ಪೋಸ್ಟಮಾರ್ಟಂ ಅರ್ಥಾತ್ ಸೂತಕ ಸಭೆ ( ಪ್ರಹಸನ-9)
ಪ್ರಹಸನ-9
ಪೋಸ್ಟಮಾರ್ಟಂ ಅರ್ಥಾತ್ ಸೂತಕ ಸಭೆ
*************************
(ಹೂಪಕ್ಷದ ಕಾರ್ಯಾಲಯ. ಚುನಾವಣೆ ಸೋಲಿನ ಆತ್ಮಾವಲೋಕನ ಈ ಸಭೆಯ ಅಜೆಂಡಾ.)
ಬೊಮ್ಮಣ್ಣ : ಎಲ್ರೂ ಹೀಗೆ ಸೂತಕದ ಮನೆಯಲ್ಲಿ ಕೂತ ಹಾಗೆ ದುಃಖತಪ್ತರಾಗಿ ಕೂತರೆ ಹೇಗೆ.
ಪಿಟೀಲು : ಹೀಗೆ ಆಗಬಾರದಿತ್ತು ಏನೋ ಆಯ್ತು. ಹೀಗ್ಯಾಕಾಯ್ತು ಅಂತಾ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು.
ಅಸೋಕ : ಸೋಲು ಗೆಲುವು ಎಲ್ಲಾ ರಾಜಕೀಯದಲ್ಲಿ ಮಾಮೂಲು. ನಾನೇ ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಠೇವಣಿ ಕಳೆದುಕೊಂಡಿಲ್ವಾ.
ಶೋಮಣ್ಣ : ನೀವೇನೋ ಒಂದರಲ್ಲಾದ್ರೂ ಗೆದ್ದಿದ್ದೀರಿ ಸ್ವಾಮಿ. ನಂದು ನೋಡಿ ಎರಡರಲ್ಲೂ ಹೊಗೆ. ನನ್ನ ಚಿನ್ನದಂತಾ ಕ್ಷೇತ್ರ ಬಿಟ್ಟುಕೊಟ್ಟು ಬೀದಿಪಾಲಾದೆ..
ಪಿಟೀಲು : ದಯವಿಟ್ಟು ಶಾಂತರಾಗಿ. ಇದು ಆತ್ಮಾವಲೋಕನ ಸಭೆ. ಏನೇ ಆಗಲಿ ಹೂಪಕ್ಷದ ಅಧ್ಯಕ್ಷನಾಗಿ ಹೀನಾಯ ಸೋಲಿನ ಹೊಣೆಯನ್ನು ನಾನು ಹೊತ್ಕೋತೇನೆ.
ಬೊಮ್ಮಣ್ಣ : ಇಲ್ಲಾ ಇಲ್ಲಾ. ಹೂಪಕ್ಷದ ಮು.ಮಂತ್ರಿಯಾಗಿದ್ದ ನಾನು ಸಂಪೂರ್ಣವಾಗಿ ಸೋಲಿನ ಹೊಣೆ ಹೊತ್ಕೊಳ್ಳುವೆ.
ಯತ್ನಾಲು : ( ಸ್ವಗತ) ಸತ್ತಿರೋ ಹೆಣ ಹೊರಾಕ ಯಾರಾದರೇನು ಬಿಡ್ರಿ.
ಕಟೀಲು : ಏನು ಏನಂದ್ರಿ.. ಸ್ವಲ್ಪ ಜೋರಾಗಿ ಹೇಳಿ.
ಯತ್ನಾಲು : ಏನಿಲ್ಲ ಬಿಡ್ರಿ. ನಂದೊಂದ್ ಪ್ರಶ್ನಾ ಐತಿ. ಏನಪಾಂದ್ರ.. ಒಂದವ್ಯಾಳೆ ಹೂಪಕ್ಷ ಗೆದ್ದಿದ್ರ ಅದಕ್ಯಾರು ಕಾರಣ ಅಂತಾ ಹೇಳ್ತಿದ್ರಿ.
ಬೊಮ್ಮಣ್ಣ : ವಿಶ್ವಗುರು ಮೋದಿಯವರು ಅನ್ನೋದು ಗೊತ್ತಿರುವ ವಿಷ್ಯಾ.
ಕಟೀಲು : ಅವರ ಮುಖ ತೋರಿಸಿ, ಹೆಸರು ಹೇಳಿ ಚುನಾವಣೆಗೆ ಹೋಗಿದ್ದಲ್ವಾ.
ಯತ್ನಾಲು : ಗೆದ್ರ ಅವರು ಕಾರಣ ಆಗೂದಾದ್ರ, ಈಗ ಪಕ್ಷ ಹೀನಾಯವಾಗಿ ಸೋತಿದ್ದಕ್ಕೂ..
ಕಟೀಲ್ : ತೋ.. ಮುಂದ್ ಏನೂ ಹೇಳೋದ್ ಬೇಡಾ ಸುಮ್ಕಿರ್ರಿ. ಯಾರಾದ್ರೂ ಹೊರಗ ಲೀಕ್ ಮಾಡಿದ್ರ ನಮಗೆಲ್ಲಾ ತೊಂದರೆ ಆಗ್ತದ. ಸೋತಿದ್ದಕ್ಕ ಹೊಣೆ ನಾನೇ ಹೊತ್ಕೋತೀನಿ ಅಂದನೆಲ್ಲಾ.
ಬೊಮ್ಮಣ್ಣ : ನಾನೂ ಹೊರ್ತೀನಿ ಸುಮ್ಕಿರ್ರಿ..
ಯತ್ನಾಲು : ( ಸ್ವಗತ) ಹೊರದ ಏನ್ಮಾಡ್ತೀರಿ,
ಅವರು ಕಾಲಿಂದಾ ಸೋರ್ಸಿದ್ದನ್ನ ತಲಿಯಿಂದ ಮಾಡೋ ಗುಲಾಮನನ್ನಮಕ್ಳು ನೀವು.
ಕಟೀಲು : ಹಾಂ.. ಏನಂದ್ರಿ.. ಏನೋ ಅಂದಹಾಗಾಯ್ತು.
ಯತ್ನಾಲು : ಏನಿಲ್ಲ ಹೋಗ್ಲಿ ಬಿಡ್ರಿ. ಮುಂದss
ಕಟೀಲು : ಈಗ ಅಧಿಕಾರ ಕಳಕೊಂಡಿದ್ದಕ್ಕ ಎಲ್ಲರೂ ಎದ್ದು ಒಂದು ನಿಮಿಷ ಮೌನಾಚರಣೆ ಮಾಡಿ ಶೃದ್ದಾಂಜಲಿ ಸಲ್ಲಿಸಿದ್ರ ಹೇಗೆ..
ಬೊಮ್ಮಣ್ಣ : ಥೋ ಥೋ.. ಇಲ್ಲಿ ಯಾರೂ ಸತ್ತಿಲ್ಲ ಸುಮ್ಕಿರ್ರಿ.. ಈಗ ಬರೀ ಸೋತಿದ್ದೀವಿ. ಮುಂದ ಮತ್ತ ಗೆದ್ದಗೆಲ್ತಿವಿ.
ಅಸೋಕ : ನಾವೆಲ್ಲಿ ಸೋತಿದ್ದೀವಿ. ನಂಬರ್ ಕಡಿಮೆ ಬಂದ್ವು ಅಷ್ಟೇ. ಓಟಿಂಗ್ ಪರ್ಸಂಟೇಜ್ ಅಷ್ಟೇ ಇದೆಯಲ್ವಾ.
ಬೊಮ್ಮಣ್ಣ : ಹೌದೌದು.. ಕಳೆದ ಇಲೆಕ್ಷನ್ ದಾಗ 36 ಪರ್ಸೆಂಟ್ ಜನ ಹೂಪಕ್ಷಕ್ಕೆ ಓಟ್ ಹಾಕಿದ್ರು ಈಗಲೂ ಅಷ್ಟೇ ಜನ ಮತ ಹಾಕಿದ್ದಾರ ಅಂದಮೇಲೆ ಓಟಿನ ಲೆಕ್ಕದಲ್ಲಿ ನಾವು ಸೋತಿಲ್ಲ.
ಪಿಟೀಲು : ಸರಿಯಾಗಿ ಹೇಳಿದ್ರಿ. ನಾವು ಸೋತಿಲ್ಲಾ. ಆದರೆ ಆ ಹಸ್ತದ ಪಕ್ಷದವರು ಗೆದ್ದಿದ್ದಾರೆ ಅಷ್ಟೇ. ಅಂದ್ರೆ ನಮ್ಮ ಸೋಲಿಗೆ ಜನ ಕಾರಣ ಅಲ್ಲಾ ಕೈಪಕ್ಷದವರೇ ಕಾರಣ.
ಅಸೋಕ : ಇನ್ನೊಂದು ಸ್ವಲ್ಪ ಅವರಿಗೆ ಕಡಿಮೆ ಸೀಟ್ ಬಂದಿದ್ರೆ ಆಪರೇಶನ್ ಮಾಡ್ಬೋದಾಗಿತ್ತು. ಪ್ಲಾನ್ ಎ ಬಿ ಸಿ ರೆಡಿಯಾಗಿತ್ತು. ಆದರೇನು ಮಾಡಲಿ ಜನರೇ ನಮಗೆ ಆಪರೇಶನ್ ಮಾಡಿ ಸೋಲಿಸಿದ್ರು.
ಬೊಮ್ಮಣ್ಣ : ಇರ್ಲಿ ಬಿಡು ಅಸೋಕಾ ಬ್ಯಾಡಾ ಈ ಶೋಕ. ಸಿಗತೈತೆ. ಅವಕಾಶ ಸಿಕ್ಕೇ ಸಿಗತೈತೆ, ಕಾಯ್ತಾ ಇರ್ಬೇಕು, ಅವಕಾಶ ಸಿಕ್ತಪಾಂತಂದ್ರ ಆಪರೇಶನ್ ಮಾಡಿ ಮುಗಿಸ್ಬೇಕು ಅಷ್ಟss. ಆಪರೇಶನ್ ಕಿಟ್ ರೆಡಿ ಇಟ್ಕೊಂಡಿರಿ, ಬಾಂಬೇಲಿ ರಿಸಾಲ್ಟ್ ಬುಕ್ ಮಾಡ್ಕೊಂಡಿರಿ..
ಪಿಟೀಲು : ಆಪರೇಶನ್ ಮಾಡೊದನ್ನ ನಮಗೆ ಹೇಳಿಕೊಡಬೇಕಾ. ಅದಕ್ಕೆ ಹೂಪಕ್ಷದಾಗ ಬೇಕಾದಷ್ಟು ಸ್ಪೇಶಲಿಸ್ಟ್ ಡಾಕ್ಟರಗಳು ಇದ್ದಾರ.
ಬೊಮ್ಮಣ್ಣ : ಆಯ್ತಾಯ್ತು.. ಟೈಮ್ ನೋಡಿ ಆಪರೇಶನ್ ಮಾಡಿದ್ರಾಯ್ತು. ಈಗ ಅವಲೋಕನ, ಆತ್ಮಾವಲೋಕನ ಮಾಡ್ಕೋಬೇಕಲ್ವಾ..
ಯತ್ನಾಲು : (ಸ್ವಗತ) ಏನ್ ಮಾಡೂದು ಇವ್ರ ಪಿಂಡಾ. ಯಪ್ಪ ಬೊಮ್ಮನ ಬದ್ಲಾಗಿ ನನ್ನ ಸಿಎಂ ಮಾಡಿದ್ರ ಈ ಗತಿ ಬರ್ತಿತ್ತಾ. ಎಲ್ಲಾ ಸಾಬರನ್ನ ಪಾಕಿಸ್ತಾನಕ್ಕ ಪಾರ್ಸಲ್ ಮಾಡ್ತಿದ್ದೆ. ಅವರೇ ಇಲ್ಲಾಂದ್ರೆ ಅವ್ರ ಓಟೂ ಇರೂದಿಲ್ಲ. ನಾವಂತೂ ಸೋಲ್ತಾನೂ ಇರ್ಲಿಲ್ಲಾ. ಏನ್ ಮಾಡೂದು ನಿಮ್ಮ ಕರ್ಮ ಅನುಭವಿಸ್ರಿ..
ಪಿಟೀಲು : ಏನೋ ಗೊಣಗ್ತಾ ಇರೋ ಹಾಗಿತ್ತು.
ಯತ್ನಾಲು : ಹೆ ಹ್ಹೆ ಹೆ.. ಅಂತಾದ್ದೇನು ಇಲ್ಬಿಡ್ರಿ. ನನ್ನಷ್ಷಕ್ಕ ನಾನಾ ಮಾತಾಡೂ ಚಟ ಐತಿ. ನೀವೇನ್ ತಲಿಗೆ ಹಚ್ಕೋಬ್ಯಾಡ್ರಿ ಮುಂದವರಿಸಿ..
ಬೊಮ್ಮಣ್ಣ : ನೋಡ್ರಿ.. ಗೆಲ್ಲೂದಕ್ಕ ನಾವೇನೇನ್ ಮಾಡ್ಬೇಕಿತ್ತು ಅದನ್ನೆಲ್ಲಾ ಮಾಡಿದ್ದೀವಿ. ಸಾಬರ ಮೀಸಲಾತಿ ಕಿತ್ತಾಕಿದ್ದೀವಿ.
ಬೇರೆ ಜಾತಿಯವ್ರ ಮೀಸಲಾತಿ ಹೆಚ್ಸಿದ್ದೀವಿ. ಮೀಸಲಾತಿ ಕೊಟ್ರೂ ನಮ್ಮ ಜಾತಿ ಜನ ನಮಗ್ ಮೋಸ ಮಾಡ್ಬಿಟ್ಟು.. ಅದss ಸೋಲಿಗೆ ಮುಖ್ಯ ಕಾರಣಾ..
ಯತ್ನಾಲು : ಬರೀ ಘೋಷಣೆ ಮಾಡಿದ್ರೆ ಯಾರ್ರಿ ಓಟ್ ಕೊಡ್ತಾರss. ಕಾನೂನಿನೊಳಗ ಅವಕಾಶ ಇಲ್ದಿರುವಾಗ ಬರೀ ಕಿತ್ತೀನಿ, ಕೊಟ್ಟೀನಿ ಅಂತ ಕಿವಿ ಮ್ಯಾಗ ಲಾಲ್ಬಾಗ್ ಇಟ್ರ ನಂಬೂದಕ್ಕ ಜನಾ ಏನು ಹುಚ್ರ ಅನ್ಕೊಂಡಿರೇನ್ರಿ.
ಪಿಟೀಲು : ಚುನಾವಣೆ ಗೆಲ್ಲಬೇಕಂದ್ರ ಲಾಲ್ಬಾಗೂ ಇಡಬೇಕು ಇಲ್ಲಾಂದ್ರ ಬೆಟ್ಟನೂ ಎತ್ತಿಡಬೇಕು ಅಲ್ವೇನ್ರಿ ಅಸೋಕು.
ಅಸೋಕ : ಇಷ್ಟು ವರ್ಷದಿಂದ ಅದನ್ನೆ ಅಲ್ವಾ ನಾವ್ ಮಾಡ್ಕೊಂಡು ಬಂದಿರೋದು. ಇಟ್ಟು ಇಟ್ಟು ಜನರ ಕಿವೀನೇ ಕಿತ್ತೋಗಿದೆ ಸರ್. ಈ ಸಲ ಜೈ ಬಜರಂಗಬಲೀ ಅಂದ್ವಿ ಯಾರೂ ಕೇರೇ ಮಾಡಲಿಲ್ಲ. ಹನುಮಾನ ಚಾಳಿಸಾ ಪಠಿಸಿದ್ವಿ. ಯಾರಂದ್ರ ಯಾರೂ ಕ್ಯಾರೇ ಅನಲಿಲ್ಲ. ನಾವೇನ್ ಮಾಡೋಕಾಗುತ್ತೆ.
ಯತ್ನಾಲು : (ಸ್ವಾಗತ) ಎಲ್ಲಾರನ್ನೂ ಎಲ್ಲಾ ಕಾಲಕ್ಕೂ ಯಾಮಾರ್ಸೋಕೆ ಆಗೋದಿಲ್ಲ ಬಿಡ್ರಿ. ಜನರೇನೂ ಅಷ್ಟೊಂದು ದಡ್ಡರಲ್ಲ.
ಪಿಟೀಲು : ಮತ್ತೇನು ನಿಮ್ಮ ಪ್ರಾಬ್ಲಮ್ಮು..
ಗೊಣಗ್ತಾನೇ ಇರ್ತೀರಲ್ಲಾ..
ಯತ್ನಾಲು : ಏನ್ ಮಾಡ್ಲಿ ಸರ್. ಇಷ್ಟು ದಿನ ಬಹಿರಂಗವಾಗಿ ಮಾತಾಡಿ ಮಾತಾಡಿ ಸಾಕಾಗಿದೆ. ಬಚ್ಚಲ ಬಾಯಿ ಅಂತಾ ಜನಾ ಆಡ್ಕೋತಿದ್ದಾರಂತೆ. ಬಾಯಿ ಮುಚ್ಕೊಂಡ್ ಇರೋಕಂತ್ಲೂ ಆಗೂದಿಲ್ಲ ನೋಡ್ರಿ ಅದಕ್ಕss ನನ್ನಷ್ಟಕ್ಕ ನಾನss ಮಾತಾಡ್ಕೋಂತಾ ಇರ್ತೀನಿ. ನೀವ್ ಮುಂದವರ್ಸಿ..
ಬೊಮ್ಮಣ್ಣ : ಕೈ ಪಕ್ಷದವರ ಗ್ಯಾರಂಟಿಗಳೂ ನಮ್ಮ ಹೂಪಕ್ಷದ ಸೋಲಿಗೆ ಕಾರಣ ಆಗಿವೆ. ಎಲ್ಲಾ ಪ್ರೀ ಕೊಡ್ತಾರಂತ, ಅದು ಹೆಂಗ್ ಕೊಡ್ತಾರ, ಯಾವಾಗ್ ಕೊಡ್ತಾರ, ಎಲ್ಲಿಂದ ಕೊಡ್ತಾರ.. ಆ ದೇವರಿಗೆ ಗೊತ್ತು.
ಪಿಟೀಲು : ನೀವೂ ಏನೂ ಕಡಿಮೆ ಇಲ್ಲಾ ಬಿಡಿ. ವಿಶ್ವಗುರುಗಳು ಉಚಿತವಾಗಿ ಏನನ್ನೂ ಕೊಡಬಾರದೂ ಅಂದ್ರೂ ನೀವೂ ಉಚಿತ ಅಕ್ಕಿ, ಕರೆಂಟು, ಸಬ್ಸಿಡಿ ಎಲ್ಲಾ ಘೋಷಣೆ ಮಾಡಿದ್ದೀರಲ್ಲ.
ಆದ್ರೆ ಏನೂ ವರ್ಕೌಟ್ ಆಗಲೇ ಇಲ್ಲಾ.
ಬೊಮ್ಮಣ್ಣ : ಹಿಂದುತ್ವ, ಹಿಜಾಬು, ಹಲಾಲು, ಆಜಾನು ಬಜರಂಗಬಲಿ ಗದ್ದಲದೊಳಗ ನಮ್ಮ ಉಚಿತ ಯೋಜನೆ ಜನರಿಗೆ ತಲುಪಲೇ ಇಲ್ಲವಲ್ಲಾ. ನಾನು ಅವತ್ತೇ ಹೇಳಿದ್ದೆ.. ಈ ಸಲ ಧರ್ಮ ಕರ್ಮದ ಮಾತು ಕಡಿಮೆ ಮಾಡೂನು, ಅಭಿವೃದ್ದಿ ಬಗ್ಗೆ ಹೆಚ್ಚು ಮಾತಾಡೋಣು ಅಂತಾ.. ಆದ್ರೂ ಜೈಬಜರಂಗ ಬಲಿ ಅಂತಾ ನುಗ್ಗಿದ್ರಿ.. ಏನಾಯ್ತು ಮುಗ್ಗರಿಸಿ ಬಿದ್ವಿ.
ಸಂತೋಸು : ನೋಡಿ.. ಇಷ್ಟೊತ್ತು ನೀವ್ ಹೇಳಿದ್ದನ್ನೆಲ್ಲಾ ಕೇಳಿದೆ. ನಿಮಗೆ ಒಂದು ಚುನಾವಣೆ ಗೆಲ್ಲೋದು ಮುಖ್ಯಾನಾ ಇಲ್ಲಾ ಹಿಂದೂರಾಷ್ಟ್ರ ಮಾಡೋದು ಮುಖ್ಯಾನಾ? ಈಗಿರುವ ಸಂವಿಧಾನ ಬೇಕಾ ಇಲ್ಲಾ ನಮ್ಮ ಮನುಧರ್ಮಶಾಸ್ತ್ರದ ಸಂವಿಧಾನ ಬೇಕಾ? ಸಂಘದ ಪರಮ ಗುರಿ ಬರೀ ಚುನಾವಣೆಗಳಲ್ಲ.
ಚುನಾವಣೆಗಳೇ ಇಲ್ಲದ ಏಕಾಧಿಪತ್ಯದ ಸ್ಥಾಪನೆ. ಮತ್ತೆ ಚತುರ್ವರ್ಣ ವ್ಯವಸ್ಥೆಯ ಪ್ರತಿಷ್ಠಾಪನೆ.
ಸಂಪೂರ್ಣ ಹಿಂದುತ್ವದ ಘೋಷಣೆ. ಅದನ್ನು ಸಾಧಿಸಲು ಚಿಕ್ಕ ಪುಟ್ಟ ಯುದ್ದಗಳನ್ನ ಸೋಲಬೇಕಾಗುತ್ತದೆ. ಸಣ್ಣ ರಾಜ್ಯಗಳನ್ನ ಬಿಟ್ಟುಕೊಡಬೇಕಾಗ್ತದೆ. ಆಗಲೇ ದೊಡ್ಡ ಗೆಲುವು ಸಿಗೋದಕ್ಕೆ ಸಾಧ್ಯ..
ಅಸೋಕ : ( ಏನೂ ಅರ್ಥವಾಗದೇ ತಲೆ ಕೆರೆದುಕೊಳ್ಳುತ್ತಾ) ನನಗೇನೂ ಅರ್ಥ ಆಗಲಿಲ್ಲ ಸ್ವಲ್ಪ ವಿವರಿಸಿ ಸರ್.
ಸಂತೋಸು : ಶೂದ್ರರಿಗೆ ಇದೆಲ್ಲಾ ಅರ್ಥ ಆಗೋದಿಲ್ಲ ಬಿಡಿ. ಇದೆಲ್ಲಾ ಶ್ರೇಷ್ಟ ಬ್ರಾಹ್ಮಣ್ಯದ ತಂತ್ರಗಾರಿಕೆ.
ಆದರೂ ಹೇಳುವೆ ಕೇಳಿಸಿಕೊಳ್ಳಿ.
ಯತ್ನಾಲು : ( ಸ್ವಗತ) ಶುರುವಾಯ್ತು ವೈದಿಕಶಾಹಿಗಳ ಪಿಟೀಲು ಕೊಯ್ಯೋ ಕಾರ್ಯಕ್ರಮ)
ಪಿಟೀಲು : (ಕಿವಿಗೊಟ್ಟು ಕೇಳಿ ) ಅದೇನೋ ಪಿಟೀಲು ಅಂದಂಗೆ ಕೇಳಿಸ್ತು.
ಯತ್ನಾಲು : ಪಿಟೀಲೂ ಇಲ್ಲಾ ಪುಂಗಿನೂ ಇಲ್ಲಾ.. ಮುಂದವರಿಸಿ.
ಸಂತೋಸು : ಅದು ಏನಪಾಂದ್ರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಈ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈಗ ಜನರ ಭಾವನೆ ಬಡಿದೆಬ್ಬಿಸಿ ಗೆದ್ದಿದ್ರೆ ಅಥವಾ ಮತ್ತೆ ಆಪರೇಶನ್ ಮಾಡಿ ಸರಕಾರ ರಚನೆ ಮಾಡಿದ್ರೆ ಜನರ ಆಕ್ರೋಶ ಹೆಚ್ಚಾಗ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಹಿನ್ನಡೆ ಆಗ್ತಿತ್ತು ಹೌದೋ ಅಲ್ಲವೋ.
ಅಸೋಕ : ಹೌದೌದು.
ಸಂತೋಸು : ಈಗ ಕೈಪಕ್ಷ ಗೆದ್ದಿದೆ ಗೆಲ್ಲಲಿ. ನಾವು ಆಳುವಪಕ್ಷಕ್ಕಿಂತಾ ವಿರೋಧ ಪಕ್ಷದಲ್ಲಿದ್ದು ಜನರನ್ನ ಎತ್ತಿಕಟ್ಟೋದು ಸುಲಭ. ಆಡಳಿತ ಮಾಡ್ತಾ ಕೋಮುದಂಗೆ, ಜಾತಿದ್ವೇಷ ಹುಟ್ಟು ಹಾಕುವುದು ಕಷ್ಟ. ಈಗ ವಿರೋದ ಪಕ್ಷದಲ್ಲಿದ್ದು ಎಲ್ಲಿಬೇಕಾದ್ರೂ ದಂಗೆ ಎಬ್ಬಿಸಬಹುದು.
ಮುಸ್ಲಿಂ ಸಮುದಾಯವನ್ನ ಉದ್ರೇಕಿಸಿ ಹಿಂಸೆಗೆ ಪ್ರಚೋದಿಸಬಹುದು.
ಕೈ ಸರಕಾರಕ್ಕೆ ಅಂತವನ್ನೆಲ್ಲಾ ನಿಯಂತ್ರಣ ಮಾಡೋದರಲ್ಲೇ ಕಟ್ಟಿ ಹಾಕಿ ಅಭಿವೃದ್ದಿ ಆಗದ ಹಾಗೆ ನೋಡಿಕೊಳ್ಳೊದು.
ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾ ಹುಯಿಲೆಬ್ಬಿಸೋದು.
ಹಿಂದೂ ಧರ್ಮ ಅಪಾಯದಲ್ಲಿದೆ ಅಂತಾ ಹಿಂದೂಗಳನ್ನು ನಂಬಿಸಿ ಕೋಮುದ್ರುವೀಕರಣ ಮಾಡೋದು. ಇಷ್ಟೆಲ್ಲಾ ಆದ ಮೇಲೆ ಹಿಂದೂಗಳೆಲ್ಲಾ ಒಂದಾಗ್ತಾರೆ, ಕೇಂದ್ರ ಸರಕಾರವನ್ನ ಬೆಂಬಲಿಸ್ತಾರೆ. ಮತ್ತೆ ದೇಶದಾಡಳಿತ ನಮ್ದೇ ಆಗುತ್ತೆ.
ಈಶಪ್ಪ : ವಾಟ್ ಎ ಸ್ಟ್ರಾಟಜೀ ಸರ್ಜಿ. ಇಂತವೆಲ್ಲಾ ನಮ್ಮ ತಲೇಗೆ ಹೊಳೆಯೋದೇ ಇಲ್ಲಾ ನೋಡಿ.
ಯತ್ನಾಲು : (ಸ್ವಗತ) ತಲ್ತಾಗ ಏನರ ಇದ್ರ ಹೌದಲ್ಲೋ ಅರ್ಥಾ ಆಗೂದು.
ಪಿಟೀಲು : ( ಕೆಂಗಣ್ಣು ಬಿಡುತ್ತಾನೆ)
ಸಂತೋಸು : ಒಮ್ಮೆ ಕೇಂದ್ರದಲ್ಲಿ ಮತ್ತೊಮ್ಮೆ ನಮ್ಮ ಸರಕಾರ ಬಂದ್ರೆ ಈ ಕೈ ಸರಕಾರವನ್ನ ಆಪರೇಶನ್ ಮಾಡಿ ಬೀಳಿಸೋದು ಸುಲಭ. ಅವರಲ್ಲಿರೋ ಒಳಜಗಳಗಳ ಲಾಭ ಪಡೆದು, ಆ ಪಾರ್ಟೀನೇ ಇಬ್ಬಾಗ ಮಾಡಿ ನಮ್ದೇ ಸರಕಾರ ರಚನೆ ಮಾಡೋಣ.
ಅಸೋಕ : ಸರ್ ಆ ಆಪರೇಶನ್ ಯೋಜನೆ ನೀವು ಮಾಡಿ ನಾನು ಜಾರಿಗೆ ತರ್ತೇನೆ. ಪ್ಲಾನ್ ಬಿ ಸಿ ಡಿ ಎಲ್ಲಾ ನನಗೆ ಗೊತ್ತಿದೆ.
ಶೋಮಣ್ಣಾ : (ಸ್ಬಗತ) ಮಾಡು ಮಾಡು ಅಸೋಕಾ.. ನಾವು ಶೂದ್ರ ಮುಂಡೇವು ಇರೋದೇ ಅದಕ್ಕಲ್ವಾ. ಈ ಬ್ರೇಹ್ಮಿನ್ ಬ್ರೇನ್ ಗಳು ನಮ್ಮನ್ನ ಹೀಗೇ ಬೇಕಾದಾಗ ಬಳಸಿಕೊಂಡಿ ಬೇಡಾದಾಗ ಬಿಸಾಕ್ತಾರೆ.. ಅದಕ್ಕೆ ದೊಡ್ಡ ಉದಾಹರಣೆ ಅಂದ್ರೆ ನಾನೇ..
ಪಿಟೀಲು : ನೀವ್ಯಾಕ್ರಿ ಗೊಣಗ್ತಿದ್ದೀರಿ. ಉತ್ನಾಳು ರೋಗ ನಿಮಗೂ ಬಂತಾ..
ಶೋಮಣ್ಣ : ಹಂಗೇನಿಲ್ಲ ನೀವು ಮುಂದವರೆಸಿ.
ಸಂತೋಸು : ಎಲ್ಲಾನೂ ಎಲ್ಲಾರ ಮುಂದೆ ಹೇಳೋಕಾಗೋದಿಲ್ಲ. ಎಲ್ಲಾ ಐಡಿಯಾಗಳೂ ನಾಗಾಪುರದಿಂದ ರೆಡಿ ಆಗಿ ಬರ್ತಾವೆ. ಯಾಕೆ ಏನು ಅಂತಾ ಕೇಳದೇ ಕಾರ್ಯಾಚರಣೆ ಮಾಡೋದೊಂದೇ ನಿಮ್ಮ ಕೆಲಸ. ಈಗ ಈ ಸೋಲಿನ ಬಗ್ಗೆ ಯಾರೂ ಚಿಂತೆ ಮಾಡಬೇಕಿಲ್ಲ. ದೇಶದ ಚುನಾವಣೆ ಬಗ್ಗೆ ಚಿಂತೆಮಾಡಿ. ಎಲ್ಲೆಲ್ಲಿ ಕೋಮುಸಂಘರ್ಷ ಶುರುಮಾಡಬೇಕು. ಹೇಗೆಲ್ಲಾ ಸಾಬರನ್ನು ಕೆರಳಿಸಬೇಕು. ಧರ್ಮ ರಕ್ಷಣೆಯ ಬದ್ದತೆ ಸಾರಬೇಕು, ಧರ್ಮಾಂಧತೆ ಹೆಚ್ಚಿಸಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಿ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಂದಿರ ಮಸೀದಿ ಗಲಾಟೆ ಶುರುಮಾಡಿಸಿ, ಎಲ್ಲಾ ಹಿಂದೂ ಹಬ್ಬ ಹರಿದಿನ ಜಾತ್ರೆಗಳ ಮೆರವಣಿಗೆಗಳು ಖಡ್ಡಾಯವಾಗಿ ಮುಸ್ಲಿಂ ಏರಿಯಾಗಳ ಮೂಲಕ ಹೋಗಿ ಮಸೀದಿ ಮುಂದೆ ವಿಜ್ರಂಭಿಸುವ ಹಾಗೆ ಮಾಡಿ, ನಮ್ಮ ಸಂಘ ಪರಿವಾರದ ಅಂಗಗಳನ್ನೆಲ್ಲಾ ಯುದ್ದಕ್ಕೆ ಸಿದ್ದಪಡಿಸಿ. ಈ ಸರಕಾರ ಮಾಡುವ ಚಿಕ್ಕ ತಪ್ಪನ್ನೂ ದೊಡ್ಡದು ಮಾಡಿ . ಒಟ್ಟಿನ ಮೇಲೆ ಇನ್ನು ಆರೇ ತಿಂಗಳಲ್ಲಿ ನಮ್ಮನ್ನು ಸೋಲಿಸಿದ ಇದೇ ಜನ ನಮಗೆ ಜೈ ಅನ್ನಬೇಕು.
(ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ.
ಅಷ್ಟರಲ್ಲಿ ಕಾರ್ಯಕರ್ತನೊಬ್ಬ ಓಡಿ ಬಂದು )
ಕಾರ್ಯಕರ್ತ : ನಾಯಕರೇ ಅನಾಹುತ ಆಯ್ತು. ಹೊಸಕೋಟೆಯ ಶೆಟ್ಟಿಹಳ್ಳಿಯಲ್ಲಿ ಹೂಪಕ್ಷದ ಕಾರ್ಯಕರ್ತನ ಹತ್ಯೆಯಾಗಿದೆ.
ಅಸ್ವತ್ : ವಾಹ್ ಎಂತಾ ಒಳ್ಳೆ ಸುದ್ದಿ ತಂದಿದ್ದೇಯಾ. ಹೆಣ ಹೆಣ ನಮ್ಮ ಕಾರ್ಯಕರ್ತನ ಹೆಣ. ಬನ್ನಿ ಜೊತೆಗಾರರೆ ಶುರುಮಾಡೋಣ ಹೆಣದ ರಾಜಕಾರಣ.
ಈಸಪ್ಪ : ಹೆಣಾನಾ ಎಲ್ಲಿ ಎಲ್ಲಿ.. ನಡೀರಿ ಹೆಣದ ಮೆರವಣಿಗೆ ಅದ್ದೂರಿಯಾಗಿರಬೇಕು. ಅದಕ್ಕೆ ನನ್ನದೇ ನಾಯಕತ್ವ.
ಪಿಟೀಲು : ( ಅಲ್ಲೆ ಇದ್ದ ಖುರ್ಚಿಯ ಮೇಲೆ ಹತ್ತಿ ನಿಂತು) 'ಕೈಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಒಂದು ತಾಲಿಬಾನ್ ಪಡೆ ಎದ್ದುನಿಂತಿದೆ. ರಾಜ್ಯದಲ್ಲಿ ಗೂಂಡಾ ಸಾಮ್ರಾಜ್ಯ ಶುರುವಾಗಿದೆ, ಮಿನಿ ಬಿಹಾರ ಮಾಡ್ತಿದ್ದಾರೆ,
ಹೂಪಕ್ಷದವರು ಇದನ್ನು ಎಂದಿಗೂ ಸಹಿಸುವುದಿಲ್ಲ, ಇದಕ್ಕೆ ರಾಗಾ ಏನು ಹೇಳ್ತಾರೆ ಖರುಗೆ ಏನಂತಾರೆ. ಅವರು ದೇಶದ ಕ್ಷಮೆ ಕೇಳಬೇಕು ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು.
ಅಸೋಕ : ಇನ್ನೂ ಕೈಪಕ್ಷಕ್ಜೆ ಸಿಎಂ ಆಯ್ಕೆನೇ ಆಗಿಲ್ವಲ್ರಿ ರಾಜೀನಾಮೆ ಹೇಗೆ ಕೇಳೋದು.
ಪಿಟೀಲು : ಹೌದಾ ಹಾಗಾದ್ರೆ ಮುಂದೆ ಯಾರೇ ಮುಖ್ಯಮಂತ್ರಿ ಆಗ್ತಾರೋ ಅವರು ಈಗಲೇ ರಾಜೀನಾಮೆ ಪತ್ರ ಬರೆದು ಕೊಡಬೇಕು..
ಬೊಮ್ಮಣ್ಣ : ನೋಡಿ ಮೊದಲು ಹೂಪಕ್ಷದ ನಾಯಕರು ಸತ್ತ ಕಾರ್ಯಕರ್ತರ ಮನೆಗೆ ಈಗಲೇ ಹೋಗಿ ಸಾಂತ್ವನ ಹೇಳಿ. ಮೃತರ ಕುಟುಂಬಕ್ಕೆ ನ್ತಾಯ ಒದಗಿಸಬೇಕು ಅಂತಾ ಮಾಧ್ಯಮಗಳ ಮುಂದೆ ಆಗ್ರಹಿಸಿ. ಸಾಧ್ಯವಾದರೆ ಧರಣಿ ನಡೆಸಿ. ಪಾರ್ಟಿ ಫಂಡನಿಂದ ಐದು ಲಕ್ಷ ಪರಿಹಾರ ಘೋಷಣೆ ಮಾಡಿ.
ಈಸಪ್ಪ : ಹೆಣದ ಮೆರವಣಿಗೆಗೆ ಮಾತ್ರ ನಂದೇ ಉಸ್ತುವಾರಿ.. ಸಂತೋಸ ಸರ್ ನೀವು ಬರೋದಿಲ್ವಾ.. ಒಳ್ಳೆ ಅವಕಾಶ ಸಿಕ್ಕಿದೆ. ಹೆಣ..ಹೆಣ.. ಹಿಂದೂ ಕಾರ್ಯಕರ್ತನ ಹೆಣ.
ಸಂತೋಸು : ನಾವೆಲ್ಲಾ ಹಂಗೆಲ್ಲಾ ಪಬ್ಲಿಕ್ ಆಗಿ ಬರೋಹಾಗಿಲ್ಲ. ನಾವೇನಿದ್ದರೂ ಮೆದುಳಿನಂತೆ ಕೆಲಸ ಮಾಡೋರು. ಕೈಕಾಲಾಗಿ ಕೆಲಸಾ ಮಾಡೋಕೆ ನೀವೆಲ್ಲಾ ಇದ್ದೀರಲ್ಲಾ. ಹೋಗಿ.. ಹಿಂದೂರಾಷ್ಟ್ರದ ಗುರಿ ಮುಟ್ಟಲು ಹೆಣಗಳೂ ಮೆಟ್ಟಲುಗಳಾಗಲಿ.
ಅಸೋಕ : ಹಿಂದೂಗಳ ಐಕ್ಯತೆ
ಎಲ್ಲರೂ : ಚಿರಾಯುವಾಗಲಿ.
ಅಸ್ವತ್ : ಹಿಂದುತ್ವ ಉಳಿಯಲಿ, ಹಿಂದೂರಾಷ್ಟ
ಎಲ್ಲರೂ : ಚಿರಾಯುವಾಗಲಿ
ಈಸಪ್ಪ : ಹೆಣಗಳು ಬೀಳಲಿ, ಮೆರವಣಿಗೆ ನಡೆಯಲಿ
ಪಿಟೀಲು : ಇಲ್ಲಿಗೆ ನಮ್ಮ ಸಂತಾಪ ಸಭೆ ಸಮರೋತ್ಸಾಹ ಸಭೆಯಾಗಿ ಬದಲಾಗಿದ್ದಕ್ಕೆ ಎಲ್ಲರೂ ಧನ್ಯವಾದಗಳು. ಜೈಶ್ರೀರಾಂ
ಎಲ್ಲರೂ : ಜೈಶ್ರೀರಾಂ.
ಅಸೋಕ : ಜೈ ಭಜರಂಗಬಲಿ
ಎಲ್ಲರೂ : ಜೈ ಜೈ ಭಜರಂಗಬಲಿ
ಹಾಡು..
ಹೆಣ ಹೆಣ ಹೆಣ.. ಎಲ್ಲಿ ಎಲ್ಲಿ ಹೆಣ
ಅಧಿಕಾರದ ಪಟ್ಟಕ್ಕೆ ಹೆಣಗಳೇ ಮೆಟ್ಟಿಲು
ಕೋಮುಜಗಳಕೆ ದಂಗೆ ಗಲಭೆಗೆ ರಾಜ್ಯವೇ ತೊಟ್ಟಿಲು
ಹೆಣ ಹೆಣ ಹೆಣ.. ಎಲ್ಲಿ ಎಲ್ಲಿ ಹೆಣ
*- ಶಶಿಕಾಂತ ಯಡಹಳ್ಳಿ*
Comments
Post a Comment