ಗೆಲುವಿನ ಸೂತ್ರದಲಿ ವಂಚನೆಯ ಪಾತ್ರ
ಪ್ರಹಸನ - 77
ಗೆಲುವಿನ ಸೂತ್ರದಲಿ ವಂಚನೆಯ ಪಾತ್ರ
-------------------------------------------------
(ಐದು ವರ್ಷಕ್ಕೊಮ್ಮೆ ನಡೆಯುವ ಜಗತ್ಪಸಿದ್ದ ದೇಸಿ ಕ್ರಿಕೆಟ್ ಪಂದ್ಯಾವಳಿಗೆ ದಿನಾಂಕ ಗೊತ್ತುಪಡಿಸಲಾಯ್ತು. ಮ್ಯಾಚ್ ಗೆಲ್ಲುವ ತಂತ್ರಗಾರಿಕೆಯ ಪೂರ್ವಭಾವಿ ಸಭೆಯನ್ನು ಹಾಲಿ ಚಾಂಪಿಯನ್ ತಂಡದ ಕ್ಯಾಪ್ಟನ್)
ಕ್ಯಾಪ್ಟನ್ : ಎಲ್ಲಾ ನಾವು ಅಂದುಕೊಂಡಂಗೆ ಆಯ್ತಲ್ವಾ. ಪಂದ್ಯಾವಳಿ ಆರಂಭಕ್ಕೆ ಮುಂಚೆನೇ ನಮ್ಮ ಪರವಾಗಿರುವ ಮೂವರು ಅಂಪೈರಗಳನ್ನು ನೇಮಕ ಮಾಡಿದ್ದಾಯ್ತಲ್ಲಾ.
ಮ್ಯಾನೇಜರ್ : ಹೌದು ಕ್ಯಾಪ್ಟನ್. ಪಂದ್ಯ ಶುರುವಾಗುವ ಮೊದಲೇ ನಾವು ಅರ್ಧ ಗೆದ್ದಂತೆ. ವಿರೋಧಿ ಪಡೆ ಎಷ್ಟಾದರೂ ಆಟ ಆಡಲಿ. ಡಿಸಿಜನ್ ಮೇಕರ್ ನಮ್ಮ ಅಂಪೈರಗಳೇ ಆಗಿರ್ತಾರೆ.
ಕ್ಯಾಪ್ಟನ್ : ನೋ.. ಅದನ್ನು ಮಾತ್ರ ನಂಬುವ ಹಾಗಿಲ್ಲ. ಥರ್ಡ್ ಅಂಪೈರ್ ಆಗಿ ಟಿವಿ ಮಾಧ್ಯಮಗಳು ಇದ್ದಾವಲ್ಲಾ..
ಮ್ಯಾನೇಜರ್ : ಅದರ ಬಗ್ಗೆ ಚಿಂತೆನೇ ಬೇಡ ಕ್ಯಾಪ್ಟನ್. ಎಲ್ಲಾ ಮಾಧ್ಯಮಗಳೂ ನಮ್ಮ ಕಾರ್ಪೋರೇಟ್ ಪಾರ್ಟನರ್ ಓನರ್ ಶಿಪ್ ನಲ್ಲಿವೆ. ನಾವು ಏನು ತೋರಿಸು ಅಂತೀವೋ ಅಷ್ಟನ್ನೇ ತೋರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ..
ಕ್ಯಾಪ್ಟನ್ : ಆದರೆ ಏನು ?
ಮ್ಯಾನೇಜರ್ : ಈ ಸೋಷಿಯಲ್ ಮೀಡಿಯಾಗಳದ್ದೇ ಪ್ರಾಬ್ಲಂ. ಇದ್ದದ್ದನ್ನ ಇದ್ದಂಗೆ ಪ್ರಸಾರ ಮಾಡ್ತಾವೆ.
ಕ್ಯಾಪ್ಟನ್ : ಮಾಡಲಿ ಬಿಡಿ. ನಮ್ಮ ಟೀಂ ಅಭಿಮಾನಿಗಳನ್ನ ಪ್ರಚೋದಿಸಿ. ನಮ್ಮ ಐಟಿ ಸೆಲ್ ನವರನ್ನು ಎಚ್ಚರಿಸಿ. ನಿರಂತರವಾಗಿ ಸುಳ್ಳು ಸುದ್ದಿಗಳನ್ನ ಸೃಷ್ಟಿಸಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿ ಸತ್ಯದ ಭ್ರಮೆ ಹುಟ್ಟಿಸಲು ಹೇಳಿ.
ಮ್ಯಾನೇಜರ್ : ಇಷ್ಟು ದಿನಗಳಿಂದ ಅದನ್ನೇ ಮಾಡುತ್ತಾ ಬಂದಿದ್ದೇವೆ ಕ್ಯಾಪ್ಟನ್. ಆದರೆ ವಿರೋಧಿ ಟೀಂನಲ್ಲಿ ಗೆಲ್ಲುವ ಆಟಗಾರರಿದ್ದಾರೆಂಬುದೇ ಆತಂಕ.
ಕ್ಯಾಪ್ಟನ್ : ಹಾಗಾ.. ಅವರಿಗೆ ಹಣದ ಆಮಿಷ ತೋರಿಸಿ, ನಮ್ಮ ಟೀಂ ನಲ್ಲಿ ಅವಕಾಶ ಕೊಡುತ್ತೇವೆ ಎಂದೂ ಆಶ್ವಾಸನೆ ಕೊಡಿ. ಗೆಲ್ಲುವ ಕುದುರೆಗಳು ನಮ್ಮ ತಂಡದಲ್ಲಿರಬೇಕು. ಆಟ ಗೆಲ್ಲುವವರೆಗೂ ಅವರನ್ನು ಬಳಸಿಕೊಂಡು ಆಮೇಲೆ ಪಕ್ಕಕ್ಕೆ ತಳ್ಳಿದರಾಯ್ತು.
ಮ್ಯಾನೇಜರ್ : ಅದನ್ನೇ ತಾನೇ ಹತ್ತು ವರ್ಷಗಳಿಂದ ಮಾಡಿದ ನಾವು ಗೆಲುವು ಸಾಧಿಸಿದ್ದು ಕ್ಯಾಪ್ಟನ್. ಆದರೆ ಕೆಲವರು ಯಾವುದಕ್ಕೂ ಬಗ್ಗುತ್ತಿಲ್ಲಾ, ನಮ್ಮ ಜೊತೆ ಬರಲು ಒಪ್ಪುತ್ತಿಲ್ಲಾ. ಏನು ಮಾಡೋದು..
ಕ್ಯಾಪ್ಟನ್ : ಏನು ಮಾಡೋದು ಅಂದ್ರೆ ಹೇಗೆ? ವಿರೋಧಿ ತಂಡವನ್ನು ದುರ್ಬಲ ಗೊಳಿಸದೇ ನಮಗೆ ಗೆಲುವು ಅಸಾಧ್ಯ. ನಮ್ಮ ಸಾಕು ನಾಯಿಗಳನ್ನು ಅಂತವರ ಮೇಲೆ ಚೂ ಬಿಡಿ. ಮಾನ ಪ್ರಾಣಕ್ಕೆ ಹೆದರಿ ಅವರೇ ನಮ್ಮತ್ತ ಓಡಿ ಬರುತ್ತಾರೆ.
ಮ್ಯಾನೇಜರ್ : ಅದೆಲ್ಲಾ ಮಾಡಿಯಾಯ್ತು. ಕೆಲವರನ್ನು ಆಸೆ ತೋರಿಸಿ, ಹೆದರಿಸಿ ನಮ್ಮ ಕಡೆ ಸೇರಿಸಿಕೊಂಡಾಯ್ತು. ಆದರೂ ಒಂದಿಬ್ಬರು ದಾಂಡಿಗರು ಯಾವುದಕ್ಕೂ ಒಪ್ಪುತ್ತಿಲ್ಲ. ಅದೇ ತಲೆನೋವಾಗಿದೆ.
ಕ್ಯಾಪ್ಟನ್ : ಇದೆ.. ಅದಕ್ಕೂ ನನ್ನಲ್ಲಿ ಮದ್ದು ಇದೆ. ಅವರ ಮೇಲೆ ಹಿಂದಿನ ಯಾವುದಾದರೂ ಕೇಸ್ ಇದ್ದರೆ ರೀ ಓಪನ್ ಮಾಡಿಸಿ. ಇಲ್ಲದೇ ಹೋದರೆ ಯಾರೋ ಕ್ರಿಮಿನಲ್ ಒಬ್ಬನನ್ನು ಅಪ್ರೂವರ್ ಮಾಡಿಸಿ, ಸುಳ್ಳು ಆರೋಪ ಹೊರಿಸಿ ಹಿಡಿದು ಜೈಲಿಗೆ ಹಾಕಿಸಿ. ಹೊರಗೆ ಇದ್ದರೆ ತಾನೆ ಆಟ ಆಡೋದು. ಪಂದ್ಯಾವಳಿ ಮುಗಿದ ಮೇಲೆ ಹೊರಗೆ ಬಿಟ್ಟರಾಯ್ತು.
ಮ್ಯಾನೇಜರ್ : ಆಯ್ತು ಕ್ಯಾಪ್ಟನ್. ಆದರೆ ನಮ್ಮ ತಂಡವನ್ನು ಸಾಕಲು, ವಿರೋಧಿ ತಂಡದ ಪ್ರಮುಖ ಆಟಗಾರರನ್ನು ಸೆಳೆಯಲು, ಐಟಿ ಸೆಲ್ ಹಾಗೂ ಮಾಧ್ಯಮಗಳನ್ನು ಸಾಕಲು ಸಾಕಷ್ಟು ಹಣ ಬೇಕಾಗಿದೆ..
ಕ್ಯಾಪ್ಟನ್ : ಅದಕ್ಯಾಕೆ ಚಿಂತೆ. ದೊಡ್ಡ ದೊಡ್ಡ ಕಂಪನಿಗಳಿಂದ ಹಪ್ತಾ ವಸೂಲಿ ಶುರು ಮಾಡಿ. ಯಾರು ಹಪ್ತಾ ಕೊಡೋದಿಲ್ವೋ ಅವರ ಮೇಲೆ ನಮ್ಮ ಸಾಕು ನಾಯಿಗಳಿಂದಾ ದಾಳಿ ಮಾಡಿಸಿ. ಅವರೇ ಹೆದರಿ ಓಡಿ ಬಂದು ಕೇಳಿದಷ್ಟು ಹಣ ಕೊಡ್ತಾರೆ. ಇನ್ನೂ ಹೆಚ್ಚು ಹಣ ಬೇಕಾದರೆ ಕಂಪನಿಗಳಿಗೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನ ಗುತ್ತಿಗೆ ಕೊಟ್ಟು ನೂರಾರು ಕೋಟಿ ಕಿಕ್ ಬ್ಯಾಕ್ ಹಣವನ್ನ ನಮ್ಮ ತಂಡದ ಅಕೌಂಟಿಗೆ ಜಮೆ ಮಾಡಿಸಿಕೊಳ್ಳಿ. ಎಲ್ಲಾ ಸಿಕ್ರೇಟ್. ಹಪ್ತಾ ಕೊಟ್ಟವರ ಹಾಗೂ ತೆಗೆದುಕೊಂಡವರ ಹೆಸರು ಎಲ್ಲೂ ಬಹಿರಂಗ ಆಗೋದಿಲ್ಲ ಅಂತಾ ಭರವಸೆ ಕೊಡಿ.
ಮ್ಯಾನೇಜರ್ : ವಿರೋಧಿ ತಂಡದವರೂ ಸಹ ಕೆಲವು ಕಂಪನಿಗಳಿಂದ ಹಪ್ತಾ ಪಡೆದಿವೆಯಲ್ಲಾ ಕ್ಯಾಪ್ಟನ್. ಅದನ್ನು ಹೇಗೆ ನಿಲ್ಲಿಸೋದು?
ಕ್ಯಾಪ್ಟನ್ : ಹೌದು ವಿರೋಧಿ ತಂಡಕ್ಕೆ ಹರಿದು ಬರುವ ಸಂಪನ್ಮೂಲಗಳನ್ನು ಮೊದಲು ನಿಲ್ಲಿಸಬೇಕು. ಆ ತಂಡದ ಹಿಂದಿನ ಲೆಕ್ಕಪತ್ರ ಪರಿಶೀಲಿಸಲು ಹೇಳಿ. ಇಪ್ಪತ್ತು ಇಲ್ಲವೇ ಮೂವತ್ತು ವರ್ಷಗಳ ಹಿಂದೆ ಮಾಡಲಾಗಿದ್ದ ಚಿಕ್ಕಪುಟ್ಟ ಲೆಕ್ಕಪತ್ರದ ವ್ಯತ್ಯಾಸ ಕಂಡು ಹಿಡಿದು ನೋಟೀಸ್ ಕಳಿಸಲು ತನಿಖಾ ಇಲಾಖೆಗೆ ತಿಳಿಸಿ. ಅದೇ ನೆಪದಲ್ಲಿ ವಿರೋಧಿ ತಂಡಗಳ ಎಲ್ಲಾ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದರೆ ಆಯ್ತು. ಹಣವೇ ಇಲ್ಲದೇ ಅದು ಹೇಗೆ ಗೆಲ್ಲುತ್ತಾರೋ ನೋಡೋಣ.. ( ಗಹಗಹಿಸಿ ನಗು)
ಮ್ಯಾನೇಜರ್ : ಅದ್ಬುತ.. ಮಹಾ ಅದ್ಬುತ. ನಮಗೆ ಅಭೂತಪೂರ್ವ ಗೆಲುವು ನಿಶ್ಚಿತ. ವಿರೋಧಿ ತಂಡದ ಬಲಿಷ್ಠ ಆಟಗಾರರು...
ಕ್ಯಾಪ್ಟನ್ : ನಮ್ಮ ಕಡೆಗೆ.
ಮ್ಯಾನೇಜರ್ : ಆಟ ನಿಯಂತ್ರಿಸುವ ಅಂಪೈರ್ ಗಳು
ಕ್ಯಾಪ್ಟನ್ : ನಮ್ಮ ಕಡೆಗೆ.
ಮ್ಯಾನೇಜರ್ : ಥರ್ಡ್ ಅಂಪೈರ್ ಮಾಧ್ಯಮಗಳು
ಕ್ಯಾಪ್ಟನ್ : ನಮ್ಮ ಕಡೆಗೆ.
ಮ್ಯಾನೇಜರ್ : ಹಣದ ಹೊಳೆ
ಕ್ಯಾಪ್ಟನ್ : ನಮ್ಮ ಕಡೆಗೆ.
ಮ್ಯಾನೇಜರ್ : ಅಂತಿಮ ಗೆಲುವು
ಕ್ಯಾಪ್ಟನ್ : ನಮ್ಮ ಕಡೆಗೆ.
ಮ್ಯಾನೇಜರ್ : ಪ್ಲಾನಿಂಗ್ ಅಂದ್ರೆ ಇದು ಕ್ಯಾಪ್ಟನ್. ಗೆಲ್ಲಲು ಆಗದೇ ಇದ್ದರೆ ಎದುರಾಳಿಗಳ ಬಲವನ್ನು ಆಟಕ್ಕೆ ಮೊದಲೇ ಕುಗ್ಗಿಸೋದು.
ಕ್ಯಾಪ್ಟನ್ : ನೀವು ವಾಲಿ ಕಥೆ ಕೇಳಿದ್ದೀರಾ? ಆತ ಯುದ್ದಕ್ಕೆ ನಿಂತರೆ ವಿರೋಧಿಗಳ ಅರ್ಧ ಶಕ್ತಿ ಅವನಿಗೆ ಬರುತ್ತಿತ್ತಂತೆ. ನಾವೂ ವಾಲಿ ಇದ್ದ ಹಾಗೆ.. ವಿರೋಧಿಗಳ ಶಕ್ತಿಯನ್ನು ಹೀರಿಕೊಂಡು ಗೆಲ್ಲುತ್ತೇವೆ.
ಮ್ಯಾನೇಜರ್ : ಆದರೆ ವಾಲಿಯನ್ನು ನೇರವಾಗಿ ಸೋಲಿಸಲಾಗದೇ ಶ್ರೀರಾಮನು ಮರೆಯಲ್ಲಿ ನಿಂತು ಬಾಣ ಹೊಡೆದು ಸಾಯಿಸಿದನಂತೆ. ಹಾಗೇಯೇ ಜನತೆ ನಮಗೂ ಮಾಡಿದರೆ ನಮ್ಮ ಗತಿ.
ಕ್ಯಾಪ್ಟನ್ : ಡೋಂಟ್ ವರಿ. ರಾಮನನ್ನೂ ನಮ್ಮ ಕಡೆ ಇರುವಂತೆ ನೋಡಿಕೊಂಡಿದ್ದೇವೆ. ಹನುಮನಂತಹ ರಾಮನಿಷ್ಟ ಭಕ್ತರಿಗೆಲ್ಲಾ ರಾಮನಾಮ ಪಾಯಸ ತಿನ್ನಿಸಿದ್ದೇವೆ.
ಮ್ಯಾನೇಜರ್ : ಹಾಗಾದರೆ ಈ ಪಂದ್ಯವನ್ನೇ ರದ್ದು ಪಡಿಸಿ ನಮ್ಮ ತಂಡವೇ ಅಜೇಯ ಎಂದು ಘೋಷಿಸಿದರಾಗೋದಿಲ್ವಾ ಕ್ಯಾಪ್ಟನ್.
ಕ್ಯಾಪ್ಟನ್ : ಅದಕ್ಕಿನ್ನೂ ಸಮಯವಿದೆ. ಈಗ ಪಂದ್ಯ ನಡೆಯಬೇಕು. ಎದುರಾಳಿಗಳನ್ನು ದುರ್ಬಲಗೊಳಿಸಿ ಗೆಲ್ಲಬೇಕು. ನೋಡುವವರಿಗೆ ನ್ಯಾಯಸಮ್ಮತ ಪಂದ್ಯ ಎಂದು ಅನ್ನಿಸಬೇಕು. ಗೆದ್ದ ನಂತರ ಈ ಆಟದ ನಿಯಮಗಳ ಪುಸ್ತಕವನ್ನೇ ಬದಲಾಯಿಸೋಣ. ನಮ್ಮದೇ ನಿಯಮಗಳನ್ನು ರೂಪಿಸೋಣ. ಸೂರ್ಯ ಚಂದ್ರ ಇರುವವರೆಗೂ ನಾವೇ ಅಜೇಯರಾಗಿರೋಣ. ನಂತರ ನಾವು ಹೇಳಿದ್ದೇ ಶಾಸನ. ಮಾಡಿದ್ದೇ ಆದೇಶ..
ಮ್ಯಾನೇಜರ್ : ನಮ್ಮ ತಂಡದ ಕ್ಯಾಪ್ಟನ್ ರವರಿಗೆ
ಎಲ್ಲರೂ : ಜೈ
ಮ್ಯಾನೇಜರ್ : ವಿಶ್ವಗುರು ನಾಯಕರಿಗೆ
ಎಲ್ಲರೂ : ಜೈ ಜೈ..
( ಅಷ್ಟರಲ್ಲಿ ಪೋನ್ ರಿಂಗ್ ಆಗುತ್ತದೆ. ಮ್ಯಾನೇಜರ್ ಪೋನ್ ರಿಸೀವ್ ಮಾಡಿ)
ಮ್ಯಾನೇಜರ್ : ಹಾಂ.. ಹೌದಾ.. ಯಾವಾಗ? ಅಯ್ಯೋ..
ಕ್ಯಾಪ್ಟನ್ : ಏನಾಯ್ತು?
ಮ್ಯಾನೇಜರ್ : ಅನಾಹುತ ಆಯ್ತು ಕ್ಯಾಪ್ಟನ್. ನಾವು ಹೆದರಿಸಿ ಬೆದರಿಸಿ ಕಮಿಶನ್ ಪಡೆದು ಸಂಗ್ರಹಿಸಿದ ಹಣದ ಲೆಕ್ಕ ಕೊಡಬೇಕೆಂದು ನ್ಯಾಯಾಲಯ ಆದೇಶಿಸಿದೆಯಂತೆ. ಎಲ್ಲಿ ತಮ್ಮ ಹೆಸರು ಹೊರಗೆ ಬರುತ್ತದೋ ಎಂದು ಬೇನಾಮಿಯಾಗಿ ದೇಣಿಗೆ ಕೊಟ್ಟ ಮಾಲೀಕರು ಹೆದರಿದ್ದಾರಂತೆ.
ಕ್ಯಾಪ್ಟನ್ : ಥೋ.. ಈ ಜಜ್ ಗಳದ್ದು ಭಾರೀ ಕಾಟ ಆಯ್ತಲ್ರೀ. ಮುಂದಿನ ಸಲ ಇವರನ್ನೂ ಬದಲಾಯಿಸಿ ನಾವು ಹೇಳಿದಂತೆ ಕೇಳುವವರನ್ನು ನೇಮಕ ಮಾಡೋಣ.
ಮ್ಯಾನೇಜರ್ : ಈಗ ಏನು ಮಾಡೋದು ಅದನ್ನ ಹೇಳಿ ಕ್ಯಾಪ್ಟನ್.
ಕ್ಯಾಪ್ಟನ್ : ನೋಡಿ. ಒಂದು ಸುದ್ದಿ ಸದ್ದು ಮಾಡ್ತು ಅಂದ್ರೆ ಅದಕ್ಕಿಂತಾ ಇನ್ನೊಂದು ದೊಡ್ಡ ಸುದ್ದಿ ಜೋರಾಗಿ ಸದ್ದು ಆಗುವಂತೆ ಮಾಡಬೇಕು. ಆಗ ಜನರ ಗಮನ ಅತ್ತ ಹೋಗುತ್ತದೆ. ಒಂದು ಕೆಲಸ ಮಾಡಿ ಏನಾದರೂ ಆರೋಪ ಮಾಡಿ ನಮ್ಮ ಎದುರಾಳಿ ತಂಡದ ಕ್ಯಾಪ್ಟನ್ ಒಬ್ಬರನ್ನ ಈಗಲೇ ಆರೆಸ್ಟ್ ಮಾಡಿ ಜೈಲಿಗೆ ಹಾಕಲು ವ್ಯವಸ್ಥೆ ಮಾಡಿ.
ಮ್ಯಾನೇಜರ್ : ಆಗ ಇನ್ನೂ ಹೆಚ್ಚು ಗಲಾಟೆ ಆಗಬಹುದು.
ಕ್ಯಾಪ್ಟನ್ : ಆಗಲಿ.. ಆಗಬೇಕು. ಆ ಕಡೆಯವರು ಎಷ್ಟು ಧರಣಿ ಸತ್ಯಾಗ್ರಹ ಹೋರಾಟ ಮಾಡ್ತಾರೋ ಅಷ್ಟು ಜನರ ಗಮನ ಆ ಕಡೆ ಹೋಗುತ್ತದೆ. ಆಗ ನಮ್ಮ ಹಗರಣ ಮುಚ್ಚಿ ಹೋಗುತ್ತದೆ. ನಮ್ಮ ಎಲ್ಲಾ ಮಾಧ್ಯಮಗಳ ಮಾಲೀಕರಿಗೆ ಹೇಳಿ, ನಮ್ಮ ಹಗರಣ ಬಿಟ್ಟು ವಿರೋಧಿ ಪಡೆಯ ನಾಯಕನ ಬಂಧನದ ಬಗ್ಗೆ ನಿರಂತರವಾಗಿ 'ಭ್ರಷ್ಟಾಚಾರಕ್ಕಾಗಿ ಬಂಧನ' ಎಂಬ ಸುದ್ದಿಯನ್ನು ದಿನದ 24 ಗಂಟೆಯೂ ಬಿತ್ತರಿಸಲು ತಿಳಿಸಿ.
ಮ್ಯಾನೇಜರ್ : ಹೋ ಇದು ನನಗೆ ಹೊಳೀಲೇ ಇಲ್ಲಾ ನೋಡಿ ಕ್ಯಾಪ್ಟನ್. ಈಗಲೇ ವ್ಯವಸ್ಥೆ ಮಾಡುವೆ. ಯಾರಲ್ಲಿ....
ಹಿನ್ನೆಲೆಯಲ್ಲಿ ಭಜನೆ :
ಗುರುವೆ ನಿನ್ನಾಟ ಬಲ್ಲವರು ಯಾರ್ಯಾರೋ
ವಿಶ್ವಗುರುವೆ ನಿನ್ನಾಟ ಬಲ್ಲವರು ಇನ್ಯಾರೋ
-ಶಶಿಕಾಂತ ಯಡಹಳ್ಳಿ
26-03-2024
Comments
Post a Comment