ಅತ್ಮಾವಲೋಕನ ಪ್ರಹಸನ (ಪ್ರಹಸನ-4)
ಪ್ರಹಸನ-4
ಅತ್ಮಾವಲೋಕನ ಪ್ರಹಸನ
( ಅಪ್ಪನವರು ಮನೆಗೆ
ಬಂದು
ಏನನ್ನೋ
ಹುಡುಕುತ್ತಿದ್ದರು. )
ಅಪ್ಪನವರು : ಅದು ನನ್ನೊಳಗೇ ಇತ್ತು, ಇತ್ತೀಚೆಗೆ ಇಲ್ಲ.. ಎಲ್ಲಿ ಹೋಯ್ತು ಗೊತ್ತಾಗ್ತಿಲ್ಲವಲ್ಲಾ.
ರಾಘು : ಏನಿತ್ತು ಏನಿಲ್ಲ ಅದನ್ನಾದರೂ ಹೇಳಪ್ಪಾ.
ಅಪ್ಪನವರು : ಅದೇ ಅದು ಅವರವರದು ಅವರವರೊಳಗೆ ಇರುತ್ತಲ್ಲಾ. ನಂದ್ರೊಳಗಿದ್ದಿದ್ದು ಈಗಿಲ್ಲ.
ವಿಜು : ಆಯ್ತು, ಎಲ್ಲೋ ಇಟ್ಟು ಮರ್ತಿದ್ದೀರಿ. ಅದು ಏನಂತಾ ಹೇಳಿದ್ರೆ ನಾವು ಹುಡುಕಿ ಕೊಡ್ತೀವಿ. ಏನ್ ಕಳಕೊಂಡ್ರಿ.
ಅಪ್ಪನವರು : ಇಲ್ಲೇ ಕಳಕೊಂಡೆ, ಇಲ್ಲಾ ಅಲ್ಲಿ ಕಳಕೊಂಡೆ, ಪಕ್ಕಾ ದಿಲ್ಲಿಯಲ್ಲೇ ಕಳಕೊಂಡಿರಬೇಕು. ಈಗ ನನಗದು ಬೇಕು.. ಅವಲೋಕನ ಮಾಡಬೇಕು..
ರಾಘು : ಅಪ್ಪಾ.. ನಿಮಗೆ ವಯಸ್ಸಾಯ್ತು.. ಮರವೂ ಜಾಸ್ತಿ ಆಯ್ತು. ಅದೇನು ಅಂತಾ ನೆನಪಿಸಿಕೊಳ್ಳಿ.
ಅಪ್ಪನವರು : ಹಾಂ.. ಈಗ ನೆನಪಾಯ್ತು. ಅದು ಅದೇನಂದ್ರೆ ಆತ್ಮಾ..
ವಿಜು : ಆತ್ಮಾನಾ.. ಅದೂ ಕಳೆದೋಯ್ತಾ.. ರಘು ಅಪ್ಪನಿಗೆ ಏನಾಗಿದೆಯೋ?
ಅಪ್ಪನವರು : ನನಗೇನೂ ಆಗಿಲ್ಲ. ಈಗ ಅರ್ಜೆಂಟಾಗಿ ನನ್ನ ಆತ್ಮ ಬೇಕಾಗಿದೆ. ಆತ್ಮಾವಲೋಕನ ಮಾಡಬೇಕಾಗಿದೆ. ಈಗ ಮಾಧ್ಯಮದವರ ಮುಂದೆನೂ ಪಕ್ಷದ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುವೆ ಅಂತಾ ಹೇಳಿ ಬಂದೆ. ಆದರೆ ಆ ಆತ್ಮವೇ ನನ್ನೊಳಗಿಲ್ಲಾ ಅವಲೋಕನ ಹೇಗೆ ಮಾಡಿಕೊಳ್ಳೋದು.
ರಾಘು : ಹೋ ಅಷ್ಟೇನಾ. ನಿಮ್ಮ ಆತ್ಮ ನಿಮ್ಮೊಳಗೇ ಇರುತ್ತೆ ಸುಮ್ಕಿರಪ್ಪಾ. ಅಲ್ಲೇ ಹುಡುಕಿ ಅವಲೋಕನ ಮಾಡಿಕೊಂಡ್ರಾಯ್ತು.
ಅಪ್ಪನವರು : ಅವಲೋಕನ ಮಾಡಿಕೊಳ್ಳಬೇಕೆಂದರೆ ಅದೇ ಇಲ್ಲವಲ್ರಪ್ಪಾ. ಅಯ್ಯೋ ನನ್ನ ಆತ್ಮ ಕಳೆದೋಗಿದೆ. ಎಲ್ಲಿಟ್ಟೆ ಎಲ್ಬಿಟ್ಟೆ ಎಲ್ಲೋಯ್ತು?
ರಾಘು : ಅಪ್ಪಾ.. ನೀನೇ ಕಟ್ಟಿ ಬೆಳ್ಸಿದ್ ಪಕ್ಷ ಸೋತಿದ್ದಕ್ಕೆ ನಿಮಗೆ ಶಾಕ್ ಆಗಿದೆ, ಅದಕ್ಕೆ ಹೀಗೆ ವಿಚಿತ್ರವಾಗಿ ಆಡ್ತಿದ್ದೀರಾ?
ಅಪ್ಪನವರು : ಇಲ್ರಪ್ಪಾ.. ನಿಜವಾಗ್ಲೂ ನನ್ನ ಆತ್ಮ ನನ್ನೊಳಗಿಲ್ಲ. ಏನಾಯ್ತು? ಹಾಂ ನೆನಪಿಗೆ ಬಂತು. ನಾನೇ ಕಟ್ಟಿದ ಮನೆಯಿಂದ ಬಲವಂತವಾಗಿ ನನ್ನ ರಿಟೈರ್ ಮಾಡಿದ್ರಲ್ಲಾ.
ವಿಜು : ಮನೆ ಅಲ್ಲಾ ಅಪ್ಪಾ. ಪಕ್ಷದಿಂದ..
ಅಪ್ಪನವರು : ನಿಮಗೆ ಪಕ್ಷ ಆಗಿರಬಹುದು. ನನಗೆ ಅದು ಮನೆ. ಅವಮಾನ ಮಾಡಿ ಯಜಮಾನಿಕೆ ಕಿತ್ತುಕೊಂಡಾಗ ನಾನು ಗಳಗಳ ಅಂತಾ ಕಣ್ಣೀರು ಹರಿಸಿದ್ದನ್ನ ಇಡೀ ದೇಶದ ಜನರೇ ನೋಡಿ ಮರಾಮರಾ ಮರಗಿದ್ರು. ಆದ್ರೂ ' ಸಂತೋಷದಿಂದ ಮನೆ ಯಜಮಾನಿಕೆ ಬಿಟ್ಟು ನಾನೇ ಹೋಗ್ತಿದ್ದೇನೆ" ಅಂತಾ ಬಲವಂತವಾಗಿ ನನ್ನ ಬಾಯಲ್ಲಿ ಹೈಕಮಾಂಡನವರು ಸುಳ್ಳು ಹೇಳಿಸಿದ್ರು. ಆಗಲೇ ನನ್ನ ಆತ್ಮ ಸಾಕ್ಷಿ ಕಳದೋಯ್ತು ಕಣ್ರೋ.
ವಿಜು : ಹೋಗಲಿ ಬಿಡಿ ಅಪ್ಪಾ. ಆಗಿದ್ದಾಗೋಯ್ತು, ಉಪಕಾರಸ್ಮರಣೆ ಇಲ್ಲದವರು ಮಾಡಿದ ಕುತಂತ್ರ ಅದು.
ಅಪ್ಪನವರು : ಅದೆಲ್ಲಾ ಗೊತ್ತಿದ್ದೂ ಬಾಯಿ ಮುಚ್ಕೊಂಡಿದ್ದನಲ್ಲಾ ಆಗಲೇ ನನ್ನ ಆತ್ಮ ಮುನಿಸಿಕೊಂಡು ಹೋಯ್ತು.
ರಾಘು : ಎಲ್ಲರ ಮುಂದೆ ಹೇಳಬೇಕಿತ್ತು, ಹೀಗೆ ಹೀಗೀಗೆ "ನಾನೇ ಕಟ್ಟಿದ ಪಕ್ಷದಿಂದ ನನ್ನ ಯಜಮಾನಿಕೆ ಕಿತ್ತುಕೊಂಡಿದ್ದಾರೆ ನೋಡ್ರಪ್ಪಾ" ಅಂತಾ ಮೀಡಿಯಾ ಮುಂದೆ ಹೇಳಬೇಕಾಗಿತ್ತು.
ಅಪ್ಪನವರು : ಹೇಳಬಹುದಾಗಿತ್ತು. ಹೇಳಿದ್ದರೆ ನನ್ನ ಹಾಗೂ ಮಕ್ಕಳಾದ ನಿಮ್ಮ ಮುಂದಿನ ಭವಿಷ್ಯ ಎರಡೂ ಮಣ್ಣುಪಾಲಾಗ್ತಿದ್ದವು ಅಷ್ಟೇ.
ವಿಜು : ಇದ್ದದ್ದು ಇದ್ದಂಗೆ ಹೇಳಿದ್ರೆ ಅದೆಂಗಪ್ಪಾ ನಮ್ಮ ಭವಿಷ್ಯ ಹಾಳಾಗುತ್ತೆ.
ಅಪ್ಪನವರು : ಆಗುತ್ತೆ ಮಗನೇ ಆಗುತ್ತೆ. ನಾನು ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರದ ಪ್ರಕರಣಗಳಿಗೆ ಜೀವ ಕೊಡ್ತಿದ್ದರು. ನ್ಯಾಯಾಲಯದ ಕಡತದಲ್ಲಿ ಕದಲದೇ ಕೂತ ಕೇಸುಗಳು ಪುಟಿದೆದ್ದು ನಿಂತು ನನ್ನನ್ನು ಈ ವಯಸ್ಸನಲ್ಲಿ ಜೈಲಿಗಟ್ಟುತ್ತಿದ್ದವು. ಐಟಿ, ಇಡಿ ದಾಳಿಗಳಾಗಿ ಇಷ್ಟು ದಿನ ಗಳಿಸಿದ್ದನ್ನೆಲ್ಲಾ ಕಳೆದುಕೊಂಡು ನಾವೆಲ್ಲಾ ಬೀದಿಪಾಲಾಗಬೇಕಿತ್ತು. ಅದಕ್ಕೆ ಎಲ್ಲಾ ಗೊತ್ತಿದ್ದೂ ಪಂಚೇಂದ್ರಿಯಗಳನ್ನೆಲ್ಲಾ ಮುಚ್ಕೊಂಡು ಸುಮ್ಮನಿದ್ದು ನನ್ನ ಮನಸ್ಸಾಕ್ಷಿಯನ್ನು ನಾನೇ ಕೊಂದುಕೊಂಡೆ.
ರಾಘು : ನಿನ್ನ ಮಕ್ಕಳಾದ ನಾವಿದ್ದೀವಲ್ಲಪ್ಪ, ಏನೇ ಆದರೂ ನಿನ್ನ ಕಾಪಾಡಿಕೊಳ್ತಿದ್ದೀವಲ್ಲಪ್ಪಾ.
ಅಪ್ಪನವರು : ನೀವೇನಪ್ಪಾ ಕಾಪಾಡ್ತೀರಾ? ಅವು ದೊಡ್ಡ ತಿಮಿಂಗಲುಗಳು. ಅದ್ವಾನಿ, ಮುರಳಿಮನೋಹರ ಜ್ಯೋಷಿಯಂತವರನ್ನೇ ನುಂಗಿ ನೀರು ಕುಡಿದಿದ್ದಾವೆ. ಇನ್ನು ನಿಮ್ಮಂತಾ ಮಿಡಿ ಮೀನುಗಳನ್ನ ಬೆಳೆಯೋಕೆ ಬಿಡ್ತಿದ್ರಾ? ರಾಜಕೀಯವಾಗಿ ಸೋಮಣ್ಣ, ಈಶ್ವರಪ್ಪ, ಶೆಟ್ಟರ್ ನನ್ನು ಮುಗಿಸಿದ ಹಾಗೆ ನಿಮ್ಮ ರಾಜಕೀಯ ಭವಿಷ್ಯವನ್ನೂ ಹಾಳು ಮಾಡ್ತಿದ್ದರು. ಅದಕ್ಕೆ ನನ್ನ ಆತ್ಮವನ್ನೇ ಬಲಿಕೊಟ್ಟು ನನ್ನ ಮಾನ ಮರ್ಯಾದೆ ಹಾಗೂ ನಿಮ್ಮ ಮುಂದಿನ ಭವಿಷ್ಯವನ್ನು ಉಳಿಸಿಕೊಂಡೆ ಮಕ್ಕಳೆ. ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದರೆ ನನ್ನ ಆತ್ಮ ನನ್ನೊಳಗಿಲ್ಲ. ನನಗದು ಬೇಕು. ಏನ್ ಮಾಡೋದು?
ರಾಘು : ನಮಗಾಗಿ ನೀನು ಎಲ್ಲಾ ಅಪಮಾನ ಸಹಿಸಿಕೊಂಡು, ಆತ್ಮವನ್ನೇ ಕಳೆದುಕೊಂಡು ಮಾಡಿದ ತ್ಯಾಗ ತುಂಬಾ ದೊಡ್ಡದು ಅಪ್ಪಾ. ಅದಕ್ಕೆ ನಾವು ಚಿರ ಋಣಿಯಾಗಿರ್ತೀವಿ.
ಅಪ್ಪನವರು : ಹಾಗಾದರೆ ನನಗೆ ನೀವೀಬ್ಬರೂ ಒಂದು ಮಾತು ಕೊಡಿ. ಅದೇನಂದರೆ... ನೀವು ಇದೇ ಪಕ್ಷದಲ್ಲಿದ್ದು ನನ್ನಂತೆ ಹಂತಹಂತವಾಗಿ ಬೆಳೆಯಬೇಕು. ಮತ್ತೆ ನಾನು ಕಟ್ಟಿ ಬೆಳೆಸಿದ ಮನೆಯನ್ನು ಮರುವಶ ಮಾಡಿಕೊಳ್ಳಬೇಕು. ಅದಕ್ಕೆ ನೀವು ಯಜಮಾನರಾಗಬೇಕು. ನನಗೆ ಅವಮಾನ ಮಾಡಿದವರ ಮುಂದೆ ಸಾಧಿಸಿ ಗೆಲ್ಲಬೇಕು.
ವಿಜು ರಾಘು: ಆಯ್ತಪ್ಪಾ ನೀವು ಹೇಳಿದಂಗೆ ಮಾಡ್ತೀವಿ. ಹೊರಗೆ ಯಾರೋ ಬಂದಂಗಿದೆ ಇರು ಹೋಗಿ ನೋಡಿ ಬರ್ತೀವಿ. ( ಹೋಗುತ್ತಾರೆ)
ಅಪ್ಪನವರು : ಎಲ್ಲಿ ನನ್ನ ಆತ್ಮ, ಎಲ್ಲಿ ನನ್ನ ಆತ್ಮ ಸಾಕ್ಷಿ. ಆತ್ಮಾವಲೋಕನ ಮಾಡಿಕೊಳ್ಳಲಿ ಹೇಗೆ? ಕಳಕೊಂಡೆ ಎಲ್ಲಾ ಕಳಕೊಂಡೆ. ಇಲ್ಲೇ ಕಳಕೊಂಡೆ.
( ಕುಸಿದು ಬೀಳುವರು, ಪ್ರಹಸನ
ಕೊನೆಯಾಗುವುದು)
(ಮೇ
10, 2023 ರಂದು ನಡೆದ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿ ಪಕ್ಷದವರು ಆತ್ಮಾವಲೋಕನ
ಸಭೆಯನ್ನು ನಡೆಸಿದರು. ಆ ಕುರಿತ ರಾಜಕೀಯ ವಿಡಂಬನಾತ್ಮಕ ಪ್ರಹಸನ ಇದು)
Comments
Post a Comment