ಬಸವಣ್ಣಾ ಉಘೇ ಉಘೇ (ಪ್ರಹಸನ -73)

ಪ್ರಹಸನ -73

ಬಸವಣ್ಣಾ ಉಘೇ ಉಘೇ..
-----------------------------

ಒಬ್ಬ : ಕರುನಾಡಿನ ಸಾಂಸ್ಕೃತಿಕ ನಾಯಕನಿಗೆ

ಎಲ್ಲರೂ : ಜೈ.

ಇನ್ನೊಬ್ಬ : ಸಿಎಂ ಸಿದ್ದರಾಮಯ್ಯನವರಿಗೆ

ಎಲ್ಲರೂ : ಜೈ

ಮತ್ತೊಬ್ಬ : ವೀರಶೈವ ಮಹಾಸಭೆಗೆ

ಒಬ್ಬ : ಡಬಲ್ ಜೈ..

ಇನ್ನೊಬ್ಬ : ಲಿಂಗಾಯತ ಮಠದ ಮಾಸ್ವಾಮಿಗಳಿಗೆ

ಒಬ್ಬ : ತ್ರಿಬಲ್ ಜೈ.

ಮೇಷ್ಟ್ರು : ಹೋಲ್ಡಾನ್ ಹೋಲ್ಡಾನ್. ಏನಿದು ಜೈಕಾರದ ಮೆರವಣಿಗೆ.

ಒಬ್ಬ : ಅಷ್ಟೂ ಗೊತ್ತಾಗೋದಿಲ್ವೇನ್ರಿ ಮೇಷ್ಟ್ರೇ. ನಮ್ಮ ಬಸವಣ್ಣನವರನ್ನು ಸಿದ್ದರಾಮಣ್ಣನವರು ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿದ್ದಾರೆ. ಅದಕ್ಕೇ ಈ ಸಂಭ್ರಮಾಚರಣೆ.

ಇನ್ನೊಬ್ಬ : ಬಸವಣ್ಣ ನಮ್ಮ ನಾಯಕ, ಸಾಂಸ್ಕೃತಿಕ ನಾಯಕ, 

ಮತ್ತೊಬ್ಬ : ಜೈಕಾರ ಹಾಕೋದು ನಮ್ಮ ಕಾಯಕ.

ಮೇಷ್ಟ್ರು : ಆಯ್ತ್ರಪ್ಪಾ ಆಮೇಲೆ ಜೈಕಾರ ಹಾಕೋರಂತೆ. ಮೊದಲು ನನ್ನ ಪ್ರಶ್ನೆಗೆ ಉತ್ತರಾ ಕೊಡಿ.

ಒಬ್ಬ : ಥೋ ಈ ಮೇಷ್ಟ್ರಗಳು ಎಲ್ಲಿದ್ರೂ ಪ್ರಶ್ನೆ ಕೇಳೋದೆ ಕೆಲಸಾ. ( ನಾಟಕೀಯವಾಗಿ ಕೈಕಟ್ಟಿಕೊಂಡು ನಿಂತು) ಕೇಳಿ ಗುರುಗಳೇ..

ಮೇಷ್ಟ್ರು : ಅಲ್ರಪ್ಪಾ ಬಸವಣ್ಣ ಬರೀ ನಾಯಕ ಅಲ್ಲಾ ಲಿಂಗಾಯತ ಧರ್ಮದ ಸ್ಥಾಪಕ ಕಣ್ರಯ್ಯಾ. 

ಇನ್ನೊಬ್ಬ : ಯಾಕೆ ಮೇಷ್ಟ್ರೇ ಧರ್ಮ ಸ್ಥಾಪಕರು ನಾಯಕರಾಗಬಾರದಾ?

ಮೇಷ್ಟ್ರು : ಬುದ್ದ ಧರ್ಮಸ್ಥಾಪಕನೋ ಇಲ್ಲಾ ನಾಯಕನೋ.

ಮತ್ತೊಬ್ಬ : ಬೌದ್ಧ ಧರ್ಮ ಸ್ಥಾಪನೆ ಮಾಡಿದ್ದು ಬುದ್ದನೇ ಅಲ್ವಾ ಮೇಷ್ಟ್ರೆ.

ಮೇಷ್ಟ್ರು : ಗುರುನಾನಕ್ ರವರು..

ಇನ್ನೊಬ್ಬ : ನಾನು ನಾನೇಳ್ತೇನಿ ಮೇಷ್ಟ್ರೆ. ಸಿಕ್ ಧರ್ಮ ಸ್ಥಾಪಿಸಿದರು. ಕರೆಕ್ಟಾ ಮೇಸ್ಟ್ರೇ. 

ಮೇಷ್ಟ್ರು : ಕರೆಕ್ಟ್. ಮಹಮದ್ ಪೈಗಂಬರರು..?

ಒಬ್ಬ : ಮುಸಲ್ಮಾನ ಧರ್ಮದ..

ಮೇಷ್ಟ್ರು : ಅದು ಹಾಗಲ್ಲಾ ಇಸ್ಲಾಂ ಧರ್ಮ ಸ್ಥಾಪಕರು ಅಲ್ವಾ ಸರ್.

ಒಬ್ಬ : ಇಸ್ಲಾಂ ಅಂದ್ರೂ ಒಂದೇ ಮುಸ್ಲಿಂ ಅಂದ್ರೂ ಅದೇನೇ ಅಲ್ವಾ ಮೇಸ್ಟ್ರೇ..

ಮೇಷ್ಟ್ರು : ಇರಲಿ. ಅಲ್ರಪ್ಪಾ ಇವರೆಲ್ಲಾ ಅವರವರ ಧರ್ಮದ ಸಾಂಸ್ಕೃತಿಕ ನಾಯಕರು ಅಲ್ವೇನ್ರೋ.

ಮತ್ತೊಬ್ಬ : ಅದೆಂಗಾಗುತ್ತೇ ಮೇಷ್ಟ್ರೆ ಅವರು ಧರ್ಮ ಸಂಸ್ಥಾಪಕರು ಅಷ್ಟೂ ಗೊತ್ತಾಗೋದಿಲ್ವಾ ಗುರುಗಳೇ. ನಮ್ಮನ್ನೇನು ದಡ್ಡರು ಅನ್ಕೊಂಡಿದ್ದೀರಾ?

ಮೇಷ್ಟ್ರು : ಅಲ್ರಯ್ಯಾ ಅವರೆಲ್ಲಾ ಸಂಸ್ಥಾಪಕರು ಅನ್ನೋದಾದ್ರೆ ಲಿಂಗಾಯತ ಧರ್ಮದ ಸ್ಥಾಪಕರಾದ ಬಸವಣ್ಣನವರು ಮಾತ್ರ  ಅದೆಂಗೆ ಸಾಂಸ್ಕೃತಿಕ ನಾಯಕರಾಗ್ತಾರೆ?

ಒಬ್ಬ : ಅದು.. ಅದು.. ಸಿಎಂ ಸಿದ್ದರಾಮಯ್ಯನವರು ಹಂಗಂತಾ ಘೋಷಣೆ ಮಾಡಿದ್ದಾರಲ್ಲಾ ಮೇಷ್ಟ್ರೇ.

ಇನ್ನೊಬ್ಬ : ಲಿಂಗಾಯತ ಮಠದ ಸ್ವಾಮಿಗೋಳು ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಲೇಬೇಕು ಅಂತಾ ಸಿದ್ದಣ್ಣನೋರಿಗೆ ದುಂಬಾಲು ಬಿದ್ರಲ್ಲಾ ಗುರುಗಳೇ.

ಮತ್ತೊಬ್ಬ : ವೀರಶೈವ ಮಹಾನಾಯಕರು ಸಮ್ಮೇಳನದಲ್ಲಿ ನಿರ್ಣಯ ಮಾಡಿದ್ರಲ್ಲಾ ಮೇಷ್ಟ್ರೆ. 

ಮೇಷ್ಟ್ರು : ಅದು ತಪ್ಪಲ್ವಾ. ಇಡೀ ವಿಶ್ವಕ್ಕೆ ಕಾಯಕ ಸಿದ್ದಾಂತ ಬೋಧಿಸಿದ ಧರ್ಮಗುರುವನ್ನು ಕೇವಲ ಒಂದು ರಾಜ್ಯಕ್ಕೆ ನಾಯಕ ಅನ್ನೋದು ಬಯಲನ್ನ ಬಟ್ಟಲಲ್ಲಿ ಹಿಡಿದಿಟ್ಟಂತಲ್ವಾ.

ಒಬ್ಬ : ಹೌದಾ ಗುರುಗಳೇ.

ಮೇಷ್ಟ್ರು :  ಹೋಗಲಿ ಬಸವಣ್ಣನವರು ಯಾವ ಸಂಸ್ಕೃತಿಗೆ ನಾಯಕರು ಅದನ್ನಾದ್ರೂ ಹೇಳ್ರಪಾ.

ಮತ್ತೊಬ್ಬ : ಯಾವ ಸಂಸ್ಕೃತಿ ಅಂದ್ರೆ... ನಮ್ಮ ಸಂಸ್ಕೃತಿ ಮೇಷ್ಟ್ರೇ.

ಮೇಷ್ಟ್ರು : ಅಂದ್ರೆ ವೈದಿಕರ  ಸಂಸ್ಕೃತಿನಾ? 

ಇನ್ನೊಬ್ಬ : ಛೇ.. ಬಸವಣ್ಣನವರಿಗೂ ವೈದಿಕರಿಗೂ ಆಗಿ ಬರೋದಿಲ್ವಲ್ಲಾ ಗುರುವೇ.

ಮೇಷ್ಟ್ರು : ಮತ್ತೆ ವೀರಶೈವರ ಪುರೋಹಿತ ಸಂಸ್ಕೃತಿನಾ?

ಒಬ್ಬ : ಬಸವಣ್ಣನವರು ಪೌರೋಹಿತ್ಯದ ವಿರೋಧಿ ಅಲ್ವಾ ಮೇಷ್ಟ್ರೆ.

ಮೇಷ್ಟ್ರು : ಹಂಗಾದ್ರೆ ಮುಸ್ಲಿಂ ಇಲ್ಲಾ ಕ್ರಿಶ್ಚಿಯನ್ ಸಂಸ್ಕೃತಿಯ ನಾಯಕರಾ?

ಇನ್ನೊಬ್ಬ : ಚೇ ಛೇ ಅದೆಂಗಾಗುತ್ತೆ.. ಅವರು ಬೇರೆ ಧರ್ಮದವರಲ್ವಾ?

ಮೇಷ್ಟ್ರು : ಹಾಗಾದ್ರೆ ಕುರುಬರ ಸಾಂಸ್ಕೃತಿಕ ನಾಯಕರೆ.

ಮತ್ತೊಬ್ಬ : ಅವರಿಗೆ ಕನಕದಾಸರು ಇದ್ದಾರಲ್ಲಾ ಗುರುಗಳೇ.

ಮೇಷ್ಟ್ರು : ಮತ್ತೆ ಬಸವಣ್ಣನವರು ಒಕ್ಕಲಿಗರಿಗೂ ನಾಯಕರೇ.

ಒಬ್ಬ : ಏನು ಮಾತು ಅಂತಾ ಆಡ್ತೀರಿ ಗುರುವೇ. ಆ ಜಾತಿಯವರಿಗೆ ಕೆಂಪೇಗೌಡರು ನಾಯಕರಲ್ಲವ್ರಾ?

ಮೇಷ್ಟ್ರು : ದಲಿತ ಸಮುದಾಯ ಬಸವಣ್ಣನವರನ್ನು  ನಾಯಕ ಅಂತಾ ಒಪ್ಪಿಕೊಳ್ಳುತ್ತಾ?

ಇನ್ನೊಬ್ಬ : ಸಾಧ್ಯವೇ ಇಲ್ಲಾ. ಅಂಬೇಡ್ಕರ್ ರವರೇ ಅವರ ನಾಯಕರು. 

ಮೇಷ್ಟ್ರು : ಮತ್ತೆ ಬೇಡ ಜನಾಂಗದವರಿಗೆ

ಮತ್ತೊಬ್ಬ : ವಾಲ್ಮೀಕಿ ಮೇಷ್ಟ್ರೇ ವಾಲ್ಮೀಕಿ ಅವರ ಸಾಂಸ್ಕೃತಿಕ ನಾಯಕ.

ಮೇಷ್ಟ್ರು : ಎಲ್ಲಾ ಜಾತಿಗೂ ಬೇರೆ ನಾಯಕರು ಇರುವಾಗ ಬಸವಣ್ಣ ಯಾರಿಗೆ ನಾಯಕರು? 

ಒಬ್ಬ : ಅವರು.. ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕರು ಮೇಷ್ಟ್ರೆ.

ಮೇಷ್ಟ್ರು : ಅಲ್ರಯ್ಯಾ.. ಕರ್ನಾಟಕ ಅನ್ನೋದು ಒಂದು ಸಂಸ್ಕೃತಿ ಅಲ್ರಯ್ಯಾ. ಹಲವಾರು ಸಂಸ್ಕೃತಿಗಳಿರುವ ನಾಡು. ಅದರಲ್ಲಿ ಬಸವಣ್ಣ ಯಾವ ಸಂಸ್ಕೃತಿಯ ನಾಯಕ ಅದನ್ನು ಹೇಳ್ರಪಾ.

ಮತ್ತೊಬ್ಬ : (ತಲೆ ಕೆರೆದುಕೊಂಡು.) ಲಿಂಗಾಯತರ ನಾಯಕ ಅಲ್ವಾ ಗುರುಗಳೇ.

ಮೇಷ್ಟ್ರು : ತಪ್ಪು. ಅವರು ಲಿಂಗಾಯತರಿಗೆ ಕೇವಲ ನಾಯಕ ಅಲ್ರಪ್ಪಾ, ಲಿಂಗಾಯತ ಧರ್ಮದ ಸ್ಥಾಪಕ. 

ಇನ್ನೊಬ್ಬ : ತಪ್ಪಾಗಿ ಹೇಳ್ತಿದ್ದೀರಾ ಮೇಷ್ಟ್ರೆ. ಲಿಂಗಾಯತ ಅನ್ನೋದು ಜಾತಿ ಅಲ್ವರಾ. ಅದು ಹೇಗೆ ಧರ್ಮ ಆಗುತ್ತೆ.

ಮೇಷ್ಟ್ರು : ಧರ್ಮ ಅಂದ್ರೆ ಏನ್ರಪ್ಪಾ?

ಒಬ್ಬ : ಅದಕ್ಕೆ ಒಬ್ಬರು ಸ್ಥಾಪಕರಿರಬೇಕು.

ಮೇಷ್ಟ್ರು : ಬಸವಣ್ಣನವರೇ ಲಿಂಗಾಯತದ ಸ್ಥಾಪಕರು.

ಇನ್ನೊಬ್ಬ : ಧರ್ಮಕ್ಕೆ ತನ್ನದೇ ಆದ ಧರ್ಮಗ್ರಂಥ ಇರಬೇಕು ಮೇಷ್ಟ್ರೆ.

ಮೇಷ್ಟ್ರು : ವಚನಗಳೇ ಲಿಂಗಾಯತರ ಧರ್ಮಗ್ರಂಥ ಅಲ್ವೇನ್ರೋ.

ಮತ್ತೊಬ್ಬ : ಆಚಾರ ವಿಚಾರ ಭಿನ್ನವಾಗಿರಬೇಕು.

ಮೇಷ್ಟ್ರು : ಏಕದೇವೋಪಾಸನೆಯೇ ಆಚಾರ, ವಚನಗಳಲ್ಲಿ ಹೇಳಿರೋದೇ ವಿಚಾರ ಅಲ್ವೇನ್ರಪ್ಪಾ.

ಒಬ್ಬ : ಹಂಗಾದ್ರೆ ಲಿಂಗಾಯತವೂ ಒಂದು ಸ್ವತಂತ್ರ ಧರ್ಮ ಅಂದಂಗಾಯ್ತು ಅಲ್ವಾ ಮೇಷ್ಟ್ರೆ. ಆದರೆ ಯಾಕೆ ಮಾನ್ಯತೆ ಮಾಡಿಲ್ಲಾ?

ಮೇಷ್ಟ್ರು : ಬಿಡ್ತಿಲ್ಲಪ್ಪಾ. ಲಿಂಗಾಯತರ ಬೆನ್ನಿಗೆ ಬೇತಾಳದಂತೆ ಬಿದ್ದಿರುವ ಪಂಚಾಚಾರ್ಯ ವೀರಶೈವರು ಲಿಂಗಾಯತ ಸ್ವತಂತ್ರ ಧರ್ಮ ಆಗೋದಿಕ್ಕೆ ಬಿಡ್ತಿಲ್ಲಾ. ಆಗೋದೇ ಆದ್ರೆ ವೀರಶೈವ ಲಿಂಗಾಯತ ಎರಡೂ ಸೇರಿಯೇ ಪ್ರತ್ಯೇಕ ಧರ್ಮ ಆಗಬೇಕು ಅಂತಾರೆ.

ಇನ್ನೊಬ್ಬ : ಅದೆಂಗಾಗುತ್ತೆ ಮೇಷ್ಟ್ರೆ. ಸನಾತನಿ ವೀರಶೈವರ ಆಚಾರ ವಿಚಾರಗಳೇ ಬೇರೆ. ಬಸವ ಧರ್ಮದವೇ ಬೇರೆ. ಎರಡೂ ಹೆಂಗೆ ಒಂದಾಗುತ್ತದೆ.

ಮೇಷ್ಟ್ರು : ಆಗೋದಿಲ್ಲ ಅಲ್ವಾ? ಆದ್ರೂ ಈ ವೀರಶೈವರು ಬಿಡ್ತಿಲ್ಲ. ಜೊತೆಗೆ ವೈದಿಕರಿಗೂ ಲಿಂಗಾಯತ ಧರ್ಮ ಆಗೋದಿಕ್ಕೆ ಸಮ್ಮತವಿಲ್ಲ.

ಮತ್ತೊಬ್ಬ : ಅವರಿಗೇನು ರೋಗ ಮೇಷ್ಟ್ರೆ. ಈ ಪುರೋಹಿತಶಾಹಿಗಳನ್ನ ವಿರೋಧಿಸಿಯೇ ಬಸವಣ್ಣನವರು ಎಲ್ಲಾ ಜಾತಿಯ ಶ್ರಮಜೀವಿಗಳನ್ನು ಸೇರಿಸಿ ಲಿಂಗಾಯತ ಧರ್ಮ ಮಾಡಿದ್ದಾರಲ್ವಾ.

ಮೇಷ್ಟ್ರು : ಹೌದಪ್ಪಾ. ಲಿಂಗಾಯತವೂ ಹಿಂದೂ ಧರ್ಮದ ಭಾಗ. ಬೇರೆ ಆಗಲು ಸಾಧ್ಯವಿಲ್ಲ ಎನ್ನುವುದು ಹಿಂದುತ್ವವಾದಿಗಳ ವಿತಂಡವಾದ.

ಒಬ್ಬ : ಇದ್ಯಾಕೋ ಸರಿಯಲ್ಲಾ ಬಿಡಿ ಮೇಷ್ಟ್ರೆ. ಇದನ್ನ ಒಪ್ಪೋಕಾಗೋದಿಲ್ಲ. ಲಿಂಗಾಯತರೂ ಹಿಂದೂ ಧರ್ಮದವರು ಎಂದರೆ ಬಸವಣ್ಣನವರ ತತ್ವಗಳನ್ನು ಈ ಪುರೋಹಿತರು ಒಪ್ತಾರಾ? ಗುಡಿ ಗುಂಡಾರ ಪೌರೋಹಿತ್ಯ ಬಿಡ್ತಾರಾ. ಎಲ್ಲರೂ ಸಮಾನರು ಅಂತಾ ಹೇಳ್ತಾರಾ?

ಇನ್ನೊಬ್ಬ : ಲೇ ಸನಾತನಿಗಳು ಪ್ರಾಣ ಬೇಕಾದ್ರೂ ಬಿಡ್ತಾರೇ ಹೊರತು ದೇವರು ದೇವಸ್ಥಾನ ಬಿಡೋದಕ್ಕೆ ಸಾಧ್ಯವೇ ಇಲ್ಲಾ. ಅವು ಇದ್ರೆ ಅಲ್ವಾ ಅವರಿಗೆ ಜನರಲ್ಲಿ ಮೌಢ್ಯ ಬಿತ್ತಿ ಶೋಷಣೆ ಮಾಡೋಕೆ ಸಾಧ್ಯ.

ಮೇಷ್ಟ್ರು : ಸರಿಯಾಗಿ ಹೇಳಿದೆ ನೋಡು. ಈ ಸನಾತನ ಸಂಸ್ಕೃತಿಯ ವೈದಿಕರು ಹಾಗೂ ವೀರಶೈವರು ಶರಣರ ತತ್ವ ಸಿದ್ದಾಂತಗಳನ್ನು ಎಂದೂ ಒಪ್ಪಲು ಸಾಧ್ಯವಿಲ್ಲ. ಹಾಗಂತ ಲಿಂಗಾಯತ ಸ್ವತಂತ್ರ ಧರ್ಮ ಆಗೋಕೂ ಬಿಡ್ತಾ ಇಲ್ಲಾ. 

ಮತ್ತೊಬ್ಬ : ಅದೆಂಗಾಗುತ್ತೆ ಮೇಷ್ಟ್ರೆ.  ಅವರು ಬಸವಧರ್ಮದ ಆಚಾರ ವಿಚಾರ ಅನುಸರಿಸಲಿ ಇಲ್ಲವಾದರೆ ಲಿಂಗಾಯತ ಬೇರೆ ಧರ್ಮ ಅಂತಾ ಒಪ್ಪಿಕೊಳ್ಳಲಿ.

ಮೇಷ್ಟ್ರು : ಹಿಂಗೆ ಲಿಂಗಾಯತರು ಒತ್ತಾಯ ಮಾಡ್ತಾರೆ ಅಂತಾ ಗೊತ್ತಿದ್ದೇ, ಲಿಂಗಾಯತರ ಆಕ್ರೋಶ ಕಡಿಮೆ ಮಾಡಲು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ವೀರಶೈವರು ಆಗ್ರಹಿಸಿರುವುದು. ವೀರಶೈವರ ಕುತಂತ್ರ ಅರಿಯದ ಲಿಂಗಾಯತ ಮಠಾಧೀಶರೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು. ವೀರಶೈವ ಲಿಂಗಾಯತರ  ಮತಗಳ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯನವರು ಅತೀ ಅವಸರದಲ್ಲಿ ಸಂಪುಟ ಸಭೆ ಕರೆದು ಬಸವಣ್ಣನವರನ್ನು ಕರ್ನಾಟಕದ ನಾಯಕ ಅಂತಾ ಅಧೀಕೃತವಾಗಿ ಘೋಷಣೆ ಮಾಡಿದ್ದು.

ಒಬ್ಬ : ಓಹೋ ಇದಾ ಮೇಷ್ಟ್ರೆ ಹಕೀಕತ್ತು. ಧರ್ಮಸಂಸ್ಥಾಪಕರನ್ನು ನಾಯಕ ಅಂತಾ ಘೋಷಿಸಿದ್ದರ ಹಿಂದಿನ ಮಸಲತ್ತು. 

ಇನ್ನೊಬ್ಬ : ಬೇರೆ ಯಾವ ಜಾತಿ ಜನಾಂಗ ಧರ್ಮದವರೂ ಸಹಮತದಿಂದ ಒಪ್ಪಲಾಗದ ನಾಯಕನ ಪಟ್ಟ ಬಸವಣ್ಣನವರಿಗೆ ಬೇಡಾ ಅಂದ್ರೆ ಬೇಡಾ.

ಮತ್ತೊಬ್ಬ : ಹೌದು.. ಬಸವಣ್ಣ ಬರೀ ನಾಯಕರಲ್ಲಾ ಧರ್ಮಸಂಸ್ಥಾಪಕರು. ಇವತ್ತು ನಮ್ಮ ಕಣ್ಣಿಗೆ ಸನಾತನಿಗಳು ಕಟ್ಟಿದ ಕಣ್ಕಟ್ಟು ಬಿಚ್ಚಿ ಅರಿವು ಮೂಡಿಸಿದಿರಿ ಗುರುಗಳೇ. 

ಮೇಷ್ಟ್ರು : ಅರಿವೇ ಗುರು ಕಣ್ರಪ್ಪಾ. ಇನ್ಮೇಲೆ ಏನು ಮಾಡಬೇಕು ಅನ್ನೋದು ನಿಮಗೆ ಬಿಟ್ಟಿದ್ದು.

ಒಬ್ಬ : ಲಿಂಗಾಯತ ಸ್ವತಂತ್ರ ಧರ್ಮ ಆಗಲೇಬೇಕು.

ಎಲ್ಲರೂ : ಆಗಲೇಬೇಕು, ಆಗಲೇಬೇಕು.

ಇನ್ನೊಬ್ಬ : ಬಸವಣ್ಣನವರು ಬರೀ ನಾಯಕರಲ್ಲಾ ಧರ್ಮ ಸಂಸ್ಥಾಪಕರು

ಎಲ್ಲರೂ : ಧರ್ಮ ಸಂಸ್ಥಾಪಕರು.

ಒಬ್ಬ : ಧಿಕ್ಕಾರಾ ಧಿಕ್ಕಾರಾ.

ಇನ್ನೊಬ್ಬ : ಲಿಂಗಾಯತ ಧರ್ಮ ವಿರೋಧಿಗಳಿಗೆ ಧಿಕ್ಕಾರಾ.

ಒಬ್ಬ : ಧಿಕ್ಕಾರಾ ಧಿಕ್ಕಾರಾ..

ಮತ್ತೊಬ್ಬ : ಪುರೋಹಿತಶಾಹಿ ಸನಾತನಿಗಳಿಗೆ ಧಿಕ್ಕಾರ.

ಒಬ್ಬ : ಘೋಷಿಸಿ ಘೋಷಿಸಿ

ಮತ್ತೊಬ್ಬ : ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸಿ.

ಒಬ್ಬ : ಪರಿಗಣಿಸಿ ಪರಿಗಣಿಸಿ

ಇನ್ನೊಬ್ಬ : ಬಸವಣ್ಣನವರನ್ನು ಧರ್ಮ ಸಂಸ್ಥಾಪಕರು ಎಂದು ಪರಿಗಣಿಸಿ.

ಒಬ್ಬ : ನಮ್ಮದು ಜಾತಿ ಬೇಧವಿಲ್ಲದ ಬಸವ ಧರ್ಮ

ಇನ್ನೊಬ್ಬ : ನಮ್ಮದು ಕಾಯಕ ಜೀವಿಗಳ ಶರಣ ಧರ್ಮ

ಮತ್ತೊಬ್ಬ : ನಮ್ಮದು ಸಮಾನತೆ ಸಾರುವ ಲಿಂಗಾಯತ ಧರ್ಮ. 

ವೀರಶೈವ : (ಪ್ರವೇಶಿಸಿ) ಅದೆಂಗಾಗುತ್ತೆ ನಾವು ವೀರಶೈವರು ಲಿಂಗಾಯತರ ಗುರುಗಳು. ಅಯ್ನೋರು. ಜಂಗಮ ಜಗದ್ಗುರುಗಳು. ನಮ್ಮನ್ನ ಬಿಟ್ಟು ನೀವು ಹೇಗೆ ಸ್ವತಂತ್ರ ಧರ್ಮ ಅಂತಾ ಅನ್ನೋಕಾಗುತ್ತೆ.

ಇನ್ನೊಬ್ಬ : ಹಾಗಾದ್ರೆ ಕಲ್ಲು ಮಣ್ಣು ಕಟ್ಟಿಗೆ ಪಂಚಲೋಹದ ದೇವರು ದೇವರಲ್ಲಾ ಅಂತಾ ಬಸವಣ್ಣನವರು ಹೇಳಿದ್ದಾರಲ್ಲಾ ನೀವು ಅದನ್ನು ಒಪ್ಪಿಕೊಂಡು ಇಷ್ಟಲಿಂಗದ ಆರಾಧಕರಾಗ್ತೀರಾ? 

ವೀರಶೈವ : ಅದು ನಮ್ಮ ಪಂಚಾಚಾರ್ಯ ಆಚಾರಕ್ಕೆ ಸಮ್ಮತವಿಲ್ಲ.

ಇನ್ನೊಬ್ಬ : ಬಸವಣ್ಣನವರ ತತ್ವಗಳನ್ನೇ ಒಪ್ಪದ ನೀವು ಹೇಗೆ ನಮ್ಮವರಾಗ್ತೀರಿ?

ಪುರೋಹಿತ : ನಾವು ನೀವೆಲ್ಲಾ ಒಂದು, ನಾವೆಲ್ಲಾ ಹಿಂದೂ. ನೀವು ಹೇಗೆ ಸ್ವಂತಂತ್ರ ಧರ್ಮ ಆಗೋದಿಕ್ಕೆ ಸಾಧ್ಯ? ನಾವು ಬಿಟ್ಟಬಿಡ್ತೀವಾ?

ಮೇಷ್ಟ್ರು : ಆಯ್ತು.. ನೀವೂ ಲಿಂಗಾಯತ ಸಿದ್ದಾಂತ ಒಪ್ತೀರಾ. ದೇಗುಲಗಳ ಬಿಟ್ಟು ದೇಹವೇ ದೇಗುಲ ಎಂದು ಹೇಳ್ತೀರಾ? ವೇದ ಶಾಸ್ತ್ರ ಪುರಾಣ ಆಗಮಗಳನ್ನು ತ್ಯಜಿಸ್ತೀರಾ?

ಪುರೋಹಿತ : ಅದೆಂಗಾಗುತ್ತೆ.  ಅವುಗಳನ್ನ ಬಿಟ್ಟು ಹೇಗೆ ಬದುಕೋಲು ಸಾಧ್ಯವಾಗುತ್ತೆ.

ಮೇಷ್ಟ್ರು : ಹಾಗಾದ್ರೆ ನಿಮ್ಮ ಆಚಾರ ವಿಚಾರ ನಂಬಿಕೆಗಳೇ ಬೇರೆ. ಬಸವ ಧರ್ಮವೇ ಬೇರೆ. ಆದ್ದರಿಂದ ನಿಮ್ಮಷ್ಟಕ್ಕೆ ನೀವೀರಿ. ಲಿಂಗಾಯತ ಸ್ವತಂತ್ರ ಧರ್ಮ ಸುಮ್ಮನಿರಿ.

ವೀರಶೈವ : (ಲಬೋ ಲಬೋ ಅಂತಾ ಬಾಯಿಬಡಿದುಕೊಳ್ಳುತ್ತಾ) ಹೋಯ್ತು ಎಲ್ಲಾ ಹೋಯ್ತು. ಅಯ್ಯೋ ಈ ಮೇಷ್ಟ್ರು ಧರ್ಮದ್ರೋಹಿ. 

ಪುರೋಹಿತ : ಹೌದೌದು. ಹಿಂದೂ ವಿರೋಧಿ. ಇಂತವರಿಗೆ ಪಾಠ ಕಲಿಸಲೇಬೇಕು.

ಒಬ್ಬ : ಮೊದಲು ನೀವು ಪಾಠ ಕಲೀರಿ. ಜನರ ಭಾವನೆಗಳಿಗೆ ನಿಮ್ಮ ನಂಬಿಕೆಗಳನ್ನು ತುಂಬಿ ಶೋಷಣೆ ಮಾಡಿದ್ದು ಸಾಕು. ಲಿಂಗಾಯತ ಸ್ವತಂತ್ರ ಧರ್ಮ ಆಗಲೇಬೇಕು. ( ಎನ್ನುತ್ತಾ ಆ ಸನಾತನಿಗಳನ್ನು ಎಳೆದುಕೊಂಡು ಹೋಗುತ್ತಾರೆ)

ಪುರೋಹಿತ : ಬಿಡ್ರೋ.. ಏ ಬಿಡ್ರಯ್ಯಾ ನನ್ನ.

ಒಬ್ಬ : ಬಿಟ್ರೆ ನೀವು ನಮ್ಮನ್ನ ಬಿಡೋದಿಲ್ಲ. ಸುಮ್ಮನೆ ಇದ್ರೆ ಸರಿ.. ( ಎಂದು ಬಾಯಿ ಮುಚ್ಚುತ್ತಾನೆ)

ವೀರಶೈವ : ಅಯ್ಯೋ ನನ್ನ ಬಿಟ್ಟು ಬಿಡ್ರೋ. ನಾವು ನಿಮ್ಮ ಜಗದ್ಗುರುಗಳು. ನಿಮಗೆ ಪಾಪ ಸುತ್ಕೊಳ್ಳುತ್ತೆ.

ಇನ್ನೊಬ್ಬ : ನೀವೇ ನಮಗೆ ಸುತ್ತಿಕೊಂಡ ಪಾಪ. ನಿಮ್ಮ ಪಾಡಿಗೆ ನೀವಿರಬೇಕು. ಲಿಂಗಾಯತ ಸ್ವತಂತ್ರ ಧರ್ಮ ಆಗಲೇಬೇಕು. ( ಎನ್ನುತ್ತಾ ಬಾಯಿಗೆ ಬಟ್ಟೆ ಕಟ್ಟುತ್ತಾನೆ.

ಮೇಷ್ಟ್ರು : ಅವರ ಬಾಯಿ ಕಟ್ಟಿ ಏನೂ ಪ್ರಯೋಜನ ಇಲ್ರಪ್ಪಾ. ಮೊದಲು ನೀವು ಲಿಂಗಾಯತರು ಜಾಗ್ರತರಾಗಿ. ಪುರೋಹಿತರ ಆಚಾರಗಳ ಹಿಡಿತದಿಂದ ಹೊರಗೆ ಬನ್ನಿ. ಗುಡಿ ಗುಂಡಾರಗಳ ಸುತ್ತುವುದನ್ನು ಮೊದಲು ಬಿಡಿ. ವಚನಗಳು ತೋರುವ ಬೆಳಕಿನ ಹಾದಿಯಲ್ಲಿ ನಡೆಯುವುದನ್ನು ಕಲಿಯಿರಿ ಮತ್ತು ಇತರರಿಗೂ ಕಲಿಸಿರಿ.

ಒಬ್ಬ : ಆಯ್ತು ಮೇಷ್ಟ್ರೆ ಹಾಗೇ ಮಾಡ್ತೀವಿ. ಮನೆ ಮನೆಗೆ ಹೋಗಿ ಲಿಂಗಾಯತರಲ್ಲಿ ಜಾಗ್ರತೆ ಮೂಡಿಸ್ತೇವೆ. ಸ್ವತಂತ್ರ ಧರ್ಮಕ್ಕಾಗಿ ಹೋರಾಡುತ್ತೇವೆ.

ಇನ್ನೊಬ್ಬ : ಲಿಂಗಾಯತ ಸ್ವತಂತ್ರ ಧರ್ಮ

ಎಲ್ಲರೂ  : ಆಗಲಿ ಆಗಲಿ.

ಒಬ್ಬ : ಬಸಬಣ್ಣ ಕೇವಲ ಸಾಂಸ್ಕೃತಿಕ ನಾಯಕನಲ್ಲಾ.

ಎಲ್ಲರೂ : ಸಮಾನತಾ ಧರ್ಮ ಸಂಸ್ಥಾಪಕ. 

ಒಬ್ಬ : ಬಸವಣ್ಣಾ ಉಘೆ ಉಘೇ

ಎಲ್ಲರೂ : ಉಘೇ ಉಘೆ..

(ಹಿನ್ನೆಲೆಯಲ್ಲಿ ವಚನ)

- ಶಶಿಕಾಂತ ಯಡಹಳ್ಳಿ

Comments

Post a Comment

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ