ಮತಾಂಧತೆ ಜೋರು! ಅಪರಾಧಿ ಯಾರು?
ಪ್ರಹಸನ - 75
ಮತಾಂಧತೆ ಜೋರು! ಅಪರಾಧಿ ಯಾರು?
ದೃಶ್ಯ 1. ಮಂಗಳೂರಿನ ಕ್ರಿಶ್ಚಿಯನ್ ಸ್ಕೂಲ್.
(7 ನೇ ಕ್ಲಾಸಿನ ವಿದ್ಯಾರ್ಥಿನಿಯರಿಗೆ ಶಿಕ್ಷಕಿಯೊಬ್ಬರು ರವೀಂದ್ರನಾಥ ಟಾಗೂರರ ಕವಿತೆ ಕುರಿತು ಪಾಠ ಮಾಡುತ್ತಿದ್ದಾರೆ)
ಟೀಚರ್ : ನೋಡಿ ಮಕ್ಕಳೆ ದೇವರನ್ನು ಕಾಣುವುದು ಹೇಗೆ? ಪೂಜಿಸುವುದು ಹೇಗೆ? ಎಂಬುದನ್ನು ಈ ಕವಿತೆ ಹೇಳುತ್ತದೆ. ಕೇಳಿ.
ತೊರೆದು ಬಿಡು ಆ ನಿನ್ನ ಮಂತ್ರಪಠಣಗಳನ್ನು
ಸುಮ್ಮನೇ ಕುಳಿತುಕೊಳ್ಳಬೇಡ
ದೇವರು ಗುಡಿ ಚರ್ಚು ಮಸೀದಿಗಳಲ್ಲಿಲ್ಲ
ಕಣ್ಣನ್ನು ತೆರೆದು ನೋಡು
ಸ್ಟುಡೆಂಟ್ 1: ಮ್ಯಾಮ್.. ಗುಡಿಯಲ್ಲಿಯೇ ನೋ ಗಾಡ್ ಅಂದ್ರೆ ಮತ್ತೆಲ್ಲಿ ಗಾಡ್ ಇರ್ತಾರೆ?
ಟೀಚರ್ : ಗುಡ್ ಕ್ವಶ್ಚನ್.
ನೇಗಿಲ ಯೋಗಿಯೊಳಗೆ ಇದ್ದಾನೆ
ಕಠಿಣ ಪರಿಶ್ರಮದಲ್ಲಿದ್ದಾನೆ.
ಸ್ಟುಡೆಂಟ್ 2 : ಹೋ ಮೈ ಗಾಡ್.
ಟೀಚರ್ : ಯಸ್ ಡಿಯರ್
ದೇವರು ಶುದ್ದತೆಯ ಹೆಸರಲ್ಲಿ ಮೈಗೆ ಸ್ನಾನ ಮಾಡುವವರಲ್ಲಿಲ್ಲ
ಮೌಢ್ಯ ಮಡಿವಂತಿಕೆಯಲ್ಲಿಲ್ಲ
ಮೂಢ ಸಂಪ್ರದಾಯದಲ್ಲಿಲ್ಲ
ಇಳಿದು ಬಾ ಈ ದೂಳಿನ ಮಣ್ಣಿಗೆ
ಪರಿಶ್ರಮ ಪಟ್ಟು ಕಾಯಕ ಮಾಡಿದರೆ
ದೇವರ ಕೃಪೆಗೆ ಪಾತ್ರವಾಗುವೆ..
ಸ್ಟೂಡೆಂಟ್ 1 : ರಿಯಲ್ಲಿ, ಮೈ ಗಾಡ್. ಐ ಕಾಂಟ್ ಬಿಲೀವ್ ದಿಸ್.
ಟೀಚರ್ : ನೋ ಕ್ವಶ್ಚನ್ ಆಪ್ ಬಿಲೀವ್. ಇಟ್ಸ ಇನ್ ದಿಸ್ ಪೋಯೆಮ್.
ದೃಶ್ಯ 2 : ಮನೆ
ಮದರು : ಬಂದ್ಯಾ ಬಾ. ಕೈಕಾಲು ಮುಖ ತೊಳೆದುಕೊಂಡು ಬೇಗ ಬಾ. ದೇವಸ್ಥಾನಕ್ಕೆ ಹೋಗಿ ಬರೋಣ.
ಡಾಟರು : ನೋ ಮಮ್ಮಿ. ಟೀಚರ್ ಹೇಳಿದ್ದಾರೆ ದೇವಸ್ಥಾನದಲ್ಲಿ ದೇವರು ಇಲ್ಲಾ ಅಂತಾ.
ಮದರು : ಯಾರೆ ಅದು ನಿಮ್ಮ ಟೀಚರ್ರು. ಅಪಚಾರಾ ಅಪಚಾರ. ದೇವರು ಇಲ್ವಾ. ಗುಡೀಲೂ ಇಲ್ವಾ.
ಡಾಟರು : ಹೌದಮ್ಮಾ. ನಮ್ಮ ಮಡಿವಂತಿಕೆಯಲ್ಲೂ ದೇವರಿಲ್ಲ. ಸಂಪ್ರದಾಯದಲ್ಲೂ ದೇವರಿಲ್ಲವಂತೆ.
ಮದರು : ( ಹೌಹಾರಿ) ಯಾವಳೆ ಅವ್ಳು ಸುಕನಾತಿ ಟೀಚರ್ರು. ನಮ್ಮ ಸಂಪ್ರದಾಯವನ್ನ ಅವಹೇಳನ ಮಾಡೋಳು. ದೇವರೇ ಇಲ್ಲಾ ಅನ್ನೋಳು. ಎಲ್ಲಿ ನಿನ್ನ ಗೆಳತಿಯರ ಪೇರೆಂಟ್ಸ್ ಬರೋಕೇಳು. ಸ್ಕೂಲಿಗೆ ಹೋಗಿ ಕೇಳ್ತೀನಿ? ನಮ್ಮ ದೇವರು ಸಂಪ್ರದಾಯದ ವಿಷಯಕ್ಕೆ ಬಂದ್ರೆ ಸುಮ್ಮನೆ ಇರೋಕೆ ಸಾಧ್ಯಾನೇ ಇಲ್ಲಾ.
ದೃಶ್ಯ 3 : ಸ್ಕೂಲ್ ಪ್ರಿನ್ಸಿಪಾಲ್ ಕಚೇರಿ
ಮದರ್ 1 : ಯಾರ್ರಿ ಅದು ಟೀಚರ್ರು. ಕರೀರಿ.
ಪ್ರಿನ್ಸಿ : ವಾಟ್ ಹ್ಯಾಪನ್.
ಮದರ್ 2 : ವಾಟು ಯಾಪನ್ನಾ. ಮಕ್ಕಳಿಗೆ ಇದನ್ನೆಲ್ಲಾ ಹೇಳಿಕೊಡ್ತಾರಾ? ಸ್ವಲ್ಪಾನೂ ಮ್ಯಾನರ್ಸ್ ಇಲ್ವಾ?
ಪ್ರಿನ್ಸಿ : ಓಕೆ ಕೂಲ್..ಕೂಲ್..
ಮದರ್ 3 : ಇಲ್ಲಿ ಕೂಲಾಗಿ ಕೂಲ್ ಡ್ರಿಂಕ್ಸ್ ಕುಡಿಯೋಕೆ ವುಯ್ ನಾಟ್ ಕಮ್ಮು. ವೇರ್ ಇಸ್ ದ್ಯಾಟ್ ಕ್ಲಾಸ್ ಟೀಚರ್.. ಯು ಟೆಲ್ ಫಸ್ಟು.
ಪ್ರಿನ್ಸಿ : ಹೇಳಿ.. ಏನಾಯ್ತು?
ಮದರ್ 1 : ದೇವರು ಮಂದಿರದಲ್ಲಿ ಇಲ್ವಾ?
ಪ್ರಿನ್ಸಿ : ಹೂ ಟೋಲ್ಡ್. ಗಾಡ್ ಇಸ್ ದೇರ್.
ಮದರ್ 2 : ಗಾಡ್ ನಮ್ಮ ಸಂಪ್ರದಾಯ.. ಸಂಪ್ರದಾಯ ಅಂದ್ರೆ ಇಂಗ್ಲೀಷಲ್ಲಿ ಏನ್ರೀ ಸರಸಮ್ಮಾ
ಮದರ್ 3 : ಹಂಗೇ ಹೇಳ್ರಿ ಅವರಿಗೆ ಅರ್ಥ ಆಗುತ್ತೆ. ನೋ ಗಾಡ್ ಇನ್ ಸಂಪ್ರದಾಯಾ?
ಪ್ರಿನ್ಸಿ : ಹೂ ಟೋಲ್ಡ್.
ಮದರ್ 1 : ನೋ ಗಾಡ್ ಇನ್ ನಮ್ಮ ಮಡಿವಂತಿಕೆ?
ಪ್ರಿನ್ಸಿ : ಯಸ್ ಯಸ್. ಗಾಡ್ ಇಸ್ ಎವರಿ ವೇರ್.
ಮದರ್ 3 : ದೆನ್ ಯುವರ್ ಸಿಸ್ಟರ್ ಅಂದರೆ ಟೀಚರ್ ಟೊಲ್ಡ್ ಗಾಡ್ ಇಸ್ ನಾಟ್.. ಓ ನೀವು ಹೇಳ್ರಿ ಗುಂಡಮ್ಮಾ.
ಮದರ್ 2 : ಕನ್ನಡದಲ್ಲೆ ಹೇಳ್ರಿ. ನಿಮ್ಮ ಟೀಚರ್ರು ನಮ್ಮ ದೇವರನ್ನ ನಿಂದಿಸಿದ್ದಾರೆ. ಸಂಪ್ರದಾಯಕ್ಕೆ ಅವಹೇಳನ ಮಾಡಿದ್ದಾರೆ. ಮೊದಲು ಅಂತವರನ್ನ ಕೆಲಸದಿಂದ ತಗೀರಿ. ಇಲ್ಲಾಂದ್ರೆ ನಾವು ಕೀಪ್ ಕ್ವಯಟ್ ಆಗಿರೋದಿಲ್ಲ.
ಪ್ರಿನ್ಸಿ : ಹೋ ಸೀ ಕ್ಲಾಸ್ ಟೀಚರ್ ಕಮ್ ದೇರ್. ಆಸ್ಕ ಹರ್ ವಾಟ್ಸ್ ದ ಮ್ಯಾಟರ್.
ಮದರ್ 1 : ಏನಮ್ಮಾ ಟೀಚರಮ್ಮಾ. ಮಕ್ಕಳಿಗೆ ಇದನ್ನಾ ಕಲಿಸೋದು. ನಮ್ಮ ದೇವರು ಇಲ್ಲಾ ಅಂತಾ ಹೇಳಿಕೊಡ್ತೀಯಾ?
ಮದರ್ 2 : ನಮ್ಮ ಸಂಪ್ರದಾಯ ಧರ್ಮವನ್ನ ಅವಹೇಳನ ಮಾಡ್ತೀಯಾ? ನಾವು ಸುಮ್ಮಕಿರೋದಿಲ್ಲ.
ಟೀಚರ್ : ವಾಟ್? ನಾನೇನೂ ಹಾಗೆ ಹೇಳಿಲ್ಲವಲ್ಲ. ಅದು ಪಠ್ಯದಲ್ಲಿದೆಯಲ್ಲಾ.
ಮದರ್ 1 : ನೀವು ಕ್ರಿಶ್ಚಿಯನ್ನರು ನಮ್ಮ ಹಿಂದೂ ದೇವರನ್ನ ಅಪಮಾನಿಸಿ ಪಾಠ ಮಾಡ್ತಾ ಇದ್ದೀರಾ? ಮೊದಲು ಎಲ್ಲಾ ಮಕ್ಕಳ ಮುಂದೆ ಕ್ಷಮೆ ಕೇಳಬೇಕ್.
ಮದರ್ 2 : ಈ ಟೀಚರ್ ನ್ನ ಈಗಲೇ ಸ್ಕೂಲಿಂದ ಆಚೆ ಹಾಕಬೇಕ್.
ಪ್ರಿನ್ಸಿ : ಹೌ ಇಟ್ ಇಸ್ ಪಾಸಿಬಲ್.
ಮದರ್ 3 : ಇಲ್ವಾ.. ಸಾಧ್ಯ ಇಲ್ವಾ. ಎಲ್ಲಿ ಹೋಗಿ ಯಾರಿಗೆ ಹೇಳಬೇಕು ಅಂತಾ ನಮಗ್ಗೊತ್ತು. ಬನ್ರಿ ಶಾರದಮ್ಮಾ ಇವರ ಜೊತೆ ಏನ್ ಮಾತು. ನಮ್ಮ ದೇವರಿಗೆ ಅವಮಾನ ಮಾಡ್ತೀರಾ?
( ಎಲ್ಲರೂ ಬೈದುಕೊಳ್ಳುತ್ತಾ ಹೋಗುತ್ತಾರೆ)
ಪ್ರಿನ್ಸಿ : ವಾಟ್ ಇಜ್ ದಿಸ್ ನಾನ್ಸೆನ್ಸ್ ಸಿಸ್ಟರ್.
ಟೀಚರ್ : ಐ ಟೀಚ್ ವಾಟ್ ಇನ್ ಟೆಕ್ಸ್ಟ್ , ನಾಟ್ ಮೋರ್ ದ್ಯಾನ್ ದ್ಯಾಟ್.
ಅಟೆಂಡರ್ : ( ಏದುಸಿರು ಬಿಡುತ್ತಾ ಓಡಿ ಬಂದು) ಮೇಡಂ. ಸ್ಕೂಲ್ ಗೇಟಿನ ಮುಂದೆ ಗುಂಪಾಗಿ ಜನ ಸೇರಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ಹಾಕ್ತಿದ್ದಾರೆ. ಪೋಷಕರ ಕೈಗೆ ಕೇಸರಿ ಬಾವುಟ ಕೊಡ್ತಿದ್ದಾರೆ. ಬೇಗ ಬನ್ನಿ ಮೇಡಂ.
ಪ್ರಿನ್ಸಿ : ವಾಟ್ ಎ ಶಿಟ್. ಕಮ್ ಲೆಟ್ಸ್ ಗೋ.
ದೃಶ್ಯ 4. ಶಾಲೆ ಗೇಟಿನ ಮುಂದೆ.
ಶಾಸಕ 1 : ನಮ್ಮ ದೇವರಿಗೆ ಅವಮಾನ ಮಾಡಿದ ಶಿಕ್ಷಕಿಗೆ ಹೇಳಿ ದಿಕ್ಕಾರ.
ಎಲ್ಲರೂ : ದಿಕ್ಕಾರಾ ದಿಕ್ಕಾರಾ..
ಶಾಸಕ 2 : ಮಕ್ಕಳೇ ನಮ್ಮ ಧರ್ಮ ನಿಂದನೆ ಮಾಡಿದ ಈ ಶಾಲೆಗೆ ಹೇಳಿ ದಿಕ್ಕಾರಾ..
ಮಕ್ಕಳು : ದಿಕ್ಕಾರಾ ಧಿಕ್ಕಾರಾ.
ಶಾಸಕ 1 : ಮಕ್ಕಳೇ ಹೇಳಿ ಜೋರಾಗಿ ಜೈಶ್ರೀರಾಂ
ಮಕ್ಕಳು : ಜೈಶ್ರೀರಾಂ.
ಶಾಸಕ 2 : ನಮ್ಮ ದೇವರಿಗೆ ಅವಮಾನಿಸುವ ಈ ಕ್ರಿಶ್ಚಿಯನ್ ಶಾಲೆ ಬಂದ್ ಮಾಡಿಸುವೆ. ಹಿಂದೂ ಧರ್ಮ ಅವಹೇಳನ ಮಾಡುವವರನ್ನು ಸುಮ್ಮನೇ ಬಿಡುವುದಿಲ್ಲ. ಜೈಶ್ರೀರಾಂ.
ಮಕ್ಕಳು : ಜೈಶ್ರೀರಾಂ.
ಶಾಸಕ 1 : ಹೋ ಜಿಲ್ಲಾಧಿಕಾರಿ ಡಿಸಿ ಸಾಹೇಬರು, ಪೊಲೀಸ್ ಕಮೀಷನರ್ ಸಾಹೇಬರು. ಬನ್ನಿ ಸಾರ್. ನೋಡಿ ನಮ್ಮ ಹಿಂದೂ ರಾಷ್ಟ್ರದಲ್ಲಿ ಹಿಂದೂ ದೇವರು ಧರ್ಮದ ಅವಹೇಳನ ಆಗ್ತಿದೆ. ನಮ್ಮ ಹಿಂದೂ ರಕ್ತ ಕುದೀತಿದೆ.
ಡಿಸಿ : ಅದೇನು ಅಂತಾ ವಿಚಾರಿಸೋಣ ಇರಿ ಸರ್.
ಶಾಸಕ 1 : ಇದರಲ್ಲಿ ವಿಚಾರಿಸೋದು ಏನಿದೆ. ಧರ್ಮನಿಂದನೆ ಮಾಡಿದ ಶಿಕ್ಷಕಿಯನ್ನ ಈ ಕೂಡಲೇ ಅಮಾನತು ಮಾಡಿ ಶಾಲೆಯಿಂದ ಹೊರಗೆ ಹಾಕಬೇಕು. ಬಂಧಿಸಿ ಶಿಕ್ಷಿಸಬೇಕು. ಧರ್ಮದ್ರೋಹಿಗಳಿಗೆ ಇದು ಪಾಠ ಆಗಬೇಕು.
ಡಿಸಿ : ಆಯ್ತು ಇರಿ. ( ಪ್ರಿನ್ಸಿ ಹತ್ತಿರ ಬಂದು.) ಮೇಡಂ. ಯಾರು ಅದು ಟೀಚರ್. ಈ ಕೂಡಲೇ ಸಸ್ಪೆಂಡ್ ಹರ್.
ಪ್ರಿನ್ಸಿ : ಪಾರ್ ವಾಟ್ ರೀಜನ್.
ಕಮಿಷನರ್ : ಇನ್ನೂ ವಾಟ್ ರೀಜನ್ ಅಂತೀರಲ್ರಿ. ಇಲ್ಲಿ ನೋಡ್ತಾ ಇಲ್ವಾ ಗಲಾಟೆ ಆಗೋದನ್ನ. ಮೊದಲು ಅಮಾನತ್ತಿಗೆ ಆದೇಶ ಮಾಡಿ.
ಪ್ರಿನ್ಸಿ : ಸೀ ಆಫೀಸರ್. ನಮ್ಮ ಟೀಚರ್ ನಾಟ್ ಕಮಿಟೆಡ್ ಎನಿ ಮಿಸ್ಟೇಕ್ ಟು ಸಸ್ಪೆಂಡ್. ಶಿ ಟೀಚಿಸ್ ವಾಟ್ ಇನ್ ಟೆಕ್ಸ್ಟ್..
ಕಮಿಷನರ್ : ಬೆಂಕಿ ಹತ್ತಿದಾಗ ರೀಜನ್ ಕೇಳ್ಕೊಂಡು ಕಾಲಹರಣ ಮಾಡೋಕಾಗೋದಿಲ್ಲ. ಮೊದಲು ನೀರು ಹಾಕಿ ಆರಿಸಬೇಕು. ಇಲ್ಲಿ ಬೆಂಕಿ ಹಚ್ಚೋಕೆ ಅಂತಾನೇ ಈ ಜನ ಬಂದಿದ್ದಾರೆ. ಅಂಡರಸ್ಟ್ಯಾಂಡ್ ದಿ ಸಿಚುಯೇಶನ್. ಇಲ್ಲಾಂದ್ರೆ ಲಾ ಆಂಡ್ ಆರ್ಡರ್ ಪ್ರಾಬ್ಲಂ ಆಗುತ್ತದೆ. ಏನಾದರೂ ಗಲಾಟೆ ದಂಗೆ ಹಿಂಸೆ ಆದ್ರೆ ನೀವೇ ಹೊಣೆಗಾರರಾಗ್ತೀರಿ.
ಪ್ರಿನ್ಸಿ : ಹೋ ಜೀಸಸ್. ಓಕೆ. ಐ ಸಸ್ಪೆಂಡ್ ಟೀಚರ್.
ಶಾಸಕ 1 : ಜೈ ಶ್ರೀರಾಂ.
ಮಕ್ಕಳು : ಜೈ ಶ್ರೀರಾಂ ( ಎಂದು ಕುಣಿದಾಡುತ್ತಾರೆ. ಶಿಕ್ಷಕರತ್ತ ಬೆರಳು ತೋರಿಸಿ ಕೇಕೆ ಹಾಕಿ ಅಣಕಿಸುತ್ತಾರೆ.
ಶಾಸಕ 2 : ಹಾ ಹಾಂ.. ಇದು ನಮ್ಮ ಹಿಂದೂ ಧರ್ಮದ ದಿಗ್ವಿಜಯ. ಧರ್ಮದ್ರೋಹಿಗಳನ್ನು ಸುಮ್ಮನೇ ಬಿಡಲು ಸಾಧ್ಯವೇ ಇಲ್ಲ. ನಮ್ಮ ಸನಾತನ ಧರ್ಮದ ರಕ್ಷಣೆಗೆ ಮಕ್ಕಳೆಲ್ಲಾ ಬದ್ದರಾಗಿರಬೇಕು. ಸದಾ ಹೋರಾಟಕ್ಕೆ ಸಿದ್ದರಾಗಿರಬೇಕು.. ಜೈಶ್ರೀರಾಂ..
ಪತ್ರಕರ್ತ : ಅಲ್ಲಾ ಸರ್.. ನಿಮ್ಮಂತಾ ನಾಯಕರ ಮಕ್ಕಳು ಮಾತ್ರ ಪ್ರತಿಷ್ಟಿತ ಶಾಲೆಗಳಲ್ಲಿ ಓದಿ ದೊಡ್ಡ ಆಫೀಸರ್ ಆಗಬೇಕು. ಸಾಮಾನ್ಯ ವರ್ಗದ ಮಕ್ಕಳು ನೀವು ಕೊಟ್ಟ ಬಾವುಟ ಹಿಡಿದು ಬೀದಿಯಲ್ಲಿ ಘೋಷಣೆ ಕೂಗಬೇಕಾ?
ಶಾಸಕ 1 : ನಮ್ಮ ಮನೆ ವಿಚಾರ ಬಿಡ್ರಿ. ನಮ್ಮ ಧರ್ಮಕ್ಕೆ ಅಪಚಾರ ಆದ್ರೆ ನಾವು ಸುಮ್ಮನಿರಬೇಕಾ?
ಮದರ್ 1 : ಹೌದು. ನಮ್ಮ ದೇವರಿಗೆ ಅವಮಾನ ಮಾಡಿದ ಟೀಚರಿಗೆ ಶಾಲೆಯಿಂದಾ ಹೊರಗೆ ಹಾಕಬೇಕು.
ಪತ್ರಕರ್ತ : ಹಾಗಂತಾ ಪೊಲೀಸ್ ಕಂಪ್ಲೆಂಟ್ ಮಾಡಿದ್ದೀರಾ?
ಮದರ್ 2 : ಏನ್ರಿ ಕಂಪ್ಲೆಂಟ್ ಮಾಡೋದು. ನಮ್ಮ ಮಕ್ಕಳೇ ಅದಕ್ಕೆ ಸಾಕ್ಷಿ.. ಇವಳು ನನ್ನ ಮಗಳು ಇವಳನ್ನ ಕೇಳ್ರಿ.
ಪತ್ರಕರ್ತ : ಏನಂತಾ ಅವಮಾನ ಮಾಡಿದ್ರು ಕಂದಮ್ಮಾ.
ಸ್ಟುಡೆಂಟ್ 1 : ದೇವರು ಗುಡಿಯಲ್ಲಿ ಇಲ್ಲಾಂತ ಪಾಠ ಮಾಡಿ ನಮ್ಮ ನಂಬಿಕೆ ಹಾಳು ಮಾಡಿದ್ರು ಅಂಕಲ್.
ಸ್ಟುಡೆಂಟ್ 2 : ದೇವರು ನಮ್ಮ ಸಂಪ್ರದಾಯದಲ್ಲಿ ಇಲ್ಲಂತೆ ಹೇಳಿದ್ರು ಅಂಕಲ್.
ಪತ್ರಕರ್ತ : ಅದನ್ನು ಅವರೇ ಹೇಳ್ತಾ ಇದ್ರಾ ಅಥವಾ ಪಾಠದಲ್ಲಿ ಹಾಗಂತಾ ಇತ್ತಾ..?
ಸ್ಟುಡೆಂಟ್ 1 : ಅಂಕಲ್ ಅದು.. ಅದೂ..
ಶಾಸಕ 1 : ಅದೂ ಇದೂ ಏನೂ ಇಲ್ಲ. ನಮ್ಮ ದೇವರಿಗೆ ಅವಮಾನ ಆಗಿದೆ.. ಧರ್ಮದ್ರೋಹಿಗಳನ್ನು ಕ್ಷಮಿಸುವ ಮಾತೇ ಇಲ್ಲಾ. ಮಕ್ಕಳೇ ಹೇಳಿ ಜೈ ಶ್ರೀರಾಮ್..
ಮಕ್ಕಳು : ಜೈ ಶ್ರೀರಾಂ.
ಪತ್ರಕರ್ತ : ನೋಡಿದ್ರಲ್ಲಾ ವೀಕ್ಷಕರೇ. ಇಲ್ಲಿ ತಪ್ಪಿತಸ್ತರು ಯಾರು? ಅಪರಾಧಿಗಳು ಯಾರು? "ದೇವರು ಮಂತ್ರದಲ್ಲಿಲ್ಲ, ಮಂದಿರದಲ್ಲಿಲ್ಲ, ಸಂಪ್ರದಾಯದಲಿಲ್ಲ ಪರಿಶ್ರಮದಲ್ಲಿದ್ದಾನೆ" ಅಂತಾ ಕವಿತೆ ಬರೆದ ರವೀಂದ್ರನಾಥ ಟ್ಯಾಗೋರ್ ರವರದು ತಪ್ಪಾ? ಸತ್ಯ ಸಾರುವ ಕವಿತೆಯನ್ನು ಪಠ್ಯದಲಿ ಇಟ್ಟಿರುವ ಶಿಕ್ಷಣ ಇಲಾಖೆಯದ್ದು ತಪ್ಪಾ? ಪಠ್ಯದಲ್ಲಿರೋದನ್ನ ಇದ್ದಂತೆ ಶಿಕ್ಷಕರು ಬೋಧಿಸೋದೂ ತಪ್ಪಾ? ತಮ್ಮ ನಂಬಿಕೆಗಳನ್ನ ಮಕ್ಕಳ ಮೇಲೆ ಹೇರುವ ಪೋಷಕರದ್ದು ತಪ್ಪಾ? ಶಿಕ್ಷಕರ ಮೇಲೆ ಮಕ್ಕಳನ್ನು ಎತ್ತಿ ಕಟ್ಟುವ ಹೆತ್ತವರದ್ದು ತಪ್ಪಾ? ಹಿಂದೆ ಮುಂದೆ ಗೊತ್ತಿಲ್ಲದೇ ಮಕ್ಕಳ ಮನಸಲ್ಲಿ ಧರ್ಮದ್ವೇಷದ ಬೆಂಕಿ ಹಚ್ಚಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮತಾಂಧರದ್ದು ತಪ್ಪಾ?
ಹೇಳಿ ಇಲ್ಲಿ ತಪ್ಪು ಯಾರದು? ಅಪರಾಧಿಗಳು ಯಾರು? ಧಾರ್ಮಿಕ ಅಸಹಿಷ್ಣುತತೆ ಸೃಷ್ಟಿಸುವವರು ಧರ್ಮದ್ರೋಹಿಗಳಲ್ವಾ? ಮತಾಂಧತೆಯನ್ನು ಮಕ್ಕಳ ಮನಸಲ್ಲಿ ತುಂಬುವ ಇಂತಹ ನಾಯಕರನ್ನು ಯಾವ ದೇವರು ತಾನೇ ಮೆಚ್ಚಲು ಸಾಧ್ಯ? ದೇವರು ಧರ್ಮದ ಹೆಸರಲ್ಲಿ ಇಲ್ಲಿ ಎಲ್ಲವೂ ನಡೆಯುತ್ತಿರುವುದು ಓಟಿಗಾಗಿ ಸೀಟಿಗಾಗಿ ಸರ್ವಾಧಿಕಾರಕ್ಕಾಗಿ. ಇದನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಇಂದಿನ ಮಕ್ಕಳು ನಾಳೆ ಮತಾಂಧರಾಗುತ್ತಾರೆ. ಧರ್ಮಾಂಧ ಪೋಷಕರು ತಮ್ಮದೇ ಮಕ್ಕಳನ್ನು ಕೋಮುವಿಷಜ್ವಾಲೆಗೆ ತಳ್ಳುತ್ತಾರೆ. ಗುರುಗಳನ್ನು ಗೌರವಿಸದ, ವಿದ್ಯಾಲಯವನ್ನು ಪ್ರೀತಿಸದ ಮಕ್ಕಳು ಇನ್ನೇನು ತಾನೆ ಕಲಿಯಲು ಸಾಧ್ಯ? ಕ್ಯಾಮರಾಮನ್ ಸತೀಶ್ ಜೊತೆಗೆ ನಾನು ಸತ್ಯ ಟಿವಿಯ ಮಹೇಶ್.
( ಹಿಂದಿನಿಂದ ಜೈಶ್ರೀರಾಂ ಘೋಷಣೆಗಳು ಮೊಳಗುತ್ತಿವೆ. ಮಕ್ಕಳು ಮತಾಂಧತೆಯ ಅಮಲಿನಲ್ಲಿ ತೇಲುತ್ತಾ, ಕೇಸರಿ ಬಾವುಟ ಬೀಸುತ್ತಾ ಕುಣಿಯುತ್ತಿದ್ದಾರೆ? )
ದೃಶ್ಯ : 5. ರಸ್ತೆ
ವಿದ್ಯಾರ್ಥಿನಿ 1: ಏ ವಿಷಯ ಗೊತ್ತಾಯ್ತೇನೇ. ಟೀಚರ್ ಮೇಡಮ್ಮನ್ನ ಆಸ್ಪತ್ರೆಗೆ ಸೇರಿಸಿದ್ದಾರಂತೆ.
ವಿದ್ಯಾರ್ಥಿನಿ 2 : ಸೇರಿಸಲಿ ಬಿಡೆ. ಹೋಮ್ ವರ್ಕ ಮಾಡಿಲ್ಲಾ ಅಂತಾ ನನಗೆ ಬೆಂಚ್ ಮೇಲೆ ನಿಲ್ಲಿಸಿರಲಿಲ್ವಾ.
ವಿದ್ಯಾರ್ಥಿನಿ 3 : ನೀನು ತಪ್ಪು ಮಾಡಿದ್ದಕ್ಕೆ ಅಲ್ವೇನೇ ನಿಲ್ಲಿಸಿದ್ದು.
ವಿದ್ಯಾರ್ಥಿನಿ 1 : ಸಾಕು ಸುಮ್ಮನಿರೇ. ಅವರು ಮಾತ್ರ ಅವರ ಧರ್ಮದ ಕ್ರಾಸ್ ಹಾಕಿಕೊಂಡು ಬರಬಹುದಂತೆ. ನಾವು ಏನೂ ಹಾಕಬಾರದಂತೆ. ಇದ್ಯಾವ ನ್ಯಾಯ ಕಣ್ರೆ..
ವಿದ್ಯಾರ್ಥಿನಿ 3 : ಎಲ್ಲಾ ಖಾಸಗಿ ಶಾಲೆಗಳಲ್ಲೂ ಅದೇ ರೂಲ್ಸು ಕಣೆ. ಶಿಸ್ತು ಕಾಪಾಡೋಕೆ ಇರಬೋದು.
ವಿದ್ಯಾರ್ಥಿನಿ 2 : ಅದೆಂತಾ ಶಿಸ್ತೆ. ನೋಡು ನಾಳೆಯಿಂದಾ ನಾನು ಕೈತುಂಬಾ ಬಳೆ ಹಾಕ್ಕೊಂಡು, ಕಾಲಲ್ಲಿ ಗೆಜ್ಜೆ ಹಾಕೊಂಡು ಜಲ್ ಜಲ್ ಅಂತಾ ಕ್ಲಾಸಿಗೆ ಬರ್ತೇನೆ. ಅದ್ಯಾರು ಅದೇನು ಮಾಡ್ತಾರೋ ನೋಡ್ತೀನಿ? ಏನಾದ್ರೂ ಅಂದ್ರೆ ಈ ಎಂಎಲ್ಲೆ ಅಂಕಲ್ ಇದ್ದಾರಲ್ಲಾ ಅವರಿಗೆ ಕಂಪ್ಲೇಂಟ್ ಮಾಡ್ತೀನಿ?
ವಿದ್ಯಾರ್ಥಿನಿ 1 : ನಾನೂ ಅಷ್ಟೇ. ಹಣೆ ತುಂಬ ಕುಂಕುಮ ಇಟ್ಕೊಂಡು, ಕತ್ತಿಗೆ ಚೈನ್ ಹಾಕ್ಕೊಂಡು, ಚೆಂದಂಗೆ ಮೇಕಪ್ ಮಾಡ್ಕೊಂಡು ಕ್ಲಾಸಿಗೆ ಬರ್ತೇನೆ. ಈ ಕಿರಸ್ತಾನಿ ಮೇಡಂ ಗಳು ಹೊಟ್ಟೆ ಉರಕೊಂಡ್ ಸಾಯಬೇಕು ಹಂಗ್ ಮಾಡ್ತೀನಿ?
ವಿದ್ಯಾರ್ಥಿನಿ 3 : ಹಂಗೆಲ್ಲಾ ಮಾಡಿದ್ರೆ ಟಿಸಿ ಕೊಟ್ಟು ಕಳಿಸ್ತಾರೆ ಅಷ್ಟೇ?
ವಿದ್ಯಾರ್ಥಿನಿ 1 : ಕಳಿಸ್ಲಿ ಬಿಡೆ. ಇದಿಲ್ಲಾ ಇನ್ನೊಂದು ಸ್ಕೂಲು. ಇದೊಂದೇನಾ ಇರೋದು?
ವಿದ್ಯಾರ್ಥಿನಿ 3 : ನೋಡೇ ಇಲ್ಲಿ ಪೀಜ್ ಕಡಿಮೆ ಕಣೆ. ನಮ್ಮಂತಾ ಮಧ್ಯಮವರ್ಗದವರು ಬೇರೆ ಖಾಸಗಿ ಶಾಲೇಲಿ ಎಡ್ಮಿಶನ್ ತಗೊಳ್ಲೋಕೆ ಆಗುತ್ತೇನೆ. ಪಾಠಾನೂ ಚೆನ್ನಾಗಿ ಹೇಳ್ತಾರೆ. ಸ್ವಲ್ಪ ಶಿಸ್ತು ಜಾಸ್ತಿ ಅಷ್ಟೇ ಅಲ್ವೇನೇ?
ವಿದ್ಯಾರ್ಥಿನಿ 2 : ನಮಗೆ ಅದೆಲ್ಲಾ ಗೊತ್ತಿಲ್ಲಾ ಕಣೆ. ಸ್ವಾತಂತ್ರ್ಯ ಬೇಕು. ಇಷ್ಟಾ ಬಂದಂಗೆ ಇರೋಕೆ ಬಿಡಬೇಕು. ನನಗಂತೂ ಇವತ್ತು ಕುಣಿದು ಘೋಷಣೆ ಕೂಗಿ ಸಾಕಾಯ್ತು ನಡೀರೆ ಮನೆಗೆ ಹೋಗೋಣ.
ವಿದ್ಯಾರ್ಥಿನಿ 1 : ಮತ್ತೆ ಈ ಕೇಸರಿ ಶಾಲು ಬಾವುಟ ಏನೇ ಮಾಡೋದು.
ವಿದ್ಯಾರ್ಥಿನಿ 2 : ಮನೇಲಿ ಇಟ್ಕೊಂಡಿರೋಣ. ಮತ್ತೆ ಈ ಸ್ಕೂಲಿನವರು ಕಿರಕ್ ಮಾಡಿದ್ರೆ ಜೈಶ್ರೀರಾಂ ಗೊತ್ತಾಯ್ತಲ್ಲಾ..
ಎಲ್ಲರೂ : ಜೈಶ್ರೀರಾಂ.. (ಜೋರಾಗಿ ನಗುವರು)
ಹಿನ್ನೆಲೆಯಲ್ಲಿ ಹಾಡು.
ಮಂತ್ರಗಳಲಿ ದೇವರಿಲ್ಲ,
ಗುಡಿ ಚರ್ಚು ಮಸೀದಿಯಲಿ ದೇವರಿಲ್ಲ
ಮೌಢ್ಯ ಮಡಿವಂತಿಕೆಯಲಿ ದೇವರಿಲ್ಲ
ಮೂಢ ಸಂಪ್ರದಾಯದಲಿ ದೇವರಿಲ್ಲ
( ದೂರದಲ್ಲಿ ಘೋಷಣೆ ಜೈಶ್ರೀರಾಂ, ಜೈಶ್ರೀರಾಂ)
ಕಣ್ಣು ಬಿಟ್ಟು ನೋಡಿರೋ
ನೇಗಿಲ ಯೋಗಿಯಲಿರುವನು ದೇವರು
ಪರಿಶ್ರಮದಲಿ ಇರುವನು ದೇವರು
( ದೂರದಲ್ಲಿ ಘೋಷಣೆ ಜೈಶ್ರೀರಾಂ, ಜೈಶ್ರೀರಾಂ)
- ಶಶಿಕಾಂತ ಯಡಹಳ್ಳಿ
14-02-2024
(ಮಂಗಳೂರಿನ ಸೇಂಟ್ ಜೆರೋಜಾ ಶಾಲೆಯಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಪ್ರಹಸನವಿದು)
Comments
Post a Comment