ಶುದ್ಧೀಕರಣ ಯಂತ್ರ
ಪ್ರಹಸನ - 78
ಶುದ್ಧೀಕರಣ ಯಂತ್ರ....
( ಮಹಿಳೆಯೊಬ್ಬಳು ಹೂ ಪಕ್ಷದ ಕಚೇರಿಗೆ ಬಂದು)
ಮಹಿಳೆ : ಇದು ಹೂ ಪಕ್ಷದ ಕಚೇರಿನಾ ಸಾರ್..
ಲೀಡರ್ : ಹೌದಮ್ಮಾ.. ಕಾಣಸ್ತಾ ಇಲ್ವಾ ಎಲ್ಲಾ ಕಡೆ ಹೂ ಚಿತ್ರ ಅಂಟಿಸಿರೋದು.
( ಕತ್ತು ಅತ್ತ ಇತ್ತ ತಿರುಗಿಸಿ ಉದ್ದ ಮಾಡಿ ಏನೋ ಹುಡುಕುತ್ತಾಳೆ)
ಲೀಡರ್ : ಏನಮ್ಮಾ ಹುಡುಕ್ತಾ ಇದ್ದೀಯಾ? ಯಾರು ನೀನು? ನಿನಗೇನು ಬೇಕು?
ಮಹಿಳೆ : ನಾನೂ ಅದನ್ನೇ ಹುಡುಕ್ತಾ ಇದ್ದೀನೀ ಸರ್. ಎಲ್ಲಿಟ್ಟಿದ್ದೀರಿ?
ಲೀಡರ್ : ಅದು ಅಂದ್ರೆ ಏನಮ್ಮಾ? ಇಲ್ಲಿ ಅದು ಇದೂ ಎಂತಾದ್ದೂ ಇಲ್ಲಾ ಹೋಗಮ್ಮೋ.
ಮಹಿಳೆ : ಹಂಗೇಳಿದ್ರೆ ಹೆಂಗೆ. ಅದು ನಿಮ್ಮ ಆಫೀಸ್ನಾಗೇ ಐತಂತೆ.. ಎಲ್ರೂ ಹೇಳ್ತಾ ಇದ್ದಾರೆ.. ಎಲ್ಲಿದೆ ಸಾರ್..
ಲೀಡರ್ : ತೋ ಥೋ.. ಅದು ಏನು ಅಂತಾ ಹೇಳಿದ್ರೆ ಇದೆಯೋ ಇಲ್ವೋ ಅಂತಾ ಹೇಳ್ತಿದ್ದೆ.. ಅದೇನಂತಾದ್ರೂ ಹೇಳಮ್ಮೋ.
ಮಹಿಳೆ : ಅದೇ ದೊಡ್ಡ ಡಬ್ಬದ ಹಾಗಿರ್ತದೆ. ಈ ಕಡೆ ಕೊಳೆ ಕೊಚ್ಚೆ ಹಾಕಿದ್ರೆ ಆ ಕಡೆ ಸ್ವಚ್ಚವಾಗಿ ಬರುತ್ತಲ್ಲಾ ಸಾರ್.. ಅದು ಎಲ್ಲಿ ಐತೆ ಅಂತಾ?
ಲೀಡರ್ : ಏನಮ್ಮಾ ಇದೇನು ಕಸ ಬೇರೆ ಮಾಡೋ ಮುನ್ಸಿಪಾರ್ಟಿ ಗಾರ್ಬೇಜ್ ಯುನಿಟ್ ಅಂದ್ಕೊಂಡಿದ್ದೀಯಾ? ಇದು ಹೂ ಪಕ್ಷದ ಕಚೇರಿ..
ಮಹಿಳೆ : ಹೂ ಪಕ್ಷದ ಕಚೇರಿ ಆದ್ರೆ ಹೂವಿನ ವಾಸನೆ ಬರಬೇಕಿತ್ತಲ್ವಾ ಸಾರ್.. ಆದರೆ ಬೇರೆ ಏನೋ ವಾಸನೆ ಬರ್ತಿದೆ. ಹಾಂ ಇದು ಅದರದ್ದೇ ವಾಸನೆ. ಎಲ್ಲಿದೆ ಹೇಳಿ ಸರ್..
ಲೀಡರ್ : ಅಯ್ಯೋ.. ಏನಂತಾ ಹೇಳಲಿ. ಅದೇನಂತಾ ಹೆಸರಾದ್ರೂ ಹೇಳಿದ್ರೆ ಎಲ್ಲಿದೆ ಅಂತಾ ಹೇಳ್ತೀನಿ..
ಮಹಿಳೆ : ಅದೇ ಮಿಷೀನು ಸಾರ್ ಮಿಷೀನು..
ಲೀಡರ್ : ಇದು ಮಷೀನು ಇರೋ ಕಾರ್ಖಾನೆ ಅಲ್ಲಾ ಕಣಮ್ಮಾ.. ಆಫೀಸು.. ಪಾರ್ಟಿ ಆಫೀಸು
ಮಹಿಳೆ : ಅದೇ ಸಾರ್ರು.. ಎಲ್ಲಾರ ಮನೇಲಿ ಇರ್ತದಲ್ಲಾ. ಕೊಳೆ ಬಟ್ಟೆ ಹಾಕಿ, ಸೋಪ್ ಪೌಡರ್ ಉದರಿಸಿ ನೀರು ಹಾಕಿ ಸ್ವಿಚ್ ಹಾಕಿದ್ರೆ ಗರಗರ ತಿರುಗಿ ಬಟ್ಟೆಯಲ್ಲಾ ಕಿಲೀನ್ ಮಾಡಿ ಕೊಡ್ತದಲ್ಲಾ.. ಮಿಷೀನು..
ಲೀಡರ್ : ಅದಕ್ಕೆ ವಾಷಿಂಗ್ ಮಷೀನ್ ಅಂತಾರೆ ಕಣಮ್ಮಾ. ಇದು ಲ್ಯಾಂಡ್ರಿ ಅಂಗಡಿ ಅಲ್ಲಾ, ನೀನೆಲ್ಲೋ ದಾರಿ ತಪ್ಪಿ ಬಂದಿದ್ದೀ.
ಮಹಿಳೆ : ಇಲ್ಲಾ ಸರ್.. ಎಲ್ಲಾ ಕಡೆ ವಿಚಾರಿಸಿಕೊಂಡೇ ಸರಿಯಾದ ಆಫೀಸಿಗೆ ಬಂದಿದ್ದೀನಿ. ಆ ಮಿಷೀನ್ ಎಲ್ಲಿದೆ ಅದನ್ನ ಹೇಳಿ.
ಲೀಡರ್ : ವಾಷಿಂಗ್ ಮಷೀನ್ ಇಲ್ಯಾಕಮ್ಮಾ ಇರುತ್ತೆ. ಸುಮ್ಕೆ ತಮಾಷೆ ಮಾಡಬೇಡಾ ಹೋಗು.
ಮಹಿಳೆ : ನೀವು ಸರ್ ತಮಾಷೆ ಮಾಡ್ತಾ ಇರೋದು. ಮಿಷಿನ್ ಎಲ್ಲೋ ಮುಚ್ಚಿಟ್ಟು ಇಲ್ಲಾ ಅಂತಾ ಹೇಳ್ತಿದ್ದೀರಿ.
ಲೀಡರ್ : ಅಂತಾ ಯಾವ ಮಷೀನೂ ಇಲ್ಲಿ ಇಲ್ಲಮ್ಮಾ.. ಸುಮ್ಕೆ ತಲೆ ತಿನ್ಬೇಡಾ ಹೋಗು.
ಮಹಿಳೆ : ಯಾಕ್ ಸರ್ ಸುಳ್ಳು ಹೇಳ್ತೀರಾ. ಕಳ್ಳರು ಕದೀಮರು ಭ್ರಷ್ಟರನ್ನ ಆ ಮಷೀನಲ್ಲಿ ಹಾಕಿ ಇಲ್ಲಿ ನಿಮ್ಮ ಹೂ ಪಕ್ಷದ ಕಚೇರಿಯಲ್ಲಿ ಶುದ್ಧೀಕರಣ ಮಾಡ್ತಾರೆ ಅಂತಾ ಊರಲ್ಲೆಲ್ಲಾ ಸುದ್ದಿಯಾಗಿದೆ. ವಾಟ್ಸಪಲ್ಲೂ ವಿಡಿಯೋ ಬಂದಿದೆ.
ಲೀಡರ್ : ಅಯ್ಯೋ ಅದು ಹಾಗಲ್ಲಮ್ಮಾ..
ಮಹಿಳೆ : ಹಾಗೂ ಇಲ್ಲಾ ಹೀಗೂ ಇಲ್ಲಾ.. ಮೊನ್ನೆ ತಾನೇ ಅದ್ಯಾರೋ ಬಳ್ಳಾರಿ ರೆಡ್ಡಿ ಅಂತೆ. ಜೈಲಲ್ಲಿದ್ದು ಬಂದವ್ರಂತೆ. ಅವ್ರ ಮೇಲೆ ಬೇಕಾದಷ್ಟು ಕೇಸು ಇದಾವಂತೆ. ಅಂತವ್ರನ್ನ ನಿಮ್ಮ ವಾಷಿಂಗ್ ಮಿಷೀನಲ್ಲಿ ಹಾಕಿ ಕಳಂಕ ಎಲ್ಲಾ ಕಳಚಿ ಶುದ್ದ ಮಾಡಿದ್ದೀರಂತೆ. ನನಗೇನೂ ಗೊತ್ತಿಲ್ಲಾ ಅನ್ಕೋಬೇಡಿ.
ಲೀಡರ್ : ಅಯ್ಯೋ.. ಅದು ಹಂಗಲ್ಲಮ್ಮೋ. ಅದೇನಂದ್ರೆ..
ಮಹಿಳೆ : ಅದೆಲ್ಲಾ ಗೊತ್ತಿಲ್ಲಾ ಸಾರ್ರು. ನನಗೆ ಆ ಶುದ್ದೀಕರಣ ಮಾಡೋ ಮಿಷೀನ್ ಬೇಕೆ ಬೇಕು.
ಲೀಡರ್ : ಅಯ್ಯೋ ಹೆಂಗಪ್ಪಾ ತಿಳಿಸಿ ಹೇಳ್ಲಿ. ಹೋಗಲಿ ನಿನಗ್ಯಾಕಮ್ಮಾ ಬೇಕು ವಾಷಿಂಗ್ ಮಷೀನು.
ಮಹಿಳೆ : ನೋಡಿ ಸರ್. ಮುಚ್ಚು ಮರೆ ಇಲ್ದೇ ಎಲ್ಲಾ ಇಲ್ಲೇ ಬಿಚ್ಚಿ ಹೇಳ್ತೀನಿ.
ಲೀಡರ್ : ಇಲ್ಲಾ.. ಎಲ್ಲಾ ಬಿಚ್ಚಿ.. ಇಲ್ಲಿ ಸಿಸಿ ಕ್ಯಾಮರಾಗಳಿವೆಯಲ್ಲಮ್ಮಾ..
ಮಹಿಳೆ : ಥೂ ನನಗ್ಯಾಕೆ ಅಂತಾ ಕರ್ಮ. ನೋಡಿ ಸರ್. ಹೊರಗೆ ನನ್ನ ಗಂಡನ್ನ ಕೂಡ್ಸಿ ಬಂದಿದ್ದೀನಿ. ಆತ ನಂಬರ್ ಒನ್ ಲೋಫರ್. ಕಳ್ಳ ಸುಳ್ಳಾ ದಗಲ್ಬಾಜಿ ಕಚಡಾ ಹಂದಿ ನಮ್ಮಗಾ.
ಲೀಡರ್ : ಅಂತವನನ್ನ ತಗೊಂಡು ನಾನೇನಮ್ಮಾ ಮಾಡ್ಲಿ. ಪೊಲೀಸ್ ಸ್ಟೇಶನ್ನಿಗೆ ಹೋಗಿ ಕಂಪ್ಲೆಂಟ್ ಕೊಡು.
ಮಹಿಳೆ : ಬೇಕಾದಷ್ಟು ಸಲ ಕೊಟ್ಟಾಯ್ತು. ಜೈಲಿಗೆ ಕಳಿಸಿ ನೋಡಾಯ್ತು. ಊಹುಂ ಏನೇನೂ ಬದಲಾಗಲೇ ಇಲ್ಲ. ಜೈಲಿಗೆ ಹೋಗಿ ಬಂದ ಮೇಲೆ ರಾಜಕೀಯ ಸೇರ್ತೀನಿ ಅಂತಾ ಕುಂತವ್ನೆ. ಗುಂಪು ಕಟ್ಕೊಂಡು ಓಡಾಡ್ತಾವ್ನೆ. ನನ್ನ ಮನೆ ಹಾಳು ಮಾಡಿದ್ದಾಯ್ತು. ಈಗ ದೇಶ ಹಾಳು ಮಾಡೋಕೆ ರಾಜಕಾರಣಿ ಆಗ್ತಾನಂತೆ. ಥೂ ಇವ್ನ ಬಾಯಾಗ ಕಿತ್ತೋಗಿರೋ ಚಪ್ಪಲಿ ತುರಕ್ಲಿ. ಅವನಂತಾ ಕಿತ್ತೋದವ್ರ ಮುಖಾನ್ನ ಕಜ್ಜಿ ನಾಯಿ ನೆಕ್ಕಲಿ.
ಲೀಡರ್ : ಹಿಂಗೆಲ್ಲಾ ಬೈಯೂದಾದ್ರ ಹೊರಗ್ ಹೋಗಮ್ಮಾ. ಇಲ್ಲೇನ್ ನಿಂದು.
ಮಹಿಳೆ : ಇಲ್ಲೇನೇ ಇರೋದು ಸರ್. ಅರ್ಜೆಂಟಾಗಿ ನನ್ನ ಗಂಡನ್ನ ನಿಮ್ಮ ಮಿಷೀನ್ ಒಳಗರ ಹಾಕಿ ಅವ್ನ ಮೇಲಿರೋ ಕೊಳೆ ಕಳಂಕ ಕೇಸು ಎಲ್ಲಾ ಕಳೀಬೇಕಿದೆ. ಪರೋಡಿ ನನ್ಮಗನ್ನ ಶುದ್ಧ ಮಾಡಬೇಕಿದೆ. ಆಮೇಲೆ ಬೇಕಾದ್ರೆ ನಿಮ್ಮ ಪಕ್ಷಕ್ಕೆ ಸೇರಿ ಅದೇನು ಕಿಸಿತಾನೋ ಕಿಸೀಲಿ.
ಲೀಡರ್ : ಅಮ್ಮಾ ತಾಯಿ ಪೂಲನ್ ದೇವಿ. ಇಲ್ಲಿ ಅಂತಾ ಯಾವ ಮಷೀನು ಇಲ್ಲಮ್ಮಾ. ನಮ್ಮನೆದೇವ್ರಾಣೆಗೂ..
ಮಹಿಳೆ : ನೋಡಿ ನೋಡಿ.. ಹಿಂಗೆಲ್ಲಾ ಸುಳ್ಳು ಹೇಳಿ ತಪ್ಪಿಸ್ಕೋ ಬ್ಯಾಡ ನೋಡಿ. ಯಾಕೆ ಚೆಕ್ಕಿನಲ್ಲಿ ಲಂಚಾ ಹೊಡೆದು ಜೈಲಿಗೋಗಿ ಬಂದ ನಿಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಯನ್ನ ಮಷಿನ್ ಲ್ಲಿ ಹಾಕಿ ಶುದ್ದ ಮಾಡಿ ಮತ್ತೆ ಮಂತ್ರಿ ಮಾಡಿಲ್ವಾ. ಮಹಾರಾಷ್ಟ್ರದಲ್ಲಿ ಅತೀ ಭ್ರಷ್ಟ ಅಂತಾ ಜೈಲಿಗೆ ಹೋಗಿ ಬಂದ್ನಲ್ಲಾ ಅದ್ಯಾರೋ ಅಜಿತೋ ಪವಾರ್ರೋ.. ಅವನಂತವನನ್ನ ನಿಮ್ಮ ಮಿಷೀನಲ್ಲಿ ಹಾಕಿ ಕಳಂಕ ತೊಳೆದು ಪವಿತ್ರ ಮಾಡಿ ನಿಮ್ಮ ಜೊತೆ ಸೇರಿಸಿಕೊಂಡಿಲ್ವಾ. ಇರಿ ಸಾರು.. ಈ ಚೀಟೀಲಿ ಪರಿಶುದ್ದ ಆದವರ ಲಿಸ್ಟೇ ಐತೆ. ಹಾಂ.. ಗೋವಾದ ದಿಗಂಬರ್ ಕಾಮತ್, ಪಶ್ಚಿಮ ಬಂಗಾಳದ ಸುವೇಂಧು ಅಧಿಕಾರಿ, ಆಸ್ಸಾಮಿನ ಹೀಮಂತ ಬಿಸ್ವ ಶರ್ಮಾ,
ಮಹಾರಾಷ್ಟ್ರದ ನಾರಾಯಣ ರಾಣೆ, ಬಾಬಾ ಸಿದ್ದಕಿ ಮತ್ತು ಛಗನ್ ಭುಜ್ ಬಲ್, ಆಂದ್ರದ ವೈ.ಎಸ್.ಚೌದರಿ ಮತ್ತು ಸಿ.ಎಂ.ರಮೇಶ್, ಜಿಂದಾಲ್ ಕಂಪನಿಯ ನವೀನ್ ಜಿಂದಾಲ್...
ಲೀಡರ್ : ಆಯ್ತು.. ಸಾಕು ಸುಮ್ಕಿರಮ್ಮಾ..
ಮಹಿಳೆ : ಇರಿ ಸಾರ್.. ನಿಮ್ಮ ಪಕ್ಷದ ವಾಷಿಂಗ್ ಮಿಷಿನ್ ಲ್ಲಿ ಹೋಗಿ ಕಳಂಕ ತೊಳೆದುಕೊಂಡು ಶುದ್ದಿಕರಣಗೊಂಡು ಬಂದವರ ಲಿಸ್ಟ ಇನ್ನೂ ಈಷ್ಟುದ್ದಾ ಐತೆ..
ಲೀಡರ್ : ಅಯ್ಯೋ ಸಾಕು ನಿಲ್ಸಮ್ಮಾ. ಅದೆಲ್ಲಾ ನನಗೆ ಗೊತ್ತಿದೆ..
ಮಹಿಳೆ : ಹಾಂ. ಹಂಗ್ ಬನ್ನಿ ದಾರಿಗೆ. ನಿಮಗೆ ಎಲ್ಲಾ ಗೊತ್ತಿದೆ ಅಂದ್ಮೇಲೆ ಈಗ ಹೇಳಿ ಆ ವಾಷಿಂಗ್ ಮಿಷೀನ್ ಎಲೈತೆ?. ಮಾಡಬಾರದ ಮನೆಹಾಳ ಕೆಲಸ ಮಾಡಿ ಎಕ್ಕುಟ್ಟೋದ ನನ್ನ ಗಂಡನ್ನ ಮೊದಲು ಶುದ್ದೀಕರಣ ಮಾಡಿ ಕೊಡಿ.
ಲೀಡರ್ : ನೋಡಮ್ಮಾ.. ಅಂತಾ ಯಾವ ಮಷೀನೂ ಇಲ್ಲಿಲ್ಲ.
ಮಹಿಳೆ : ಇಲ್ಲಿ ಇಲ್ವಾ? ಹಂಗಾದ್ರೆ ಎಲ್ಲಿ ಐತೆ? ಅದನ್ನಾದ್ರೂ ಹೇಳಿ. ಅಲ್ಲಿವರೆಗೂ ನಾನಂತೂ ಇಲ್ಲಿಂದಾ ಹೋಗೋದಿಲ್ಲಾ ಅಂದ್ರೆ ಹೋಗೋದಿಲ್ಲಾ.
ಲೀಡರ್ : ಇದೊಳ್ಳೆ ಪಜೀತಿ ಆಯ್ತಲ್ಲಾ. ಇಲ್ಲದ ಮಷೀನು ಎಲ್ಲಿಂದಪ್ಪಾ ಈಯಮ್ಮನಿಗೆ ತಂದು ಕೊಡ್ಲಿ. ನೋಡಮ್ಮಾ ಒಂದು ಕೆಲಸ ಮಾಡು. ನಮ್ಮದೊಂದು ಹೈಕಮಾಂಡ್ ಹೆಡ್ಡಾಪೀಸ್ ಐತೆ. ಅಲ್ಲಿ ದೊಡ್ಡ ದೊಡ್ಡ ಲೀಡರ್ ಇರ್ತಾರೆ. ಅವರೇ ಕಳಂಕ ತೊಳೆದು ಶುದ್ದ ಮಾಡೋರು. ಅಲ್ಲಿಗೆ ಹೋದ್ರೆ ನಿನ್ನ ಕೆಲಸ ಆದ್ರೂ ಆಗಬಹುದು.
ಮಹಿಳೆ : ಆಗಬಹುದು ಅಂದ್ರೇನು ಸರ್. ಆಗಲೇ ಬೇಕು. ಈಗಿಂದೀಗ್ಲೆ ಅಲ್ಲಿಗೇ ಹೋಗ್ತೀನಿ. ನನ್ನ ಕೊಚ್ಚೆಯಂತಾ ಗಂಡನ್ನ ಸ್ವಚ್ಚ ಮಾಡಿ ಕರ್ಕೊಂಡ್ ಬರ್ತೀನಿ. ನನ್ನ ಗಂಡ ಒಬ್ಬ ಶುದ್ದ ಆದ ಅಂದ್ರೆ ನೋಡಿ, ನಿಮ್ಮ ಹೈಕಮಾಂಡಾಫೀಸ್ ಮುಂದೆ ಕಳ್ರು, ದರೋಡೆಕೋರರು, ಭೂಗಳ್ಳರು, ಅತ್ಯಾಚಾರಿಗಳು, ಅನಾಚಾರಿಗಳನ್ನೆಲ್ಲಾ ಹೋಲ್ಸೇಲಾಗಿ ಕರ್ಕೊಂಡು ಬಂದು ಕ್ಯೂ ನಿಲ್ಲಿಸ್ತೀನಿ. ಸಮಾಜ ಘಾತುಕರೆಲ್ಲಾ ನಿಮ್ಮ ಪಕ್ಷ ಸೇರಿದ್ರೆ ಸಮಾಜ ನೆಮ್ಮದಿಯಾಗಿರತೈತೆ.
ಲೀಡರ್ : ಹಂಗಾದ್ರೆ ನಮ್ಮ ಪಕ್ಷದ ಗತಿ..
ಮಹಿಳೆ : ಅದು ನಿಮ್ಮ ಸಮಸ್ಯೆ ನಾನೇನು ಮಾಡೋಕಾಗುತ್ತೆ.. ( ಹತ್ತು ಹೆಜ್ಜೆ ಹೊರಕ್ಕೆ ಹೋಗಿ ಮತ್ತೆ ಮರಳಿ ಬಂದು) ಎಂತಾ ಅದ್ಬುತವಾದ ಶುದ್ದೀಕರಣ ಮಿಷೀನ್ ಕಂಡು ಹಿಡ್ದಿದ್ದೀರಿ ಸಾರ್. ನೋಬೆಲ್ ಬಹುಮಾನ ಕೊಡಲೇಬೇಕು ಅಂದ್ರೆ ನಿಮ್ಮ ಹೂ ಪಕ್ಷಕ್ಕೇ ಕೊಡಬೇಕು. ಬರ್ತೀನಿ. ( ಹೋಗುತ್ತಾಳೆ)
ಲೀಡರ್ : ಅಯ್ತಮ್ಮಾ ಮೊದಲು ಇಲ್ಲಿಂದಾ ಜಾಗಾ ಖಾಲಿ ಮಾಡು. ಆದ್ರೆ ಮತ್ತೆ ಎಂದೂ ವಾಪಸ್ ಬರಬೇಡಾ. (ಸ್ವಗತದಲ್ಲಿ) ಹೌದು.. ನಿಜವಾಗ್ಲು ಅಂತಾ ಶುದ್ದೀಕರಣದ ಮಷೀನು ನಮ್ಮ ಪಕ್ಷದಾಗ ಐತಾ. ಇದ್ದಿದ್ರೆ ನಮ್ಮ ಪಕ್ಷದವರನ್ನೆಲ್ಲಾ ಮೊದಲು ಅದರೊಳಗೆ ಹಾಕಿ ಶುದ್ದ ಮಾಡಬಹುದಿತ್ತಲ್ವಾ. ನಮ್ಮ ಪಕ್ಷದೊಳಗಿರೋ ಮತಾಂಧರು ಮತೀಹೀನರು, ಮನೆಹಾಳರನ್ನೆಲ್ಲಾ ಮಷಿನ್ ನಲ್ಲಿ ಹಾಕಿ ಮನುಷ್ಯರನ್ನಾಗಿ ಮಾಡಬಹುದಲ್ವಾ. ಅಂತಾದ್ದೊಂದು ಮಷೀನು ಎಲ್ಲಾ ಪಕ್ಷದಲ್ಲೂ ಇದ್ದಿದ್ದರೆ ಎಷ್ಟೊಂದು ಚೆಂದ ಇರ್ತಿತ್ತಲ್ವಾ.
(ಹೊರಗಿನಿಂದಾ ಇನ್ನೊಂದು ದ್ವನಿ)
ಸಾರ್. ನಿಮ್ಮಲ್ಲಿ ಖದೀಮರ ಕಳಂಕ ತೊಳೆದು ಶುದ್ದ ಮಾಡೋ ಮಶೀನ್ ಇದೆಯಂತೆ ಹೌದ್ರಾ...
( ಲೀಡರ್ ತಲೆಗೆ ಟವಲ್ ಹಾಕಿ ತಲೆತಪ್ಪಿಸಿಕೊಂಡು ಓಡುತ್ತಾನೆ)
- ಶಶಿಕಾಂತ ಯಡಹಳ್ಳಿ
27-03-2024
Comments
Post a Comment