ಶ್ರೀಗಳ ಪಾದಯಾತ್ರೆ ಪ್ರಸಂಗ ( ಪ್ರಹಸನ - 69)
ಶ್ರೀಗಳ ಪಾದಯಾತ್ರೆ ಪ್ರಸಂಗ
(ಶ್ರೀಮಠದ ಮಹಾಸ್ವಾಮಿಗಳ ಪಾದಯಾತ್ರೆ ದಲಿತರ ಕೇರಿಯತ್ತ. ಹಿನ್ನೆಲೆಯಲ್ಲಿ ಹಾಡು)
ಬಂದರೋ ಬಂದರೋ ಸ್ವಾಮಿಗೋಳು
ಶ್ರೀಮಠದ ಮಹಾ ಸ್ವಾಮಿಗೋಳು.
ಹೊಲೆಮಾದಿಗರ ಊರಿಗೆ, ದಲಿತರ ಕೇರಿಗೆ
ಕೇಳಲೆಂದು ದೀನದಲಿತರ ಗೋಳು
ಮಠದ ವಟು : ಭಕ್ರಾದಿಗಳೇ, ನಿಮ್ಮೆಲ್ಲರ ಪೂರ್ವಜನ್ಮದ ಪುಣ್ಯ. ಶ್ರೀಮಠದ ಪಾದಗಳು ನಿಮ್ಮ ಕೇರಿಗೆ ದಯಮಾಡಿಸಿವೆ. ದರ್ಶನ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಿ.
ವ್ಯಕ್ತಿ 1 : ಅಲ್ಲಾ ಸ್ವಾಮಿ, ಪೂರ್ವಜನ್ಮದಲ್ಲಿ ಪುಣ್ಯಾ ಮಾಡಿದ್ರೆ ನಾವ್ಯಾಕೆ ಈ ಕೇರೀಲಿ ಕ್ರಿಮಿಗಳ ಹಾಗೆ ಒದ್ದಾಡ್ತಾ ಇದ್ವಿ.
ಕುಡುಕ : ಹೋ ಹೋ ಹೋಲ್ಡಾನ್. ಅವರು ಹೇಳಿದ್ದು ಕರೆಕ್ಟ್. ಹಿಂದಿನ ಜನುಮದಾಗ ಪುಣ್ಯ ಮಾಡಿದ್ರೆ ಈ ಜನುಮದಾಗ ನಾನೂ ಯಾವುದಾದರೂ ಮಠದ ಸ್ವಾಮಿಯಾಗಿ ಹಾಲು ತುಪ್ಪ ತಿನ್ಕೊಂಡ್ ಇರ್ತಿದ್ದೆನಲ್ವಾ.
ಮಠದ ವಟು : ಹಾಗೆಲ್ಲಾ ಅಪದ್ದ ಮಾತಾಡಬಾರದು. ಏನೋ ಸ್ವಾಮೀಜಿಗಳು ನಿಮ್ಮ ಮೇಲೆ ಕರುಣೆ ತೋರಿ ತಮ್ಮ ಪಾದಗಳನ್ನ ಇಲ್ಲಿವರೆಗೂ ಬೆಳೆಸಿದ್ದಾರೆ.
ಪಾರಮ್ಮ : ( ಸ್ವಾಮಿಗಳ ಕಾಲಿಗೆ ಅಡ್ಡ ಬೀಳುತ್ತಾ) ನಮ್ಮ ಕರ್ಮ ಕಳೀಲಿ ಅಂತಾ ಆಶೀರ್ವಾದ ಮಾಡಿ ಬುದ್ದಿ.
ಶ್ರೀಗಳು : (ಪಾದಗಳನ್ನು ಒಂದು ಹೆಜ್ಜೆ ಹಿಂದಕ್ಕೆ ಎಳೆದುಕೊಂಡು) ಒಳ್ಳೇದಾಗಲಿ. ಮುಂದಿನ ಜನ್ಮದಲ್ಲಿ ಮೇಲ್ವರ್ಗದಲ್ಲಿ ಹುಟ್ಟಿ ಸುಖವಾಗಿ ಬದುಕುವಂತವರಾಗಿ.
ವ್ಯಕ್ತಿ 1 : ಅಂದ್ರೆ ಹಿಂದಿನ ಜನುಮದಾಗ ನೀವೂ ನಮ್ಮಂಗೆ ದಲಿತರಾಗಿ ಹುಟ್ಟಿ ಪುಣ್ಯಾ ಮಾಡಿ ಈ ಜನುಮದಾಗ ಸ್ವಾಮಿಗಳಾಗಿದ್ದೀರಿ ಅಲ್ವಾ ಮಾಸ್ವಾಮಿ.
ಕುಡುಕ : ಹಾಂ.. ಹಂಗಾದ್ರೆ ನೀವು ಆಗ ದಲಿತರು, ನಾವು ಈಗ ದಲಿತರು. ಆ ವರಸೆಯಲ್ಲಿ ನಾವು ನೀವು ಒಂದೇ, ಅಣ್ತಮ್ಮಂದಿರು. (ಎಂದು ತಬ್ಬಿಕೊಳ್ಳಲು ಮುಂದಾಗುತ್ತಾನೆ
ಶ್ರೀಗಳು : (ಸ್ವಾಮಿಗಳು ಗಾಬರಿಯಿಂದಾ ಹಿಂದಕ್ಕೆ ಸರಿದು) ಕೃಷ್ಣ ಕೃಷ್ಣಾ.. ಏನಿದು ಅಧಿಕಪ್ರಸಂಗತನ.
ಕುಡುಕ : ( ಅಣಕಿಸುವವನಂತೆ) ಕೃಷ್ಣ ಕೃಷ್ಣಾ.. ಸ್ವಾಮಿಗಳಿಗೆ ಏರಿದಂಗಿದೆ ಉಷ್ಣಾ
ಮಠದ ವಟು : ನೋಡಿ ಬಂಧುಗಳೇ.
ಕುಡುಕ : ಬಂಧುಗಳು ಅಂದ ಮ್ಯಾಗೆ ಬನ್ರಿ ತಬ್ಬಿಕೊಳ್ಳೋಣ. (ಮತ್ತೆ ಅಪ್ಪಿಕೊಳ್ಳಲು ಹೋಗುತ್ತಾನೆ)
ಮಠದ ವಟು : (ಹಿಂದಕ್ಕೆ ಸರಿದು) ಅದು ಹಾಗಲ್ಲಾ. ಇಲ್ಲಿ ಕೇಳಿ ಇವತ್ತು ನಮ್ಮ ಶ್ರೀಗಳ ಚಿತ್ತ ನಿಮ್ಮ ದಲಿತ ಕೇರಿಯತ್ತ.
ವ್ಯಕ್ತಿ 2 : ಏ ಸುಮ್ಮನೇ ಇರ್ರಪ್ಪಾ. ( ಎಂದು ಕುಡುಕನನ್ನು ಗದರಿಸಿ, ಸ್ವಾಮಿಗಳ ಪಾದಕ್ಕೆ ಅಡ್ಡಬಿದ್ದು) ಕ್ಸಮಿಸಬೇಕು ಸ್ವಾಮೀಜಿಗಳು. ನಿಮ್ಮ ಪಾದದ ದೂಳಿನಿಂದಾ ನಮ್ಮ ಕೇರಿ ಪಾವನವಾಯ್ತು. ಈತ ಅವಿವೇಕಿ. ಬೆಳಿಗ್ಗೆನೇ ತೀರ್ಥ ಸೇವನೆ ಮಾಡಿದ್ದಾನೆ..
ಮಠದ ವಟು : ಇರಲಿ ಬಿಡಿ. ನಮ್ಮ ಸ್ವಾಮಿಗಳೂ ತೀರ್ಥ ಕುಡೀತಾರೆ. ದಿನ ನಿತ್ಯ ಮೂರೂ ಹೊತ್ತು ಪೂಜೆ ಮಾಡಿ ತೀರ್ಥ ಸೇವನೆ ಮಾಡ್ತಾರೆ.
ಕುಡುಕ : ಹಾಂ. ಅದು ಮ್ಯಾಟರ್ರು. ನಾನೂ ತೀರ್ಥಂಕರ, ಸ್ವಾಮಿಗಳೂ ತೀರ್ಥಂಕರರು. ಅಂದರೆ ಇಬ್ಬರೂ ಒಂದೇ. ಬನ್ನಿ ಅಪ್ಪಿಕೊಂಡು ಸೆಲಿಬ್ರೇಟ್ ಮಾಡೋಣ. ಚಿಯರ್ಸ್
ವ್ಯಕ್ತಿ 2 : ( ಕುಡುಕನನ್ನು ತಡೆದು) ಲೇ ಯಪ್ಪಾ ಮುಚ್ಕೊಂಡಿರು. ನಿನ್ನ ತೀರ್ಥ ಬೇರೆ, ಅವರದ್ದು ಬೇರೆ. ಸ್ವಾಮಿಗೋಳು ಈ ಅವಿವೇಕಿಯನ್ನು ಕ್ಷಮಿಸಿ ಮುಂದಕ್ಕೆ ತಮ್ಮ ಪಾದ ಬೆಳೆಸಿ ಕೇರಿ ಜನರನ್ನು ಆಶೀರ್ವದಿಸಬೇಕು
ಶ್ರೀಗಳು : ಆಗಬಹುದು. ನೋಡಿ ಮನುಷ್ಯರೆಲ್ಲಾ ಒಂದೇ. ಏನೋ ಪೂರ್ವಜನ್ಮದ ಕರ್ಮದಿಂದಾ ಬೇರೆ ಬೇರೆ ಜಾತಿಯಲ್ಲಿ ಹುಟ್ಟಿದ್ದೇವೆ. ಆದರೆ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಅನ್ನೋದನ್ನ ಯಾವತ್ತೂ ಮರೀಬಾರದು.
ಕುಡುಕ : ಹೌದೌದು.. ನಾವು ಮರೀಬಾರದು. ನೀವು ಮೆರೀಬಹುದು.
ಮಠದ ವಟು : ಹೌದು ನಾವೆಲ್ಲಾ ಹಿಂದೂ ಅನ್ನೋದನ್ನ ನೆನಪಿಸೋಕೆ ಇವತ್ತು ಶ್ರೀಪಾದಗಳು ನಿಮ್ಮ ಕೇರಿಗೆ ದಯಮಾಡಿಸಿರೋದು.
ವ್ಯಕ್ತಿ 3 : ಹಾಗಾದರೆ ಮಹಾಸ್ವಾಮಿಗಳು ದೊಡ್ಮನಸ್ಸು ಮಾಡಿ ಈ ಪಾಪಿಗಳ ಗುಡಿಸಲಿಗೆ ಬರಬೇಕು. ಉಪಹಾರ ಸ್ವೀಕರಿಸಬೇಕು.
ಕುಡುಕ : ಚಿಕನ್ ಕುರ್ಮಾ ಇದೆ. ಮಟನ್ ಸಾರಿದೆ, ಸ್ವಾಮಿಗೋಳು ದೊಡ್ಡಮನಸ್ಸು ಮಾಡಿ ಪ್ರಸಾದ ತಿಂದು ಈ ನಮ್ಮ ಬೇವಾರ್ಸಿ ಮಂದಿಗೆ ಆಸೀರ್ವಾದ ಮಾಡಾಕಬೇಕು. ಇದು ನಮ್ಮ ವಿನಂತಿ, ಮನವಿ, ಆಗ್ರಹ. ಬೇಕೇ ಬೇಕು ನಿಮ್ಮಂತೋರ ಅನುಗ್ರಹ
ಶ್ರೀಗಳು : ಕೃಷ್ಣ ಕೃಷ್ಣಾ.. ಅದನ್ನೆಲ್ಲಾ ಯತಿಗಳಾದ ನಾವು ಸ್ವೀಕರಿಸುವಂತಿಲ್ಲ. ಸಸ್ಯಾಹಾರಿಗಳು ನಾವು.
ಕುಡುಕ : ನೀವು ಸಸ್ಯಾಹಾರಿಗಳು, ನಾವು ಮಾಂಸಾಹಾರಿಗಳು. ಹಿಂಗಿರುವಾಗ ನಾವೆಲ್ಲಾ ಹೆಂಗೆ ಒಂದು, ನಾವ್ಯಾಂಗೆ ಹಿಂದು.. ಎಕ್ಸಪ್ಲೇನ್ ಮಿ ಪಿಲೀಜ್..
ಶ್ರೀಗಳು : ನೋಡಿ ಭಕ್ತರೇ. ಆಹಾರ ಅವರವರ ಇಷ್ಟಕ್ಕೆ ಬಿಟ್ಟಿದ್ದು. ಅದರಲ್ಲಿ ಬಲವಂತ ಇರಬಾರದು. ಯಾರಿಗೆ ಏನು ಇಷ್ಟವೋ ಅದನ್ನು ಅವರು ತಿನ್ನಬಹುದು.
ಕುಡುಕ : ನಮಗೆ ಹಸುವಿನ ಬಾಡು ಬಾಳಾ ಇಷ್ಟಾ ಸ್ವಾಮಿಗೋಳೇ.. ತಿನ್ನಬೋದಾ. ಹೇಳಿ ತಿನ್ನಬೋದಾ..
ಶ್ರೀಗಳು : ಶಾತಂ ಪಾಪಂ..
ಕುಡುಕ : ತಿಂತಾರೆ ಶಾಂತಮ್ಮಾ ಪಾಪಮ್ಮಾ ಇಬ್ಬರೂ ಕೊಟ್ರೆ ಬಾಡೂಟಾ ತಿಂದೇ ತಿಂತಾರೆ.
ಶ್ರೀಗಳು : ಅಯ್ಯೋ ಗೋಪಾಲಾ, ಮುರಳಿ ಕೃಷ್ಣಾ.. ಗೋಹತ್ಯೆ ಮಹಾ ಪಾಪ. ತಿನ್ನೋದಂತೂ ಇನ್ನೂ ಪಾಪ. ನರಕ ಪ್ರಾಪ್ತಿ ಗ್ಯಾರಂಟಿ.
ಕುಡುಕ : ಹಂಗಾದ್ರೆ ನೀವು ಸ್ವಾಮಿಗೋಳು ಗೋಹತ್ಯೆ ಮಾಡಬಾರದು, ತಿನ್ನಬಾರದು ಅಂತೀರಲ್ಲಾ. ಸತ್ತ ಎತ್ತು ಆಕಳಾನ್ನಾದ್ರೂ ಮಣ್ಣು ಪಾಲು ಮಾಡೋ ಬದಲು ನಮಗಾದ್ರೂ ತಿನ್ನೋಕೆ ಬಿಡ್ರಿ ಬಡವರು ಹೆಂಗೋ ಹೊಟ್ಟೆ ತುಂಬಿಸ್ಕೊಂಡು ಬದುಕೋತೀವಿ..
ಶ್ರೀಗಳು : ಗೋವು ಮಾತೆ ಇದ್ದಹಾಗೆ. ಗೋವಿನಲ್ಲಿ ಮುಕ್ಕೋಟಿ ದೇವಾನುದೇವತೆಗಳು ಇರ್ತಾವೆ. ಅದಕ್ಕೆ ಅದನ್ನು ತಿನ್ನಬಾರದು. ಯಾರಾದ್ರೂ ತಮ್ಮ ತಾಯಿಯನ್ನು ಕೊಂದು ತಿನ್ನುತ್ತಾರಾ?
ಕುಡುಕ : ಹೋ ಆಶ್ಚರ್ಯ ಮಹದಾಶ್ಚರ್ಯ. ಗೋವು ನಿಮ್ಮ ತಾಯಿ. ಹಂಗಾದ್ರೆ ತಾವು ಗೋವಿಗೆ ಹುಟ್ಟಿದವರು ಅನ್ನೋದು ಮಹದಾಶ್ಚರ್ಯ ! ಇರಬೋದು ಸ್ವಾಮಿಗೋಳೇ, ಹಸು ನಿಮಗೆ ತಾಯಿ ಇದ್ರೂ ಇರಬೋದು. ಆದರೆ ಅದು ದಲಿತರ ಪಾಲಿನ ಊಟ ಸ್ವಾಮಿ ಊಟ. ಅದನ್ನ ತಿಂದ್ರೆ ಅದ್ರಲ್ಲಿರೋ ಮುಕ್ಕೋಟಿ ದೇವರುಗಳು ನಮ್ಮ ಹೊಟ್ಟೆ ಸೇರಿ ನಾವು ಪಾವನ ಆಗ್ತೀವಿ ಬಿಡ್ರಿ. ಸತ್ತ ಹಸುನಾದ್ರೂ ತಿನ್ನೋಕೆ ಬಿಡ್ರಿ. ನಿಮ್ಮ ಕಾಲಿಗೆ ಬೀಳ್ತೀನಿ.
ಮಠದ ವಟು : ಏನಿದು ಅಪದ್ದ. ದೂರ ಇರಿ. ಶ್ರೀಪಾದಗಳನ್ನು ನೀವು ಮುಟ್ಟಿದರೆ ಸುಟ್ಟು ಭಸ್ಮ ಆಗ್ತೀರಿ. ದೂರ ದೂರ..
ವ್ಯಕ್ತಿ 1 : ಸ್ವಾಮಿಗಳು ಸಿಟ್ಟಾಗಬಾರದು. ದಲಿತರು ತಿನ್ನೋ ಆಹಾರಕ್ಕೆ ಉತ್ತಮರು ಕಲ್ಲು ಹಾಕಿದ್ದಕ್ಕೆ ಬೇಜಾರಾಗಿ ಏನೇನೋ ಬೊಗಳ್ತಿದ್ದಾನೆ. ( ಹಿಂದೆ ನಾಯಿ ಬೊಗಳಿದ ಸದ್ದು)
ಶ್ರೀಗಳು : ನೋಡಿ ಹೀಗೆಲ್ಲಾ ವ್ಯರ್ಥ ವಾದ ಬೇಡ. ನಮ್ಮ ಹಿರಿಯ ಸ್ವಾಮಿಗಳು ಕನಸಲ್ಲಿ ಬಂದು ಹಿಂದೆ ಅವರು ಮಾಡಿದಂತೆ ದಲಿತ ಕೇರಿಗೆ ಪಾದಯಾತ್ರೆ ಮಾಡಲು ಸೂಚಿಸಿದರು. ಗುರುಗಳ ಆದೇಶದಂತೆ ಈ ಶ್ರೀಪಾದಗಳು ಇಲ್ಲಿಗೆ ಬಂದಿವೆ.
ಕುಡುಕ : ಬರೀ ಪಾದಗಳಷ್ಟೇ ಅಲ್ಲಾ ಪಾದದ ಜೊತೆ ಇಡಿಯಾಗಿ ಸ್ವಾಮೀಗಳೇ ವಾಕಿಂಗ್ ಬಂದಂಗಿದೆ. ಬನ್ರಿ ಬನ್ನಿ. ಹೆಂಗಾರಾ ಮಾಡಿ ನಮ್ಮನ್ನೂ ಉದ್ದಾರ ಮಾಡ್ರಿ.
ಶ್ರೀಗಳು : ನೀವು ಉದ್ದಾರ ಆಗಬೇಕು ಅಂದ್ರೆ ರಾಮನ ನಾಮಸ್ಮರಣೆ ಮಾಡುತ್ತಾ ಇರಬೇಕು. ಶ್ರೀಕೃಷ್ಣ ಮಠಕ್ಕೆ ಭಯ ಭಕ್ತಿಯಿಂದ ನಡೆದುಕೊಳ್ಳಬೇಕು.
ಕುಡುಕ : ಹಂಗೆ ಮಾಡಿದ್ರೆ ನಾವೂ ನೀವೂ ಒಂದೇ ಆಗ್ತೀವಾ ಸ್ವಾಮಿಗೋಳೇ. ಸಮಾನವಾಗಿ ಬದುಕ್ತೇವಾ?
ಶ್ರೀಗಳು : ಆಗ್ತೀವಿ. ಯಾಕಾಗೋದಿಲ್ಲ. ಈ ಜನ್ಮದಲಿ ಶ್ರೀರಾಮಸ್ಮರಣೆ ಶ್ರೀಕೃಷ್ಣ ಭಕ್ತಿ ತೋರಿದರೆ ಮುಂದಿನ ಜನ್ಮದಲ್ಲಿ ಪುಣ್ಯ ವಿಶೇಷದಿಂದಾಗಿ ಖಂಡಿತಾ ಒಂದಾಗಿ ಸಮಾನತೆಯಿಂದಾ ಬದುಕ್ತೇವೆ ಅಂತಾ ನಮ್ಮ ಶಾಸ್ರ್ತ ಕರ್ಮಸಿದ್ದಾಂತ ಹೇಳ್ತಾವೆ.
ಕುಡುಕ : ಮುಂದಿನ ಜನುಮ ಕಂಡವರ್ಯಾರು ಸ್ವಾಮಿಗೋಳೇ.. ಈ ಜನ್ಮದಲ್ಲಿ ಸಮಾನರಾಗಿ ಒಂದಾಗಿ ಬಾಳೋಕಾಗುತ್ತಾ ಅದು ಹೇಳಿ..
ಶ್ರೀಗಳು : ಹಿಂದಿನ ಜನ್ಮದ ಕರ್ಮ ಕಳೆಯದೇ ಅದು ಸಾಧ್ಯವಿಲ್ಲ. ಎಲ್ಲರೂ ಪೂರ್ವಜನ್ಮದಲ್ಲಿ ಮಾಡಿದ ಪಾಪ ಕರ್ಮಗಳನ್ನೆಲ್ಲಾ ಈ ಜನ್ಮದಲ್ಲಿ ಅನುಭವಿಸಲೇಬೇಕು. ಅದರಿಂದ ಪಾರಾಗಿ ಮುಂದಿನ ಜನ್ಮದಲ್ಲಿ ಸುಖವಾಗಿ ಇರಬೇಕು ಅಂದ್ರೆ ಈಗ ಶ್ರೀರಾಮ ಸ್ಮರಣೆ ಶ್ರೀಕೃಷ್ಣ ಸೇವೆ ಮಾಡಲೇಬೇಕು.
ವ್ಯಕ್ತಿ 2 : ಹೋಗಲಿ ಬಿಡಿ ಸ್ವಾಮಿ. ಈ ಅವಿವೇಕಿಗೆ ಎಷ್ಟು ಹೇಳಿದರೂ ಅಷ್ಟೇ. ನಮ್ಮ ಗುಡಿಸಲಿಗೆ ನಿಮ್ಮ ಪಾದ ಬೆಳೆಸಬೇಕು. ನಿಮ್ಮ ಪಾದ ಪೂಜೆ ಮಾಡಿ ನಾವು ಪಾವನರಾಗಬೇಕು ಅಷ್ಟೇ..
ಮಠದ ವಟು : ಸ್ವಾಮಿಗಳು ಹಾಗೆಲ್ಲಾ ಎಲ್ಲಾ ಕಡೆ ಪಾದಪೂಜೆ ಮಾಡಿಸಿಕೊಳ್ಳೋದಿಲ್ಲ. ನೀವು ಇದ್ದಲ್ಲೇ ನಮಸ್ಕಾರ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಿ. ನಿಮ್ಮ ಸಂಪಾದನೆ ಏನಾದರೂ ಇದ್ದರೆ ಶ್ರೀಮಠಕ್ಕೆ ಅರ್ಪಿಸಿಕೊಳ್ಳಿ.
ಕುಡುಕ : ಮಹಾಸ್ವಾಮಿಗಳದ್ದು ಯಾವ ಮಠ
ವ್ಯಕ್ತಿ 3 : ಅಷ್ಟೂ ಗೊತ್ತಿಲ್ವೇನಲೇ. ಅವರದು ಪರಮ ಪವಿತ್ರವಾದ ಪೇ ಜಾ ಊರ ಮಠ.
ಕುಡುಕ : ಗೊತ್ತಾಯ್ತು, ಗೊತ್ತು ಆಗೇಬಿಡ್ತು. ಪೇ ಅಂದ್ರೆ ಏನು? ಇಂಗ್ಲೀಸಲ್ಲಿ ಹಣ ಪಾವತಿ ಮಾಡು ಅಂತಾ. ಜಾ ಅಂದ್ರೆ ಏನು? ಹಿಂದಿಯಲ್ಲಿ ಹೋಗು ಅಂತಾ. ಅಂದ್ರೆ ಇರೋವಷ್ಟು ಹಣ ಪಾವತಿಸಿ ಊರಿಗೆ ಹೋಗು ಅಂತಾನಾ ಈ ಮಠದ ಅರ್ಥ..
ಮಠದ ವಟು : ಏ ಅಧಿಕ ಪ್ರಸಂಗಿ.
ಕುಡುಕ : ನೀವು ಸಂಘಿ, ನಾನು ಪ್ರಸಂಗಿ. ವಾವ್ ಬಾಳಾ ಚೆನ್ನಾಗಿದೆ ಪ್ರಾಸಾ. ಪುಣ್ಯ ಸಂಪಾದನೆಗೆ ನಮ್ಮ ಸಂಪಾದನೆ ಅರ್ಪಿಸಿ ಎಂದ್ರಲ್ಲಾ.
ಮಠದ ವಟು : ಹೌದು ಅದನ್ನೇ ಹೇಳಿದ್ದು.ಕುಡುಕ : ಹಂಗಾದ್ರೆ ತಗೊಳ್ಳಿ. (ಬಾಟಲಿ ತೆಗೆದು) ಇದಿಷ್ಟೇ ಸ್ವಾಮಿ ನನ್ನ ಇವತ್ತಿನ ಸಂಪಾದನೆ. ಶ್ರೀಮಠ ಅರ್ಪಿಸಿಕೊಳ್ಳಬೇಕು.
ಮಠದ ವಟು : ಚೆ ಛೇ. ದೂರ ಹೋಗು ಅನಿಷ್ಟವೇ.
ಕುಡುಕ : ಓಹೋ ನಿಮಗೆ ನಿಮ್ಮ ದೇವತೆಗಳು ಕುಡಿಯೋ ಸುರಾಪಾನ ಮಾತ್ರ ಇಷ್ಟಾ ಏನೋ.. ಈ ಲೋಕಲ್ ಹೆಂಡ ಅನಿಷ್ಟ ಹೌಂದಲ್ಲೊ.
ವ್ಯಕ್ತಿ 2 : ಏ ದೂರ ಹೋಗ್ಲಾ ಅತ್ಲಾಗೆ. ಮಾಸ್ವಾಮಿಗೋಳು ಮನ್ನಿಸ್ಬೇಕು.
ನಮ್ಮ ತಪ್ಪುಗಳನ್ನೆಲ್ಲಾ ಹೊಟ್ಟೆಗಾಕ್ಕೊಂಡು ಹರಸಬೇಕು.
ಕುಡುಕ : ನಾವು ಮಾಡೋ ತಪ್ಪುಗಳು ಒಂದಾ ಎರಡಾ. ತಪ್ಪುಗಳನ್ನ ಹೊಟ್ಟೆಗಾಕೊಳ್ಳೋಕೆ ಸ್ವಾಮಿಗಳ ಹೊಟ್ಟೆ ಏನು ತಿಪ್ಪೇನಾ? ಇಲ್ಲಾ ಗೋಡೌನಾ
ವ್ಯಕ್ತ 1 : ಥೋ, ಒಸಿ ಸುಮ್ಕಿರಲೆ. ಇವ್ನು ನಾಲ್ಕು ಅಕ್ಸರಾ ಕಲಿತವ್ನೆ ಸ್ವಾಮೀಜಿ. ಆದರೆ ಹೊಲೆಯಾ ಅಂತಾ ಯಾರೂ ಕೆಲಸಾ ಕೊಡಲಿಲ್ಲ. ಅದಕ್ಕೆ ಬೇಜಾರಾಗಿ ದಾರು ಕುಡುದು ಹೆಂಗೆಂಗೋ ಮಾತಾಡ್ತಾವ್ನೆ. ಆದರೆ ಇವ್ನು ಮಾತಾಡೋದ್ರಲ್ಲೂ ಅದೇನೋ ಅಂತಾರಲ್ಲಾ ಹಾಂ ಲಾಜಿಕ್. ಅದು ಇರ್ತೈತೆ.
ಶ್ರೀಗಳು : ಇರಲಿ ಬಿಡಿ. ಈಗ ನಿಮ್ಮ ಕೇರಿಗೆ ಪಾದಯಾತ್ರೆಗೆ ಬಂದಿರುವ ಕಾರಣ ಇಷ್ಟೇ. ನಾವೆಲ್ಲಾ ಹಿಂದೂಗಳು ಎಂದು ನಿಮಗೆಲ್ಲಾ ತಿಳಿಸಬೇಕಿತ್ತು. ಅದಕ್ಕೆ..
ಕುಡುಕ : ಅದೆಂಗೆ ಮಾಸ್ವಾಮಿ. ನಮ್ಮನ್ನೂ ಹಿಂದೂಗಳು ಅಂತೀರಿ? ನಿಮ್ಮ ಚಾತುರ್ವರ್ಣ ಧರ್ಮದೊಳಗ ಎಷ್ಟು ಜಾತಿಗಳಿವೆ ಯೋಳಿ?
ಮಠದ ವಟು : ಲೇ ಮುಂಡೇಗಂಡಾ. ನಾಲ್ಕೇ ನಾಲ್ಕು ಜಾತಿಗಳು. ಬ್ರಾಹ್ಮಣ ಕ್ಷತ್ರೀಯ ವೈಶ್ಯ ಹಾಗೂ ಶೂದ್ರ ಅಂತಾ.
ಕುಡುಕ : ಹಂಗಾದ್ರೆ ಈ ನಾಲ್ಕರಲ್ಲಿ ನಾವು ಹೊಲೆ ಮಾದಿಗರು ಎಲ್ಲಿ ಇದ್ದೀವಿ.? ಹೇಳಿ ನಾವೆಲ್ಲಿದ್ದೀವಿ?
ಮಠದ ವಟು : (ಶ್ರೀಗಳ ಮುಖ ನೋಡುತ್ತಾ) ನೀವೆಲ್ಲಾ ಶೂದ್ರರು.
ಕುಡುಕ : ನೋ.. ಸಾಧ್ಯವೇ ಇಲ್ಲಾ. ಯಾಕೆಂದ್ರೆ ನಾವು ಶೂದ್ರರೂ ಅಲ್ಲಾ ಚಾತುರ್ವರ್ಣ ಧರ್ಮದಲ್ಲಿ ನಾವು ಅಸ್ಪೃಶ್ಯ ಜನಾಂಗದವರು ಇಲ್ಲವೇ ಇಲ್ಲಾ. ಹೌದಲ್ಲೋ ಸ್ವಾಮಿಗೋಳೆ.
ಶ್ರೀಗಳು : ಹೌದು. ನೀವು ಪಂಚಮರು.
ಕುಡುಕ : ಮತ್ತೆ ನಾವು ನಿಮ್ಮ ಹಿಂದೂ ವೈದಿಕ ಧರ್ಮದ ನಾಲ್ಕೂ ವರ್ಣಗಳಲ್ಲೂ ಲೆಕ್ಕಕ್ಕೇ ಇಲ್ಲಾ ಅಂದ್ಮೇಲೆ ನಾವು ಹೆಂಗೆ ಸ್ವಾಮಿ ಹಿಂದೂಗಳಾಗ್ತೀವಿ. ಕೇಳ್ರಪ್ಪಾ ಕೇಳಿ ನಾವು ಹಿಂದೆಯೂ ಹಿಂದೂಗಳಾಗಿರಲಿಲ್ಲ ಇಂದೂ ಆಗಿಲ್ಲಾ, ಮುಂದೆನೂ ಆಗೋದಿಲ್ಲ. ಯಾಕಂದ್ರೆ ನಾವು ಎಂದೂ ಹಿಂದೂಗಳೇ ಅಲ್ಲಾ.
ಶ್ರೀಗಳು : (ತಡಬಡಾಯಿಸಿ) ಶ್ರೀ ಹರಿ.. ಅದು.. ಅದು.. ಹಾಗಲ್ಲ. "ಸರ್ವೇ ಜನ ಸುಖಿನೋ ಭವಂತು" ಅಂತಾ ನಮ್ಮ ಗ್ರಂಥಗಳಲ್ಲಿ ಹೇಳಿದ್ದಾರಲ್ಲಾ. ಸರ್ವೇ ಜನ ಅಂದ್ರೆ ನೀವೂ ಅದರಲ್ಲಿ ಬಂದಂಗೆ ಅಲ್ವಾ..
ಕುಡುಕ : ಹಂಗಾದ್ರೆ ಈ ಸರ್ವೇ ಜನಾಂಗದಲ್ಲಿ ಈ ಸಾಬರ ಹುಸೇನಿ, ಆ ಕಿರಿಸ್ತಾನೀ ಪೀಟರು ಬರಬೇಕಲ್ವಾ.
ಶ್ರೀಗಳು : ಅವರದು ಬೇರೆ ಧರ್ಮವಾದ್ದರಿಂದ ಅವರು ಬರೋದಿಲ್ಲ.
ಕುಡುಕ : ಅಂದ್ರೆ ಹಿಂದೂಗಳು ಮಾತ್ರ ಸರ್ವೇ ಜನ ಅಂದಂಗಾಯ್ತು. ಹಂಗಾದ್ರೆ ಅಸ್ಪೃಶ್ಯರು, ಮುಟ್ಟಿಸಿಕೊಳ್ಳದವರು, ಹೊಲೆಮಾದಿಗರಾದ ನಮ್ಮನ್ನು ನೀವು ಊರ ಹೊರಗೆ ಇಟ್ಟಿದ್ದೀರಲ್ಲಾ ನಾವು ಹೇಗೆ ಹಿಂದೂಗಳಾಗ್ತೀವಿ? ಅದನ್ನ ಹೇಳಿ..
ಶ್ರೀಗಳು : ಕೃಷ್ಣ ಕೃಷ್ಣಾ.. ಈ ಪಾಪಿಗಳಿಗೆ ಹೇಗೆ ತಿಳಿಸಿ ಹೇಳೋದು. ನೋಡಯ್ಯಾ.. ನಾವು ನೀವು ಪೂಜಿಸೋ ದೇವ್ರು ಇದ್ದಾವಲ್ಲಾ ರಾಮಾ ಕೃಷ್ಣಾ ಶಿವಾ. ಅವೆಲ್ಲಾ ಒಂದೇ ಅಲ್ವಾ. ಅದಕ್ಕೆ ನೀವೂ ಹಿಂದೂಗಳು.
ವ್ಯಕ್ತಿ 1 : ನಮ್ಮ ದೇವ್ರು ಬೇರೆ ಇವೆ ಸ್ವಾಮಿಗೋಳಾ. ದ್ಯಾಮವ್ವ, ದುರ್ಗವ್ವಾ, ಹುಚ್ಚೀರವ್ವಾ ಅಂತಾ..
ಕುಡುಕ : ಆಯ್ತು.. ನೀವೇಳ್ದಂಗೆ ಆಗ್ಲಿ ಸೋಮೇರಾ. ನಾವು ಹಿಂದೂಗಳೂ ಅನ್ನೋದಾದ್ರೆ, ನಮ್ಮ ದೇವರುಗಳೂ ಒಂದೇ ಅನ್ನೋದಾದ್ರೆ ನಿಮ್ಮ ದೇವಸ್ಥಾನದೊಳಗೆ ನಮ್ಮವರನ್ಯಾಕೆ ಬಿಡೋದಿಲ್ಲಾ. ನಿಮ್ಮ ಮಠದೊಳಗೆ ನಮಗ್ಯಾಕೆ ಪ್ರವೇಶ ಇಲ್ಲಾ. ಯಾಕೆಂದ್ರೆ ನಾವು ಅಸ್ಪೃಶ್ಯರು ಅಂತಾ ಅಲ್ವಾ. ಅಂದ್ರೆ ನಾವು ನೀವು ಸಮಾನರಲ್ಲಾ. ಸಮಾನತೆ ಇಲ್ಲಾ ಅಂದ್ಮೇಲೆ ನಾವು ಹಿಂದೂಗಳಲ್ಲಾ. ಹೌದಲ್ಲೊ ಹೇಳಿ ಮಾಸ್ವಾಮಿಗೋಳೇ.
ವ್ಯಕ್ತಿ 2 : ಇವ್ನು ಕೇಳೋದ್ರಲ್ಲೂ ಲಾಜಿಕ್ ಐತೆ. ಉತ್ತರಾ ಕೊಡಿ ಬುದ್ದೇರಾ!
ಶ್ರೀಗಳು : ನೋಡಿ ಇವೆಲ್ಲಾ ಬ್ರಹ್ಮ ರಹಸ್ಯಗಳು. ಹೀಗೆ ಬೀದೀಲಿ ನಿಂತು ಚರ್ಚೆ ಮಾಡೋ ಸಂಗತಿಗಳಲ್ಲಾ.
ಕುಡುಕ : ಹಂಗಾದ್ರೆ ನಡೀರಿ ಮಾಸ್ವಾಮಿ ನಿಮ್ಮ ಮಠಕ್ಕೆ. ಅಲ್ಲೇ ಚರ್ಚೆ ಮಾಡೋಮಾ.
ಶ್ರೀಗಳು : ಅಲ್ಲಿಗೆಲ್ಲಾ ನೀವು ಬರಬಾರದು. ಅದಕ್ಕೆ ಧರ್ಮ ಸಮ್ಮತಿ ಇಲ್ಲಾ.
ಕುಡುಕ : ಹಾಂ. ಈಗ ಗೊತ್ತಾಯ್ತಾ ಸ್ವಾಮಿ. ನಿಮ್ಮ ಧರ್ಮ ಬೇರೆ. ಅಲ್ಲಿ ನಾವೆಲ್ಲಾ ನಿಷಿದ್ಧ ಅಂತಾ. ಯಾವ ಧರ್ಮದಲ್ಲಿ ನಮಗೆ ಪ್ರವೇಶ ಇಲ್ವೋ ಆ ಧರ್ಮ ನಮ್ಮದಾಗಲು ಸಾಧ್ಯವೇ ಇಲ್ಲ. ಹೌದಲ್ರಪ್ಪಾ.
ಎಲ್ಲರೂ : ಹೌದೌದು..
ಶ್ರೀಗಳು : ಕೃಷ್ಣಾ.. ಮಾಧವಾ.. ಈ ಮೂರ್ಖರೊಂದಿಗೆ ವಾದಿಸಿ ಪ್ರಯೋಜನವಿಲ್ಲ. ಇವರೆಲ್ಲಾ ಧರ್ಮದ್ರೋಹಿಗಳು. ಏನೋ ಒಳ್ಳೇದಾಗಲಿ ಅಂತಾ ದಲಿತ ಕೇರಿಗೆ ಪಾದಯಾತ್ರೆ ಬಂದ್ರೆ ಪೂಜೆ ಮಾಡೋದು ಬಿಟ್ಟು ಪ್ರಶ್ನೆ ಮಾಡ್ತಾವೆ, ಅನಿಷ್ಟ ಮುಂಡೇವು ( ಎಂದು ಗೊಣಗುತ್ತಾ ಹಿಂತಿರುಗಿ ಹೋಗತೊಡಗುತ್ತಾರೆ).
ಕುಡುಕ : ಅಲ್ಲಾ ಸ್ವಾಮಿಗೋಳೆ. ನೀವು ನಮ್ಮ ಮೇಲೆ ಕರುಣೆ ಇಟ್ಟು ದಲಿತ ಕೇರೀಲಿ ಪಾದಯಾತ್ರೆ ಮಾಡಿದ್ರಿ. ಬಾಳಾ ಸಂತೋಷವಾಯ್ತು.
ಮಠದ ವಟು : ಅದು ನಿಮಗೆ ಅರ್ಥ ಆಗಿದ್ರೆ ಇಷ್ಟೆಲ್ಲಾ ವಾದಸ್ತಾನೇ ಇರ್ಲಿಲ್ಲಾ. ಶ್ರೀಗಳಿಗೆ ಬೇಸರ ಮಾಡಿದ್ರಿ.
ಕುಡುಕ : ( ಸ್ವಾಮಿಗಳ ಮುಂದೆ ನಿಂತು) ಬೇಸರ ಆಗಿದ್ರೆ ಕ್ಸಮಿಸಿ ಸ್ವಾಮಿಗಳೇ. ಬೇಕಾದರೆ ಕಾಲಿಗೆ ಬೀಳ್ತೇವೆ. ನಾವೂ ಹಿಂದೂಗಳೂ ಅಂತಾ ಒಪ್ಕೊಳ್ತೇವೆ. ಕೊನೆಗೆ ಒಂದೇ ಒಂದು ಕೋರಿಕೆ ನೀವು ಒಪ್ಪಲೇ ಬೇಕು.
ಶ್ರೀಗಳು : ಆಯ್ತು ಶ್ರೀಪಾದಗಳಿಗೆ ಅರಿಕೆ ಮಾಡಿಕೊಳ್ಳಿ.
ಕುಡುಕ : ಮತ್ತೇನಿಲ್ಲ. ನೀವು ನಮ್ಮ ಕೇರಿಗೆ ಬಂದಂಗೆ ನಾವೂ ನಿಮ್ಮ ಮಠಕ್ಕೆ ಪಾದಯಾತ್ರೆ ಮಾಡಲು ತಾವು, ಪರಮ ಪೂಜ್ಯರು ಅನುಮತಿ ಕೊಡ್ಬೇಕು. ಹಿಂದೂಗಳೆಲ್ಲಾ ಒಂದೇ ಎಂಬ ನಿಮ್ಮ ಮಾತು ನಿಜವಾಗಿದ್ದರೆ ನಿಮ್ಮ ಜೊತೆ ಕೂತು ಸಹಭೋಜನ ಮಾಡಲು ಅವಕಾಶ ಕೊಡ್ಬೇಕು. ನಿಮ್ಮ ದೇವಸ್ಥಾನದೊಳಗ ನಮ್ಗೂ ಪ್ರವೇಶ ಕೊಡಬೇಕು.
ಶ್ರೀಗಳು : (ಎರಡೂ ಕೈಗಳಿಂದಾ ಕಿವಿ ಮುಚ್ಚಿಕೊಂಡು) ಕೃಷ್ಣಾ ಮಾಧವಾ ಶ್ರೀಹರಿ. ಈ ಮೂರ್ಖರಿಗೆ ಒಳ್ಳೆ ಬುದ್ದಿ ಕೊಡು ದೇವಾ. (ವಟುಗಳನ್ನು ಉದ್ದೇಶಿಸಿ ಮೆತ್ತಗೆ) ಏ ನಡೀರೋ ಈ ಅನಿಷ್ಟಗಳ ಜೊತೆ ಏನು ಮಾತು. ಮೊದಲು ಹೋಗಿ ಶುದ್ದೀಕರಣ ಮಾಡಿಕೊಳ್ಳೋಣ. ( ಹೊರಡುವರು)
ಕುಡುಕ : ನೋಡಿದ್ರಾ.. ಕೇಳಿದ್ರಾ.. ಇವರು ನಮ್ಮ ಕೇರಿಗಳಿಗೆ ಯಾವಾಗ ಬೇಕಾದ್ರೂ ಬರಬಹುದಂತೆ. ನಾವು ಮಾತ್ರ ಅವರ ಮಠಕ್ಕೆ ದೇವಸ್ಥಾನಕ್ಕೆ ಬರಬಾರದಂತೆ. ಬರೀ ಬಾಯಿ ಮಾತಿಗೆ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದಂತೆ. ನಮ್ಮನ್ನ ಮುಟ್ಟಿಸಿಕೊಳ್ಳೋದಿಲ್ಲವಂತೆ.
ವ್ಯಕ್ತಿ 3 : ಹೌದೌದು ನಾವು ಹಿಂದೂಗಳಲ್ಲಾ.
ಕುಡುಕ : ನಮ್ಮದು ಅಸಮಾನತೆ ಇಲ್ಲದ ಮಾನವ ಧರ್ಮ. ನಮ್ಮದು ಬುದ್ದ ಬಸವ ಬಾಬಾಸಾಹೇಬರು ಹಾಕಿಕೊಟ್ಟ ಸಮಾನತೆಯ ಮಾರ್ಗ. ಸಮಾನತೆ ಸಾರುವ ಸಂವಿಧಾನವೇ ನಮ್ಮ ಧರ್ಮಗ್ರಂಥ. ಎಲ್ಲರೂ ಹೇಳಿ ನಾವು ಹಿಂದೂಗಳಲ್ಲಾ ಮನುಷ್ಯರು
ಎಲ್ಲರೂ : ಮನುಷ್ಯರು.
ಕುಡುಕ : ನಾವು ಹಿಂದುತ್ವವಾದಿಗಳಲ್ಲ ಬಂದುತ್ವ ಸಾರು
ಎಲ್ಲರೂ : ಮನುಷ್ಯರು
ಕುಡುಕ : ನಾವು ಪುರೋಹಿತಶಾಹಿಗಳ ಗುಲಾಮರಲ್ಲಾ
ಎಲ್ಲರೂ : ಮನುಷ್ಯರು.
(ಹಿನ್ನೆಲೆಯಲ್ಲಿ ಅಡಿಗರ ಹಾಡು)
ನಾವೆಲ್ಲರೂ ಒಂದೇ ಜಾತಿ ,ಒಂದೇ ಮತ ,ಒಂದೇ ಕುಲ ;
ನಾವು ಮನುಜರು, ನಾವು ಮನುಜರು
- ಶಶಿಕಾಂತ ಯಡಹಳ್ಳಿ
10-01-2024
Comments
Post a Comment