತಿ : ರ್ರೀ ಅವನ ಮೇಲೂ ಮೂವತ್ತು ಕೇಸ್ ಇದಾವಂತಲ್ರೀ

 

ಗಂಡ : ಇರ್ತಾವೆ ಕಣೆ. ಮೂವತ್ತೇನು  ಮುನ್ನೂರು ಕೇಸ್ ಬೇಕಾದ್ರೂ ಇರ್ತಾವೆ? ಆದ್ರೆ ಕರಸೇವಕ ಅನ್ನೋ ಗುರಾಣಿ ಇದೆ ಅಲ್ಲಾ ಅದು ಕಾಪಾಡ್ತದೆ. ನಮ್ಮ ನಾಯಕರು ಸರಕಾರಕ್ಕೆ 48 ಗಂಟೆ ಟೈಂ ಕೊಟ್ಟಿದ್ದಾರೆ. ಅಷ್ಟರಲ್ಲಿ ಬಿಡುಗಡೆ ಮಾಡಲಿಲ್ಲಾಂದ್ರೆ ಬೆಂಕಿ ಕಣೆ.. ನಾಡಿಗೆ ಬೆಂಕಿ ಹಚ್ತಾರೆ ನೋಡ್ತಾ ಇರು.‌ 

 

ಹೆಂಡತಿ : ಹಂಗಾರೆ ಕರಸೇವಕರು ಅಂದ್ರೆ ಕಾನೂನಿಗೂ ಮೀರಿದವರು ಅಂತಾನಾ? ಪೊಲೀಸರೂ ಅವರಿಗೆ ಹೆದರಬೇಕಾ? ಕೋರ್ಟು ಕಾಯಿದೆ ಅವರಿಗೆ ಅನ್ವಯವಾಗೋದಿಲ್ವಾ?

 

ಗಂಡ : ಹೌದು ಕಣೆ. ಕರಸೇವಕರು ಅಂದ್ರೆ ರಾಮನ ಭಕ್ತರು. ಹನುಮನ ಸೇವಕರು, ದೇವಾಂಶ ಸಂಭೂತರು. ಅಂತವರಿಗೆ ಮನುಷ್ಯರು ಮಾಡಿದ  ಕಾನೂನು ಕಟ್ಟಲೆಗಳು ಅನ್ವಯಸೋದಿಲ್ಲಾ. ಬಲವಂತವಾಗಿ ಹೇರಿದ್ರೆ ರಾಮಭಕ್ತರು ಸುಮ್ಮನಿರೋದಿಲ್ಲ

 

ಹೆಂಡತಿ : ಮತ್ತೆ ಈಗ ಹುಬ್ಬಳ್ಳಿಯಲ್ಲಿ ನಿಮ್ಮ ಕರಸೇವಕರ ಬಂಧನ ಆಗಿದೆಯಲ್ಲಾ, ಅದಕೇನಂತೀರಿ?

 

ಗಂಡ : ಅದೆಲ್ಲಾ ಆಳುವ ಪಕ್ಷದ ಸೇಡಿನ ಕ್ರಮ ಅಂತಾ ಹೇಳಿ ನಮ್ಮ ನಾಯಕರು ಬೀದಿಗಿಳಿದಿದ್ದಾರೆ. ಕರಸೇವಕರ ಮೈಮುಟ್ಟಿದರೆ ಕೈಕತ್ತರಿಸುತ್ತೇವೆ ಅಂತಾ ಇಷ್ಟರಲ್ಲೇ ಬಜರಂಗಿ ಬಾಯಿಜಾನ್ಗಳು ಹೆದರಿಸ್ತಾರೆ. ಸರಕಾರ ಹಿಂದೂಗಳ ವಿರೋಧಿ, ಶ್ರೀರಾಮನ ವಿರೋಧಿ ಅಂತಾ ಮೂರು ದಾರಿ ಸೇರುವಲ್ಲಿ ನಿಂತು ಬಾಯಿ ಬಡ್ಕೋತಾರೆ. ಕೇಸರಿ ಕಲಿಗಳು ಧರಣಿ ಕೂಡ್ತಾರೆ, ರಾಜ್ಯವನ್ನೇ ಬಂದ್ ಮಾಡ್ತಾರೆ, ಅದಕ್ಕೂ ಸರಕಾರ ಮಣಿಲಿಲ್ಲಾಂದ್ರೆ ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ತಾರೆ. ಅಷ್ಟೇ.. ದೇಶದಲ್ಲಿ ಶಾಂತಿ ಭಂಗವಾಗಿ, ನಾಡಿನಲಿ ನೆಮ್ಮದಿ ಹೋದಂಗs.. ಸರಕಾರವೇ ಹೆದರಿ, ಗಡಗಡ ನಡುಗಿ, ರಾಮಭಕ್ತರ ಸಹವಾಸವೇ ಬೇಡಾ ಅಂತಾ ಸುಮ್ಮನಾಗ್ತದೆ. ಹಿಡದವ್ರನ್ನ ಬಿಡುಗಡೆ ಮಾಡ್ತದೆ..

 

ಹೆಂಡತಿ : ಹಂಗಾದ್ರೆ ಕರಸೇವಕರ ಹೆಸರಲ್ಲಿ ಮಾಡಿದ ಅಪರಾಧಗಳ ಗತಿ ಗೋವಿಂದ ಅಂತಾನಾ

 

ಗಂಡ : ಏನಾದ್ರೂ ಅನ್ಕೋ. ಸರಕಾರ ಯಾವುದೇ ಇರಲಿ. ಹಿಂದೂಗಳ ವಿರುದ್ದ ಕೆಮ್ಮೋ ಹಾಗಿಲ್ಲ. ಕೆಮ್ಮಿದ್ರೆ ಕೇಸರಿ ಹುಲಿಗಳು ಸುಮ್ಮನಿರೋದಿಲ್ಲ.

 

ಹೆಂಡತಿ : ಸರಕಾರ ನಡೆಸೋರು ಹಿಂದೂಗಳೇ ಅಲ್ವೇನ್ರಿ.

 

ಗಂಡ : ಇಲ್ಲಾ.. ಅವರೆಲ್ಲಾ ಹಿಂದೂ ವಿರೋಧಿಗಳು. ಮುಸ್ಲಿಂ ಪರವಾಗಿರೋರು. ದೇಶದ್ರೋಹಿಗಳು

 

ಹೆಂಡತಿ : ಮತ್ತೆ ನೀವು ನಿಮ್ಮಂತೋರು ದೇಶಭಕ್ತರಾ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮಾಡಬಾರದ್ದನ್ನು ಮಾಡುವವರು ರಾಮಭಕ್ತರಾ?

 

ಗಂಡ : ಹೌದು ಕಣೆ. ಅದು ಇರೋದೇ ಹಂಗೆ. ಹೆಚ್ಚಿಗೆ ಮಾತಾಡ್ಬೇಡಾ. ಜಾಸ್ತಿ ಮಾತಾಡಿದ್ರೆ ಶ್ರೀರಾಮ ದೇವರು ಹೆಂಡಿತೀನ ಕಾಡಿಗೆ ಬಿಟ್ಟಂಗೆ ನಿನ್ನನ್ನೂ ಕಾಡಿಗೆ ಅಟ್ಟಬಿಡ್ತೀನಿ. ನಮ್ಮ ವಿಶ್ವಗುರುಗಳು ಹೆಂಡ್ತಿ ಬಿಟ್ಟಾಕಿದಂಗೆ ನಿನ್ನನ್ನು ಬಿಟ್ಟಾಕಿ ದೇಶಸೇವೆ ಮಾಡೋಕೆ ಹೋಗ್ತೀನಿ.

 

( ಅಷ್ಟರಲ್ಲಿ ಬಾಗಿಲು ಬಡೆದ ಸದ್ದಾಗುತ್ತದೆ.)

ಪೊಲೀಸ್ : ಯಾರ್ರೀ ಇದ್ದೀರಿ ಒಳಗೆ. ನಾವು ಪೊಲೀಸರು. ತೆಗೀರಿ ಬಾಗಿಲು

 

ಗಂಡ : (ಮೆಲ್ಲಗೆ) ಅಯ್ಯೋ ಮನೆಹಾಳ ಪೋಲೀಸರು ಮನೆಗೆ ಬಂದಿದ್ದಾರಲ್ಲೇ. ಸಿಕ್ಕಾಕಿಕೊಂಡ್ರೆ ಜೈಲೂಟಾ ಗ್ಯಾರಂಟಿ. ಮನೇಲಿ ಗಂಡಸರು ಯಾರೂ ಇಲ್ಲಾಂತ ಹೇಳಿ ಕಳಿಸೆ.

 

ಹೆಂಡತಿ : ಮತ್ತೆ ಕರಸೇವಕರನ್ನ ಯಾವ ಪೊಲೀಸು ಮುಟ್ಟೋದಿಲ್ಲಾ ಅಂತಾ ಪುಂಗತಿದ್ರೀ. ಯಾವ ಕಾನೂನೂ ಏನೂ ಮಾಡೋದಿಲ್ಲಾ ಅಂತಿದ್ರೀ. ಈಗೇನಾಯ್ತು. ಹೋಗಿ ನೀವೇ ಬಾಗಿಲು ತೆಗೀರಿ.

 

ಗಂಡ : ಅಯ್ಯೋ ನಿನ್ನ ದಮ್ಮಯ್ಯಾ ಅಂತೀನಿ.. ನಾನು ದೇಶಾಂತರ ಹೋಗಿದ್ದೀನಿ ಅಂತಾ ಹೇಳಿ ಕಳ್ಸೆ.

 

ಹೆಂಡತಿ : ಹಂಗಾದ್ರೆ ಇಷ್ಟೊತ್ತು ನೀವು ಪುಂಗಿದ್ದೆಲ್ಲಾ ಸುಳ್ಳು ಅಂದಂಗಾತು ಅಲ್ವೇನ್ರೀ.

 

ಗಂಡ : ಅದೆಲ್ಲಾ ಆಮೇಲೆ ನೋಡ್ಕೊಂಡ್ರಾಯ್ತು. ಮೊದಲು ಶನಿಗಳನ್ನಾ ಇಲ್ಲಿಂದಾ ತೊಲಗಿಸೇ. ನಿನ್ನ ಕೈ ಮುಗೀತೀನಿ.

 

ಹೆಂಡತಿ : ಮತ್ತೆ ಕರಸೇವಕರು..

 

ಗಂಡ : ನೋಡೇ ಕರಸೇವಕರು ಅಂತಾ ಪೊಲೀಸರಿಗೆ ಗೊತ್ತಾದ್ರೂ ಅವರ ಲಾಠಿಗೆ ಗೊತ್ತಾಗಾಕಿಲ್ವೇ. ಚರ್ಮಾ ಸುಲೀತಾವೆ. ನಮ್ಮವರು ಬಂದು ಗಲಾಟೆ ಮಾಡೊದ್ರೊಳಗೆ ನನ್ನ ಮೂಳೆ ಮುರಿದಾಕಿರ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಆದ್ರೆ ನೀನು ವಿಧವೆ ಆಗೋದಂತೂ ಗ್ಯಾರಂಟಿ.. ನಿನ್ನ ಮಾಂಗಲ್ಯ ಭಾಗ್ಯ ಕಾಪಾಡ್ಕೋ..

 

ಹೆಂಡತಿ : ಆಯ್ತು ಇರಿ ಬರ್ತೀನಿ. ( ಬಾಗಿಲು ತೆಗೆದು) ಬನ್ರೀ ಪೋಲೀಸ್ನೋರೇ. ನೀವು ಹುಡುಕ್ತಾ ಇದ್ದ ಹುಲಿ ಅಲ್ಲಿ ಸಂದೂಕದ ಹಿಂದೆ ಇಲಿ ತರ ಬಿಲ ಸೇರ್ಕೊಂಡಿದೆ. ಹೋಗಿ ಹಿಡ್ಕೊಂಡು ಹೋಗಿ. ಇದು ಮಾಡಿದ ಅಪರಾಧ ಒಂದಾ ಎರಡಾ.. ಇಂತವರು ಸಮಾಜಕ್ಕೆ ಮುಳ್ಳಿದ್ದಂತೆ. ಮೊದಲು ಎಳ್ಕೊಂಡು ಹೋಗ್ರಿ..

 

ಪೊಲೀಸ್ : ಎಷ್ಟು ದಿನದಿಂದಾ ನಿನ್ನ ಹುಡುಕ್ತಾ ಇದ್ವಿ. ಇಲ್ಲಿ ಅಡಗಿ ಕುಳಿತಿದ್ದೀಯಾ. ಏಳಲೇ ಏಳು.. 

 

ಗಂಡ : (ಸಿಟ್ಟಿನಿಂದಾ) ನನ್ನಂತಾ ಕರಸೇವಕನನ್ನ ಆರೆಸ್ಟ್ ಮಾಡೋ ದೈರ್ಯಾನಾ ನಿಮಗೆ. ಪೊಲೀಸರಿಗೆ ಧಿಕ್ಕಾರ. ಹಿಂದೂ ವಿರೋಧಿ ಸರಕಾರಕ್ಕೆ ಧಿಕ್ಕಾರ. ಧರ್ಮದ್ರೋಹಿ ಮುಖ್ಯಮಂತ್ರಿಗೆ ಧಿಕ್ಕಾರ

 

ಪೊಲೀಸ್ : (ಲಾಟಿಯಿಂದ ನಾಲ್ಕು ಬಾರಿಸಿ. ಕತ್ತಿನ ಪಟ್ಟಿ ಹಿಡಿದು) ಹಲ್ಕಾ ನನ್ನ ಮಗನೇ ಕರಸೇವಕ ಅಂತಾ ಹೇಳ್ಕೊಂಡು ಮಾಡಬಾರದ್ದನ್ನೆಲ್ಲಾ ಮಾಡಿದ್ರೆ ಕಾನೂನು ಸುಮ್ಕೆ ಇರುತ್ತೇನಲೇ. ನಡೀ ಸ್ಟೇಶನ್ನಿಗೆ ನಿನ್ನ ಕೊಬ್ಬು ಕರಗಿಸ್ತೇವೆ. ಬುಡಕ್ಕೆ ಕಾರಾ ಹಾಕಿ ರುಬ್ತೇವೆ.

 

ಗಂಡ : ಅಯ್ಯೋ ಅಯ್ಯಯ್ಯೋ ಬಿಡ್ರೀ.. ನಮ್ಮ ಜನ ಬರ್ತಾರೆ. ನಿಮ್ಮನ್ನೆಲ್ಲಾ ನೋಡ್ಕೋತಾರೆ. ಏನೇ ಮಿಟಕಲಾಡಿ. ನನ್ನ.. ನಿನ್ನ ಗಂಡನ್ನ ಪೊಲೀಸರಿಗೆ ಹಿಡಿದು ಕೊಡ್ತೀ ಏನಲೇ. ಶ್ರೀರಾಮ ದೇವರಂತೆ, ವಿಶ್ವಗುರುಗಳು ಮಾಡಿದಂತೆ ನಾನು ನಿನ್ನ ಇವತ್ತಿಂದಾ ಬಿಟ್ಟು ಬಿಡ್ತೇನೆ. ರಾಮನ ಆದರ್ಶ ಪಾಲಿಸ್ತೇನೆ. ವಿಶ್ವಗುರುವಿನ ಮಾದರಿ ಅನುಸರಿಸುತ್ತೇನೆ. ಜೈಶ್ರೀರಾಮ್.

 

ಪೊಲೀಸ್ : ಜೈಲಲ್ಲಿ ಕೂತು ಭಜನೆ ಮಾಡುವಂತೆ ನಡಿಯಲೇ..( ಎಂದು ಮತ್ತೆ ಲಾಠಿಯಿಂದಾ ಹೊಡೆದು ಎಳೆದೊಯ್ಯುತ್ತಾರೆ)

 

ಹೆಂಡತಿ : ಮಾಡಬಾರದ್ದನ್ನ ಮಾಡಿದ್ರೆ ಹಿಂಗೆ ಆಗಬಾರದ್ದೇ ಆಗೋದು‌. ಹೆಣ್ಮಕ್ಕಳು ಅಂದ್ರೆ ನಿಮಗೆ ಸದರ ಆಗೇತಲ್ಲಾ. ನಾರಿ ಮುನಿದರೆ ಮಾರಿ ಅನ್ನೋದನ್ನ ತೋರಿಸ್ತೀವಿ. ಹಿಡ್ಕೊಂಡು ಹೋಗ್ರಿ ಸಾಹೇಬ್ರೇ.. ಅವ್ನು ಕರಸೇವಕನ ಹೆಸರಲ್ಲಿ ಏನೇನು ಅನ್ಯಾಯಾ ಮಾಡಿದ್ದಾನೆ ಅಂತಾ ನಾನೇ ಸಾಕ್ಷಿ ಸಮೇತ ಬಂದು ಹೇಳ್ತೇನೆ.

 

(ಹಿನ್ನೆಲೆಯಲ್ಲಿ ಘೋಷಣೆಗಳು)

ಕರಸೇವಕರ ಬಂಧನಕ್ಕೆ ಹೇಳಿ ಧಿಕ್ಕಾರ

ಧಿಕ್ಕಾರಾ ಧಿಕ್ಕಾರಾ.

 

ಹಿಂದೂ ವಿರೋಧಿ ಸರಕಾರಕ್ಕೆ ಹೇಳಿ ಧಿಕ್ಕಾರಾ..

ಧಿಕ್ಕಾರಾ ಧಿಕ್ಕಾರಾ.

 

ಧರ್ಮದ್ರೋಹಿ ಮುಖ್ಯಮಂತ್ರಿಗೆ ಹೇಳಿ ಧಿಕ್ಕಾರಾ..

ಧಿಕ್ಕಾರಾ ಧಿಕ್ಕಾರಾ.

 

ಶ್ರೀರಾಮನ ವಿರೋಧಿಗಳಿಗೆ ಹೇಳಿ ಧಿಕ್ಕಾರ

ಧಿಕ್ಕಾರಾ ಧಿಕ್ಕಾರಾ.

 

- ಶಶಿಕಾಂತ ಯಡಹಳ್ಳಿ

     03-01-2024

 

(ಹುಬ್ಬಳ್ಳಿ ಪೊಲೀಸರು ಮುಸ್ಲಿಮರೂ ಸೇರಿದಂತೆ 36 ಜನ ಕ್ರಿಮಿನಲ್ಸಗಳ ಪಟ್ಟಿ ಸಿದ್ದಪಡಿಸಿ ಹೈಕೋರ್ಟ್ ಆದೇಶದ ಮೇರೆಗೆ ಬಂಧಿಸಲು .02 ನೇ ತಾರೀಕಿನಂದು ಕ್ರಮ ತೆಗೆದುಕೊಂಡಿದ್ದಾರೆ. ಅದರಲ್ಲಿ  32 ನೇಯವ ಶ್ರೀಕಾಂತ ಪೂಜಾರಿ. ಈತನ ಮೇಲೆ ದೊಂಬಿ, ಜೂಜು, ವೈಶ್ಯಾವಾಟಕೆ, ಅಕ್ರಮ ಸರಾಯಿ ಪ್ರಕರಣಗಳಿವೆ. ಈತ ಕರಸೇವಕ ರಾಮಭಕ್ತ ಎಂದು ಹೇಳುವ ಬಿಜೆಪಿ ರಾಜ್ಯಾದ್ಯಂತ ಹೋರಾಟ ಶುರು ಮಾಡಿದೆ. ಸಂದರ್ಭವನ್ನು ಆಧರಿಸಿ ಪ್ರಹಸನ ರಚಿಸಲಾಗಿದೆ)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ