ನಂಬರ್ ಒನ್ ಪ್ರಹಸನ ( ಪ್ರಹಸನ - 3)
ಪ್ರಹಸನ - 3
ನಂಬರ್ ಒನ್ ಪ್ರಹಸನ
(ಮೋದಿಯವರ ಮೋಡಿಮಾಡುವ ಚುನಾವಣಾ ಭಾಷಣ ಕೇಳಿ ರೋಮಾಂಚಿತನಾದ ಭಕ್ತ ರಸ್ತೆಯಲ್ಲೇ ಕುಣಿದಾಡತೊಡಗಿದ. ಪತ್ರಕರ್ತನೊಬ್ಬ ಕುತೂಹಲದಿಂದ ಪ್ರಶ್ನಿಸಿದ)
ಭಕ್ತ : ಯೋಚಿಸ್ಬೇಡಿ ಮತಚಲಾಯಿಸಿ.. ನಾವೇ ನಂಬರ್ ಒನ್..
ಪತ್ರಕರ್ತ : ಏನು ಸರ್ ನಂಬರ್ ಒನ್ ಸಮಾಚಾರ..
ಭಕ್ತ : ಮೋದಿಯವರು ಹೇಳಿದ್ದಾರೆ ಕರ್ನಾಟಕವನ್ನ ನಂಬರ್ ಒನ್ ಮಾಡ್ತೇನೆ ಅಂತಾ. ಅದಕ್ಕೆ ಡೌಟೇ ಬೇಡಾ ನಾವೇ ನಂಬರ್ ಒನ್..
ಪತ್ರಕರ್ತ : ರೀ ಸ್ವಾಮಿ.. ಹದಿಮೂರು ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ನಂತರ ಅಲ್ಲಿ ಅವರದೇ ಡಬಲ್ ಇಂಜಿನ್ ಸರಕಾರ ಇದ್ದಾಗ ಗುಜರಾತನ್ನು ಯಾವುದರಲ್ಲೂ ನಂಬರ್ ಒನ್ ಮಾಡೋದಿಕ್ಕೆ ಆಗಿಲ್ಲ ಇನ್ನು ಕರ್ನಾಟಕ ನಂಬರ್ ಒನ್ ಹೇಗ್ಮಾಡ್ತಾರೆ..?
ಭಕ್ತ : ಹಾಗೆಲ್ಲಾ ಹೇಳ್ಬಾರ್ದು ಸರ್. ಕೇಂದ್ರ ಸರಕಾರದಿಂದ ಹಣ ತಂದಾಕಿ ಕರ್ನಾಟಕಾನ ನಂಬರ್ ಒನ್ ಮಾಡೇ ಮಾಡ್ತಾರೆ ನೋಡ್ತಾ ಇರಿ.
ಪತ್ರಕರ್ತ : ಹೌದಾ.. ಅಲ್ಲಾ ಸರ್.. ಕರ್ನಾಟಕದಿಂದ ತೆರಿಗೆ ಹಣ ಒಂದು ರೂಪಾಯಿ ಕೇಂದ್ರಕ್ಕೆ ಹೋದ್ರೆ ವಾಪಸ್ 15 ಪೈಸಾ ರಾಜ್ಯಕ್ಕೆ ಸತಾಯಿಸಿ ಕೊಡ್ತಾರೆ. ಇಲ್ಲಿಂದಲೇ ಹಣ ಲೂಟಿ ಮಾಡೋರು ಅದು ಹೇಗ್ರಿ ಕರ್ನಾಟಕವನ್ನ ನಂಬರ್ ಒನ್ ಮಾಡ್ತಾರೆ..
ಭಕ್ತ : ಅದೆಲ್ಲಾ ನಮಗ್ಯಾಕೆ ಸರ್.. ರಾಜ್ಯದಲ್ಲೇ ತೆರಿಗೆ ಗಿರಿಗೆ ವಸೂಲಿ ಮಾಡಿಯಾದರೂ ನಂಬರ್ ಒನ್ ಮಾಡೇ ಮಾಡ್ತಾರೆ ಬಿಡಿ.
ಪತ್ರಕರ್ತ : ಸಾಲಾ ಮಾಡಿ ಸರಕಾರ ನಡೆಸೋರು, 40% ಕಮೀಶನ್ ಪಡೆಯೋರು ಅದೆಂಗೆ ನಂಬರ್ ಒನ್ ಮಾಡ್ತಾರೆ ಅದನ್ನಾದ್ರೂ ಹೇಳಿ.
ಭಕ್ತ : ಅಯ್ಯೋ ಯಾಕ್ರಿ ಹೀಗೆ ತಲೆ ತಿಂತೀರಿ.. ಹೇಳಿದ್ದಾರೆ ಅಂದ್ಮೇಲೆ ಅದು ಹೇಗೋ ಮಾಡ್ತಾರೆ ಬಿಡಿ. ನಂಬರ್ ಒನ್, ನಂಬರ್ ಒನ್, ನಾವೇ ನಂಬರ್ ಒನ್. ಯಾರೂ ಯೋಚಿಸ್ಬೇಡಿ, ಕಮಲಕ್ಕೆ ಮತ ಚಲಾಯಿಸಿ.. ನಂಬರ್ ಒನ್ ರಾಜ್ಯದ ಪ್ರಜೆಗಳಾಗಿ. ಜೈ ಮೋದೀಜಿ.. ಜೈ ಜೈ ಮೋಶಾಜಿ. ( ಎನ್ನುತ್ತಾ ಕಿರುಬೆರಳೆತ್ತಿ ಅವಸರದಿಂದ ಭಕ್ತ ನಂಬರ್ ಒನ್ ಮಾಡಲು ಓಡುತ್ತಾನೆ)
ಪತ್ರಕರ್ತ : ನೋಡಿದ್ರಲ್ಲಾ ವೀಕ್ಷಕರೆ.. ಇದಕ್ಕೆ ಮೋದಿ ಮೇನಿಯಾ ಅನ್ನೋದು. ಕರ್ನಾಟಕವನ್ನ ನಂಬರ್ ಒನ್ ಮಾಡ್ತೀನಿ ಅಂತಾ ಮೋದಿ ಹೇಳಿದ್ರು. ಆದರೆ ಹೇಗೆ ಮಾಡ್ತಾರೆ ಅನ್ನೋದನ್ನ ಹೇಳಲಿಲ್ಲ. ಹೇಳೋಕೋ ಆಗೋದಿಲ್ಲ. ತನ್ನ ತವರು ರಾಜ್ಯವನ್ನೇ ನಂಬರ್ ಒನ್ ಮಾಡದೇ ಇರೋರು ಇನ್ನು ನಮ್ಮ ರಾಜ್ಯವನ್ನು ನಂಬರ್ ಒನ್ ಮಾಡಲು ಹೇಗೆ ಸಾಧ್ಯ? ಪ್ರಶ್ನಿಸೋಣ ಎಂದರೆ ಪ್ರಧಾನಿಗಳು ಸಿಕ್ಕೋದಿಲ್ಲ, ಸಿಕ್ಕರೂ ಉತ್ತರಿಸೋದಿಲ್ಲ. ಉತ್ತರಿಸಿದರೂ ಮನ್ ಕೀ ಬಾತ್ ಅಂತಾ ತಮ್ಮ ಮೂಗಿನ ನೇರಕ್ಕೆ ಮಾತಾಡ್ತಾರೆ. ಇಂತಹ ಪ್ರಧಾನಿಗಳನ್ನು ಪಡೆದ ಈ ದೇಶದ ದೌರ್ಭಾಗ್ಯಕ್ಕೆ ಉಘೇ ಎನ್ನಿ. ನಾಳೆ ಮತದಾನ.. ಯೋಚಿಸಿ.. ಮತಚಲಾಯಿಸಿ. ಕ್ಯಾಮರಾಮನ್ ರಾಜೇಶ್ ಜೊತೆ ನಿಮ್ಮ ಕಿರಣ್..
( ನಂಬರ್ ಒನ್ ಮುಗಿಸಿ ಬಂದ ಭಕ್ತ ಮತ್ತೆ ನಂಬರ್ ಒನ್, ನಾವೇ ನಂಬರ್ ಒನ್ ಎಂದು ಕುಣಿಯುತ್ತಾ ಹಾಡುತ್ತಾ ಬರುತ್ತಾನೆ. ಪತ್ರಕರ್ತ ತಲೆ ಚಚ್ಚಿಕೊಂಡು ಹೊರಡುತ್ತಾನೆ ಎಂಬಲ್ಲಿಗೆ ಈ ಪ್ರಹಸನ ಮುಕ್ತಾಯ)
- ಶಶಿಕಾಂತ ಯಡಹಳ್ಳಿ
(2023,
ಮೇ 10 ರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ
ಮೋದಿಯವರು ಕರ್ನಾಟಕವನ್ನು ನಂ. ಒನ್ ಮಾಡ್ತೇವೆ ಎಂಬುದನ್ನು ನಂಬಿದ ಭಕ್ತರು ಮಂಡಿಸಿದ
ವಿತಂಡವಾದಗಳ ಕುರಿತು ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)
Comments
Post a Comment