ಚೊಂಬೋ ಚೊಂಬು....
ಪ್ರಹಸನ - 81
ಚೊಂಬೋ ಚೊಂಬು...
ಟಿವಿಯಲ್ಲಿ ಹಾಡು :
ಚೊಂಬೋ ಚೊಂಬು
ಕೊಟ್ಟ ಭರವಸೆಯಲ್ಲಾ ಚೊಂಬು
ಇಟ್ಟ ವಿಶ್ವಾಸಕ್ಕೆ ಚೊಂಬು
15 ಲಕ್ಷಕ್ಕೆ ಮೂರು ನಾಮ ಚೊಂಬು
ವರ್ಷಕ್ಕೆ 2 ಕೋಟಿ ಉದ್ಯೋಗ ಚೊಂಬು
ರೈತರ ಆದಾಯ ದ್ವಿಗುಣವೆಂಬುದೂ ಚೊಂಬು
ಚೊಂಬೋ ಚೊಂಬು
ಕೊಟ್ಟ ಭರವಸೆಯಲ್ಲಾ ಚೊಂಬು
ಇಟ್ಟ ವಿಶ್ವಾಸಕ್ಕೆ ದೊಡ್ಡ ಚೊಂಬು
ಕಮಲಪತಿ : ಲೇ ಇವಳೇ ಮೊದಲು ಆ ಟಿವಿ ಬಂದ್ ಮಾಡಲು ನಿನ್ನ ಕುಲಪುತ್ರನಿಗೆ ಹೇಳು.. ಚೊಂಬಿನ ಸುದ್ದಿ ಕೇಳಿ ಕೇಳಿ ಸಾಕಾಗಿದೆ..
ಹೆಂಡತಿ : ಏನೋ ಹುಡುಗ ನೋಡ್ಕೊಳ್ಳಲಿ ಬಿಡ್ರಿ. ಟಿವಿಯಲ್ಲಿ ಇದ್ದಿದ್ದು ಇದ್ದಂಗೆ ಹೇಳ್ತಿದ್ದಾರೆ ಅಲ್ವಾ.
ಕಮಲಪತಿ : ಏನೇ.. ನೀನೂ ವಿರೋಧ ಪಕ್ಷ ಸೇರಿಕೊಂಡ್ಯಾ.. ಮೊದ್ಲು ನಂಗೆ ಕುಡಿಯೋಕೆ ನೀರು ಕೊಡು.
ಹೆಂಡತಿ : ( ಚೊಂಬಲ್ಲಿ ನೀರು ತಂದು ಕೊಡುತ್ತಾಳೆ)
ಕಮಲಪತಿ : ಏನೇ ಏನೇ ಇದು..
ಹೆಂಡತಿ : ಕಣ್ಣಿಗೆ ಕಾಣೋದಿಲ್ವಾ. ಇದು ಚೊಂಬು, ಅದರೊಳಗಿರೋದು ನೀರು.
ಕಮಲಪತಿ : ಈಗಾಗಲೇ ವಿರೋಧಿಗಳು ಕೂತಲ್ಲಿ ನಿಂತಲ್ಲಿ ಬಲವಂತಾ ಮಾಡಿ ಚೊಂಬಲ್ಲಿ ನೀರು ಕುಡಿಸ್ತಾವ್ರೆ. ನೀನೂ ಅದನ್ನೇ ಮಾಡ್ತಿಯೇನೇ. ಬೇರೆ ಯಾವುದೂ ಸಿಗಲಿಲ್ವಾ ನೀರು ತರೋಕೆ. ( ಎಂದು ಚೊಂಬು ಬಿಸಾಕುತ್ತಾನೆ. ಮಗ ಅದನ್ನು ಎತ್ತಿಕೊಳ್ತಾನೆ)
ಹೆಂಡತಿ : ಅಯ್ಯಾ.. ದಿನಾಲೂ ಈ ಚೊಂಬಲ್ಲೆ ಅಲ್ವಾ ನೀವು ನೀರು ಕುಡಿಯೋದು. ಚೊಂಬು ಯಾವುದಾದರೇನು ಕುಡಿಯೋಕೆ ನೀರು ಮುಖ್ಯ ಅಲ್ವಾ..
ಕಮಲಪತಿ : ಇನ್ಮೇಲೆ ನಾನು ಚೊಂಬಲ್ಲಿ ನೀರು ಕುಡಿಯೋದಿಲ್ಲಾ. ನೀನು ನನ್ನ ಕಣ್ಮುಂದೆ..
ಹೆಂಡತಿ : ಚೊಂಬು ತಂದು ತೋರಿಸಬಾರ್ದು ಅಷ್ಟೇ ಹೌದಲ್ವೋ. ಅಷ್ಟಕ್ಕೂ ಇವತ್ತು ಚೊಂಬಿಗೇನಾಗಿದೆ. ಚೊಂಬಿಗೆ ತೂತಾಗಿದೆಯಾ?
ಕಮಲಪತಿ : ತೂತಾಗಿದ್ದು ಚೊಂಬಲ್ವೇ ನನ್ನ ತಲೆ. ಇನ್ನೊಮ್ಮೆ ಚೊಂಬಿನ ಹೆಸರು ಎತ್ತಬೇಡಾ?
ಹೆಂಡತಿ : ಅದೇ ಚೊಂಬು ಚೆನ್ನಾಗಿ ಇದೆಯಲ್ಲಾ? ಬೆಳಗ್ಗೆ ಹುಣಸೇ ಹಣ್ಣು ಹಸಕು ಉಜ್ಜಿ ಉಜ್ಜಿ ತಿಕ್ಕಿ ತೊಳದಿದ್ದೀನಿ. ಯಾಕೆ ಚೊಂಬು ನಿಮಗೆ ಬೇಡವಾಗಿದೆ. ಚೊಂಬಲ್ಲಿ ನೀರು ಕುಡಿಯೋದು ಚೆಂದ ಅಲ್ವಾ. ಚೊಂಬು..
ಕಮಲಪತಿ : ಚೊಂಬು ಚೊಂಬು ಚೊಂಬು. ಮನೆ ಹೊರಗೂ ಚೊಂಬು, ಮನೆ ಒಳಗೂ ಚೊಂಬು. ಇನ್ಮೇಲೆ ಚೊಂಬಿನ ಹೆಸರು ಎತ್ತಬ್ಯಾಡಾ ಅಂದ್ರೆ ಬೇಡಾ ಅಷ್ಟೇ.. ತೊಲಗು ಇಲ್ಲಿಂದಾ. ( ಹೆಂಡತಿ ನಿರ್ಗಮನ) ( ಚೊಂಬಿನ ಒಳಗೆ ಕೈಹಾಕಿ ಏನೋ ಮಾಡುತ್ತಿರುವ ಮಗನತ್ತ ನೋಡುತ್ತಾನೆ)
ಮಗ : ಖುಲ್ಜಾ ಸಿಮ್ ಸಿಮ್. 15 ಲಕ್ಷ ಬರಲಿ. ಹ್ರಾಂ ಹ್ರೂಂ 1 ಲಕ್ಷಾನಾದ್ರೂ ಹೊರಗೆ ಬರಲಿ..
ಕಮಲಪತಿ : ಏಯ್ ಏನಯ್ಯಾ ಮಾಡ್ತಿದ್ದೀಯಾ?
ಮಗ : ಅದೇ ಅಪ್ಪಾ ಟಿವಿಯಲ್ಲಿ ಗಡ್ಡಪ್ಪನ ಪಕ್ಕದಲ್ಲಿ ಕೂತ ತಾತಾ ಹೇಳಿದ್ರು ಇದು ಬರೀ ಚೊಂಬಲ್ಲಾ ಕೇಳಿದ್ದನ್ನು ಕೊಡುವ ಅಕ್ಷಯ ಪಾತ್ರೆ ಅಂತಾ. ಅದಕ್ಕೆ ಆ ಗಡ್ಡಪ್ಪ ಹತ್ತು ವರ್ಷದ ಹಿಂದೇನೇ ಹೇಳಿದ್ರಲ್ವಾ 15 ಲಕ್ಷ ಅದೆಂತದೋ ಬ್ಲಾಕ್ ಮನಿ ತಂದು ಕೊಡ್ತೀನಿ ಅಂತಾ. ಈ ಅಕ್ಷಯ ಪಾತ್ರೆ ಚೊಂಬಲ್ಲಿ ಆ ಹಣ ಬರುತ್ತಾ ಅಂತಾ ಟ್ರೈ ಮಾಡ್ತಾ ಇದ್ದೀನಪ್ಪಾ. ಬರ್ತಾ ಇಲ್ಲಾ. ನೀನಾದ್ರೂ ಈ ಚೊಂಬಿಗೆ ಹೇಳಪ್ಪಾ ಪಾಪ ನಮ್ಮ ರೈತರ ಆದಾಯ ಡಬಲ್ ಮಾಡು ಅಂತಾ. ನಮ್ಮ ಅಣ್ಣಂದರಿಗೆ ಉದ್ಯೋಗ ಕೊಡು ಅಂತಾ.. ನಿಮ್ಮ ಪಕ್ಷದ ಅಕ್ಷಯ ಪಾತ್ರೆ ಚೊಂಬಲ್ವಾ.. ನೀನು ಹೇಳಿದ್ರೆ ಕೊಟ್ಟೆ ಕೊಡುತ್ತೆ..
( ಅಷ್ಟರಲ್ಲಿ ತಲೆಗೆ, ಎದೆಗೆ ಹಾಗೂ ಚೊಂಬಿಗೆ ದೊಡ್ಡದಾಗಿ ಮೂರು ನಾಮ ಬಡಕೊಂಡ ಬಂದ ಭಿಕ್ಷುಕ)
ಭಿಕ್ಷುಕ : ಗೋವಿಂದಾ ಗೋ..ವಿಂದಾ. ಈ ಚೊಂಬೇಶ್ವರನಿಗೆ ಏನಾದರೂ ದಾನ ಮಾಡಿ ತಂದೆ.. ಚೊಂಬೇಶ್ವರನ ಆದೇಶದಂತೆ ನಾನು ಇಲ್ಲಿಗೆ ಬಂದೆ.
ಕಮಲಪತಿ : ಹೋ ನೀನೊಬ್ಬ ಕಡಿಮೆ ಇದ್ದೆ. ಮುಂದಕ್ಕೆ ಹೋಗಯ್ಯಾ. ಈಗಾಗಲೇ ಚೊಂಬಿನ ಟೆನ್ಶನ್ನಿನಲ್ಲಿ ಸಾಯ್ತಿದ್ದೀನಿ ಚೊಂಬೇಶ್ವರ ಅಂತೆ ಚೊಂಬೇಶ್ವರ. ಬರೋದಕ್ಕೂ ಹೊತ್ತು ಗೊತ್ತಿಲ್ಲಾ ನಿನಗೆ.
ಮಗ : (ಭಿಕ್ಷುಕನಿಗೆ) ಬೆಗ್ಗರ್ ಅಂಕಲ್ ನಿಮ್ಮ ಚೊಂಬೇಶ್ವರ ಕೇಳಿದ್ದನ್ನೆಲ್ಲಾ ಕೊಡುತ್ತಾ. ಅಕ್ಷಯ ಪಾತ್ರೆ ಆಗುತ್ತಾ.
ಭಿಕ್ಷುಕ : ಅಯ್ಯೋ ಈ ಚೊಂಬು ಕೇಳಿದ್ದನ್ನೆಲ್ಲಾ ಕೊಟ್ಟಿದ್ರೆ ನಾನ್ಯಾಕೆ ಮನೆ ಮನೆ ಸುತ್ತಿ ಭಿಕ್ಷೆ ಬೇಡ್ತಿದ್ದೆ. ಸುಮ್ಕಿರಿ ಸ್ವಾಮಿ. ಹತ್ತು ವರ್ಷದ ಹಿಂದೆ ಚೆನ್ನಾಗಿದ್ದೆ. ನನ್ನ ಉದ್ಯೋಗ ಹೊಯ್ತು ಕೈಗೆ ಚೊಂಬು ಬಂತು ಅಷ್ಟೇಯಾ?
ಕಮಲಪತಿ : ನೋಡು ಮಗನೇ. ಯಾವ ಚೊಂಬೂ ಅಕ್ಷಯ ಪಾತ್ರೆ ಆಗೋಕೆ ಸಾಧ್ಯವಿಲ್ಲಾ..
ಭಿಕ್ಷುಕ : ಮುತ್ತಿನಂತಾ ಮಾತು ಹೇಳಿದ್ರಿ. ಕೊಟ್ಟ ಭರವಸೆ ಈಡೇರಿಸದೇ ಇದ್ರೆ ಚೊಂಬು ಕೊಟ್ಟಂತೆ. ಯಾಕೆಂದ್ರೆ ಆ ಚೊಂಬಾದ್ರೂ ಹಿಡಕೊಂಡು ನನ್ನ ಹಾಗೆ ಭಿಕ್ಷೆ ಬೇಡಿ ಬದುಕ್ಲಿ ಅಂತಾ.
ಮಗ : ಇಲ್ಲಾ ಬೆಗ್ಗರ್ ಅಂಕಲ್. ಆ ಗಡ್ಡಪ್ಪ ಹೇಳ್ತಿದ್ರು ಉದ್ಯೋಗ ಸಿಗದಿದ್ರೆ ಏನಾಯ್ತು ಪಕೋಡಾ ಮಾರಿ ಬದುಕ್ರಿ ಅಂತಾ. ಚೊಂಬು ಹಿಡಿದು ಭಿಕ್ಷೆ ಬೇಡಿ ಅಂತಾ ಅಲ್ಲಾ.
ಭಿಕ್ಷುಕ : ಅದನ್ನೂ ಮಾಡಿ ನೋಡಿದೆ. ಎಣ್ಣೆ ರೇಟ್ ಜಾಸ್ತಿ ಮಾಡಿದ್ರು, ಗ್ಯಾಸ್ ರೇಟ್ ಗಗನಕ್ಕೇರಿಸಿದ್ರು. ಅದಕ್ಕೆ ತಕ್ಕಂತೆ ನಾನೂ ಬೆಲೆ ಹೆಚ್ಚಿಸಿದೆ. ಆದರೆ ಜನ ಪಕೋಡಾ ತಿನ್ನೋಕೂ ಬರಲಿಲ್ಲ. ಎಲ್ಲಾ ಲಾಸ್ ಆಗಿ ಸಾಲ ಆಯ್ತು. ಈಗ ಈ ಚೊಂಬೇಶ್ವರನೇ ನನಗೆ ಗತಿ.. ಏನು ಮಾಡಿದೆ ಎಂದು ಈ ಗತಿ ತಂದೆಯೋ ಪಶುಪತಿ.
ಮಗ : ಇದು ತಪ್ಪಲ್ವಾ ಅಪ್ಪಾ. ಹಣ ಕೊಡ್ತೀನಿ ಅಂದ್ರು ಕೊಡಲಿಲ್ಲ.
ಭಿಕ್ಷುಕ : ಚೊಂಬು ಕೊಟ್ರು.
ಮಗ : ಉದ್ಯೋಗ ಕೊಡ್ತೀವಿ ಅಂದ್ರು ಕೊಡಲಿಲ್ಲ
ಭಿಕ್ಷುಕ : ಕೈಗೆ ಚೊಂಬು ಕೊಟ್ರು.
ಮಗ : ಅನ್ನದಾತರ ಆದಾಯ ಡಬಲ್ ಮಾಡ್ತೀವಿ ಅಂದ್ರು
ಭಿಕ್ಷುಕ : ಅವರ ಕೈಗೂ ಚೊಂಬೇ ಕೊಟ್ರು.
ಮಗ : ನಮ್ಮ ತೆರಿಗೆ ಹಣ ನಮಗೆ ಕೊಡಿ ಅಂತಾ ಕನ್ನಡಿಗರು ಕೇಳಿದ್ರೆ
ಭಿಕ್ಷುಕ : ಎಲ್ಲರಿಗೂ ಚೊಂಬು ಕೊಟ್ರು.
ಮಗ : ಬರ ನೆರೆ ಪರಿಹಾರ ಕೊಡ್ರಿ ಅಂದ್ರೆ ಕೇಂದ್ರ ಸರಕಾರವು
ಭಿಕ್ಷುಕ : ಚೊಂಬು ಕೊಡ್ತು.
ಮಗ : ಮತ್ತೆ ಆ ತಾತ ಹೇಳಿದ್ರು ಇದು ಚೊಂಬಲ್ಲಾ ಅಕ್ಷಯ ಪಾತ್ರೆ ಅಂತಾ..
ಭಿಕ್ಷುಕ : ಅದು ಅವರಿಗೆ ಇರಬೋದು. ಮುಂದೆ ತಾತ ಆತನ ಮಗ ಮೊಮ್ಮಗ ಎಲ್ಲರ ಕೈಗೂ ಗಡ್ಡಪ್ಪಾ ಕೊಡೋದೇ ಈ ಚೊಂಬು.
ಕಮಲಪತಿ : ಏ ಸಾಕು ಮಾಡ್ರೋ ಈ ಚೊಂಬಿನ ಕಥೆ.
ಭಿಕ್ಷುಕ : ಹಂಗಂದ್ರೆ ಹೆಂಗೆ ಚೊಂಬೇಶ್ವರಾ. ಕೊನೆಗೆ ಭಿಕ್ಷೆ ಬೇಡಿ ಹೊಟ್ಟೆ ಹೊರೆಯೋಕೆ ಈ ಚೊಂಬಾದ್ರೂ ಬೇಕಲ್ವಾ ಚೊಂಬೇಶ್ವರಾ.
ಕಮಲಪತಿ : (ಹಿರಣ್ಯಕಶಪುವಿನಂತೆ ಎದ್ದು ನಿಂತು) ಚೊಂಬು ಚೊಂಬು ಚೊಂಬು.. ಎಲ್ಲಾ ಸುಳ್ಳು. ಎಲ್ಲಿದೆ ಚೊಂಬು. ಈ ಕಂಬದಲ್ಲಿ..
ಮಗ : ಅಲ್ಲಿಯೂ ಇದೆ ತಂದೆ.
ಕಮಲಪತಿ : ಆ ಭಿಕ್ಷುಕನಲ್ಲಿ.
ಮಗ : ಆತನ ಕೈಯಲ್ಲೇ ಇದೆ ನಾಮಧಾರಿ ಚೊಂಬು ತಂದೆ.
ಕಮಲಪತಿ : ನಿನ್ನಲ್ಲಿ..
ಮಗ : ಇಗೋ ಇಲ್ಲಿಯೇ ನನ್ನಲ್ಲಿಯೂ ಇದೆ ತಂದೆ.
ಕಮಲಪತಿ : ನನ್ನಲ್ಲಿ
ಮಗ : ಅದು ನಿಮ್ಮ ಮನಸಲ್ಲಿ, ನಿಮ್ಮ ತಲೆಯಲ್ಲೇ ಇದೆ ನೋಡಿ ತಂದೆ.
ಕಮಲಪತಿ : ( ಹುಚ್ಚನ ಹಾಗೆ ಅಬ್ಬರಿಸುತ್ತಾ) ನಾನ್ಯಾರು.. ಹಿಂದುತ್ವವಾದಿ ಮಣಿಮುಕುಟ. ಸನಾತನ ಸಂಸ್ಕೃತಿಯ ರಕ್ಷಕ, ಶ್ರೀರಾಮನ ಪರಮ ಭಕ್ತ, ಅನ್ಯ ಧರ್ಮೀಯರ ಹುಟ್ಟಡಗಿಸಿ ಹಿಂದೂರಾಷ್ಟ್ರ ಸ್ಥಾಪನೆಗೆ ಪಣತೊಟ್ಟ ನಾಯಕ. ನಾನು ಅಡಿ ಇಟ್ಟರೆ ಬಿರಿವುದು ಭೂಮಿ. ಮಾತಾಡಿದರೆ ನಿಲ್ಲುವುದು ವಿದೇಶಗಳ ಕದನ. ನಾನೇ ಇಲ್ಲಿ ಶಾಸಕ, ನನ್ನ ಮಾತೇ ಇಲ್ಲಿ ಶಾಸನ.
ಮಗ : ಮತ್ತೆ ಈ ಚೊಂಬು.
ಕಮಲಪತಿ : ಅವನಲ್ಲೂ ಚೊಂಬು. ನಿನ್ನಲ್ಲೂ ಚೊಂಬು. ನನ್ನ ಮನದಲ್ಲಿ ಚೊಂಬು.. ನನ್ನ ತಲೆಯಲ್ಲಿ ಚೊಂಬು. ಕಂಬದಲ್ಲೂ ಚೊಂಬು. ಚೊಂಬು ಚೊಂಬು.. ( ಎನ್ನುತ್ತಾ ಮುಂದಿದ್ದ ಕಂಬಕ್ಕೆ ಜೋರಾಗಿ ತಲೆ ಹೊಡೆದು ಕೆಳಕ್ಕೆ ಬೀಳುತ್ತಾನೆ)
ಭಿಕ್ಷುಕ : ಗೋವಿಂದ ಗೋವಿಂದಾ ಗೋ..ವಿಂದಾ..ಎಲ್ಲರ ಕೈಗೆ ಚೊಂಬು ಕೊಟ್ಟ ಕಲಿಯುಗದ ಕಲಿಗೆ ಈ ಗತಿ ತಂದೆಯಲ್ಲೋ ಚೊಂಬೇಶ್ವರ..
ಟಿವಿಯಲ್ಲಿ ಹಾಡು :
ಚೊಂಬೋ ಚೊಂಬು
ಕೊಟ್ಟ ಭರವಸೆಯಲ್ಲಾ ಚೊಂಬು
ಇಟ್ಟ ವಿಶ್ವಾಸಕ್ಕೆ ಚೊಂಬು
15 ಲಕ್ಷಕ್ಕೆ ಮೂರು ನಾಮ ಚೊಂಬು
ವರ್ಷಕ್ಕೆ 2 ಕೋಟಿ ಉದ್ಯೋಗ ಚೊಂಬು
ರೈತರ ಆದಾಯ ದ್ವಿಗುಣವೆಂಬುದೂ ಚೊಂಬು
ಚೊಂಬೋ ಚೊಂಬು
ಕೊಟ್ಟ ಭರವಸೆಯಲ್ಲಾ ಚೊಂಬು
ಇಟ್ಟ ವಿಶ್ವಾಸಕ್ಕೆ ದೊಡ್ಡ ಚೊಂಬು
- ಶಶಿಕಾಂತ ಯಡಹಳ್ಳಿ
21-04-2024
Comments
Post a Comment